ಹಿಮಾಲಯದಲ್ಲಿ ಬೈಕ್ ರೈಡಿಂಗ್ ಮಾಡಲು ಪ್ರಮುಖ ಸಲಹೆಗಳು

ಹಿಮಾಲಯ ಎಂದೊಡನೆ ನೆನಪಾಗುವುದು ಕಡಿದಾದ ಹಿಮಚ್ಛಾದಿತ ಕಣಿವೆಗಳು...
ಹಿಮಾಲಯದಲ್ಲಿ ಬೈಕ್ ರೈಡಿಂಗ್ ಮಾಡಲು ಪ್ರಮುಖ ಸಲಹೆಗಳು

ಹೌದು, ನಾವು ಆಧ್ಯಾತ್ಮಿಕ ಹಿಮಾಲಯಗಳು ಮತ್ತು ಅವು ಮೋಟರ್ ಸೈಕಲ್ ಸವಾರಿಯ ಆಸಕ್ತರಿಗೆ ನೀಡುವ ಹಲವಾರು ಮೋಟರ್ ಸೈಕ್ಲಿಂಗ್ ಸ್ಥಳಗಳ ಕುರಿತು ಮಾತಾಡುತ್ತಿದ್ದೇವೆ. ನೀವು ಸವಾರಿ ಪ್ರಾರಂಭಿಸುವುದಕ್ಕೆ ಮುಂಚೆ ಇಲ್ಲಿವೆ ಕೆಲವು ಸಲಹೆಗಳು!

ಇದು ವರ್ಷದ ಆ ಸಮಯ, ಗಂಡು ಹೆಣ್ಣೆಂಬ ಬೇಧವಿಲ್ಲದೆ ಪ್ರತಿಯೊಬ್ಬ ಮೋಟರ್ ಸೈಕ್ಲಿಸ್ಟ್ ಗಳು ತಮ್ಮ ಬ್ಯಾಗ್ ಗಳನ್ನು ಪ್ಯಾಕ್ ಮಾಡಿಕೊಂಡು, ಸಾಮಾನು ಸರಂಜಾಮುಗಳನ್ನು ಹಿಂದಿನ ಸೀಟಿಗೆ ಕಟ್ಟಿ, ಬಂಗೀ ಹಗ್ಗದಿಂದ ಅಥವಾ ಕಾರ್ಗೊ ಬಲೆಗಳಿಂದ ಸುತ್ತಿ, ದೇವನೆಲೆಗಳತ್ತ ವಾರ್ಷಿಕ ಬೈಕ್ ಯಾತ್ರೆ ಹೊರಡುತ್ತಾರೆ. ಹೌದು, ನಾವು ಆಧ್ಯಾತ್ಮಿಕ ಹಿಮಾಲಯಗಳು ಮತ್ತು ಅವು ಮೋಟರ್ ಸೈಕಲ್ ಸವಾರಿಯ ಆಸಕ್ತರಿಗೆ ನೀಡುವ ಹಲವಾರು ಮೋಟರ್ ಸೈಕ್ಲಿಂಗ್ ಸ್ಥಳಗಳ ಕುರಿತು ಮಾತಾಡುತ್ತಿದ್ದೇವೆ. ಬಹುತೇಕ ಕಣಿವೆ ಮಾರ್ಗಗಳು ಸಂಚಾರಕ್ಕೆ ಮುಕ್ತವಾಗಿದ್ದು, ಬೈಕರ್ ಗಳು ಆಗಲೆ ಅವುಗಳ ಮೂಲಕ ಹಾದು ಹೋಗಲು ಪ್ರಾರಂಭಿಸಿದ್ದಾರೆ.

ಹಿಮಾಲಯ ಎಂದೊಡನೆ ನೆನಪಾಗುವುದು ಕಡಿದಾದ ಹಿಮಚ್ಛಾದಿತ ಕಣಿವೆಗಳು ಮತ್ತು ಹೆಪ್ಪುಗಟ್ಟಿದ ಹಿಮಭೂಮಿಗಳು ಹಾಗು ಬೃಹತ್ ಪರ್ವತಗಳು ತನ್ನ ಬಾಹುಗಳಲ್ಲಿ ರಾಶಿರಾಶಿ ಹಿಮವನ್ನು ಬಂಧಿಸಿ ಕಾಪಾಡಿಕೊಳ್ಳುತ್ತಿರುವಂತೆ ಭಾಸವಾಗುತ್ತದೆ. ಪ್ರತಿಯೊಂದು ಕಿಲೋಮೀಟರ್ ಮುಂದುವರಿದಂತೆ ಮತ್ತು ಮೇಲೇರುತ್ತಿರುವಂತೆ, ಹಿಮಾಲಯದ ಮೇಲಿನ ಪ್ರಯಾಣವು ಚಿಂತೆಗಳು, ತೊಂದರೆಗಳು ಮತ್ತು ಕಷ್ಟಗಳಿಂದ ಕೂಡಿದ ಉತ್ತೇಜಕ ಪ್ರವಾಸ. ಲೆಹ್, ಲಡಾಖ್, ಝಂಸ್ಕಾರ್ ವ್ಯಾಲಿ, ಖರ್ದುಂಗ್-ಲಾ, ತಂಗ್ಲಂಗ್-ಲಾ, ರೋಹ್ತಂಗ್, ಕೀಲಾಂಗ್, ಗಟ್ಟಾ ಲೂಪ್ಸ್, ಲಾಚುಂಗ್-ಲಾ, ನಕೀ-ಲಾ ಇತ್ಯಾದಿಗಳಂತಹ ಸ್ಥಳಗಳು, ಸಾಹಸ ಶೋಧನಾಸಕ್ತರಲ್ಲಿ ಬಹಳ ಪ್ರಸಿದ್ಧ ಹಾಗು ಇವು ನಿಜವಾದ ಧೈರ್ಯಶಾಲಿಗಳಿಗೆ ಕೆಲವು ನಿಜವಾದ ರೋಚಕ ಅನುಭವಗಳನ್ನು ನೀಡುತ್ತವೆ. ಇದ್ದೆಲ್ಲ ಸರಿ ಆದರೆ, ಹಿಮಾಲಯದಲ್ಲಿ ಬೈಕ್ ಸವಾರಿ ಮಾಡುವುದು ನಿಜವಾಗಲು ಕಣ್ಣಿಗೆ ಕಾಣಿವಷ್ಟು ಸರಳವಲ್ಲ ಮತ್ತು ಇದರಲ್ಲಿ ಕೆಲ ಪ್ರಮಾಣದ ಅಪಾಯವೂ ಇದೆ. ಆದರೂ ಇದನ್ನು ಸರಿಯಾಗಿ ಮಾಡಿದರೆ, ಹಿಮಾಲಯದಲ್ಲಿ ಪ್ರತಿಯೊಂದು ಬೈಕ್ ಸವಾರಿಯು ಸ್ವಯಂ ಆತ್ಮ ಶುದ್ಧೀಕರಣ ವ್ಯಾಯಾಮವೂ ಆದೀತು. ಹಿಮಾಲಯದಲ್ಲಿ ಹೇಗೆ ಬೈಕ್ ಸವಾರಿ ಮಾಡಬೇಕೆನ್ನುವ ಕುರಿತು ಕೆಲವು ಪ್ರಮುಖ ಸಲಹೆಗಳು ಇಲ್ಲಿವೆ.

ನಿಮ್ಮ ಪ್ರವಾಸವನ್ನು ತುಂಬಾ ಮುಂಚಿತವಾಗಿಯೆ ಪ್ಲ್ಯಾನ್ ಮಾಡಿ
ಹಿಮಾಲಯದಲ್ಲಿ ಸವಾರಿ ಮಾಡಬೇಕಾದರೆ ಮುಂಚಿತವಾಗಿಯೆ ಪ್ಲ್ಯಾನ್ ಮಾಡಿಕೊಳ್ಳಬೇಕು. ನಿಮ್ಮ ಪ್ರವಾಸದ ಪ್ಲ್ಯಾನ್ ಗಳನ್ನು ನೀವು ಕ್ರಮಬದ್ಧಗೊಳಿಸಿಕೊಳ್ಳಬೇಕು, ನಿಮ್ಮ ಬೈಕ್ ಸಿದ್ಧ ಮಾಡಿಕೊಳ್ಳಿ, ಪ್ರವಾಸಕ್ಕೆ ನೀವು ಏನೇನು ತೆಗೆದುಕೊಂಡು ಹೋಗಬೇಕು ಎಂಬ ವಿವರವಾದ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು ಮತ್ತು ನಿಮ್ಮ ಸವಾರಿ ಪ್ಲ್ಯಾನ್ ಗಳ ಮಾರ್ಗದರ್ಶಕ ಪುಸ್ತಕ ಸಿದ್ಧ ಮಾಡಿಕೊಳ್ಳಿ. ಹಾಗು ಪರ್ವತಗಳಲ್ಲಿ ರಸ್ತೆಗಳು ಹೆಣೆದಂತೆ ಮತ್ತು ತಿರುವುಗಳಿಂದ ಕೂಡಿರುವ ಕಾರಣ ಪರ್ವತಗಳಲ್ಲಿನ ದೂರಗಳು ಸಾಕಷ್ಟು ದಾರಿತಪ್ಪಿಸುತ್ತವೆ ಎನ್ನುವುದನ್ನು ನೆನಪಿಟ್ಟುಕೊಳ್ಳಿ. ಬಯಲಿನ 250 ಕಿ.ಮೀ. ದೂರಕ್ಕೆ ಹೋಲಿಸಿದರೆ ಪರ್ವತಗಳಲ್ಲಿನ 250 ಕಿ.ಮೀ. ದೂರವು ತುಂಬಾ ಭಿನ್ನ. ಆ ಪ್ರಕಾರದಂತೆ ನಿಮ್ಮ ಮಾರ್ಗದರ್ಶಕ ಪುಸ್ತಕ ಸಿದ್ದಪಡಿಸಿಕೊಳ್ಳಿ.

ನಿಮ್ಮೊಂದಿಗೆ ಮ್ಯಾಪ್ ಗಳನ್ನು ಕೊಂಡೊಯ್ಯಿರಿ
ಅದು ಎಷ್ಟೇ ಹಳೇಯ ಫ್ಯಾಶನ್ ಎನಿಸಿದರೂ ಸರಿ, ಎಲ್ಲಾ ಸಮಯದಲ್ಲು ನಿಮ್ಮೊಂದಿಗೆ ಮ್ಯಾಪ್ ಗಳನ್ನು ಇಟ್ಟುಕೊಳ್ಳುವುದು ತುಂಬಾ ಉಪಯೋಗಕಾರಿ ವಸ್ತು. ಜಿಪಿಎಸ್ ಇರುವಂತಹ ಕಾಲದಲ್ಲಿ ಮತ್ತು ಸ್ಮಾರ್ಟ್ ಫೋನ್ ಗಳಲ್ಲಿ ಆನ್ ಲೈನ್ ಮ್ಯಾಪ್ ಗಳ ಲಭ್ಯತೆಯಿಂದಾಗಿ, ಈಗ ಮ್ಯಾಪ್ ಗಳು ತುಂಬಾ ಹಳತಾದ ವಿಷಯ. ಆದರೆ ನೆನಪಿಡಿ, ನಿಮ್ಮ ಸೆಲ್ ಫೋನ್ ಗಳಿಗೆ ಮ್ಯಾಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಮೊಬೈಲ್ ನೆಟ್ ವರ್ಕ್ ಮತ್ತು ಡೇಟಾ ಕನೆಕ್ಷನ್ ಬೇಕು. ಸ್ಮಾರ್ಟ್ ಫೋನ್ ಗಳಲ್ಲಿನ ಬಹುತೇಕ ಜಿಪಿಎಸ್ ಉಪಕರಣಗಳು, ನೀವು ಇರಬಹುದಾದ ಅಂದಾಜು ಸ್ಥಳವನ್ನು ಲಾಕ್ ಮಾಡಲು ಸೆಲ್ ಫೋನ್ ನೆಟ್ ವರ್ಕ್ ಗಳನ್ನು ಬಳಸುವ ಎಜಿಪಿಎಸ್ ಅಥವಾ ಅಸಿಸ್ಟೆಡ್ ಜಿಪಿಎಸ್ ಯೂನಿಟ್ ಗಳಾಗಿರುತ್ತವೆ. ರಿಸೀವರ್ ಗಳು ಜಿಪಿಎಸ್ ಉಪಕರಣಗಳಲ್ಲಿ ಬಳಸಲಾಗುವ ಡೆಡಿಕೇಟೆಡ್ ರಿಸೀವರ್ ಗಳಷ್ಟು ಶಕ್ತಿಶಾಲಿಯಲ್ಲ ಹಾಗು ಇವು ದಟ್ಟವಾದ ಮೋಡ ಕವಿದಾಗ ಅಥವಾ ಮುಂಗಾರಿನಂತಹ ಪರಿಸ್ಥಿತಿಗಳಲ್ಲಿ ಸಿಗ್ನಲ್ ಕಳೆದುಕೊಳ್ಳಬಹುದು. ಅಲ್ಲದೆ ನೆನಪಿಡಿ, ಸ್ಮಾರ್ಟ್ ಫೋನ್ ಗಳು ಮತ್ತು ಜಿಪಿಎಸ್ ಯೂನಿಟ್ ಗಳು ಬ್ಯಾಟರಿ ವಿದ್ಯುತ್ ಬಳಸಿಕೊಳ್ಳುತ್ತದೆ ಮತ್ತು ಇದರಿಂದಾಗಿ ನೀವು ಪದೇಪದೇ ಬ್ಯಾಟರಿ ಚಾರ್ಜ್ ಮಾಡಬೇಕಾಗುತ್ತದೆ. ನೀವು ಪ್ರಯಾಣಿಸುವಾಗ ಇದನ್ನು ಚಾರ್ಜ್ ಮಾಡಬಹುದಾದರೆ ನೀವು ಧಾರಾಳವಾಗಿ ಈ ಉಪಕರಣಗಳನ್ನು ಬಳಸಬಹುದು. ಆದರೆ ಯಾವುದಕ್ಕು ಬ್ಯಾಕ್ಅಪ್ ಆಗಿ ಮ್ಯಾಪ್ ಗಳನ್ನೂ ಇಟ್ಟುಕೊಂಡಿರಿ.

ನಿಮ್ಮೊಂದಿಗೆ ನಗದು ಹಣ ಇಟ್ಟುಕೊಂಡಿರಿ
ಪ್ಲ್ಯಾಸ್ಟಿಕ್ ಹಣದಲ್ಲಿ ನಿಂಬಿಕೆ ಇಟ್ಟುಕೊಂಡಿರುವ ಇಂದಿನ ಪೀಳಿಗೆಯವರಿಗೆ ಇದು ಸ್ವಲ್ಪ ವಿಚಿತ್ರವೆನಿಸಬಹುದು, ಆದರೆ ಕೆಲವು ಸಂದರ್ಭಗಳಲ್ಲಿ ಸಾಕಷ್ಟು ನಗದು ಹಣ ಇಟ್ಟುಕೊಂಡಿದ್ದರೆ ಖಂಡಿತವಾಗಿ ಉಪಯೋಗಕ್ಕೆ ಬರುವುದು. ಪರ್ವತಗಳ ಮೇಲೆ ನೀವು ಹೋದಲ್ಲೆಲ್ಲ ಎಟಿಎಂಗಳು ಮತ್ತು ಕಾರ್ಡ್ ಸ್ವೈಪ್ ಟರ್ಮಿನಲ್ ಗಳು ಸಿಗುತ್ತವೆ ಎಂದು ನಿರೀಕ್ಷಿಸಬೇಡಿ. ನಿಮ್ಮೊಂದಿಗೆ ನಗದು ಹಣ ಇಟ್ಟುಕೊಂಡಿರಿ ಹಾಗು ಸಾಧ್ಯವಾದರೆ ಅದನ್ನು 2-3 ಜಾಗಗಳಲ್ಲಿ ವಿಂಗಡಿಸಿ ಅಂದರೆ ಸ್ವಲ್ಪ ಜೇಬಿನಲ್ಲಿ, ಸ್ವಲ್ಪ ಲಗೇಜ್ ಬ್ಯಾಗ್ ನಲ್ಲಿ ಇತ್ಯಾದಿಯಂತೆ ಇಟ್ಟುಕೊಳ್ಳಿ. ನಿಮಗೆ ಅದು ಯಾವಾಗ ಉಪಯೋಗಕ್ಕೆ ಬರುವ ಸ್ಥಿತಿ ಎದುರಾಗುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. ನಿಮ್ಮ ಖರ್ಚುವೆಚ್ಚಗಳನ್ನು ಮುಂಚಿತವಾಗಿಯೆ ಊಹಿಸಿಕೊಂಡು ಅದರಂತೆ ಮತ್ತು ಅನಿರೀಕ್ಷಿತ ಖರ್ಚುಗಳ ಹೆಚ್ಚುವರಿಯೊಂದಿಗೆ ನಿಮ್ಮ ಬಜೆಟ್ ಪ್ಲ್ಯಾನ್ ಮಾಡಿಕೊಳ್ಳಿ.

ಸರಿಯಾಗಿ ಸಿದ್ಧರಾಗಿ
ವರ್ಷದ ಈ ಸಮಯದಲ್ಲಿ, ಪರ್ವತಗಳಲ್ಲಿ ಮಳೆಯಾಗಲು ಪ್ರಾರಂಭವಾಗುತ್ತದೆ ಮತ್ತು ಕೆಲಸಂದರ್ಭಗಳಲ್ಲಿ ಚಳಿಯೂ ಆಗಬಹುದು. ಸಾಮಾನ್ಯವಾಗಿ ರಾತ್ರಿಹೊತ್ತು ಯಾವಾಗಲು ಚಳಿ ಇರುವುದರಿಂದ ನೀವು ಅದರಂತೆ ಸಿದ್ಧರಾಗಬೇಕು. ಗಟ್ಟಿಮುಟ್ಟಾದ ಎಲ್ಲಾ ಹವಾಮಾನಕ್ಕು ಸರಿಹೊಂದುವ ರಕ್ಷಾಕವಚದ ರಕ್ಷಣೆ ಇರುವ ರೈಡಿಂಗ್ ಜಾಕೆಟ್ ಮತ್ತು ರೈಡಿಂಗ್ ಪ್ಯಾಂಟ್ ಗಳು ಸೂಕ್ತ. ನೀವು ನಿಮ್ಮ ಥರ್ಮಲ್ ಲೈನರ್ ಗಳನ್ನು ಸಹ ನಿಮ್ಮೊಂದಿಗೆ ಕೊಂಡೊಯ್ಯಿರಿ ಏಕೆಂದರೆ ಕೆಲವು ಸಂದರ್ಭಗಳಲ್ಲಿ ಅದು ನಿಮಗೆ ಬೇಕಾಗಬಹುದು. ಮಳೆಯಲ್ಲಿ ಸವಾರಿ ಮಾಡಲು ಸೂಕ್ತವಾದಂತಹ ಗ್ಲೌಸ್ ಮತ್ತು ಬೂಟುಗಳು ಇರಲಿ. ಒಂದು ವೇಳೆ ನೀವು ರೈಡಿಂಗ್ ಪ್ಯಾಂಟ್ ಗಳನ್ನು ಅಥವಾ ವೆಟ್ ರೈಡಿಂಗ್ ಬೂಟ್ ಗಳನ್ನು ಧರಿಸಲು ಬಯಸದಿದ್ದರೆ, ಗಟ್ಟಿಮುಟ್ಟಾದ ಒಂದು ಜೊತೆ ಜೀನ್ಸ್ ಹಾಗು ಅದರೊಂದಿಗೆ ಮಂಡಿ ರಕ್ಷಕಗಳು ಮತ್ತು ಗಟ್ಟಿಮುಟ್ಟಾದ ದಪ್ಪ ಸೋಲಿನ ಲೆದರ್ ಬೂಟುಗಳನ್ನು ಇಟ್ಟುಕೊಳ್ಳಿ. ನೆನಪಿನಲ್ಲಿಡಿ, ಹರಿತೊರೆಗಳನ್ನು ದಾಟುವಾಗ ಬೂಟುಗಳಿಗೆ ಒದ್ದೆಯಾಗುತ್ತದೆ ಮತ್ತು ಒದ್ದೆಯಾದ ಲೆದರ್ ಶೂಗಳು ಮತ್ತು ಒದ್ದೆಯಾದ ಸಾಕ್ಸ್ ಗಳು ದೂರದ ಪ್ರಯಾಣಗಳಲ್ಲಿ ಆರಾಮವಲ್ಲ. ನಿಮ್ಮ ಮುಖ ಮತ್ತು ಕಣ್ಣುಗಳನ್ನು ಗಾಳಿ, ಧೂಳು, ಮರಳು, ಹಿಮ, ನೀರು ಮತ್ತು ಆಲಿಕಲ್ಲುಗಳಿಂದ ಕಾಪಾಡಿಕೊಳ್ಳಲು ಫುಲ್ ಫೇಸ್ ಹೆಲ್ಮೆಟ್ ಗಳು ಅತ್ಯಂತ ಸೂಕ್ತ. ಹಿಮ ಬಿರುಗಾಳಿಯ ಮಧ್ಯೆ ಬೈಕ್ ಸವಾರಿ ಮಾಡಲು ಪ್ರಯತ್ನಿಸಿ, ಆಗ ನೀವು ನಮ್ಮ ಸಲಹೆಯನ್ನು ಮೆಚ್ಚಿಕೊಳ್ಳುವಿರಿ. ಹೆಲ್ಮೆಟ್ ನಲ್ಲಿ ಟಿಂಟೆಡ್ ವೈಸರ್ ಬದಲಾಗಿ ಕ್ಲಿಯರ್ ವೈಸರ್ ಇದ್ದರೆ ಒಳ್ಳೆಯದು. ಕ್ಲಿಯರ್ ವೈಸರ್ ಗಳನ್ನು ಯಾವುದೇ ಬೆಳಕಿನ ಸ್ಥಿತಿಗಳಲ್ಲಿ ಬಳಸಬಹುದು ಆದರೆ ಟಿಂಟೆಡ್ ವೈಸರ್ ಗಳು ನೀವು ಕತ್ತಲೆಯಲ್ಲಿ ಪರದಾಡುವಂತೆ ಮಾಡುತ್ತದೆ. ಸಾಧ್ಯವಾದರೆ, ಒಂದು ಒಳ್ಳೆಯ ಕಿಡ್ನಿ ಬೆಲ್ಟ್ ಇಟ್ಟುಕೊಳ್ಳಿ ಏಕೆಂದರೆ ಕಡಿದಾದ ಪ್ರದೇಶಗಳಲ್ಲಿ ಸವಾರಿ ಮಾಡುವಾಗ ನಿಮ್ಮ ಅಕ್ಕಪಕ್ಕಕ್ಕೆ ನೋವುಂಟಾಗಬಹುದು.

ರಸ್ತೆ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಆಗಾಗ್ಗೆ ಪರೀಕ್ಷಿಸಿಕೊಳ್ಳಿ
ಪರ್ವತಗಳಲ್ಲಿ ರಸ್ತೆ ಮತ್ತು ಹವಾಮಾನ ಪರಿಸ್ಥಿತಿಗಳು ಕ್ಷಿಪ್ರವಾಗಿ ಬದಲಾಗಬಹುದು. ಯಾವುದೇ ಕಾರಣವಿಲ್ಲದೆ ಗಾಳಿ ಜೋರಾಗಿ ಬೀಸುತ್ತ ನಿಮ್ಮನ್ನು ಅಪ್ಪಳಿಸಬಹುದು. ಇದ್ದಕ್ಕಿದ್ದಂತೆ ಆಲಿಕಲ್ಲು ಬಿರುಗಾಳಿ ಮತ್ತು ಹಿಮ ಬಿರುಗಾಳಿ ಬೀಸಿ ನಿಮ್ಮ ಬೈಕ್ ಸವಾರಿ ಮಾಡುವ ಪರಿಸ್ಥಿತಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಕರುಗುವ ಹಿಮಗಳು ಹಿಮಪಾತ ಮತ್ತು ಭೂಕುಸಿತಗಳನ್ನು ಉಂಟುಮಾಡಿ ಇದ್ದಕ್ಕಿದ್ದಂತೆ ರಸ್ತೆಗಳಿಗೆ ತಡೆಯೊಡ್ಡಬಹುದು. ನೀವು ಪ್ರತಿ ಬಾರಿ ತಂಗಿದಾಗ ರಸ್ತೆ ಪರಿಸ್ಥಿತಿಗಳನ್ನು ಪರೀಕ್ಷಿಸಿಕೊಳ್ಳುವುದು ಅತ್ಯಂತ ಸೂಕ್ತ. ರಸ್ತೆಗಳನ್ನು ಮುಕ್ತವಾಗಿ ಇಟ್ಟುಕೊಳ್ಳಲು ಬಿಆರ್ ಓ (ಬಾರ್ಡರ್ ರೋಡ್ಸ್ ಆರ್ಗನೈಸೇಶನ್) ಬಹಳಷ್ಟು ಶ್ರಮವಹಿಸುತ್ತದೆ, ಆದರೂ ನಿಮ್ಮ ದಾರಿಯಲ್ಲಿ ಸಿಗುವ ಬಿಆರ್ ಓ ಅಥವಾ ಜಿಆರ್ ಈಎಫ್ ಶಿಬಿರಗಳಲ್ಲಿ ರಸ್ತೆ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಪಡೆದು ಮುಂದುವರಿಯಬಹುದು.

ನಿಮ್ಮ ಬೈಕ್ ಸವಾರಿಯ ಸ್ಟೈಲ್ ಬದಲಾಯಿಸಿಕೊಳ್ಳಿ
ಹಿಮಾಲಯದ ರಸ್ತೆಗಳು ತುಂಬಾ ಕಡಿದಾಗಿದ್ದು ನೀವು ಸುಲಭವಾಗಿ ಅಪಾಯಕ್ಕೊಳಗಾಗಬಹುದು. ಅದಕ್ಕೆ ಜಾಗರೂಕತೆಯ ಅಗತ್ಯವಿದೆ ಎಂಬುದನ್ನು ಅರಿತು ಎಚ್ಚರಿಕೆಯಿಂದ ಚಾಲನೆ ಮಾಡಿ. ಬಹಳಷ್ಟು ರಸ್ತೆಗಳ ಅಕ್ಕಪಕ್ಕಗಳಲ್ಲಿ ಕುಸಿತದ ತಡೆಗೋಡೆಗಳಿಲ್ಲ ಹಾಗು ಇದರಿಂದ ಅಕ್ಕಪಕ್ಕದ ಆಳವಾದ ಪ್ರಪಾತಕ್ಕೆ ಬೀಳುವ ಸಾಧ್ಯತೆಗಳಿರುತ್ತವೆ. ನೀವು ರೇಸ್ ಟ್ರ್ಯಾಕ್ ನಲ್ಲಿ ಇರುವಂತೆ ಬೈಕ್ ಓಡಿಸಬೇಡಿ, ಮಿತವಾಗಿ ಮತ್ತು ಸುರಕ್ಷಿತವಾಗಿ ಬೈಕ್ ಚಾಲನೆ ಮಾಡಿ. ಹಿಮಚ್ಛಾದಿತ ಮತ್ತು ಕಲ್ಲಿನ ನೆಲಪ್ರದೇಶದಲ್ಲಿ ಓಡಿಸುವಾಗ ವೇಗವನ್ನು ನಿಯಂತ್ರಣದಲ್ಲಿಡಿ. ಬೈಕ್ ನ ಮುಂಬದಿ ಅಥವಾ ಹಿಂಬದಿಗೆ ಕುಳಿತುಕೊಳ್ಳುವ ಮೂಲಕ ಪರಿಸ್ಥಿತಿಗೆ ತಕ್ಕಂತೆ ಭಾರ ತುಂಬಿ. ಕಡಿದಾದ ಇಳುಕಲುಗಳ ಮೇಲೆ ಏರುವಾಗ ಅದನ್ನು ದೃಢವಾಗಿ ಇರಿಸಿಕೊಳ್ಳಲು ನೀವು ಮುಂಬದಿಗೆ ಹೆಚ್ಚು ಭಾರವನ್ನು ಇಟ್ಟುಕೊಳ್ಳಬೇಕು.

ವೈದ್ಯಕೀಯ ಕಿಟ್ ಇಟ್ಟುಕೊಳ್ಳಿ, ಅದರಲ್ಲು ಮುಖ್ಯವಾಗಿ ಸನ್ ಸ್ಕ್ರೀನ್
ಸನ್ ಸ್ಕ್ರೀನ್, ಅದು ಹಿಮಾಲಯಕ್ಕೆ, ಎಂದು ನೀವು ಕೇಳಬಹುದು? ಹೌದು, ಇದಕ್ಕೆ ಒಂದು ತುಂಬಾ ಒಳ್ಳೆಯ ಕಾರಣವಿದೆ. ಅಲ್ಲಿ ಮೇಲ್ಗಡೆ ತುಂಬಾ ತೆಳುವಾದ ಗಾಳಿ ಇದ್ದು, ನಿಮ್ಮನ್ನು ಅದರಿಂದ ಕಾಪಾಡಲು ಮತ್ತು ಅದನ್ನು ತಡೆಯಲು ಏನೂ ಇಲ್ಲದ ಕಾರಣ, ನೀವು ಅಲ್ಟ್ರಾವಯಲೆಟ್ ಕಿರಣಗಳಿಗೆ ಹೆಚ್ಚು ತೆರೆದುಕೊಳ್ಳುವಿರಿ. ಇದರಿಂದ ಬಿಸಿಲಿನ ಶಾಖಕ್ಕೆ ಮೈ ಸುಡಬಹುದು. ಬಹಳಷ್ಟು ಬೈಕರ್ ಗಳಿಗೆ ಇದು ತುಂಬಾ ಕಷ್ಟ ಎಂದೆನಿಸಿದೆ. ಆದ್ದರಿಂದ ಹೆಚ್ಚಿನ ಎಸ್ಪಿಎಫ್ ಅಂಶವಿರುವ ಸನ್ ಸ್ಕ್ರೀನ್ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯ ಆಲೋಚನೆ. ನಿಮ್ಮ ಸಾಧಾರಣ ವೈದ್ಯಕೀಯ ಕಿಟ್ ನಲ್ಲಿ ತಲೆನೋವು, ಮೌಂಟೇನ್ ಸಿಕ್ ನೆಸ್, ಬೇಧಿ, ಅಂಟಾಸಿಡ್ ಗಳು ಮತ್ತು ಗ್ಯಾಸ್ ರಿಲೀವರ್ ಗಳು, ಆಂಟಿಹಿಸ್ಟಮೈನ್ ಗಳು, ನೋವು ನಿವಾರಕಗಳು ಮತ್ತು ಸೆಪ್ಟ್ರಾನ್ ನಂತಹ ಆಂಟಿ ಪೈರೆಟಿಕ್ಸ್ ಗಳು ಸಹ ಇರಬೇಕು. ಡಯಾಮಾಕ್ಸ್ ನಂತಹ ಮೌಂಟೇನ್ ಸಿಕ್ ನೆಸ್ ಔಷಧಿಗಳು ಸಲ್ಫಾ ಡ್ರಗ್ ಗಳಾಗಿದ್ದು, ಅಂತಹ ಔಷಧಿಗೆ ಅಲರ್ಜಿ ಹೊಂದಿರುವ ಜನರು ಅದನ್ನು ಸೇವಿಸಬಾರದು. ಹೆಚ್ಚಿನ ವಿವರಗಳಿಗೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಮತ್ತು ನಿಮ್ಮ ಸವಾರಿ ಪ್ರಾರಂಭಕ್ಕೆ ಮುನ್ನ ದೈಹಿಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ.

ನಿಮ್ಮ ಎತ್ತರದ ಮಟ್ಟ ಮತ್ತು ತುಂಬಾ ಮುಖ್ಯವೆಂದರೆ – ಆಗಾಗ ನೀರು ಕುಡಿಯುತ್ತಿರಲೇಬೇಕು
ಬದಲಾಗುವ ಎತ್ತರದ ಮಟ್ಟ ಮತ್ತು ಗಾಳಿಯ ಒತ್ತಡಕ್ಕೆ ಒಗ್ಗಿಕೊಳ್ಳಲು ನಿಮ್ಮ ದೇಹಕ್ಕೆ ಅವಕಾಶ ನೀಡುವುದಕ್ಕಾಗಿ ಹೆಚ್ಚಿನ ಎತ್ತರಗಳಿಗೆ ಏರುವಾಗ ನೀವು ಸರಿಯಾಗಿ ಯೋಜಿಸಿಕೊಳ್ಳುವುದು ಅತಿಮುಖ್ಯ. ತುಂಬಾ ವೇಗವಾಗಿ ಮೇಲೇರುವುದರಿಂದ ನಿಮಗೆ ತಲೆನೋವು ಬರಬಹುದು. ಅದ್ದರಿಂದ ನೆನಪಿಡಿ, ಸಾಕಷ್ಟು ನೀರು ಕುಡಿಯುತ್ತಿರಿ ಏಕೆಂದರೆ ತಣ್ಣಗಿನ ವಾತಾವರಣದಲ್ಲಿ ಹೆಚ್ಚು ಬಾಯಾರಿಕೆ ಆಗದ ಕಾರಣ ಎಲ್ಲರು ನೀರು ಕುಡಿಯುವುದನ್ನು ನಿರ್ಲಕ್ಷಿಸಬಹುದು. ಅಲ್ಲದೆ ನಿಮ್ಮ ಮದ್ಯಪಾನವನ್ನೂ ಸಹ ನಿಯಂತ್ರಣದಲ್ಲಿಡಿ. ನೀವು ಕುಡಿಯಲೇ ಬೇಕೆಂದೆನಿಸಿದರೆ, ಪರ್ವತಗಳಿಗೆ ಅತ್ಯಂತ ಸೂಕ್ತವಾದುದು ಬೀರ್. ಹೆಚ್ಚಿನ ಎತ್ತರಗಳಲ್ಲಿ ದೀರ್ಘಕಾಲಿಕ ಧೂಮಪಾನಿಗಳು ಉಸಿರಾಟದ ತೊಂದರೆ ಅನುಭವಿಸುವ ಅಪಾಯ ಹೆಚ್ಚು. ಆದ್ದರಿಂದ ನಿಮ್ಮ ಧೂಮಪಾನ ಸೇವನೆಯ ಪ್ರಮಾಣದ ಬಗ್ಗೆ ಗಮನವಿರಲಿ.

ಈ ಸಲಹೆಗಳು ನಿಮಗೆ ನೆರವಾಗುತ್ತದೆ ಮತ್ತು ಹಿಮಾಲಯದಲ್ಲಿ ನಿಮ್ಮ ಬೈಕ್ ಸವಾರಿ ಯಾವುದೇ ಅಹಿತಕರ ಘಟನೆಗಳಿಲ್ಲದ ಸ್ಮರಣೀಯ ಅನುಭವವನ್ನಾಗಿ ಮಾಡುವುದು ಎಂದು ನಾವು ನಂಬಿದ್ದೇವೆ. ಸುರಕ್ಷಿತವಾಗಿ ಬೈಕ್ ಚಾಲನೆ ಮಾಡಿ ಮತ್ತು ಸಂತೋಷದಿಂದ ಸುತ್ತಾಡಿ!!

ಮೂಲ : http://bikeportal.in/

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com