ಛೀ ಕಳ್ಳಿ

ಕಳ್ಳಿ ಗಿಡವನ್ನು ಹಗುರವಾಗಿ ಕಾಣಬೇಡಿ. ಅಮೆರಿಕದ ಅರಿ ಝೋನಾ...
ಕಳ್ಳಿ ಗಿಡ
ಕಳ್ಳಿ ಗಿಡ

ಕಳ್ಳಿ ಗಿಡವನ್ನು ಹಗುರವಾಗಿ ಕಾಣಬೇಡಿ. ಅಮೆರಿಕದ ಅರಿ ಝೋನಾ ರಾಜ್ಯದಲ್ಲಿ ಇದು ಲಾಂಛನ. 'ಸಗುರಾವೋ' ಎಂಬ ಹೆಸರಿರುವ ಇದಕ್ಕೆ ಇಲ್ಲಿ ಭಾರಿ ಮರ್ಯಾದೆ ಇದೆ...

ಈ ಕಳ್ಳಿ ಸಾಮಾನ್ಯದ್ದಲ್ಲ. ಅಮೆರಿಕದ ಅರಿಝೊನಾ ರಾಜ್ಯದ ಲಾಂಛನವೂ ಹೌದು. ಬರೋಬ್ಬರಿ 60 ಅಡಿ ಎತ್ತರಕ್ಕೆ ಬೆಳೆಯುವ ಕಳ್ಳಿ. ಇವಳು ಆ ಕಳ್ಳಿಯಲ್ಲ. ಲಕ್ಷಾಂತರ ಸಸ್ಯ ರಾಶಿಗಳ ಪೈಕಿ ನೀರಿಲ್ಲದೇ ಬೆಳೆಯುವ ಕ್ಯಾಕ್ಟಸ್ ಸಸ್ಯ ಪ್ರಭೇದದ 'ಸಗುರಾವೋ' ಕಳ್ಳಿ...

ಸಗುರಾವೋ ತಳಿಯ ಕ್ಯಾಕ್ಟಸ್ ಅತಿಯಾಗಿ ಬೆಳೆಯುವುದು ಬರಡುಭೂಮಿಯಲ್ಲಿ. ಆಫ್ರಿಕಾ ಖಂಡ ಇದರ ತವರು. ಗಿಡವಾದರೂ, ಶೀಘ್ರದಲ್ಲೇ ಮರದ ಎತ್ತರಕ್ಕೆ ಬೆಳೆದು ನಿಲ್ಲಬಲ್ಲದು. ಸಾಮಾನ್ಯವಾಗಿ ಕಳ್ಳಿ ಗಿಡಗಳನ್ನು ಭಾರತದಲ್ಲಿ ಹೊಲ-ತೋಟಗಳಿಗೆ ಬೇಲಿಯಂತೆ ಬಳಸಿದರೆ, ಅತ್ತ ಮೆಕ್ಸಿಕೋ ದೇಶದಲ್ಲಿ ಕಳ್ಳಿಯನ್ನು ತರಕಾರಿಯಂತೆ ಅಡುಗೆಗೆ ಬಳಸುತ್ತಾರೆ. ಇತ್ತ ಅಮೆರಿಕಾದ ಅರಿಝೋನಾ ರಾಜ್ಯಈ ಸಗುರಾವೋ ಕಳ್ಳಿಯನ್ನು, ಮತ್ತದರಲ್ಲಿ ಅರಳುವ ಬಿಳಿಯ ಹೂವನ್ನು ಸರ್ಕಾರದ ಲಾಂಛನವನ್ನಾಗಿ ಮಾಡಿಕೊಂಡಿದೆ. ಈ ರಾಜ್ಯದ ಸರ್ಕಾರಿ ಚಿಹ್ನೆಗಳಲ್ಲಿ, ಹಿನ್ನೆಲೆಯಲ್ಲಿ ಸಗುರಾವೋ ಚಿತ್ರವಿದ್ದರೆ ಪಕ್ಕದಲ್ಲೇ ಅದರ ಹೂವಿನ ಚಿತ್ರವೂ ಇರುತ್ತದೆ.

ಸಗುರಾವೋ ಇತಿಹಾಸ

ನೀರೇ ಸಿಗದ ಆಫ್ರಿಕಾ ಖಂಡದ 'ಅಟಕಾಮಾ' ಮರುಭೂಮಿ ಈ ಸಗುರಾವೋ ತವರು. ಸಗುರಾವೋ ಕುಟುಂಬಕ್ಕೆ ಸೇರಿದ ಕೆಲವೊಂದು ತಳಿ ಆಫ್ರಿಕ ಮತ್ತು ಶ್ರೀಲಂಕಾದಲ್ಲೂ ಲಭ್ಯ. ಆದರೆ ಜಗತ್ತಿನಲ್ಲಿ ಅತಿ ಹೆಚ್ಚು ಸಗುರಾವೋ ಬೆಳೆಯುತ್ತಿರುವುದು ಉತ್ತರ ಅಮೆರಿಕ ಖಂಡದ ಅತಿದೊಡ್ಡ ಮರುಭೂಮಿ ಸೊನೊರನ್ನಲ್ಲಿ. ಈ ಮರುಭೂಮಿ ವಾಯುವ್ಯ ಮೆಕ್ಸಿಕೋದಿಂದ ಅಮೆರಿಕದೆ ನೈಋತ್ಯ ರಾಜ್ಯಗಳಾದ ಅರಿಝೋನಾ, ಕ್ಯಾಲಿಫೋರ್ನಿಯಾ ಸೇರಿದಂತೆ ನ್ಯೂ ಮೆಕ್ಸಿಕೋ, ಉಥಾ, ಕೊಲರೆಡೊ, ನೆವಾಡ ರಾಜ್ಯಗಳಲ್ಲೆಲ್ಲ ಹರಡಿಕೊಂಡಿದೆ.

'ಕಳ್ಳಿ'  ಬೆಳೆಯೋದು ಹೇಗೆ?

ಸಗುರಾವೋಗೆ ಮುಳ್ಳುಗಳೇ ಎಲೆಗಳಂತೆ. ದ್ಯುತಿ ಸಂಶ್ಲೇಷಣೆ ಕಾರ್ಯವನ್ನು ಎಲೆಗಳೆ ಬದಲಿಗೆ ಇದರ ಕಾಂಡವೇ ಮಾಡುತ್ತಿದೆ. ಮರುಭೂಮಿಯಲ್ಲಿ ಎಂದಾದರೊಮ್ಮೆ ಬೀಳುವ ಮಳೆಯೇ ಇದರ ಬೆಳವಣಿಗೆಗೆ ಮೂಲಾಧಾರ. ಮಳೆ ನೀರನ್ನು ಬೇರುಗಳ ಮೂಲಕ ಹೀರಿಕೊಂಡು ಅನೇಕ ದಿನಗಳವರೆಗೆ ಕಾಂಡಗಳಲ್ಲಿ ಶೇಖರಿಸಿಟ್ಟುಕೊಳ್ಳುವುದು ಇದರ ಮೂಲ ಗುಣ. ನೀರನ್ನು ಹೀರಿಕೊಂಡಾಗಲೆಲ್ಲಾ ಇಡೀ ಕಾಂಡವೇ ಹಿಗ್ಗುತ್ತದೆ. ಇದರ ಮುಳ್ಳುಗಳು ದಿನವೊಂದಕ್ಕೆ ಮಿ.ಮೀ.ಲೆಕ್ಕದಲ್ಲಿ ಬೆಳೆಯುತ್ತದೆ.

ಬೆಳೆದಂತೆಲ್ಲಾ ಈ ಮುಳ್ಳುಗಳು ನಡುನಡುವೆ ಅಡ್ಡಪಟ್ಟಿಯಂತೆ ಬೆಳೆದು ನಿಂತು ಕಾಂಡದ ದೈನಂದಿನ ಬೆಳವಣಿಗೆಗೂ ಸಹಕರಿಸುತ್ತವೆ. ಸಂಪೂರ್ಣ ಬೆಳವಣಿಗೆಯಾದ ಮುಳ್ಳುಗಳು ಕಾಂಡದ ಕೆಳಭಾಗಕ್ಕೆ ಸರಿದು ಹೊಸ ಮುಳ್ಳುಗಳು ಬೆಳೆಯುತ್ತದೆ. ಇದರ ಬೇರು ನೇರುವಾಗಿ ಭೂಮಿಯ ಆಳಕ್ಕೆ ಸುಮಾರು ಮೀಟರುಗಳ ಆಳಕ್ಕೆ ಬೆಳೆದಿರುತ್ತದೆ. ಹೀಗೆ ಬೆಳೆಯುವಾಗ ಬೇರಿಗೆ ನೀರಿನ ಪಸೆ ಎಲ್ಲಿ ಸಿಗುತ್ತದೋ ಅಲ್ಲಿಂದಲೇ ಜಲಸಂಗ್ರಹ ಆರಂಭಿಸುತ್ತದೆ. ಇದಕ್ಕೆ ನೀರು ದೊರೆತರೆ ಪ್ರತಿವರ್ಷ ಶೇ.20ರಿಂದ 25ರಷ್ಟು ಬೆಳೆಯುತ್ತದೆ. ಇದು 75-100 ವರ್ಷ ಬದುಕುತ್ತದೆ. ತುಸು ಹೆಚ್ಚು ನೀರು ಸಿಕ್ಕರೆ ಎರಡು ಶತಮಾನ ಬದುಕಬಲ್ಲುದು.

ನನಗೆ ನೀನು-ನಿನಗೆ ನಾನು

ಸಗುರಾವೋನ ರಕ್ಷಣಾತ್ಮಕ ಗುಣ ಇರುವುದೇ ಅದರ ಮುಳ್ಳುಗಳಲ್ಲಿ. ಯಾವುದೇ ಪ್ರಾಣಿ ಪಕ್ಷಿಗಳು ಇದನ್ನು ಆಹಾರವನ್ನಾಗಿ ತಿನ್ನದಂತೆ ತಡೆಯಲು ರಕ್ಷಣೆಗಾಗಿ ಚೂಪಾದ ಮುಳ್ಳುಗಳಿರುತ್ತವೆ. ಆದರೆ ಸ್ವಯಂ ಪರಾಗಸ್ಪರ್ಶ ಮಾಡಿಕೊಳ್ಳಲಾಗದ ಸಗುರಾವೋ, ಬಾವುಲಿ ಮತ್ತು ಮರಕುಟಿಕಗಳೊಂದಿಗೆ ಕೊಡು-ಕೊಳ್ಳುವ ವ್ಯವಹಾರ ನಡೆಸುತ್ತದೆ. ಪ್ರೌಢಾವಸ್ಥೆಗೆ ಬಂದ ಕಳ್ಳಿಯಲ್ಲಿ ರಾತ್ರಿ ಬಿಳಿಯ ಹೂಗಳು ಬಿಡುತ್ತವೆ.

ಬಾವಲಿಗಳೇ ಇದರ ಪರಾಗಸ್ಪರ್ಶಕ್ಕೆ ನೆರವಾಗುವಂಥವು. ಹೀಗೆ ಸಗುರಾವೋ ಗಿಡಗಳ ಮೇಲೆ ಬಂದು ಕೂರುವ ಮಣಭಾರದ ಬಾವಲಿಗಳನ್ನೂ ಈ ಹೂವುಗಳು ಹೊರಬಲ್ಲದು. ಸಗುರಾವೋ ಕಾಂಡದಲ್ಲಿ ಆಗಿಂದಾಗ್ಗೆ ಗೂಡು ನಿರ್ಮಿಸಲು ಮರಕುಟಿಕಗಳು ರಂಧ್ರ ಕೊರೆದು, ಕೆಲ ಸಮಯ ಹಾಗೆಯೇ ಒಣಗಲು ಬಿಡುತ್ತವೆ. ಸಗುರಾವೋ ಇದನ್ನು ಅರ್ಥ ಮಾಡಿಕೊಂಡಂತೆ ಆ ಭಾಗದಲ್ಲಿ ಯಾವುದೇ ಬೆಳವಣಿಗೆಯನ್ನು ತೋರದೆ ಒಣಗುತ್ತದೆ. ಆ ರಂಧ್ರ ಇರುವ ಕಾಂಡದ ಭಾಗ ಸಂಪೂರ್ಣ ಒಣಗಿದ ನಂತರ ಮರಕುಟಿಕಗಳು ಇಲ್ಲಿ ಬಂದು ವಾಸಿಸುತ್ತವೆ. ಹಗಲಲ್ಲಿ ಪರಾಗಸ್ಫರ್ಶಕ್ಕೆ ಸಹಕರಿಸುತ್ತವೆ.

'ವೈನ್' ಆಗಿದೆ ಸೆಗುರಾವೋ

ಟೊಹೊನೋ ಓ 'ಒದಾಮ್ ಎಂದು ಕರೆಯಲ್ಪಡುವ ಮೂಲ ಅಮೆರಿಕನ್ ಬುಡಕಟ್ಟು ಜನಾಂಗವೊಂದು ಸಗುರಾವೋ ಗಿಡದಲ್ಲಿ ಬಿಡುವ ಹಣ್ಣನ್ನು ಹೆಚ್ಚಾಗಿ ಬಳಸುತ್ತಾರೆ. ಬೇಸಿಗೆಯಲ್ಲಿ ಬೆಳೆಯುವ, ಸಣ್ಣ ಪರಂಗಿಹಣ್ಣಿನ ಗಾತ್ರದ ಈ ಹಣ್ಣಲ್ಲಿ ಏನಿಲ್ಲವೆಂದರೂ ಎರಡುಸಾವಿರ ಬೀಜಗಳಿರುತ್ತವೆ. ಈ ಹಣ್ಣಿನಿಂದ ತೆಗೆದೆ ರಸವನ್ನು ಕೊಳೆಯಲು ಬಿಟ್ಟು 'ವೈನ್' ತಯಾರಿಸುವ ಈ ಜನ, ಬಟ್ಟೆ ಹೆಣೆಯಲು ಸಗುರಾವೋ ಮುಳ್ಳುಗಳನ್ನೂ ಬಳಸುತ್ತಾರೆ.

ಮುಟ್ಟಿದರೆ ಜೋಕೆ
ಅರಿಝೊನಾ ರಾಜ್ಯ ಸರ್ಕಾರದ ಮುಖ್ಯ ಚಿಹ್ನೆಯೇ ಸಗುರಾವೋ ಆಗಿರುವುದರಿಂದ ಯಾವುದೇ ಕಾರಣಕ್ಕೂ ಇದನ್ನು ಕಡಿಯುವಂತಿಲ್ಲ. ಕರ್ನಾಟಕದಲ್ಲಿ ಶ್ರೀಗಂಧಕ್ಕೆ ಇರುವಷ್ಟೇ ಮಾನ್ಯತೆ ಇಲ್ಲಿ ಸಗುರಾವೋ ಗಿಡಕ್ಕಿದೆ. ಖಾಸಗಿ ಪ್ರದೇಶಗಳಲ್ಲಿ ಬೆಳೆದು ನಿಂತರೆ ಸರ್ಕಾರದ ಅನುಮತಿ ಪಡೆದು ಕಡಿಯಬೇಕಾಗುತ್ತದೆ. ಆದರೂ ಇದರ ಮುಳ್ಳುಗಳು ಮತ್ತು ಕಾಂಡಗಳನ್ನು ಕಾಳಸಂತೆಯಲ್ಲಿ ಮಾರಿಕೊಳ್ಳಲು ಹವಣಿಸುವ ಕಳ್ಳರು, ಮೆಕ್ಸಿಕೋ ಮತ್ತು ಅಮೆರಿಕೆ ಗಡಿಗಳಲ್ಲಿ ಇದನ್ನು ರಹಸ್ಯವಾಗಿ ಕಡಿದು ಸಾಗಿಸುತ್ತರೆ.

ಅರಿಝೋನಾ ರಾಜ್ಯದ 'ಮೆರಿಕೊಪಕೌಂಟಿ'ಯ ತುಸಾನ್ ವ್ಯಾಪ್ತಿಯ ಮೌಂಟ್ ಲೆಮೆನ್ನಲ್ಲಿ ಸಗುರಾವೋ ಗಿಡದ ನೂರಾರು ಮೈಲಿಗಳ ಉದ್ದದ ಕಾಡೇ ಇದೆ. ಇದಕ್ಕಾಗಿ ತುಸಾನ್ ಸಮೀಪದಲ್ಲಿ 91,440 ಎಕರೆ ಪ್ರದೇಶದಲ್ಲಿ 'ಸಗುರಾವೋ ರಾಷ್ಟ್ರೀಯ ಉದ್ಯಾನ' ನಿರ್ಮಿಶಲಾಗಿದೆ. ಇಲ್ಲಿ ಇವು 45 ಅಡಿಯಿಂದ 60 ಅಡಿ ಎತ್ತರಕ್ಕೆ ಬೆಳೆದು ನಿಂತಿವೆ. ಸಂಪೂರ್ಣ ಬೆಳೆದ ಸೆಗುರಾವೋ 1 ಟನ್ ಭಾರವಿರುತ್ತದೆ. ನೂರಾರು ವರ್ಷಗಳ ಕಾಲ ಜೀವಿಸಿದ ಧರೆಗುರುಳಿದ ಸಗುರಾವೋ ಒಂದನ್ನು 'ರಾಷ್ಟ್ರೀಯ ಸ್ಮಾರಕ'ವೆಂದು ಸಂಗ್ರಹಾಲಯದಲ್ಲಿಡಲಾಗಿದೆ.

ಅನಿಲ್ ಭಾರಧ್ವಾಜ್
ಫೀನಿಕ್ಸ್,  ಯುಎಸ್ಎ


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com