ಜೀವನ ಪಾವನ

ರವಿಯ ಆಗಮನವನ್ನು ಸಂಭ್ರಮಿಸುವ ಇಳೆಯನ್ನು ನೋಡಬೇಕೆಂದರೆ ಈಶಾನ್ಯ ಭಾರತದ ಗಿರಿಹಿಲ್...
ಸಮ್ಮೇದ ಶಿಖರ್ಜಿ  ಪುಣ್ಯ ಕ್ಷೇತ್ರ
ಸಮ್ಮೇದ ಶಿಖರ್ಜಿ ಪುಣ್ಯ ಕ್ಷೇತ್ರ

ತೀರ್ಥಂಕರರು  ಮೋಕ್ಷ ಪಡೆದ ಐದು ಬೆಟ್ಟಗಳನ್ನು ಹತ್ತಿಳಿದರೂ  ಬಿಸಿಲ ಝಳ ಯಾರನ್ನೂ ನಿತ್ರಾಣಗೊಳಿಸುವುದಿಲ್ಲ. ಚಲಿಸುವ ಮೋಡಗಳೇ ಚೈತನ್ಯ ನೀಡಿ ಹುರಿದುಂಬಿಸುತ್ತದೆ. ಕಡೆ ಬೆಟ್ಟದಲ್ಲಿ ಪಾರ್ಶ್ವನಾಥ ತೀರ್ಥಂಕರರನ್ನು ದರ್ಶಿಸಿದಾಗ ಜೀವನವೇ ಸಾರ್ಥಕವಾದಂಥ ಹಿತಾನುಭವ.

ರವಿಯ ಆಗಮನವನ್ನು ಸಂಭ್ರಮಿಸುವ ಇಳೆಯನ್ನು ನೋಡಬೇಕೆಂದರೆ ಈಶಾನ್ಯ ಭಾರತದ ಜಾರ್ಖಂಡ್‌ನ ಗಿರಿಹಿಲ್ ಜಿಲ್ಲೆಗೆ ಹೋಗಬೇಕು. ಸುಂದರ ಪ್ರಕೃತಿಯ ಮಡಿಲಲ್ಲಿರುವ ಮಧುಬನವೆಂದೂ ಕರೆಯುವ ಸಮ್ಮೇದ ಶಿಖರ್ಜಿ ಎಂಬ ಪುಣ್ಯ ಕ್ಷೇತ್ರಕ್ಕೆ ಪಾದ ಬೆಳೆಸಿದರೆ ನಿಸರ್ಗ ಸೌಂದರ್ಯದೊಂದಿಗೆ ಪುಣ್ಯವೂ ಪ್ರಾಪ್ತಿಯಾಗುವ ಯೋಗ.

ಜೈನ ಧರ್ಮದ 24 ತೀರ್ಥಂಕರ(ಚೌಬೀಸ್ ಭಗವಾನ್) ಪೈಕಿ ಇಪ್ಪತ್ತು ತೀರ್ಥಂಕರರು ಶಿಖರ್ಜಿ ಬೆಟ್ಟದಲ್ಲಿಯೇ ನಿರ್ವಾಣ(ಮೋಕ್ಷ) ಹೊಂದಿದ್ದಾರೆ. ಅದಕ್ಕೇ ಜೈನ್ ಧರ್ಮೀಯರಿಗಿದು ಪವಿತ್ರ ಕ್ಷೇತ್ರ. ಎಲ್ಲ ತೀರ್ಥಂಕರರು ಬೆಟ್ಟ (ಶಿಖರ್)ದಲ್ಲಿಯೇ ನಿರ್ವಾಣ ಹೊಂದಿದ್ದರಿಂದ ಇದಕ್ಕೆ ಶಿಖರ್ಜಿ ಎನ್ನುತ್ತಾರೆ. ಇಲ್ಲಿ ಸುಮಾರು 500 ಮೀ. ಎತ್ತರದ ಐದಾರು ಬೆಟ್ಟ ಗುಡ್ಡಗಳನ್ನು ಹತ್ತಿಳಿಯಬೇಕು. 27 ಕಿ.ಮೀ ವ್ಯಾಪ್ತಿಯನ್ನು ನಡದೇ ಕ್ರಮಿಸಬೇಕು. ಕೇ....ದಾಗ ಕಷ್ಟ ಎನಿಸಬಹುದು. ಒಮ್ಮೆ ದೃಢವಾಗಿ ನಿಶ್ಚಯಿಸಿದರೆ ಪ್ರಕೃತಿ ಮಾತೆಯೇ ನಮ್ಮ ಕೈ ಹಿಡಿದು ನಡೆಸುತ್ತಾಳೆ.

ಅಲ್ಲಿರುವ ಪಾದುಕೆ ದರ್ಶನಕ್ಕೆ ಜಿನ ಭಕ್ತಿಯೊಂದಿಗೆ ಬೆಳದಿಂಗಳಲ್ಲಿ ಪ್ರಯಾಣ ಬೆಳೆಸಿದರಂತೂ ಗುರಿ ಮುಟ್ಟಿದ್ದೇ ಗೊತ್ತಾಗೋಲ್ಲ. ಮೊದಲ ಬೆಟ್ಟವನ್ನೇರಿದಾಗ ರವಿ ಮೋಡಗಳ
ಮರೆಯಲ್ಲಿ ಇಣುಕುತ್ತಿದ್ದ. ಇಬ್ಬನಿ ಬೆಟ್ಟಕ್ಕೆ ಚಾದರ್ ಹೊದಿಸಿದಂತಿತ್ತು. ದೇಹದ ಬೆವರೂ ಆ ಇಬ್ಬನಿಯ ಸೌಂದರ್ಯಕ್ಕೆ ಮರುಳಾಗಿತ್ತು. ಎಲ್ಲೆಡೆಗಿಂತ ತುಸು ಬೇಗ ಬೆಳಗಾಗುವ ಈ ಪ್ರದೇಶದ ಮುಂಜಾನೆಯ ಸೌಂದರ್ಯ ಭುವಿಯಲ್ಲಿ ಸ್ವರ್ಗವನ್ನೇ ಸೃಷ್ಟಿಸುತ್ತೆ.

ಎಲ್ಲೆಡೆ ಹಸಿರು ಹೊತ್ತಿಸಿರುವ ಬೆಟ್ಟವನ್ನು ಇಳಿಯುವಾಗ ಮಾತ್ರ ತುಸು ಆಯಾಸ ಎನಿಸಿದ್ದು ಹೌದು. ಸುಧೀರ್ಘ 13 ಗಂಟೆಗಳ ಕಾಲ್ನಡಿಗೆಯಲ್ಲಿಯೇ ತೆರಳಬೇಕಾದ ಈ ಯಾತ್ರೆ ಜೀವನದ ಅತ್ಯದ್ಭುತ ಪಾಠ ಕಲಿಸಿತ್ತು. ನಾವೇ ತೆಗೆದುಕೊಂಡು ಹೋದ ಆಹಾರವನ್ನಲ್ಲಿ ಸೇವಿಸಬೇಕೇ ಹೊರತು, ಅಲ್ಲೇನೂ ಸಿಗುವುದಿಲ್ಲ. ತೆರೆದ ವಿಶ್ರಾಂತಿ ಗೃಹಗಳು,
ತಂಪಾದ ನೀರು ಮಾತ್ರ ನಿರೀಕ್ಷಿಸಬಹುದು.

ಇಪ್ಪತ್ತು ತೀರ್ಥಂಕರರ ಕೂಟ
ಭಗವಾನರು ನಿರ್ವಾಣ ಹೊಂದಿದ ಶಿಖರ್ಜಿಯಲ್ಲಿ ಒಂದೊಂದು ತೀರ್ಥಂಕರರದ್ದು ಒಂದೊಂದು ಕೂಟ(ಹಿಂದಿಯಲ್ಲಿ ಠೈಂಕ್ ಎನ್ನುತ್ತಾರೆ) ಇದೆ.
ಅಜಿತನಾಥ್ ತೀರ್ಥಂಕರದ್ದು ಸಿದ್ದವರ, ಸಂಭವನಾಥರದ್ದು ಧವಳ, ಅಭಿನಂದನರದ್ದು ಆನಂದ, ಸುಮತಿನಾಥರದ್ದು ಅವಿಚಲ, ಪದ್ಮಪ್ರಭರದ್ದು ಮೋಹನ, ಸುಪಾರ್ಶ್ವರದ್ದು
ಪ್ರಭಾಸ, ಚಂದ್ರಪ್ರಭರದ್ದು ಲಲಿತ್(ಚಂದ್ರಪ್ರಭ), ಪುಷ್ಪದಂತರದ್ದು ಸುಪ್ರಭ, ಶೀತಲನಾಥರದ್ದು ವಿದ್ಯುತ್‌ಪ್ರಭ, ಶ್ರೇಯಾಂಸನಾಥ್‌ರದ್ದು ಸಂಕುಲ, ವಿಮಲನಾಥರದ್ದು ಸುವೀರ,
ಅನಂಥನಾಥರದ್ದು ಗ್ಯಾಂಧರ್, ಅರಹನಾಥರದ್ದು ನಾಟಕ, ಮಲ್ಲಿನಾಥರದ್ದು ಸಂಬಲ, ಮುನಿಸುವ್ರತರದ್ದು ನಿರ್ಜರ, ನಮಿನಾಥರದ್ದು ಮಿತ್ರಧಾರ, ಪಾರ್ಶ್ವನಾಥರದ್ದು ಸುವರ್ಣಭದ್ರ(ಪಾರ್ಶ್ವನಾಥ್) ಕೂಟ ಎಂದು ಹೆಸರಿಸಲಾಗಿದೆ.

ಇನ್ನುಳಿದ ನಾಲ್ಕು ತೀರ್ಥಂಕರಾದ ಆದಿನಾಥ್ ಕೈಲಾಸ ಪರ್ವತದಲ್ಲಿ, ವಸುಪೂಜ್ಯರು ಚಂಪಾಪುರಿಯಲ್ಲಿ, ನೇಮಿನಾಥ್ ಗುಜರಾತ್‌ನ ಗಿರಿನಾರ್ ಪರ್ವತದಲ್ಲಿ ಹಾಗೂ ಭಗವಾನ್ ಮಹಾವೀರರು ಪಾವಾಪುರಿಯಲ್ಲಿ ಮೋಕ್ಷಹೊಂದಿದವರು.

ಡೋಲಲ್ಲಿ ಲಾಲಿ
ಪುಟ್ಟ ಕಂದಮ್ಮಗಳು, ವೃದ್ದರು ಹಾಗೂ ಹೃದ್ರೋಗಿಗಳು ಬೆಟ್ಟಕ್ಕೆ ತೆರಳಲು ಅನುವಾಗುವಂತೆ ಡೋವಾವಾಲಾಗಳಿರುತ್ತಾರೆ. ಬೆಟ್ಟದ ಕೆಳಗೂ ಅದ್ಬುತ ಲೋಕವಿದೆ. ಸಮವಸರಣ,
ಸಹಸ್ರ ಜಿನಬಿಂಬ, ಸಹಸ್ರಫಾಣಿಯಂಥ ಅನೇಕ ಮೂರ್ತಿಗಳ ಕೆತ್ತನೆಯನ್ನು ರಾಜಸ್ಥಾನ ಮಾರ್ಬಲ್‌ನಿಂದ ಅದ್ಬುತವಾಗಿ ಕೆತ್ತಲಾಗಿದೆ.

ದರ್ಶನ ಹೇಗೆ?
ರಾಜ್ಯದಿಂದ ಸುಮಾರು 2000 ಕಿ.ಮೀ. ದೂರದಲ್ಲಿರುವ ಶಿಖರ್ಜಿಗೆ ಕೋಲ್ಕತಾ ಮೂಲಕ ಹೋಗುವುದೊಳಿತು. ಹೌರಾ ರೈಲು ನಿಲ್ದಾಣದಿಂದ ಧನಬಾದ್(ಜಾರ್ಖಂಡ್‌ನ ಪ್ರಮುಖ ನಗರ)ಗೆ ಹೋಗಬೇಕು. ಧನಬಾಗ್‌ನಿಂದ ಪಾರಸನಾಥ್ ರೈಲು ನಿಲ್ದಾಣಕ್ಕೆ ಪ್ರಯಾಣಿಸಿ, ಅಲ್ಲಿಂದ 40 ಕಿ.ಮೀ. ದೂರದಲ್ಲಿರುವ ಶಿಖರ್ಜಿಗೆ ಖಾಸಗಿ ವಾಹನಗಳ ಮೂಲಕ ತೆರಳಬೇಕು. ಇಲ್ಲಿ ಎಲ್ಲೆಡೆ ರೈಲುಗಳೇ ಉತ್ತಮ ಸಂಚಾರಿ ಸಾಧನ.

-ಬ್ರಹ್ಮಾನಂದ ಹಡಗಲಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com