ಸಿಂಥೇರಿ ಬಂತೂರೀ...

ಉತ್ತರ ಕನ್ನಡದ ಕಾಡುಗಳಲ್ಲಿ ಪಯಣಿಸುತ್ತಿದ್ದರೆ ಅದು ದೂರದ ಅಮೆಜಾನ್ ಮಳೆಕಾಡುಗಳನ್ನು ನೆನಪಿಸುತ್ತದೆ...
ಸಿಂಥೇರಿ ಬಂತೂರೀ...

ಉತ್ತರ ಕನ್ನಡದ ಕಾಡುಗಳಲ್ಲಿ ಪಯಣಿಸುತ್ತಿದ್ದರೆ ಅದು ದೂರದ ಅಮೆಜಾನ್ ಮಳೆಕಾಡುಗಳನ್ನು ನೆನಪಿಸುತ್ತದೆ. ಅದರಲ್ಲೂ ದಾಂಡೇಲಿ- ಅಣಶಿ ಹುಲಿ ಸಂರಕ್ಷಿತ ದಟ್ಟ ಹಸಿರು ಕಾನನದ ಮಧ್ಯ ಇರುವ ಸಿಂಥೇರಿ ರಾಕ್ ತಾಣದ  ಕಡೆಗಿನ ಪ್ರಯಾಣ ಎಂದರೆ ಅದು ಇಡೀ ಜೋಯಿಡಾ- ದಾಂಡೇಲಿ ಅಭಯಾರಣ್ಯದ ಸಮಗ್ರ ಪರಿಚಯ.
ದಾಂಡೇಲಿ ನಗರದಿಂದ 30 ಕಿ.ಮೀ. ದೂರದ ಈ ತಾಣದ ಪ್ರಯಾಣದ ಉದ್ದಕ್ಕೂ ದಟ್ಟಾರಣ್ಯದ ಸೊಬಗು ಕಣ್ತುಂಬುತ್ತದೆ. ಪ್ರಾಣಿ- ಪಕ್ಷಿಗಳ ಕಲರವ ಕೇಳುತ್ತ ಸಾಗುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ಇಕೋ ಟೂರಿಸಂಗೆ ಹೇಳಿಮಾಡಿಸಿರುವ ಈ ಜಾಗ ನಿಜಕ್ಕೂ ಅದ್ಭುತ.
ಕಾನೇರಿ ಕಲರವ
ಕಾನೇರಿ ನದಿ ಸೃಷ್ಟಿಸಿದ ಸಿಂಥೇರಿ ರಾಕ್ಸ್, ಕಡಿದಾದ ಕೊಳ್ಳ ಪ್ರದೇಶ. ಒಂದೆಡೆ ದಟ್ಟಾರಣ್ಯ, ಬದಿಗೆ ಕಡಿದಾದ ಕಲ್ಲು,ಬಂಡೆಗಳ ಮಧ್ಯ ಅಳದ ಕೊಳ್ಳ. ಅದು ಎದೆ ಝಲ್ ಎನಿಸುವಂಥ ದರುಶನ. ಕಾನೇರಿ ಮೇಲಿಂದ ಕೆಳಕ್ಕೆ ಧುಮ್ಮಿಕ್ಕುತ್ತಾ, ಅಲ್ಲಲ್ಲಿ ಸಣ್ಣಪುಟ್ಟ ಜಲಪಾತಗಳನ್ನು ಸೃಷ್ಟಿಸಿದ್ದಾಳೆ. ಹಾಲಿನ ನೊರೆಯುಕ್ಕಿಸುತ್ತ ಹರಿಯುವ ಕಾನೇರಿ, ಮಳೆಗಾಲದಲ್ಲಿ  ಸಿಂಥೇರಿರಾಕ್ ಪ್ರದೇಶದ ಪ್ರಕೃತಿಯ ಚೆಲುವನ್ನು ಇಮ್ಮಡಿಗೊಳಿಸುತ್ತಾಳೆ.
ಈಗ ಮುಂಗಾರು ಆರ್ಭಟ ಶುರು. ಇಲ್ಲೀಗ ಸೌಂದರ್ಯದ ಜಾತ್ರೆಯೂ ಆರಂಭವಾಗಿದೆ. ವಾರಾಂತ್ಯದ ರಜೆಯನ್ನು ಕುಟುಂಬ ಸದಸ್ಯರೊಂದಿಗೆ ಕಳೆಯಲು ಇದು ಹೇಳಿಮಾಡಿಸಿದ ಸ್ಥಳ. ಇನ್ನೂ ವಿಕೇಂಡ್‌ಗಾಗಿ ದೂರ ದೂರ ತೆರಳುವ ಟೆಕ್ಕಿಗಳಿಗೆ ಒಂದು ದಿನದ ಮಟ್ಟಿಗೆ ಬಂದುಹೋಗಲು ಇದು ಸೂಕ್ತ.
ಪಾರಿವಾಳಗಳ ಜಾತ್ರೆ
ಮುಗಿಲಿಗೆ ಚುಂಬಿಸುವ ಈ ಕಡಿದಾದ ಬಂಡೆಗಳ ಎತ್ತರ ಸುಮಾರು 300 ಅಡಿ. ಬಂಡೆಯಲ್ಲಿ ದೊಡ್ಡದಾದ ಪೊಳ್ಳು ಸಂದಿಗಳಿದ್ದು, ಸಾವಿರಾರು ಕಾಡು ಪಾರಿವಾಳಗಳ ಕುಟುಂಬಗಳು ವಾಸಿಸುತ್ತವೆ. ಪೊಟರೆ ತುದಿಗೆ ಜೋತು ಬಿದ್ದಿರುವ ನೂರಾರು ಜೇನುಗೂಡುಗಳನ್ನು ನೋಡುವುದೇ ಚೆಂದ. ನೋಡಿದಾಕ್ಷಣ, ಇನ್ನೊಮ್ಮೆ ಇಲ್ಲಿಗೆ ಬರಲೇಬೇಕೆಂಬ ಆಸೆಯ ಮುದ್ರೆ ಮರುಕ್ಷಣದಲ್ಲಿ ನಿಮ್ಮ ಮನದಲ್ಲಿ ಒತ್ತದಿದ್ದರೆ ನಾಕಾಣೆ.
ಶಿಲಾಧ್ಯಯನಕ್ಕೆ ಅವಕಾಶ
ಹಾರ್ನಬಿಲ್ ಪಕ್ಷಿಗೆ ಪ್ರಿಯವಾದ ಕಾಸರಕ ಹಣ್ಣಿನ, ಬೃಹತ್ ಗಾತ್ರದ ಕಣಗಲೆ ಮರಗಳು ಸೇರಿದಂತೆ ಸೂರ್ಯನಕಿರಣ ಭೂಮಿಗೆ ತಾಕದಂತೆ ಸ್ಪರ್ಧೆ ಒಡ್ಡಿವೆ ಎಂಬಂತೆ ಆಕಾಶದೆತ್ತರಕ್ಕೆ ಬೆಳೆದಿರುವ ಬೀಟೆ, ತೇಗ ಸೇರಿದಂತೆ ನಾನಾ ಜಾತಿಮರಗಳು, ಔಷಧಿಗುಣದ ಗಿಡ, ಬಳ್ಳಿಗಳು, ವಿವಿಧ ಚಿಟ್ಟೆ, ಕೀಟ, ಪಕ್ಷಿ, ಪ್ರಾಣಿ, ಜೀರುಂಡೆಗಳ ಪ್ರಭೇದಗಳ... ಕಲರವ ಸಿಂಥೇರಿ ರಾಕ್ಸ್‌ನ ಚೆಲುವನ್ನು ಹೆಚ್ಚಿಸಿವೆ. ಜಗತ್ತಿನಲ್ಲಿ ಸಿಗುವ ವಿಶೇಷ ಶಿಲೆಗಳ ಕುರಿತಂತೆ ಸಂಕ್ಷಿಪ್ತ ಮಾಹಿತಿ ನೀಡುವ ಪ್ರಾತಕ್ಷಿತೆಯ ರೂಪದಲ್ಲಿ ಅರಣ್ಯ ಇಲಾಖೆ ಇಲ್ಲಿ ವ್ಯವಸ್ಥೆ ಕಲ್ಪಿಸಿದ್ದು, ಇದು ಶಿಲೆಗಳ ಬಗ್ಗೆ ಅಧ್ಯಯನ ನಡೆಸುವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಮಾಹಿತಿ ನೀಡುತ್ತದೆ.
ಶಿಥಿಲೀಕರಣಕ್ಕೆ ಸಾಕಷ್ಟು ಪ್ರತಿರೋಧ ಒಡ್ಡಿ ಸೃಷ್ಟಿಯಾಗಿ ನಿಂತಿರುವ ಈ ಬಂಡೆಗಳು ಅಭೇದ್ಯವಾಗಿವೆ. ಗ್ರಾನೈಟ್, ಬೆಸಾಲ್ಟ್‌ನಂಥ ಅಗ್ನಿಶಿಲೆಗಳು, ಮರಳು, ಸುಣ್ಣ ಸೇರಿದಂತೆ ವಿವಿಧ ಜಲಶಿಲೆಗಳಿಂದ ಇಂಥ ಕಡಿದಾದ ಬಂಡೆಗಳು ರೂಪುಗೊಂಡಿವೆ ಎನ್ನಲಾಗಿದೆ. ಕರಾವಳಿ, ಪರ್ವತಶ್ರೇಣಿಗಳು ಹಾಗೂ ಉತ್ತರ ಪಾಕಿಸ್ತಾನದ ಕಾರಕೊರಂ ಪರ್ವತ ಶ್ರೇಣಿಗಳಲ್ಲಿ ಈ ರೀತಿಯ ಕಡಿದಾದ ಎತ್ತರದ ಬಂಡೆಗಳು ಕಾಣಸಿಗುತ್ತವೆ.
250 ಮೆಟ್ಟಿಲು
ಪ್ರವಾಸಿಗರು ನದಿ ಪ್ರದೇಶಕ್ಕೆ ಇಳಿದು ಹೋಗಲು ಅರಣ್ಯ ಇಲಾಖೆ 250 ಮೆಟ್ಟಿಲುಗಳನ್ನು ನಿರ್ಮಿಸಿದೆ. ಕುಳಿತು ದಣಿವಾರಿಸಿಕೊಳ್ಳಲು ಅಲ್ಲಲ್ಲಿ ಕಲ್ಲಿನ ಬೆಂಚುಗಳ ಅಸನದ ವ್ಯವಸ್ಥೆ ಇದೆ. ಮೂರು ಕಡೆಗಳಲ್ಲಿ ಎತ್ತರವಾದ ವೀಕ್ಷಣಾ ಗೋಪುರಗಳಿವೆ. ಇದನ್ನು ಏರಿ ಸಿಂಥೇರಿ ಚೆಲುವನ್ನು ಸವಿಯಬಹುದು. ಇಲಾಖೆ ನೇಮಿಸಿರುವ ದಿನಗೂಲಿ ನೌಕರರು ತಾಣದ ಬಗ್ಗೆ ಮಾಹಿತಿ ನೀಡುವುದರಿಂದ ಪ್ರವಾಸಿಗರಿಗೆ ಇದು ಸಹಾಯಕವಾಗಲಿದೆ.
ಸಿಂಥೇರಿ ರಾಕ್ಸ್‌ಗೆ ಬೇಟಿ ನೀಡುವ ವೇಳೆ ಸಾಕಷ್ಟು ಕುಡಿವ ನೀರು, ತಿಂಡಿಯನ್ನು ಜೊತೆಯಲ್ಲೇ ತೆಗೆದುಕೊಂಡು ಹೋಗಿ. ಅಲ್ಲಿ ಏನೂ ಸಿಗಲ್ಲ. ಸ್ವಂತ ವಾಹನ ಇದ್ದರೆ ಉತ್ತಮ. ಯಾಕೆಂದರೆ ಸಾರಿಗೆ ಬಸ್‌ಗಳಿವೆ. ಆದರೆ ವೇಳೆ ಹೊಂದಾಣಿಕೆ ಕಷ್ಟ. ದಾಂಡೇಲಿ ನಗರ, ಅಕ್ಕಪಕ್ಕದಲ್ಲಿ ಖಾಸಗಿ ರೆಸಾರ್ಟ್, ವಸತಿಗೃಹಗಳಿವೆ. ಮುಂಗಡವಾಗಿ ಬುಕ್ ಮಾಡಿದರೆ ಉತ್ತಮ. 60 ಕಿ.ಮೀ. ದೂರದ ಯಲ್ಲಾಪುರ, 25ಕಿ.ಮೀ. ದೂರದ ಹಳಿಯಾಳದಲ್ಲೂ ಸಾಕಷ್ಟು ಖಾಸಗಿ ಲಾಡ್ಜ್‌ಗಳಿವೆ ಇಲ್ಲಿ ತಂಗಬಹುದು. ಹೆಚ್ಚಿನ ಮಾಹಿತಿಗಾಗಿ ಗಣೇಶ ಕಾಮತ್ (ಮೊ. 94484-04218) ಸಂಪರ್ಕಿಸಬಹುದು.

ರೂಟ್ ಮ್ಯಾಪ್
ಹಳಿಯಾಳ ತಾಲೂಕಿನ ದಾಂಡೇಲಿ ನಗರಕ್ಕೆ ನಾಡಿನ ಎಲ್ಲ ಭಾಗದಿಂದಲೂ ಸಾರಿಗೆ ಸಂಪರ್ಕವಿದೆ. 120 ಕಿ.ಮೀ.ದೂರದ ಹುಬ್ಬಳ್ಳಿ ಹತ್ತಿರದ ರೇಲ್ವೆ, ವಿಮಾನ ನಿಲ್ದಾಣ. ದಾಂಡೇಲಿಯಿಂದ ಶ್ರೀಕ್ಷೇತ್ರ ಉಳವಿಗೆ ಪ್ರಯಾಣಿಸುವ ಮಾರ್ಗದಲ್ಲಿದೆ ಸಿಂಥೇರಿ ರಾಕ್ಸ್. ದಾಂಡೇಲಿಯಿಂದ 30 ಕಿ.ಮೀ. ದೂರ. ಮುಖ್ಯರಸ್ತೆಯ ಎಡಭಾಗದ ಬಳಿ ಸ್ವಾಗತ ದ್ವಾರವಿದ್ದು, ಅಲ್ಲೇ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಇದೆ. ಅಲ್ಲಿ ಪ್ರವೇಶ ಶುಲ್ಕ ಪಾವತಿಸಿ ಟಿಕೆಟ್ ಪಡೆದುಕೊಂಡು ಎರಡು ಕಿ.ಮೀ. ದೂರ ಸಾಗಿದರೆ, ಅಲ್ಲಿ ಇಲಾಖೆ ನಿರ್ಮಿಸಿದ ಮೆಟ್ಟಿಲುಗಳು ಸಿಗುತ್ತವೆ. ಮೆಟ್ಟಿಲು ಇಳಿದುಹೋದರೆ ಸಿಂಥೇರಿ ದರ್ಶನ ಭಾಗ್ಯ ಸಿಗುತ್ತದೆ.
ಭೇಟಿಯ ವೇಳೆ- ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೂ ಸಿಂಥೇರಿಗೆ ಭೇಟಿ ನೀಡಬಹುದು. ಸಿಂಥೇರಿ ನೋಡಿದ ಮೇಲೆ ಅಲ್ಲಿಂದ 16 ಕಿ.ಮೀ. ದೂರದ ಶ್ರೀ ಉಳವಿಗೂ ಹೋಗಿಬನ್ನಿ.

- ಚಿತ್ರ, ಲೇಖನ: ಹುಳ್ಳಿ ಪ್ರಕಾಶ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com