ಬರ್ಮುಡಾ ಟ್ರಯಾಂಗಲ್ ನ ಶಾಕಿಂಗ್ ಸತ್ಯಗಳು

ಡೆವಿಲ್ಸ್ ಟ್ರಯಾಂಗಲ್ (ಭೂತಗಳ ತ್ರಿಕೋನ) ಎಂದೂ ಕರೆಯಲ್ಪಡುವ ಬರ್ಮುಡಾ ಟ್ರಯಾಂಗಲ್ ಹಲವು ವರ್ಷಗಳಿಂದ ತನ್ನ ನಿಗೂಢತೆಯಿಂದಲೇ ಜಗತ್ತಿನ ಕುತೂಹಲಕ್ಕೆ ಕಾರಣವಾಗಿದೆ...
ನಿಗೂಢ ಬರ್ಮುಡಾ ಟ್ರಯಾಂಗಲ್ (ಸಂಗ್ರಹ ಚಿತ್ರ)
ನಿಗೂಢ ಬರ್ಮುಡಾ ಟ್ರಯಾಂಗಲ್ (ಸಂಗ್ರಹ ಚಿತ್ರ)

ಈ ಜಗತ್ತಿನಲ್ಲಿ ವಿಶ್ವದ ಪ್ರಖ್ಯಾತ ವಿಜ್ಞಾನಿಗಳಿಗೂ ಬಗೆಹರಿಸಲಾಗದ ಅದೆಷ್ಟೋ ರಹಸ್ಯಗಳಿವೆ. ಇಂತಹ ನೂರಾರು ಭೌಗೋಳಿಕ ರಹಸ್ಯಗಳಲ್ಲಿ ಅಟ್ಲಾಂಟಿಕ್ ಮಹಾಸಾಗರದ ಬಳಿ ಕಾಣಸಿಗುವ  ಬರ್ಮುಡಾ ಟ್ರಯಾಂಗಲ್ ಟ್ರಯಾಂಗಲ್ ಕೂಡ ಒಂದು.

ಡೆವಿಲ್ಸ್ ಟ್ರಯಾಂಗಲ್ (ಭೂತಗಳ ತ್ರಿಕೋನ) ಎಂದೂ ಕರೆಯಲ್ಪಡುವ ಬರ್ಮುಡಾ ಟ್ರಯಾಂಗಲ್ ಹಲವು ವರ್ಷಗಳಿಂದ ತನ್ನ ನಿಗೂಢತೆಯಿಂದಲೇ ಜಗತ್ತಿನ ಕುತೂಹಲಕ್ಕೆ ಕಾರಣವಾಗಿದೆ. ಅಟ್ಲಾಂಟಿಕ್ ಮಹಾಸಾಗರದ ನಕ್ಷೆಯನ್ನು ಹರಡಿ ಫ್ಲೋರಿಡಾದಿಂದ ಬರ್ಮುಡಾ ದ್ವೀಪಗಳು, ಅಲ್ಲಿಂದ ಪ್ಯೂರ್ಟೋ ರೀಕೋ ಮತ್ತು ಅಲ್ಲಿಂದ ತಿರುಗಿ ಫ್ಲೋರಿಡಾ ಪ್ರದೇಶವನ್ನು ಮೂರು ಸರಳ  ರೇಖೆಗಳಿಂದ ಕೂಡಿಸಿದರೆ ಮೂಡುವ ತ್ರಿಕೋನಾಕೃತಿಯ ನಡುವಣ ಭಾಗವೇ ಈ ಬರ್ಮುಡಾ ಟ್ರಯಾಂಗಲ್.

ಈ ಪ್ರದೇಶ ಏಕೆ ಇಷ್ಟು ಕುಖ್ಯಾತಿಗಳಿಸಿದೆ ಎನ್ನಲು ಹಲವು ಉದಾಹರಣೆಗಳನ್ನು ನೀಡಬಹುದು. ಇಲ್ಲಿ ಹಾರಾಟ ಮಾಡಿದ ಹಲವು ವಿಮಾನಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದವು. ಈ  ಜಲಭಾಗದಲ್ಲಿ ಸಂಚರಿಸಿದ ಅದೆಷ್ಟೋ ಹಡಗುಗಳು ನಿಗೂಢ ಅಪಘಾತಕ್ಕೀಡಾಗಿ ಅವುಗಳ ಅವಶೇಷಗಳು ಕೂಡ ಸಿಗಲಾರದ ಹಾಗೆ ಕಣ್ಮರೆಯಾಗಿವೆ. ಉತ್ತರ ಅಟ್ಲಾಂಟಿಕ್ ಸಾಗರದಲ್ಲಿರುವ  ಬರ್ಮುಡಾ ದ್ವೀಪಗಳಿಂದ ಅಮೆರಿಕ ದೇಶದ ಮಿಯಾಮಿ, ಅಲ್ಲಿಂದ ಪ್ಯೂರ್ಟೋ ರೀಕೋ ನಂತರ ಮತ್ತೆ ಬರ್ಮುಡಾಕ್ಕೆ ಎಳೆದ ರೇಖೆಗಳ ನಡುವಣ ಪ್ರದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ  ಹಡಗುಗಳು ಮತ್ತು ವಿಮಾನಗಳು ಮಾಯವಾಗಿವೆ. ಇದಕ್ಕೆ ಕಾರಣಗಳನ್ನು ಹುಡುಕ ಹೊರಟವರಿಗೆ ವೈಜ್ಞಾನಿಕ ಸತ್ಯಕ್ಕಿಂತ ಕಟ್ಟುಕಥೆಗಳ ಕಂತೆಯೇ ಪುಂಖಾನುಪುಂಖವಾಗಿ ದೊರಕಿದೆ.

ಈ ನಿಗೂಢತೆಗೆ ಸೂಕ್ತ ಉತ್ತರ ಇನ್ನೂ ದೊರೆತಿಲ್ಲವಾದರೂ ಕೆಲ ವಿಜ್ಞಾನಿಗಳು ಮತ್ತು ಪತ್ರಕರ್ತರು ಈ ಬಗ್ಗೆ ಬೆಳಕು ಚೆಲ್ಲಲು ಮುಂದಾದರು. 1964ರಲ್ಲಿ ಅರ್ಗೋಸಿ ಪತ್ರಿಕೆಯ ಮೂಲಕ ವಿನ್ಸೆಂಟ್  ಹೆಚ್ ಗಾಡ್ಡಿಸ್ ಎಂಬುವರು ಈ ಬರ್ಮುಡಾ ಟ್ರಯಾಂಗಲ್ ಕುರಿತು ಬರೆದ ಸರಣಿ ಲೇಖನಗಳು ವಿಶ್ವದ ಗಮನ ಸೆಳೆಯಿತು. ಈ ಲೇಖನಗಳಲ್ಲಿ ಗಾಡ್ಡಿಸ್ ಕಾಣೆಯಾದ ಹಡಗುಗಳ ಬಗ್ಗೆ ಉಲ್ಲೇಖಿಸಿ  ಬರೆದಿದ್ದರು.

ಇದಕ್ಕೂ ಮುನ್ನ, 1952ರಲ್ಲಿ ಜಾರ್ಜ್ ಎಕ್ಸ್, ಸಾಂಡ್ಸ್ ಎಂಬುವರು ತಮ್ಮ ಫೇಟ್ ಎಂಬ ಪತ್ರಿಕೆಯಲ್ಲಿ ಈ ಪ್ರದೇಶದಲ್ಲಿ ಹಲವಾರು ಅಪಘಾತಗಳಾಗುತ್ತಿರುವ ಬಗ್ಗೆ ಉಲ್ಲೇಖಿಸಿದ್ದರು. ಆದರೆ ಇದಕ್ಕೆ ನಿಜವಾದ ಪ್ರಚಾರ ಸಿಕ್ಕಿದ್ದು ಮಾತ್ರ 1969ರಲ್ಲಿ. ಜಾನ್ ವ್ಯಾಲ್ಲೇಸ್ ಸ್ಪೆನ್ಸರ್ ಎಂಬುವರು ಬರೆದ ಲಿಂಬೋ ಎಂಬ ಪುಸ್ತಕದ ಮೂಲಕ. ಈ ಪುಸ್ತಕವನ್ನು ಆಧರಿಸಿ ತಯಾರಿಸಿದ 'ದ  ಡೆವಿಲ್ಸ್ ಟ್ರಯಾಂಗಲ್' ಎಂಬ ಸಾಕ್ಷ್ಯಚಿತ್ರ ಎರಡು ವರ್ಷಗಳ ಬಳಿಕ ಬಿಡುಗಡೆಗೊಂಡಿತು.

ಸಾಕ್ಷ್ಯಚಿತ್ರದಲ್ಲಿ ವಿಮಾನ ಮತ್ತು ಹಡಗುಗಳು ನಿಗೂಢವಾಗಿ ಕಾಣೆಯಾಗುತ್ತಿರುವ ಮಾಹಿತಿ ಇತ್ತೇ ವಿನಃ ಏತಕ್ಕಾಗಿ ಮಾಯವಾಗುತ್ತಿವೆ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇರಲಿಲ್ಲ. ಈ ಬಗ್ಗೆ  ತಲೆಕೆಡಿಸಿಕೊಂಡ ಹಲವು ಲೇಖಕರು ಈ ಪ್ರದೇಶದಲ್ಲಿ ಪ್ರಬಲವಾದ ಆಯಸ್ಕಾಂತೀಯ ಕ್ಷೇತ್ರವಿದ್ದು ಹಡಗು ಮತ್ತು ವಿಮಾನಗಳನ್ನು ದಿಕ್ಕು ತಪ್ಪಿಸಲು ಕಾರಣವಾಗಿವೆ ಎಂದು ಅಭಿಪ್ರಾಯ  ಪಟ್ಟರು. ಬಳಿಕ ನಡೆದ ಹಲವು ಸಂಶೋಧನೆಗಳು ಈ ಬರ್ಮುಡಾ ಟ್ರಯಾಂಗಲ್ ನಲ್ಲಿನ ದುರಂತಗಳಿಗೆ ಕಾರಣಗಳನ್ನು ನೀಡಿದ್ದು, ಬೆಚ್ಚಿ ಬೀಳಿಸುವ ಅಂಶಗಳು ಬಯಲಾಗಿವೆ.

ಅಪಾರ ಪ್ರಮಾಣದ ವಿಸ್ತಾರ
ಬರ್ಮುಡಾ ಟ್ರಯಾಂಗಲ್ ಎಂಬ ರಹಸ್ಯ ಪ್ರದೇಶವಿದೆ ಎಂದು ತಿಳಿದಿದೆಯಾದರೂ ಈ ತ್ರಿಕೋನ ಚಿಕ್ಕದಾಗಿ ಏನೂ ಇಲ್ಲ. ಈ ಪ್ರದೇಶ ಸುಮಾರು 4, 40,000ಚದರ ಮೈಲಿಗಳಷ್ಟು ವಿಶಾಲವಾದ  ಸಾಗರವನ್ನು ಒಳಗೊಂಡಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ನಮ್ಮ ದೇಶದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಒಟ್ಟು ಗೂಡಿಸಿದರೆ ಉಂಟಾಗುವ  ಪ್ರದೇಶವನ್ನು ಇದು ಒಳಗೊಂಡಿದೆ ಎಂದರೆ ಇದರ ವಿಸ್ತಾರ ಎಷ್ಟಿರಬಹುದು ಎಂದು ಊಹಿಸಿ.

ಟ್ರಯಾಂಗಲ್ ಹೊರಗೂ ಅಪಘಾತಗಳು..!
ಇನ್ನು ಬರ್ಮುಡಾ ಟ್ರಯಾಂಗಲ್ ತ್ರಿಕೋನಾಕೃತಿ ಪ್ರದೇಶ ಮಾತ್ರವಲ್ಲದೇ ಇದರ ಹೊರಗಿನ ಪ್ರದೇಶಗಳಲ್ಲಿಯೂ ಹಲವು ದುರಂತಗಳು ಸಂಭವಿಸಿದೆ. ಆದರೆ ಈ ತ್ರಿಕೋನಾಕೃತಿ  ಪ್ರದೇಶದಲ್ಲಿಯೇ ಅತಿ ಹೆಚ್ಚು ಅಪಘಾತಗಳು ಸಂಭವಿಸಿವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಕ್ಷಣಾರ್ಧದಲ್ಲಿ ವಿಮಾನಗಳನ್ನು ಸೆಳೆದುಕೊಳ್ಳುವ ಗಲ್ಫ್ ಸ್ಟ್ರೀಮ್ ಸಾಗರ
ಬರ್ಮುಡಾ ಟ್ರಯಾಂಗಲ್ ನಲ್ಲಿ ನಾಪತ್ತೆಯಾಗುವ ವಿಮಾನ ಮತ್ತು ಹಡಗುಗಳ ಅವಶೇಷಗಳೇಕೆ ಪತ್ತೆಯಾಗುವುದಿಲ್ಲ ಎಂಬ ಪ್ರಶ್ನೆಗೂ ವಿಜ್ಞಾನಿಗಳು ಉತ್ತರ ಕಂಡುಹಿಡಿದಿದ್ದಾರೆ. ಬರ್ಮುಡಾ  ಟ್ರಯಾಂಗಲ್ ತ್ರಿಕೋನಾಕೃತಿ ವ್ಯಾಪ್ತಿಯ ಪ್ರದೇಶದಲ್ಲಿ ಗಲ್ಫ್ ಸ್ಟ್ರೀಮ್ ಅತ್ಯಂತ ರಭಸವಾಗಿ ಹರಿಯುತ್ತದೆ. ಇದರ ಪ್ರವಾಹ ಅತ್ಯಂತ ಪ್ರಭಾವಶಾಲಿಯಾಗಿದ್ದು, ತೇಲುವ ವಸ್ತುಗಳನ್ನು  ಸುಲಭವಾಗಿ ಒಳಗೆ ಸೆಳೆದುಕೊಳ್ಳುತ್ತದೆ. ಅಲ್ಲದೆ ಪುಟ್ಟ ವಿಮಾನಗಳನ್ನೂ ಕೂಡ ತನ್ನತ್ತ ಸೆಳೆದುಕೊಳ್ಳುವ ಶಕ್ತಿ ಈ ಪ್ರಭಾವಿ ಪ್ರವಾಹದ ಅಲೆಗಳಿಗಿದೆ. ಸಮುದ್ರದ ಒಳಗೆ ಉತ್ಪತ್ತಿಯಾಗುವ  ನೈಸರ್ಗಿಕ ಅನಿಲಗಳೂ ಇಂಥಹ ಕಣ್ಮರೆಗೆ ಕಾರಣವೆಂದು ಹೇಳಲಾಗುತ್ತದೆ. ಇಲ್ಲಿನ ಕಣ್ಮರೆ ಪ್ರಕರಣಕ್ಕೆ ಇಲ್ಲಿ ಬೃಹತ್ತಾಗಿ ಹರಿಯುವ ಬಿಸಿನೀರಿನ ಬುಗ್ಗೆಗಳೂ ಕೂಡ ಕಾರಣ ಎಂದು ಕೆಲ  ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

100 ವರ್ಷದ ಅಂತರದಲ್ಲಿ ಸಾವಿರ ಸಾವು
ಈ ನಿಗೂಢ ಪ್ರದೇಶದಲ್ಲಿ ಈ ವರೆಗೂ ಪ್ರಾಣತೆತ್ತ ಮಂದಿಯ ಸಂಖ್ಯೆ ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. 100 ವರ್ಷದ ಅಂತರದಲ್ಲಿ ಈ ಪ್ರದೇಶದಲ್ಲಿ ಸುಮಾರು ಸಾವಿರಕ್ಕೂ ಅಧಿಕ  ಜೀವಗಳು ಬಲಿಯಾಗಿವೆ ಎಂದು ಅಂಕಿ-ಅಂಶಗಳು ತಿಳಿಸುತ್ತವೆ. ಈ ಅಂಕಿ- ಅಂಶಗಳಂತೆ ಈ ನಿಗೂಢ ಪ್ರದೇಶದಲ್ಲಿ ವಾರ್ಷಿಕ ಸರಾಸರಿ 4 ವಿಮಾನಗಳು ಮತ್ತು 20 ಹಡಗುಗಳು  ದುರಂತಕ್ಕೀಡಾಗಿವೆ ಎಂದು ತಿಳಿಯುತ್ತದೆ.

ನಾಪತ್ತೆ ಹಿಂದೆ ಅನ್ಯಗ್ರಹ ಜೀವಿಗಳ ಕೈವಾಡ..!
ಈ ಪ್ರದೇಶದಲ್ಲಿ ಸಂಚರಿಸುವ ವಿಮಾನ ಮತ್ತು ಹಡಗುಗಳ ನಾಪತ್ತೆ ಪ್ರಕರಣಕ್ಕೆ ಅನ್ಯಗ್ರಹ ಜೀವಿಗಳ ಸಂಬಂಧ ಕಲ್ಪಿಸಲಾಗುತ್ತಿದೆ. ಈ ಹಿಂದೆ ಸಮುದ್ರ ತಳ ಸೇರಿರುವ ಐತಿಹಾಸಿಕ  ಅಟ್ಲಾಂಟಿಸ್ ನಗರದ ತಳದಲ್ಲಿ ಅನ್ಯಗ್ರಹ ಜೀವಿಗಳಿರುವಿಕೆಯ ಊಹಾಪೋಹಗಳಿದ್ದು, ಈ ಜೀವಿಗಳೇ ಇಲ್ಲಿನ ದುರಂತಗಳಿಗೆ ಕಾರಣ ಎನ್ನಲಾಗುತ್ತಿದೆ.

ನಿಗೂಢ ಪ್ರದೇಶದ ತಳದಲ್ಲಿ ಅಮೆರಿಕ ಸಂಶೋಧನಾ ಕೇಂದ್ರ..?
ಇಷ್ಟೆಲ್ಲಾ ಅಚ್ಚರಿಗಳ ನಡುವೆಯೇ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದಿದ್ದೇನೆ ಎಂದು ಹೇಳುವ ವಿಶ್ವದ ದೊಡ್ಡಣ್ಣ ಅಮೆರಿಕ ಈ ನಿಗೂಢ ಪ್ರದೇಶದ ರಹಸ್ಯ ಭೇದಿಸಲು ಇದೇ ಪ್ರದೇಶದ ತಳದಲ್ಲಿ  ತಾನು ಸಂಶೋಧನಾ ಕೇಂದ್ರ ಸ್ಥಾಪಿಸಿದ್ದೇನೆ ಎಂದು ಹೇಳಿಕೊಂಡಿದೆ.  AUTEC (for Atlantic Undersea Test and Evaluation Center) ಎಂಬ ಹೆಸರಿನ ಈ ಸಂಸ್ಥೆಯಲ್ಲಿ  ಸರ್ಕಾರದ ಅತ್ಯಾಧುನಿಕ ಸಬ್ ಮೆರೀನ್, ಸೋನಾರ್ ಮತ್ತು ಇತರ ಉಪಕರಣಗಳನ್ನು ಪರೀಕ್ಷಿಸಲಾಗುತ್ತದೆ ಎಂದು ಅಮೆರಿಕ ಸರ್ಕಾರ ಹೇಳಿಕೊಂಡಿದೆ. ಆದರೆ ಈ ಬಗ್ಗೆ ಹಲವು ದೇಶಗಳು  ಅನುಮಾನ ವ್ಯಕ್ತಪಡಿಸಿದ್ದು, ಇಷ್ಟು ದೂರ ತಂದು ಪರೀಕ್ಷೆಗೆ ಒಳಪಡಿಸುವ ಅಗತ್ಯವೇ ಇಲ್ಲ. ಅಮೆರಿಕದ ನೌಕಾನೆಲೆಯ ಹತ್ತಿರವೇ ಎಲ್ಲಾ ಸೌಲಭ್ಯಗಳಿದ್ದು, ಇನ್ನೂ ಉತ್ತಮವಾಗಿ ಅಲ್ಲಿಯೇ ಪರೀಕ್ಷೆ  ಮಾಡಬಹುದಾಗಿದೆ. ಹೀಗಾಗಿ ಸಬ್ ಮೆರಿನ್ ಮತ್ತು ಸೋನಾರ್ ಗಳನ್ನು ಇಲ್ಲಿ ತರುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ.

ವಿಚಿತ್ರ ಅನುಭವ
ಈ ನಿಗೂಢ ಪ್ರದೇಶದಲ್ಲಿ ಸಂಚರಿಸುವ ಕೆಲ ವಿಮಾನ ಸಿಬ್ಬಂದಿಗಳು ಹೇಳುವಂತೆ, ಬರ್ಮುಡಾ ಟ್ರಯಾಂಗಲ್ ಪ್ರದೇಶ ಸಮೀಪಿಸುತ್ತಿದ್ದಂತೆಯೇ ಒಂದು ವಿಧವಾದದ ಎಲೆಕ್ಟಾನಿಕ್ ರೂಪದ  ಇಬ್ಬನಿ ಕವಿಯುತ್ತದೆ. ಇದು ಒಂದು ಅಡ್ಡಲಾಗಿ ನಿಲ್ಲಿಸಿರುವ ಲಾಲಿಕೆಯ ಆಕೃತಿ ಪಡೆಯುತ್ತದೆ. ಇದನ್ನು ಪ್ರವೇಶಿಸಿದರೆ ಇದ್ದಕ್ಕಿದ್ದಂತೆಯೇ ವಿಮಾನ ಹಿಂದಕ್ಕೆ ಚಲಿಸಲಾರಂಭಿಸುತ್ತದೆ.  ವಿಚಿತ್ರವೆಂದರೆ ವಿಮಾನ ರಾಡಾರ್ ನಿಂದ ಕಾಣೆಯಾಗಿ ಮತ್ತೆ ಮಿಯಾಮಿಯ ತೀರದಲ್ಲಿ ಪ್ರತ್ಯಕ್ಷವಾಗುವಾಗ ನೈಜ ಸಮಯಕ್ಕಿಂತ ಇಪ್ಪತ್ತೆಂಟು ನಿಮಿಷ ಹಿಂದಿತ್ತು ಎಂದು ಬ್ರೂಸ್  ಗೆರ್ನಾನ್ ಎಂಬ ಪೈಲಟ್ ತನ್ನ The Fog by Bruce Gernon ಎಂಬ ಪುಸ್ತಕದಲ್ಲಿ ಬರೆದುಕೊಂಡಿದ್ದಾನೆ.

ವಿಶ್ವದ ಬಲಾಢ್ಯ ಮಿಲಿಟರಿ ಪಡೆಗೆ ಭಾರಿ ನಷ್ಟ
ಮಿಲಟರಿ ಮತ್ತು ವೈಜ್ಞಾನಿಕ ತಂತ್ರಜ್ಞಾನದಲ್ಲಿ ವಿಶ್ವಕ್ಕೇ ದೊಡ್ಡಣ್ಣ ಎಂದು ಬೀಗುವ ಅಮೆರಿಕಕ್ಕೆ ಇದೇ ಬರ್ಮುಡಾ ಟ್ರಯಾಂಗಲ್ 1945ರಲ್ಲಿ ಭಾರಿ ಹೊಡೆತವನ್ನು ನೀಡಿತ್ತು. 1945ರಲ್ಲಿ ಅಮೆರಿಕದ  ಐದು ಯುದ್ಧ ವಿಮಾನಗಳು ಬಿಮಿನಿ ಎಂಬ ದ್ವೀಪದ ಮೇಲೆ ದಾಳಿ ನಡೆಸಬೇಕಿತ್ತು. ಹೀಗಾಗಿ ಫೋರ್ಟ್ ಲಾಡರ್ಡೇಲ್ ಎಂಬಲ್ಲಿಂದ ಅಮೆರಿಕದ ಐದು ಬಾಂಬರ್ ವಿಮಾನಗಳು ಅವೆಂಜರ್  ಟೋರ್ಪೆಡೋ ಎಂಬ ಬಾಂಬುಗಳನ್ನು ಹೊತ್ತು ಇದೇ ಬರ್ಮುಡಾ ಟ್ರಯಾಂಗಲ್ ಮಾರ್ಗವಾಗಿ ಪ್ರಯಾಣ ಆರಂಭಿಸಿದ್ದವು. ಈ ಯಾತ್ರೆಯಲ್ಲಿ ಒಟ್ಟು ಹದಿನಾಲ್ಕು ಯೋಧರಿದ್ದರು. ಆದರೆ ಹೊರಟ  ಒಂದೂವರೆ ಗಂಟೆಯ ಬಳಿಕ ನಿಯಂತ್ರಣ ಕೇಂದ್ರದಲ್ಲಿದ್ದವರಿಗೆ ಆ ಬಾಂಬರು ವಿಮಾನಗಳಲ್ಲಿ ದಿಕ್ಸೂಚಿ ಕೆಲಸ ಮಾಡುತ್ತಿಲ್ಲ ಎಂಬ ಸಂಕೇತ ದೊರಕಿತು. ಇದಾದ ಕೆಲವೇ ನಿಮಿಷಗಳಲ್ಲಿ ಎಲ್ಲಾ  ಐದು ವಿಮಾನಗಳು ನಾಪತ್ತೆಯಾದವು. ಇವುಗಳನ್ನು ಹುಡುಕಿ ಬಂದ ಮೂರು ಶೋಧನಾ ವಿಮಾನಗಳು ಕೂಡ ನಾಪತ್ತೆಯಾದವು.

ಕ್ರಿಸ್ಟೋಫರ್ ಕೊಲಂಬಸ್ ನಿಂದ ಮೊದಲ ಮಾಹಿತಿ
ಇಡೀ ವಿಶ್ವಕ್ಕೇ ನಿಗೂಢ ರಹಸ್ಯವಾಗಿ ಉಳಿದಿರುವ ಈ ಬರ್ಮುಡಾ ಟ್ರಯಾಂಗಲ್ ಕುರಿತಂತೆ ಮೊದಲ ಬಾರಿಗೆ ಮಾಹಿತಿ ನೀಡಿದ್ದು ಕ್ರಿಸ್ಟೋಫರ್ ಕೊಲಂಬಸ್. ಈ ಪ್ರದೇಶದಲ್ಲಿ ಹಾದು  ಹೋಗುತ್ತಿದ್ದಾಗ ತನ್ನ ಹಡಗಿನ ದಿಕ್ಸೂಚಿ ನಿಂತೇ ಬಿಟ್ಟಿತ್ತು ಹಾಗೂ ಆಕಾಶದಲ್ಲಿ ಬೆಂಕಿಯ ಉಂಡೆಯೊಂದು ಭಾರೀ ವೇಗದಲ್ಲಿ ಸಾಗುತ್ತಿತ್ತು ಎಂದು ತನ್ನ ದಿನಚರಿಯಲ್ಲಿ ಬರೆದಿದ್ದ.

ದಿಕ್ಸೂಚಿಯೇ ಕೆಲಸ ಮಾಡದ ಕೆಲವೇ ಪ್ರದೇಶಗಳಲ್ಲಿ ಪ್ರಮುಖವಾದದ್ದು
ಇಡೀ ವಿಶ್ವದ ವಿವಿಧ ಪ್ರದೇಶಗಳ ದಿಕ್ಕನ್ನು ಗುರುತಿಸುವ ದಿಕ್ಸೂಚಿ ಕೆಲಸ ಮಾಡದೇ ಸ್ಥಗಿತಗೊಳ್ಳವ ನಿಗೂಢ ಪ್ರದೇಶಗಳಲ್ಲಿ ಈ ಬರ್ಮುಡಾ ಟ್ರಯಾಂಗಲ್ ಪ್ರಮುಖವಾದದ್ದು. ಭೂಮಿಯ  ಆಯಸ್ಕಾಂತೀಯ ಕ್ಷೇತ್ರದ ಕಾರಣ ಯಾವುದೇ ಸಡಿಲವಾಗಿ ನೇತುಹಾಕಿದ ಆಯಸ್ಕಾಂತ ಉತ್ತರ ದಕ್ಷಿಣ ಧೃವಕ್ಕನುಗುಣವಾಗಿ ನಿಲ್ಲುತ್ತದೆ. ಆದರೆ ಇದು ನಿಲ್ಲದ ಸ್ಥಳಗಳೆಂದರೆ ಮೂರು. ಉತ್ತರ  ಮತ್ತು ದಕ್ಷಿಣ ಧೃವ ಪ್ರದೇಶಗಳು ಮತ್ತು ಬರ್ಮುಡಾ ಟ್ರಯಾಂಗಲ್. ಭೂಮಿಯ ಆಯಸ್ಕಾಂತೀಯ ಉತ್ತರಕ್ಕೂ ನೈಜ ಉತ್ತರ ಧೃವಕ್ಕೂ ಕೊಂಚ ವ್ಯತ್ಯಾಸವಿದೆ. ಈ ಸ್ಥಳದಲ್ಲಿ ದಿಕ್ಸೂಚಿಗಳು  ನೈಜ ಉತ್ತರವನ್ನೇ ತೋರಿಸುತ್ತಿದ್ದು ಹಡಗು ಮತ್ತು ವಿಮಾನಗಳ ದಿಕ್ಕು ತಪ್ಪಿಸುತ್ತಿದ್ದು ಅಪಘಾತಕ್ಕೆ ಕಾರಣ ಎಂದು ಅಂದಾಜಿಸಲಾಗುತ್ತಿದೆ. ಇದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಈ ವರೆಗೂ ವಿಜ್ಞಾನಿಗಳಿಗೆ ಉತ್ತರ ಕಂಡು ಹಿಡಿಯಲಾಗಿಲ್ಲ.

- ಶ್ರೀನಿವಾಸ ಮೂರ್ತಿ ವಿಎನ್
(ಮಾಹಿತಿ: ಹಲೋ ಟ್ರಾವೆಲ್)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com