ಶಿಂಷಾ ನದಿಯ ದಡದಲ್ಲಿ ನಲಿದಾಡಿದೆ ನವಲೆ

ನವಲೆ ಗ್ರಾಮದ ಪರಿಸರ ತುಂಬಾ ಪ್ರಶಸ್ತವಾಗಿದ್ದು ಶಿಂಷಾ ನದಿಯ ದಡದಲ್ಲಿನ ಸುಂದರ ಪರಿಸರದ ವೀಕ್ಷಣೆ ಮಾಡುತ್ತಾ...
ಶಿಂಷಾ ನದಿಯ ತೀರದಲ್ಲಿ ರಂಗನಾಥಸ್ವಾಮೀ ದೇವಾಲಯ
ಶಿಂಷಾ ನದಿಯ ತೀರದಲ್ಲಿ ರಂಗನಾಥಸ್ವಾಮೀ ದೇವಾಲಯ

ಕರ್ನಾಟಕದ  ಬಹಳಷ್ಟು ನದಿಗಳ ದಡದದಲ್ಲಿ  ಅಚ್ಚರಿ ಪಡುವಂತಹ ನಿಸರ್ಗ ರಮಣೀಯ ತಾಣಗಳು ಕಾಣ ಸಿಗುತ್ತವೆ. ಅಂತಹ ಒಂದು ತಾಣವೇ  ಮಂಡ್ಯ ಜಿಲ್ಲೆಯ ಮದ್ದೂರು  ತಾಲೂಕಿನ  ಆತಗೂರು ಹೋಬಳಿಯ  ನವಲೆ  ಅಥವಾ ನವಿಲೇ ಎಂಬ ಗ್ರಾಮದ  ಸುಂದರ ಪರಿಸರ. ನವಲೆ ಗ್ರಾಮದ ಪರಿಸರ ತುಂಬಾ ಪ್ರಶಸ್ತವಾಗಿದ್ದು ಶಿಂಷಾ ನದಿಯ ದಡದಲ್ಲಿನ  ಸುಂದರ  ಪರಿಸರದ  ವೀಕ್ಷಣೆ ಮಾಡುತ್ತಾ , ಹಲವು ಪ್ರಭೇದದ  ಪಕ್ಷಿ ವೀಕ್ಷಣೆ ಮಾಡುತ್ತಾ , ನಿಶ್ಯಬ್ಧ  ಹಾಗು ನಿರ್ಮಲ ವಾತಾವರಣದಲ್ಲಿ   ಕುಟುಂಬದೊಡನೆ ಒಂದು ದಿನ ಕಳೆಯಲು  ಸೂಕ್ತವಾಗಿದೆ . ಇಲ್ಲಿ ಶಿಂಷಾ ನದಿಯು  ಪಶ್ಚಿಮದಿಕ್ಕಿಗೆ  ಸ್ವಲ್ಪ ಭಾಗಿ  ಹರಿಯುವ ಕಾರಣ  ಪಶ್ಚಿಮ ವಾಹಿನಿ  ಎಂದೂ  ಸಹ ಕರೆಯಲಾಗುತ್ತದೆ. ನವಲೆ ಗ್ರಾಮದ ಸ್ವಲ್ಪ ದೂರದಲ್ಲಿ  ಶಿಂಷಾ ನದಿಯ ತೀರದಲ್ಲಿ ಹೊಳೆ ರಂಗನಾಥ ದೇಗುಲವಿದೆ. ಇದನ್ನು ಗುಡ್ಡದ  ರಂಗನಾಥಸ್ವಾಮೀ ದೇವಾಲಯ ​ ಎಂದೂ ಸಹ  ಕರೆಯಲಾಗುತ್ತದೆ .



 ಗುಡ್ಡದ ರಂಗನಾಥ ಸ್ವಾಮೀ ದೇವಾಲಯ ಸುಮಾರು ೧೭ ನೆ ಶತಮಾನದ  ರಚನೆಯೆಂದೂ  ಇತಿಹಾಸಕಾರರು  ಅಭಿಪ್ರಾಯಪಡುತ್ತಾರೆ. ಈ ಗುಡಿಗೆ ಮೈಸೂರ ಅರಸರು ೧೯೦೨ ರಲ್ಲಿ ಇನಾಂ  ಮಂಜೂರು ಮಾಡಿರುವುದು ತಿಳಿದುಬರುತ್ತದೆ . ಈ ಗುಡಿಯಲ್ಲಿರುವ  ರಂಗನಾಥ ಅಥವಾ ನಾರಾಯಣ ಮೂರ್ತಿಯು  ಐದು  ಅಡಿ ಎತ್ತರವಿದ್ದು, ಸುಂದರವಾಗಿದೆ . ಹಾಲಿ ಈ ದೇಗುಲ  ನವೀಕರಣ ಗೊಂಡಿದ್ದು   ಸುಂದರ ಪರಿಸರದಲ್ಲಿದೆ . ಗುಡ್ಡದ  ಮೇಲಿನ ಈ ದೇಗುಲದ ಸುತ್ತ ಮುತ್ತಾ ನಮಗೆ ಸುಂದರವಾದ  ಶಿಂಷಾ ನದಿಯ ನೋಟ ಹಾಗು ಅದರ ಸುತ್ತಲ ಪ್ರಕೃತಿಯ  ಸೊಬಗು ಕಾಣಸಿಗುತ್ತದೆ .

ನಿರ್ಮಲವಾಗಿರುವ ಈ ಪ್ರದೇಶ  ಹೆಚ್ಚಾಗಿ  ಪ್ರಚಾರ ಪಡೆದಿಲ್ಲದ ಕಾರಣ  ಜನಜಂಗುಳಿ ಇಲ್ಲವೇ ಇಲ್ಲಾ  ಎನ್ನ ಬಹುದು. ಹಾಗಾಗಿ ಇಲ್ಲಿಗೆ ಬರುವವರು  ಊಟ ತಿಂಡಿ ವ್ಯವಸ್ತೆ ಮಾಡಿಕೊಂಡು ಬರುವುದು ಒಳ್ಳೆಯದು. ಪಕ್ಷಿವೀಕ್ಷಣೆ ಮಾಡುವವರಿಗೆ  ಈ ಜಾಗ ಹೇಳಿ ಮಾಡಿಸಿದಂತಿದೆ. ಊರಿನ ಹೆಸರೇ ನವಿಲೇ/ನವಲೆ  ಎಂದಿದ್ದು  ಈ ಹೆಸರಿಗೆ ಅನ್ವರ್ಥವಾಗಿ  ಇಲ್ಲಿ  ನಿಮಗೆ ನವಿಲುಗಳು ಕಾಣಸಿಗುತ್ತವೆ . ಸಂಜೆ ವೇಳೆಯಲ್ಲಿ  ಇಲ್ಲಿ ಸೂರ್ಯಾಸ್ತ  ಬಹಳ ಮೋಹಕವಾಗಿರುತ್ತದೆ .



ಈ  ವಿಶಿಷ್ಟ ತಾಣ ನವಲೆ/ ನವಿಲೇ  ಬೆಂಗಳೂರಿನಿಂದ  ಚನ್ನಪಟ್ಟಣ , ಸೋಮನಹಳ್ಳಿ (ಮದ್ದೂರು ಸಮೀಪ)  ಕೆಸ್ತೂರು  , ಮೂಲಕ   ಸುಮಾರು ೧೦೮ ಕಿಲೋಮೀಟರು ಆಗುತ್ತದೆ. ಮೈಸೂರಿನಿಂದ ಮಂಡ್ಯ ಮದ್ದೂರು , ಕೆಸ್ತೂರು ಮೂಲಕ  ೯೫ ಕಿಲೋಮೀಟರು  ಆಗುತ್ತದೆ. ಸಾರ್ವಜನಿಕ ವಾಹನ ಸೌಲಭ್ಯ ಬಳಸಿಕೊಳ್ಳುವವರು ಮೊದಲು ಮದ್ದೂರಿಗೆ ಬಂದು ನಂತರ  ಮದ್ದೂರಿನಿಂದ  ಕುಣಿಗಲ್ ಕಡೆಗೆ ಹೋಗುವ ಬಸ್ಸುಗಳಲ್ಲಿ  ಕೆಸ್ತೂರಿಗೆ  ಬಂದು ಇಳಿಯಬೇಕು  ನಂತರ   ಇಲ್ಲಿಂದ  ಆಪೆ  ಆಟೋಗಳನ್ನು ಬಾಡಿಗೆಗೆ  ಪಡೆದು ಹೋಗಬಹುದು .  ಕುಟುಂಬ ಸಮೇತ ಒಂದು ದಿನ ವಿಹರಿಸಿ ಬರಲು ಒಂದು ಒಳ್ಳೆಯ ತಾಣ ಇದು .
 
ಚಿತ್ರ ಲೇಖನ: ನಿಮ್ಮೊಳಗೊಬ್ಬಬಾಲು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com