
ನವದೆಹಲಿ: ಖ್ಯಾತ ಕಾರು ತಯಾರಿಕಾ ಸಂಸ್ಥೆ ವೋಲ್ವೋ, ಭಾರತದಲ್ಲಿ ತಾನು ಬಿಡುಗಡೆ ಮಾಡಬೇಕು ಎಂದು ಕೊಂಡಿರುವ ನೂತನ ಕಾರುಗಳಲ್ಲಿ ರಾಡಾರ್ ಆಧಾರಿತ ಸುರಕ್ಷತಾ ತಂತ್ರಜ್ಞಾನವನ್ನು ಅಳವಡಿಸಿ ಮಾರುಕಟ್ಟೆಗೆ ತರಲು ಮುಂದಾಗಿದೆ.
ಮೂಲಗಳ ಪ್ರಕಾರ ವೋಲ್ವೋ ಸಂಸ್ಥೆಯ ನೂತನ ಎಸ್ 90 ಮಾದರಿಯ ಕಾರುಗಳಲ್ಲಿ ರಾಡಾರ್ ಆಧಾರಿತ ಸುರಕ್ಷತ್ರಾ ತಂತ್ರಜ್ಞಾನ ಅಳವಡಿಸುವುದಾಗಿ ವೋಲ್ವೋ ಹೇಳಿದೆ. ಈ ನೂತನ ರಾಡಾರ್ ಸಹಿತ ಸುರಕ್ಷತಾ ತಂತ್ರಜ್ಞಾನದಿಂದಾಗಿ ಅಪಘಾತದಂತಹ ಘಟನೆಗಳನ್ನು ಸುಲಭವಾಗಿ ತಡೆಯಲು ಸಾಧ್ಯವಿದ್ದು, ಕಾರಿನಲ್ಲಿ ಅಳವಡಿಸಿರುವ ಸುರಕ್ಷತಾ ವ್ಯವಸ್ಥೆ ತನ್ನ ಸೆನ್ಸಾರ್ ಮೂಲಕ ಎದುರಿಗಿನ ಪಾದಾಚಾರಿ ಅಥವಾ ವಾಹನ ಇತರೆ ಯಾವುದೇ ವಸ್ತುವನ್ನು ಮೊದಲೇ ಗುರುತಿಸಿ ಕೂಡಲೇ ಸ್ವನಿಯಂತ್ರಿತ ಬ್ರೇಕ್ ಅಳವಡಿಸುತ್ತದೆ.
ಅಂತೆಯೇ ಈ ರಾಡಾರ್ ಸಹಿತ ತಂತ್ರಜ್ಞಾನದಿಂದಾಗಿ ನಾವು ತೆರಳಬೇಕಿರುವ ಮಾರ್ಗವನ್ನು ಸುಲಭವಾಗಿ ಮತ್ತು ನಿಖರವಾಗಿ ತಲುಪಲು ಸಾಧ್ಯ ಎಂದು ವೋಲ್ವೋ ಹೇಳಿಕೊಂಡಿದೆ.
ಟ್ರಾಯ್ ಅನುಮತಿಗಾಗಿ ಕಾದಿರುವ ವೋಲ್ವೋ
ಇನ್ನು ವೋಲ್ವೋ ಸಂಸ್ಥೆಯ ಉದ್ದೇಶಿತ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ವೋಲ್ವೋಗೆ ಭಾರತದ ಟ್ರಾಯ್ ಅನುಮತಿ ಬೇಕಿದ್ದು, ಪ್ರಸ್ತುತ ಈ ಬಗ್ಗೆ ವೋಲ್ವೋ ಸಂಸ್ಥೆ ಭಾರತ ಸರ್ಕಾರದೊಂದಿಗೆ ಚರ್ಚೆ ನಡೆಸುತ್ತಿದೆ. ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ ಈ ಹಿಂದೆ 2015 ಸೆಪ್ಟೆಂಬರ್ ನಲ್ಲಿ ರಾಡಾರ್ ನ 36-38 MHz, 433-434.79 MHz, 302 -351 kHz ಮತ್ತು 76-77 GHz ಫ್ರೀಕ್ವೆಂನ್ಸಿಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಹೀಗಾಗಿ ರಾಡಾರ್ ತಂತ್ರಜ್ಞಾನದ ಬಳಕೆಗೆ ಟ್ರಾಯ್ ನ ಅನುಮತಿ ಬೇಕಿದೆ.
ಈ ಹಿಂದೆ ಇದೇ ತಂತ್ರಜ್ಞಾನ ಹೊಂದಿದ್ದ ವೋಲ್ವೋ ಎಕ್ಸ್ ಸಿ 90 ಕಾರುಗಳನ್ನು ಭಾರತದಲ್ಲಿ ಮಾರಾಟಕ್ಕೆ ಮಾಡಲು ವೋಲ್ವೋ ಸಂಸ್ಥೆ ಮುಂದಾಗಿತ್ತಾದರೂ, ಟ್ರಾಯ್ ಅನುಮತಿ ನಿರಾಕರಿಸಿದ ಹಿನ್ನಲೆಯಲ್ಲಿ ಸ್ವೀಡಿಷ್ ಮೂಲದ ತಯಾರಿಕಾ ಸಂಸ್ಥೆ ಈ ಮಾದರಿ ತಂತ್ರಜ್ಞಾನದ ಕಾರುಗಳನ್ನು ಹಿಂದಕ್ಕೆ ಪಡೆದಿತ್ತು. ಇದೀಗ ಮತ್ತೆ ರಾಡಾರ್ ಸಹಿತ ತಂತ್ರಜ್ಞಾನಕ್ಕಾಗಿ ವೋಲ್ವೋ ಭಾರತ ಸರ್ಕಾರವನ್ನು ಸಂಪರ್ಕಿಸಿದ್ದು, ಒಂದು ವೇಳೆ ಸರ್ಕಾರ ಅನುಮತಿ ನೀಡಿದರೆ ಎಸ್ 90 ವಾಹನದೊಂದಿಗೆ ಈ ಹಿಂದೆ ತಯಾರಿಸಲಾಗಿದ್ದ ಎಕ್ಸ್ ಸಿ90 ಕಾರುಗಳನ್ನು ಕೂಡ ವೋಲ್ವೋ ಭಾರತದಲ್ಲಿ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ.
Advertisement