ಹೀರೋ-ಹೊಂಡಾ ನಡುವೆ ವಿವಾದಕ್ಕೆ ಕಾರಣವಾದ "ಐ ಸ್ಮಾರ್ಟ್"..!

ಭಾರತದ ಖ್ಯಾತ ಬೈಕ್ ತಯಾರಿಕಾ ಕಂಪನಿಗಳಾದ ಹೀರೋ ಮೊಟೋ ಕಾರ್ಪ್ ಮತ್ತು ಹೊಂಡಾ ಇಂಡಿಯಾ ನಡುವೆ ಹೊಸದೊಂದು ವಿವಾದ ಭುಗಿಲೆದ್ದಿದ್ದು...
ಹೀರೋ ಸಂಸ್ಥೆ ಹೊರತಂದಿರುವ ವಿವಾದಿತ ಸ್ಪ್ಲೆಂಡರ್ ಐ ಸ್ಮಾರ್ಟ್ ಬೈಕ್
ಹೀರೋ ಸಂಸ್ಥೆ ಹೊರತಂದಿರುವ ವಿವಾದಿತ ಸ್ಪ್ಲೆಂಡರ್ ಐ ಸ್ಮಾರ್ಟ್ ಬೈಕ್

ನವದೆಹಲಿ: ಭಾರತದ ಖ್ಯಾತ ಬೈಕ್ ತಯಾರಿಕಾ ಕಂಪನಿಗಳಾದ ಹೀರೋ ಮೊಟೋ ಕಾರ್ಪ್ ಮತ್ತು ಹೊಂಡಾ ಇಂಡಿಯಾ ನಡುವೆ ಹೊಸದೊಂದು ವಿವಾದ ಭುಗಿಲೆದ್ದಿದ್ದು, ಹೀರೋ ಸಂಸ್ಥೆ ಇತ್ತೀಚೆಗೆ ಹೊರತಂದಿರುವ ಸ್ಪ್ಲೆಂಡರ್ ಐ ಸ್ಮಾರ್ಟ್ ಬೈಕ್ ಈ ವಿವಾದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಹೀರೋ ಸಂಸ್ಥೆ ತನ್ನ ಸಂಸ್ಥೆಯ ಸ್ಪ್ಲೆಂಡರ್ ಐ ಸ್ಮಾರ್ಟ್ ಬೈಕ್ ಅತ್ಯಂತ ಹೆಚ್ಚಿನ ಇಂಧನ ದಕ್ಷತೆಯನ್ನು ಹೊಂದಿದ್ದು, ಲೀಟರ್ ಪೆಟ್ರೋಲ್ ಗೆ 102. 5 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಿಕೊಂಡಿದೆ. ಆದರೆ ಇದೇ ಅಂಶದ ವಿರುದ್ಧ ಹೊಂಡಾ ಸಂಸ್ಥೆ ಕೆಂಗಣ್ಣು ಬೀರಿದ್ದು, ಅತಿ ಹೆಚ್ಚು ಮೈಲೇಜ್ ಬರುತ್ತದೆ ಎಂದು ಸುಳ್ಳು ಪ್ರಚಾರ ಮಾಡುವುದು ಗ್ರಾಹಕರನ್ನು ಮೋಸ ಮಾಡಿದಂತೆ ಎಂದು ಅದು ಹೇಳಿದೆ.

"ಸ್ಪ್ಲೆಂಡರ್ ಬೈಕ್ ನ ಬೇಸ್ ಎಂಜಿನ್ ಅನ್ನು ತಮ್ಮ ಸಂಸ್ಥೆಯೇ ತಯಾರಿಸಿದ್ದು, ಸಂಪೂರ್ಣ ನಿಯಂತ್ರಿತ ವಾತಾವರಣದಲ್ಲಿ ಇಷ್ಟು ಪ್ರಮಾಣದ ಮೈಲೇಜು ನೀಡುವುದು ಕಷ್ಟಸಾಧ್ಯ. ಇದರ ಆಧಾರದ ಮೇಲೆ ಹೇಳುವುದಾದರೆ ಹೀರೋ ಸಂಸ್ಥೆ ಗ್ರಾಹಕರಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ತನ್ನ ಬೈಕ್ ಗಳ ಮಾರಾಟ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಹೊಂಡಾ ಇಂಡಿಯಾ ಸಂಸ್ಥೆಯ ಸಿಇಒ ಕಿಜಿಕಸ ಹೇಳಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಹೀರೋ ಸಂಸ್ಥೆ, ಬೈಕ್ ನ ಮೈಲೇಜ್ ವಿಚಾರವನ್ನು ಸರ್ಕಾರದ ಅಧೀನದಲ್ಲಿರುವ ಐಕ್ಯಾಟ್ (International Centre for Automotive Technology) ದೃಢೀಕರಿಸಿದೆ. ಇಂತಹ ಸಂಸ್ಥೆ ದಢೀಕರಿಸಿರುವ ವಿಚಾರವನ್ನು ಪ್ರಶ್ನಿಸುವುದು ಎಂದರೆ ಆ ಸಂಸ್ಥೆಯ ಕಾನೂನನ್ನು ಪ್ರಶ್ನಿಸಿದಂತೆ ಎಂದು ಹೇಳಿದೆ.

ಹೀರೋ ಸಂಸ್ಥೆ ಮತ್ತು ಹೊಂಡಾ ಸಂಸ್ಥೆಗಳು ತಮ್ಮ ಸತತ 26 ವರ್ಷಗಳ ಮೈತ್ರಿಯನ್ನು ಕಳೆದ 2010ರಲ್ಲಿ ಮುರಿದುಕೊಂಡಿದ್ದವು. ಪ್ರಸ್ತುತ ಹೀರೋ ಮೊಟೊ ಕಾರ್ಪ್ ಮತ್ತು ಹೊಂಡಾ ಇಂಡಿಯಾ ಸಂಸ್ಥೆಗಳು ಪ್ರತ್ಯೇಕವಾಗಿ ಭಾರತದಲ್ಲಿ ಕಾರ್ಯಾಚರಿಸುತ್ತಿವೆ. ಪರಸ್ಪರ ಮೈತ್ರಿ ಕಡಿತದ ಬಳಿಕ ಈ ಎರಡೂ ಸಂಸ್ಥೆಗಳು ಪರಸ್ಪರ ಪೈಪೋಟಿಗೆ ಬಿದ್ದಿದ್ದು, ಮಾರುಕಟ್ಟೆಯಲ್ಲಿ ಈ ಎರಡು ಸಂಸ್ಥೆಗಳು ನಡುವೆ ತೀವ್ರ ಪೈಪೋಟಿ ಎದುರಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com