ಹನುಮಂತಪ್ಪ ಕೊಪ್ಪದ್ ಜೀವಕ್ಕೆ ಎರವಾದ ಸಿಯಾಚಿನ್ ಬಗ್ಗೆ ನಿಮಗೆಷ್ಟು ಗೊತ್ತು?

ವಿಶ್ವಸಮುದಾಯ ಸಿಯಾಚಿನ್ ಯುದ್ಧಭೂಮಿಯನ್ನು ಮಾನವರಹಿತ ಪ್ರದೇಶ ಎಂದು ಘೋಷಣೆ ಮಾಡಿತ್ತು. ಆದರೆ ಕುತಂತ್ರಿ ಪಾಕಿಸ್ತಾನ ಭಾರತದ ಭೂಮಿಯ ಮೇಲೆ ಕಣ್ಣುಹಾಕಿ ಈ ಪ್ರದೇಶವನ್ನು ವಶಪಡಿಸಿಕೊಳ್ಳಲು..
ಸಿಯಾಚಿನ್ ಯುದ್ಧ ಭೂಮಿ (ಸಂಗ್ರಹ ಚಿತ್ರ)
ಸಿಯಾಚಿನ್ ಯುದ್ಧ ಭೂಮಿ (ಸಂಗ್ರಹ ಚಿತ್ರ)

ಹನುಮಂತಪ್ಪ ಕೊಪ್ಪದ್ ಕರ್ನಾಟಕದ ಹೆಮ್ಮೆಯ ಹುತಾತ್ಮ ಯೋಧ. ಇತ್ತೀಚೆಗೆ ವಿಶ್ವದ ಅತೀ ಎತ್ತರದ ಯುದ್ಧಭೂಮಿ ಎಂದೇ ಖ್ಯಾತಿ ಪಡೆದಿರುವ ಅತ್ಯಂತ ಕಡಿದಾದ ಸಿಯಾಚಿನ್ ನಲ್ಲಿ ಹಿಮಪಾತಕ್ಕೆ ತುತ್ತಾಗಿ ಬಲಿಯಾದ ಯೋಧ. ಸತತ ಆರು ದಿನಗಳ ಕಾಲ ಸುಮಾರು 25 ಅಡಿ ಆಳದಲ್ಲಿ ಮಂಜುಗಡ್ಡೆಯ ಕೆಳಗೆ ತನ್ನವರಿಗಾಗಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋರಾಟ ಮಾಡಿದ್ದ ಯೋಧ ಹನುಮಂತಪ್ಪ ಕೊಪ್ಪದ್. ಸುಮಾರು ಮೈನಸ್ 45 ಡಿಗ್ರಿ ಉಷ್ಣಾಂಶವಿರುವ ಸಿಯಾಚಿನ್ ಕಣಿವೆಯಲ್ಲಿ ಅದೂ ಕೂಡ ಭೂಮಿಯ ಒಳಗೆ ಸತತ 6 ದಿನಗಳ ಕಾಲ ಪ್ರಾಣಉಳಿಸಿಕೊಳ್ಳುವುದು ಸಾಮಾನ್ಯ ವಿಚಾರವಲ್ಲ. ಇದಾಗ್ಯೂ ಹನುಮಂತಪ್ಪ ಕೊಪ್ಪದ್ ಬದುಕುಳಿದಿದ್ದರು. ಆದರೆ ದುರಾದೃಷ್ಟವಶಾತ್ ನಿನ್ನೆ ಕೊನೆಯುಸಿರೆಳೆದರು.

ಕೇವಲ ಹನುಮಂತಪ್ಪ ಕೊಪ್ಪದ್ ಮಾತ್ರವಲ್ಲ. ಈ ಕಡಿದಾದ ಮತ್ತು ಅತ್ಯಂತ ಕ್ಲಿಷ್ಟಕರ ಕಣಿವೆಯಲ್ಲಿ ಭರತ ಮಾತೆಯ ನೂರಾರು ಯೋಧರು ಹುತಾತ್ಮರಾಗಿದ್ದಾರೆ. ಸೇನಾಧಿಕಾರಿಗಳ ಪ್ರಕಾರ ಇಲ್ಲಿ ಶುತ್ರು ಪಾಳಯದ ಗುಂಡಿಗೆ ಬಲಿಯಾಗುವ ಸೈನಿಕರಿಗಿಂತ, ಪ್ರಕೃತಿ ವಿಕೋಪಕ್ಕೆ ಬಲಿಯಾದವರ ಸಂಖ್ಯೆಯೇ ಹೆಚ್ಚು ಎಂದರೆ ಇಲ್ಲಿನ ವಾತಾವರಣ ಎಂತಹದ್ದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ವಿಶ್ವಸಮುದಾಯ ಸಿಯಾಚಿನ್ ಯುದ್ಧಭೂಮಿಯನ್ನು ಮಾನವರಹಿತ ಪ್ರದೇಶ ಎಂದು ಘೋಷಣೆ ಮಾಡಿತ್ತು. ಆದರೆ ಕುತಂತ್ರಿ ಪಾಕಿಸ್ತಾನ ಭಾರತದ ಭೂಮಿಯ ಮೇಲೆ ಕಣ್ಣುಹಾಕಿ ಈ ಪ್ರದೇಶವನ್ನು ವಶಪಡಿಸಿಕೊಳ್ಳಲು ಯತ್ನಿಸಿತ್ತು. ಆದರೆ ಪಾಕಿಸ್ತಾನದ ಕುತಂತ್ರಿ ಬುದ್ಧಿಯನ್ನು ಅರಿತಿದ್ದ ಭಾರತ ಸಿಯಾಚಿನ್ ಗೆ ಯೋಧರನ್ನು ರವಾನಿಸುವ ಮೂಲಕ ಪಾಕಿಸ್ತಾನ ಯೋಧರು ಅಲ್ಲಿಂದ ಕಾಲ್ಕೀಳುವಂತೆ ಮಾಡಿತು. ಆ ಮೂಲಕ ಆ ಪ್ರದೇಶವನ್ನು ತನ್ನ ವಶಕ್ಕೆ ಪಡೆದುಕೊಂಡಿತು.

ಅಂದಿನಿಂದ ಇಂದಿನವರೆಗೂ ಸಿಯಾಚಿನ್ ನಲ್ಲಿ ಪಾಕಿಸ್ತಾನಿ ಯೋಧರನ್ನು ತಡೆಯಲು ಭಾರತೀಯ ಸೇನೆಯ ಒಂದಷ್ಟು ಯೋಧರು ಜೀವದ ಭಯ ತೊರೆದು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೀವ ಭಯವೆಂದರೆ ಶುತ್ರುಪಾಳಯದಿಂದ ಹಾರಿಬಾರುವ ಗುಂಡು ಅಥವಾ ಬಾಂಬುಗಳಲ್ಲ. ಬದಲಿಗೆ ಕ್ಷಣಾರ್ಧದಲ್ಲಿ ಮನುಷ್ಯನ ರಕ್ತವನ್ನೇ ಹೆಪ್ಪುಗಟ್ಟಿಸಬಲ್ಲ ಇಲ್ಲಿನ ಪ್ರಬಲ ವಾತಾವರಣದ ಭಯವಷ್ಟೇ. ಇಲ್ಲಿನ ಸೈನಿಕರು ಶುತ್ರುಗಳೊಂದಿಗೆ ಹೋರಾಡುವುದು ತೀರಾ ಅಪರೂಪ. ಆದರೆ ನಮ್ಮ ಸೈನಿಕರು ಹೋರಾಡುವುದು ಇಲ್ಲಿನ ವಾತಾವರಣದೊಂದಿಗೆ.

ಸೈನಿಕರು ಈ ಪರಿ ಸಾವಿಗೀಡಾಗಲು ಕಾರಣವೇನು ಮತ್ತು ಇಷ್ಟಕ್ಕೂ ಇಲ್ಲಿ ಅಂತಹದ್ದೇನಿದೆ..?

1.
ಜಗತ್ತಿನ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್. ಸಿಯಾ ಅಂದ್ರೆ ಗುಲಾಬಿ. ಚಿನ್ ಎಂದ್ರೆ ಪ್ರದೇಶ. ಗುಲಾಬಿ ವ್ಯಾಲಿ ಕಣಿವೆ ಎನ್ನಬಹುದು. ಸಿಯಾಚಿನ್ ಕಣಿವೆಯಲ್ಲಿ ಅತ್ಯಂತ ಕನಿಷ್ಠ ತಾಪಮಾನವಿದ್ದು, ಮೈನಸ್ 50 ಡಿಗ್ರಿ ಸೆಲ್ಸಿಯಸ್ ಇರುತ್ತದೆ. 2,600 ಚದರ ಕಿ.ಮೀ ವಿಸ್ತೀರ್ಣ ಹೊಂದಿದೆ. ಸಮುದ್ರ ಮಟ್ಟದಿಂದ 20 ಸಾವಿರಕ್ಕೂ ಹೆಚ್ಚು ಅಡಿ ಎತ್ತರದಲ್ಲಿರುವ ಸಿಯಾಚಿನ್ ನಲ್ಲಿ ಭಾರತೀಯ ಸೈನಿಕರ ಚೆಕ್ ಪಾಯಿಂಟ್ ಬಹಳ ದೂರದಲ್ಲಿದೆ. ಅದಕ್ಕೆ ಇಂದ್ರ ಕಾಲ್ ಎಂದು ಹೆಸರು. ಈ ಪಾಯಿಂಟ್ ತಲುಪಲು ಸೈನಿಕರಿಗೆ 20-22 ದಿನ ಬೇಕಾಗುತ್ತದೆ. ಚಳಿಗಾಲದಲ್ಲಿ ಇಲ್ಲಿನ ವಾತಾವರಣ -70 ಡಿಗ್ರಿಯವರೆಗೂ ತಲುಪುತ್ತದೆ. ಚಳಿಗಾಲದ ವೇಳೆ ಈ ಪ್ರದೇಶದಲ್ಲಿ 1000ಕ್ಕೂ ಹೆಚ್ಚು ಸೆಂ.ಮೀ ಹಿಮಬೀಳುತ್ತದೆ.

2. ಸಿಯಾಚಿನ್ ಪ್ರದೇಶ 1984ರಿಂದ ಭಾರತದ ನಿಯಂತ್ರಣದಲ್ಲಿದೆ. ಇದಕ್ಕೂ ಮೊದಲು ಈ ಪ್ರದೇಶವನ್ನು ಸೈನಿಕರ ರಹಿತ ಪ್ರದೇಶವೆಂದು ಘೋಷಣೆ ಮಾಡಲಾಗಿತ್ತು. ಆದರೆ ಪಾಕಿಸ್ತಾನ ತನ್ನ ಸೈನಿಕರನ್ನು ಈ ಮಾರ್ಗವಾಗಿ ರವಾನಿಸುವ ಮೂಲಕ ಈ ಪ್ರದೇಶವನ್ನು ವಶಕ್ಕೆ ಪಡೆಯಲು ಯತ್ನಿಸಿತು. ಆದರೆ ಭಾರತೀಯ ಸೇನೆ ಸೈನಿಕರನ್ನು ರವಾನಿಸುವ ಮೂಲಕ ಪಾಕಿಸ್ತಾನಿ ಸೈನಿಕರನ್ನು ಅಲ್ಲಿಂದ ಹಿಮ್ಮೆಟಿಸಿತು. ಅಂದಿನಿಂದ ಈ ವಿವಾದಿತ ಪ್ರದೇಶದಲ್ಲಿ ಭಾರತೀಯ ಸೈನಿಕರು ಕಾವಲು ಕಾಯುತ್ತಿದ್ದಾರೆ. ಈ ಪ್ರದೇಶದಲ್ಲಿ ಎರಡೂ ದೇಶಗಳು ತಮ್ಮ ಸೇನೆಯನ್ನು ನಿಯೋಜಿಸಿದೆ. ಈ ಯುದ್ಧಭೂಮಿಯಲ್ಲಿ 1990, 1995, 1996 ಮತ್ತು 1999ರಲ್ಲಿ ಭಾರತ ಮತ್ತು ಪಾಕಿಸ್ತಾನ ಸೇನೆ ನಡುವೆ ಕಾದಾಟ ನಡೆದಿತ್ತು. ಈ ಪ್ರದೇಶದಲ್ಲಿ ಭಾರತ 10 ಸಾವಿರಕ್ಕೂ ಹೆಚ್ಚು ಸೇನಾ ಟ್ರೂಪ್ಸ್ ಗಳನ್ನು ನಿಯೋಜಿಸಿದೆ. ಈ ಟ್ರೂಪ್ಸ್ ಗಳಿಗೆ ಅಗತ್ಯ ವಸ್ತುಗಳನ್ನು ಹೆಲಿಕಾಪ್ಟರ್ ಗಳಲ್ಲಿ ಪೂರೈಸುವುದರಿಂದ 21 ಸಾವಿರ ಅಡಿ ಎತ್ತರದಲ್ಲಿ ಹೆಲಿಪ್ಯಾಡ್ ನಿರ್ಮಿಸಿದೆ. ಇದೂ ಕೂಡ ಒಂದು ದಾಖಲೆಯಾಗಿದ್ದು, ವಿಶ್ವ ಅತ್ಯಂತ ಎತ್ತರದ ಹೆಲಿಪ್ಯಾಡ್ ಎಂಬ ಖ್ಯಾತಿಯೂ ಇದಕ್ಕಿದೆ.

3. ಸಿಯಾಚಿನ್ ನಲ್ಲಿ ಆಮ್ಲಜನಕ ತೀರಾ ಕಡಿಮೆ ಇರುವ ಕಾರಣ ಅವರು ನಿಧಾನವಾಗಿ ಚಲಿಸಬೇಕಾಗುತ್ತದೆ. ಮಧ್ಯ ಮಧ್ಯದಲ್ಲಿ ಕುಳಿತು ಅವರು ಮುಂದೆ ಸಾಗುತ್ತಾರೆ. ಆದ್ರೆ ಅದಕ್ಕೂ ಸಮಯ ನಿಗದಿ ಮಾಡಿಕೊಂಡಿರುತ್ತಾರೆ. ಸೈನಿಕರ ಡ್ರೆಸ್ ಜೊತೆಗೆ ಸ್ನೋ ಕೋಟನ್ನು ಅವರು ಧರಿಸಿರುತ್ತಾರೆ.ಚೆಕ್ ಪಾಯಿಂಟ್ ಗೆ ಹೋಗುವ ಸೈನಿಕರು ಒಬ್ಬರ ಹಿಂದೆ ಒಬ್ಬರು ಸರತಿ ಸಾಲಿನಲ್ಲಿ ಹೋಗುತ್ತಾರೆ. ಒಂದು ಹಗ್ಗದಲ್ಲಿ ಎಲ್ಲರ ಒಂದು ಕೈಯನ್ನು ಕಟ್ಟಿ ಹಾಕಲಾಗಿರುತ್ತದೆ. ಹಿಮದಲ್ಲಿ ಕಂದಕ ಎಲ್ಲಿದೆ ಎಂಬುದು ತಿಳಿಯುವುದಿಲ್ಲ. ಹೀಗಾಗಿ ಒಬ್ಬ ವ್ಯಕ್ತಿ ಕಂದಕದಲ್ಲಿ ಬಿದ್ದರೆ ಉಳಿದವರು ರಕ್ಷಣೆ ಮಾಡಲಿ ಎಂಬ ಕಾರಣಕ್ಕೆ ಹಗ್ಗ ಕಟ್ಟಲಾಗಿರುತ್ತದೆ. ಇಂತಹುದೇ ಹಲವು ಘಟನೆಗಳಲ್ಲಿ ಸಾಕಷ್ಟು ಸೈನಿಕರ ಬಲಿಯಾಗಿದ್ದು, 1000 ಕ್ಕೂ ಹೆಚ್ಚು ಭಾರತೀಯರು, ಹಿಮಪಾತ, ಅನಾರೋಗ್ಯ ಹಾಗೂ ಅತಿಯಾದ ಚಳಿಯಿಂದ ದೇಹದ ಭಾಗಗಳು ಹಾನಿಯಾಗಿ ಮೃತಪಟ್ಟಿದ್ದಾರೆ. ಇನ್ನು 2012ರಲ್ಲಿ ಹಿಮಪಾತಕ್ಕೆ 140 ಪಾಕಿಸ್ತಾನಿ ಯೋಧರು ಮೃತಪಟ್ಟಿರುವುದು ಅಲ್ಲಿನ ಅತಿ ಹೆಚ್ಚು ಹಾನಿಗೊಳಗಾದ ಪ್ರಕರಣವಾಗಿದೆ.

4. ಇನ್ನು ಸೈನಿಕರು ಮಲಗಲೆಂದೇ ಇಲ್ಲಿ ವಿಶಿಷ್ಟ ಬಗೆಯ ಸ್ಲೀಪಿಂಗ್ ಚೀಲಗಳನ್ನು ಸಿದ್ಧಪಡಿಸಲಾಗಿರುತ್ತದೆ. ಈ ಸ್ಲೀಪಿಂಗ್ ಚೀಲದಲ್ಲಿಯೇ ಸೈನಿಕರು ಮಲಗುತ್ತಾರೆ. ಅತಿ ಹೆಚ್ಚು ಚಳಿಯನ್ನು ತಡೆಯ ಸಾಮರ್ಥ್ಯ ಈ ಸ್ಲೀಪಿಂಗ್ ಚೀಲಕ್ಕೆ ಇರುತ್ತದೆ. ಆದರೆ ಸೈನಿಕರು ಇಲ್ಲಿ ಸರಿಯಾಗಿ ನಿದ್ದೆ ಮಾಡುವಂತೆಯೂ ಇಲ್ಲ. ಆಮ್ಲಜನಕ ಕಡಿಮೆಯಾಗಿ ನಿದ್ದೆಯಲ್ಲಿಯೇ ಸಾವನ್ನಪ್ಪುವ ಸಾಧ್ಯತೆ ಇರುವುದರಿಂದ ಸೈನಿಕರು ಆಗ್ಗಿಂದಾಗ್ಗೆ ಎಚ್ಚರಗೊಳ್ಳುತ್ತಿರಬೇಕಾಗುತ್ತದೆ. ಇನ್ನೂ ಕುತೂಹಲ ಅಂಶಗಳೆಂದೆರೆ ಇಲ್ಲಿ ಪಹರೆಕಾಯುವ ಸೈನಿಕರು ಸ್ನಾನ ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ ಮಂಜುಗಡ್ಡೆಯಿಂದ ಕೂಡಿರುವ ಈ ಪ್ರದೇಶದಲ್ಲಿ ಕುಡಿಯಲು ನೀರು ಬೇಕು ಎಂದರೆ ಸೈನಿಕರು ತಾವು ನಿಂತಿರವ ನೆಲದ ಮಂಜನ್ನೇ ತೆಗೆದು ಅದನ್ನು ಕಾಯಿಸಿ ನೀರು ಮಾಡಿ ಕುಡಿಯಬೇಕು. ಇಂತಹ ಪರಿಸ್ಥಿತಿಯಲ್ಲಿ ಸ್ನಾನ ಮಾಡಲು ನೀರು ಎಲ್ಲಿಂದ ಬರಬೇಕು. ಇನ್ನು ನಮ್ಮ ಶಿಸ್ತಿನ ಸೈನಕರು ಈ ಪ್ರದೇಶದಲ್ಲಿ ಮಾತ್ರ ಶೇವಿಂಗ್ ಮಾಡಲು ಅವಕಾಶವಿಲ್ಲ. ದಾಡಿ ತೆಗೆಯುವುದನ್ನು ಇಲ್ಲಿ ನಿಷೇಧಿಸಲಾಗಿದೆ. ಚರ್ಮ ಮೆದುವಾಗಿರುವುದರಿಂದ ಶೇವ್ ಮಾಡುವ ವೇಳೆ ರಕ್ತ ಬಂದರೆ ಸುಲಭವಾಗಿ ನಿಲ್ಲುವುದಿಲ್ಲ.

5. ಈ ಪ್ರದೇಶವನ್ನು ಕಾಯಲು ಭಾರತ ಕೋಟ್ಯಂತರ ಹಣ ವೆಚ್ಚ ಮಾಡುತ್ತಿದೆ. ಪ್ರತಿ ದಿನಕ್ಕೆ ಸುಮಾರು 6.3 ಕೋಟಿ ಎಂಬಂತೆ ವರ್ಷಕ್ಕೆ 2,300 ಕೋಟಿ ನೀಡುತ್ತಿದೆ. ಈ ಪ್ರದೇಶ ಚೀನಾ ಮತ್ತು ಪಾಕಿಸ್ತಾನ ಗಡಿ ಪ್ರದೇಶಕ್ಕೆ ಹೊಂದಿಕೊಂಡಿದೆಯಾದರೂ ಬಹುತೇಕ ಪ್ರದೇಶ ಭಾರತದ ನಿಯಂತ್ರಣದಲ್ಲಿದೆ. ಒಂದು ಬದಿಯಲ್ಲಿ ಪಾಕಿಸ್ತಾನ, ಮತ್ತೊಂದು ಬದಿಯಲ್ಲಿ ಚೀನಾದ ಸೈನಿಕರು ಭಾರತದ ಗಡಿಯನ್ನು ನುಸುಳಲು ಯತ್ನಿಸುತ್ತಲೇ ಇರುತ್ತಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತೀಯ ಸೇನೆಯು 800 ಸೈನಿಕರನ್ನು ಸಿಯಾಚಿನ್‌ನಲ್ಲಿ ನಿಯೋಜಿಸಿದ್ದು, ಈ ಸೇನಾ ಶಿಬಿರ ನಿರ್ವಹಣೆಗೆ ನಿತ್ಯ ಮಾಡುವ ವೆಚ್ಚ 5 ಕೋಟಿ! ಸಮುದ್ರ ಮಟ್ಟದಿಂದ 20 ಸಾವಿರ ಅಡಿ ಎತ್ತರವಿರುವ ಸಿಯಾಚಿನ್‌ ಸೇನಾ ನೆಲೆಯಲ್ಲಿ ಮೈನಸ್ 50 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಒಂದು ಚಪಾತಿ ತಯಾರಿಸುವ ವೆಚ್ಚವೇ ರು.125. ಒಂದು ಕಪ್‌ ಚಹಾ ಕಾಯಿಸ ಬೇಕೆಂದರೂ ಲೀಟರ್‌ಗಟ್ಟಲೇ ಸೀಮೆಎಣ್ಣೆ ಖರ್ಚಾಗುತ್ತದೆ. ಸೈನಿಕರನ್ನು ಬೆಚ್ಚಗಾಗಿಡಲು ದುಬಾರಿ ಮೊತ್ತದ ಬೂಟುಗಳು, ಕಾಲುಚೀಲಗಳು, ಏರ್‌ ಪ್ಯಾಕೆಟ್‌ಗಳು, ಫೈಬರ್‌ ಬ್ಯಾಗ್‌ಗಳು, ಸೆಟಲೈಟ್‌ ಫೋನ್‌ಗಳ ನಿರ್ವಹಣೆಗೆ ಇಷ್ಟೊಂದು ವೆಚ್ಚ ಮಾಡಲೇಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com