ವರದ ನದಿಯ ಮೂಲದಲ್ಲಿ ಕುತೂಹಲಕ್ಕೆ ಮಿತಿ ಎಲ್ಲಿ?

ವರದ ನದಿಯ ಹರಿವಿನ ಬಗ್ಗೆ ಆಸಕ್ತಿ ಬಂದು ಹುಡುಕುತ್ತಾ ಹೋದರೆ ನಿಮಗೆ ಹಲವು ಆಸಕ್ತಿದಾಯಕ ವಿಚಾರಗಳು ತಿಳಿಯುತ್ತವೆ ...
ವರದಾಮೂಲ
ವರದಾಮೂಲ

ನಮ್ಮ ಕನ್ನಡ ನಾಡಿನಲ್ಲಿ  ಅನೇಕ ಪವಿತ್ರ ನದಿಗಳು ಉಪನದಿಗಳು  ಹುಟ್ಟುತ್ತವೆ. ಆ ನದಿಗಳು ಹುಟ್ಟುವ ಸ್ಥಳ  ತನ್ನದೇ ಆದ ಪಾವಿತ್ರತೆ ಹಾಗು ವಿಶೇಷತೆ ಹೊಂದಿರುತ್ತದೆ. ಅಂತಹ ಒಂದು ಸ್ಥಳ   ಶಿವಮೊಗ್ಗ  ಜಿಲ್ಲೆ ಸಾಗರದ ಸಮೀಪದಲ್ಲಿರುವ  ವರದಾ ಮೂಲ. ವರದಾ ನದಿ ಇಲ್ಲಿನ ಭಾಗದ ಜನರ ಜೀವನದಿ. ಹಲವು ಪವಿತ್ರ ಕಾರ್ಯಗಳನ್ನು ಇಲ್ಲಿನ ಜನ ವರದ ಮೂಲದಲ್ಲಿ ಮಾಡುತ್ತಾರೆ. ವರದಾಮೂಲ  ಸಾಗರ ಪಟ್ಟಣದಿಂದ ಆರು ಕಿಲೋಮೀಟರ್ ಇದೆ. ವರದ ನದಿಯ ಹರಿವಿನ ಬಗ್ಗೆ  ಆಸಕ್ತಿ ಬಂದು ಹುಡುಕುತ್ತಾ  ಹೋದರೆ ನಿಮಗೆ ಹಲವು ಆಸಕ್ತಿದಾಯಕ ವಿಚಾರಗಳು ತಿಳಿಯುತ್ತವೆ .



ಈ ವರದಾ ನದಿ ಸಾಗುವ ಹಾದಿ ಬಹಳ  ಸೊಗಸಾಗಿದೆ ,ಹಾಗು ಕುತೂಹಲ ಕಾರಿಯಾಗಿದೆ ವರದ ನದಿಯು  ವರದ ಮೂಲದಲ್ಲಿ ಜನಿಸಿ , ಸಾಗರ ಪಟ್ಟಣ , ದಾಟಿ  ಬಸವನ ಹೊಳೆ ಆಣೆಕಟ್ಟು ತಲುಪುತ್ತದೆ.  ನೆನಪಿರಲಿ ಸಾಗರ ಪಟ್ಟಣದ ಜನ ಕುಡಿಯುವುದು ವರದಾ ನದಿಯ ನೀರನ್ನು , ಮುಂದೆ ಪಯಣ ಬೆಳಸುವ ವರದ ನದಿ ಕೆಳದಿಯ  ಸಮೀಪ ಸಾಗುತ್ತದೆ ಅಲ್ಲಿ  ವರದಾ ನದಿಗೆ ಮತ್ತೊಂದು ಉಪನದಿ  ಸೇರಿಕೊಳ್ಳುತ್ತದೆ  (ಹೆಸರು ತಿಳಿದಿಲ್ಲ)  ನಂತರ ಸಾಗರ ತಾಲೂಕಿನ ಬಾಳೆಕೊಪ್ಪ ಸಮೀಪ ಮತ್ತೊಂದು ಉಪನದಿ  (ಹೆಸರು ಗೊತ್ತಿಲ್ಲ) ವರದಾನದಿಯ  ಒಡಲನ್ನು ಸೇರುತ್ತದೆ . ನಂತರ ಸಿದ್ದಾಪುರ  ಸೊರಬ ರಸ್ತೆಯಲ್ಲಿ  ದರುಶನ   ನೀಡುವ ವರದಾ ನದಿ  ಚಿಕ್ಕಮಕೊಪ್ಪ ಬಳಿ ಸೊರಬ ಚಂದ್ರಗುತ್ತಿ ರಸ್ತೆಯಲ್ಲಿ ಕಾಣಸಿಗುತ್ತದೆ . ಮುಂದೆ ನಮಗೆ ಕಾಣ ಸಿಗುವುದು ಚಿಕ್ಕದುಗಲಿ ಎಂಬ ಹಳ್ಳಿಯ ಬಳಿ  ಚಂದ್ರಗುತ್ತಿ ಬನವಾಸಿ ರಸ್ತೆಯಲ್ಲಿ . ನಂತರ ಹಿರೆಕಲಗೋಡು  ಎಂಬ  ಹಳ್ಳಿಯ ಸಮೀಪ    ಕಬ್ಬೆ ಎಂಬಲ್ಲಿ ಹುಟ್ಟಿಬಂದ  ಮತ್ತೊಂದು  ಉಪನದಿ  ವರದಾ ನದಿಯನ್ನು ಸೇರುತ್ತದೆ .  ಇಲ್ಲಿಂದ ಉತ್ತರ ಕರ್ನಾಟಕ ಜಿಲ್ಲೆ ಪ್ರವೇಶ  ಪಡೆದ ವರದಾ ನದಿ,  ಬನವಾಸಿಯ ಇತಿಹಾಸದಲ್ಲಿ ಸ್ಥಾನ ಪಡೆದಿದೆ . ಬನವಾಸಿಯನ್ನು ಜಲದುರ್ಗ  ಎಂದು ಕರೆಯುತ್ತಿದ್ದ  ಕೀರ್ತಿಯಲ್ಲಿ ವರದಾ ನದಿಯ ಪಾತ್ರವಿದೆ . ಬನವಾಸಿಯನ್ನು  ಪ್ರೀತಿಯಿಂದ ಮೂರು ದಿಕ್ಕಿನಲ್ಲಿ  ಅಪ್ಪಿಕೊಂಡು  ಮುದ್ದುಮಾಡಿ ಮಧುಕೆಶ್ವರನ   ದರುಶನ ಪಡೆದು  ಪಾವನ ಹೊಂದಿ     ಜಡೆಮಾದಾಪುರ ,  ಉತ್ತರ ಕನ್ನಡ ಜಿಲ್ಲೆಯ ಚಾಗತ್ತೂರು  ಗ್ರಾಮದ  ಹತ್ತಿರ  ಮತ್ತೊಮ್ಮೆ ಶಿವಮೊಗ್ಗ ಜಿಲ್ಲೆ ಪ್ರವೇಶ ಪಡೆಯುತ್ತಾಳೆ .  ನಂತರ ವರದಿಕೊಪ್ಪ  , ದಾಟಿ  ಲಕ್ಕವಳ್ಳಿ ಸಮೀಪ  ದಂಡಾವತಿ ನದಿಯನ್ನು ತನ್ನ ಒಡಲೊಳಗೆ  ಸೆಳೆದುಕೊಳ್ಳುತ್ತಾಳೆ.  ಇಲ್ಲಿಂದ ಹಾವೇರಿ ಜಿಲ್ಲೆ ಪ್ರವೇಶ ಮಾಡಿ   ಹಾನಗಲ್  ತಾಲೂಕಿನ ಮಾಕರವಳ್ಳಿ  ಗ್ರಾಮ , ಇಲ್ಲಿ  ವರದನನದಿ ಶಿವಮೊಗ್ಗ ಹಾಗು ಹಾವೇರಿ ಜಿಲ್ಲೆಯ ಗಡಿಯಂತೆ  ಸಾಗುತ್ತದೆ. ಈ ನದಿಯ ಪಥವನ್ನೇ ಎರಡೂ ಜಿಲ್ಲೆಗಳಿಗೆ   ಗಡಿಯನ್ನಾಗಿ ಗುರುತಿಸಲಾಗುತ್ತದೆ  . ಶಿವಮೊಗ್ಗ ಜಿಲ್ಲೆಯ ಮುಡಿದೋಕೊಪ್ಪ  ಗಡಿಯಲ್ಲಿ ಸಾಗಿ,  ನಂತರ  ಮತ್ತೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ   ಲಕ್ಮಾಪುರ, ಬೈತನಾಳ್ , ಬಲಂಬೀಡು , ಶಿಂಗಾಪುರದಲ್ಲಿ ಹರಿದು ಹಾವೇರಿ ಸಮೀಪದ   ಸಂಗೂರು  ಗ್ರಾಮದಲ್ಲಿ ನಿಮಗೆ ಸಿರಸಿ  ಹಾವೇರಿ ರಸ್ತೆಯಲ್ಲಿ ದರ್ಶನ ನೀಡುತ್ತಾಳೆ ,ವಾರ್ದಿ , ನಾಗನೂರು ,  ಹಾವೇರಿ ಪಟ್ಟಣದ ಬಳಿ  ಇರುವ ಕುಣಿಮೆಲ್ಲಿ ಹಳ್ಳಿ   ಮೂಲಕ  ಸಾಗುತ್ತಾಳೆ .ನಂತರ ಸಿಗುತ್ತದೆ  ಹಾವೇರಿ ಜಿಲ್ಲೆಯ ವರದ ಹಳ್ಳಿ ದಾಟಿ ನಂತರ  ಹಾವೇರಿ ಜಿಲ್ಲೆಯ ಸವಣೂರು  ತಾಲೂಕಿನ  ಮೆಲ್ಲಿಗಟ್ಟಿ , ಕಲಸೂರು , ಕೊಲೂರು , ಮಂಟಗಣಿ , ಹಿರೇ ಮುಗದೂರು , ಕಾರ್ಜಗಿ , ಗ್ರಾಮಗಳಲ್ಲಿ ನಡೆದು, ಮತ್ತೆ ಹಾವೇರಿ ತಾಲೂಕಿನ  ಕೋಣನ ತಂಬಿಗಿ  ಪಟ್ಟಣದಲ್ಲಿ ಕಾಣ ಸಿಗುತ್ತಾಳೆ, ನಂತರ ಸವಣೂರು ತಾಲೂಕಿನ ದೊಂಬರಮತ್ತೂರು ಗ್ರಾಮ, ಹಿರೇಮರಳಿ ಹಳ್ಳಿ, ಮಣ್ಣೂರು , ಹಂದಿಗನೂರು, ಹೊಸರಿಟ್ಟಿ , ಮರದೂರ್ , ಮರೋಲ್ ಹಾಗು  ಹಲಗಿ  ಹಳ್ಳಿಗಳ  ನಡುವೆ ಸಾಗುತ್ತಾಳೆ. ನಂತರ ಹಾವೇರಿ ಜಿಲ್ಲೆಯ ಗುಡೂರ್ , ನೆರಳಗಿ -ಎಂ- ಗುತ್ತಲ್ , ಬೆಳವಿಗಿ , ಗುಲ್ಲಗುಂಡಿ , ಹಳ್ಳಿಯಲ್ಲಿ ಹರಿದು  ಗುಳಗನಾಥ  ಎಂಬ ಸುಂದರ ಪ್ರದೇಶದಲ್ಲಿ  ತುಂಗಭದ್ರ ನದಿಯನ್ನು  ಸೇರುತ್ತಾಳೆ . ವರದ ನದಿ ಹರಿಯುವ ದೂರ ಸುಮಾರು ಇನ್ನೂರು ಕಿಲೋಮೀಟರು ಗಳಿಗೂ  ಮೀರುತ್ತದೆ .




ವರದಾ ನದಿಯ ಬಗ್ಗೆ ಪೌರಾಣಿಕವಾಗಿ ಒಂದು ಕಥೆಯನ್ನು ಹೇಳುತ್ತಾರೆ. ವಿಷ್ಣುವು   ಶಿವನ ರೌದ್ರ ತಾಪವನ್ನು ಕಡಿಮೆಮಾಡಲು ಭಾಗೀರತಿ  ಜಲವನ್ನು ತನ್ನ ಶಂಖದಿಂದ  ಶಿವನ ತಲೆಯಮೇಲೆ  ಅಭಿಷೇಕ  ಮಾಡಿದಾಗ  ವರದಾ ನದಿಯ ಜನನವಾಯಿತೆಂದು ಹೇಳಲಾಗುತ್ತದೆ . ವರದಾ ಮೂಲ ಬಹಳ ಸುಂದರ ಸ್ಥಳವಾಗಿದ್ದು, ಅಲ್ಲಿನ ಪರಿಸರ, ನಿಶ್ಯಬ್ಧ  ಮನಸಿಗೆ ಬಹಳ ಖುಷಿಕೊಡುತ್ತದೆ . ವರದಾ ನದಿಯ ಕುಂಡದ ದಡದಲ್ಲಿ ಕುಳಿತು,  ಕಾಲನ್ನು ನೀರಲ್ಲಿ ಬಿಟ್ಟು,ಕುಳಿತರೆ  ಮನಸು ಪ್ರಶಾಂತ ಗೊಳ್ಳುತ್ತದೆ .  ಈ ಸ್ಥಳದಲ್ಲಿ ಎರಡು ಪ್ರಮುಖ  ದೇವಾಲಯಗಳಿದ್ದು,  ವರದಾಂಬ ಎಂಬ ಶಕ್ತಿ ದೇವತೆ ಹಾಗು  ಸೂರ್ಯನಾರಾಯಣ ರಿಗೆ ಸಮರ್ಪಣೆ  ಮಾಡಲಾಗಿದೆ.



ವರದಾಮೂಲ  ಸಾಗರ ಪಟ್ಟಣದಿಂದ ಆರು ಕಿಲೋಮೀಟರು  ದೂರದಲ್ಲಿದೆ. ಇಲ್ಲಿಗೆ ಸಾರ್ವಜನಿಕ ಸಾರಿಗೆ ವ್ಯವಸ್ತೆ ಇಲ್ಲಾ,  ಸಾಗರದಿಂದ  ಆಟೋ ಮುಂತಾದ ವಾಹನಗಳು ಸಿಗುತ್ತವೆ.  ಸ್ವಂತ ವಾಹನದಲ್ಲಿ ಬಂದರೆ  ಬೆಂಗಳೂರಿನಿಂದ ಶಿವಮೊಗ್ಗ  ಸಾಗರ  ೪೦೨ ಕಿಲೋಮೀಟರು  ಹಾಗು ಮೈಸೂರಿನಿಂದ ಚನ್ನರಾಯಪಟ್ಟಣ, ಅರಸೀಕೆರೆ ಶಿವಮೊಗ್ಗ  ಮೂಲಕ ೩೩೫ ಕಿಲೋಮೀಟರು  ಆಗುತ್ತದೆ . ಊಟ ತಿಂಡಿ  ವ್ಯವಸ್ಥೆಯನ್ನು  ಸಾಗರ ಪಟ್ಟಣದಿಂದ  ಮಾಡಿಕೊಂಡು ಹೋಗುವುದು ಒಳ್ಳೆಯದು .  ಪ್ರಶಾಂತವಾದ  ಹಸಿರ ಸಿರಿಯಲ್ಲಿ, ನಿರ್ಮಲವಾದ  ವರದ ನದಿಯ   ದರ್ಶನ ಮಾಡುತ್ತಾ  ಪ್ರವಾಸಿಗರು  ಒಂದು ದಿನ  ಕಳೆಯ ಬಹುದು .

ಚಿತ್ರ, ಲೇಖನ : ನಿಮ್ಮೊಳಗೊಬ್ಬಬಾಲು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com