ಗತಕಾಲದ ವೈಭವ ಸಾರುವ ಐತಿಹಾಸಿಕ ಸ್ಮಾರಕಗಳ ಒಡಲು ಬಿಜಾಪುರ

ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿ ಹಾಗೂ ಬೆಂಗಳೂರು ನಗರದ ವಾಯುವ್ಯ ದಿಕ್ಕಿನಲ್ಲಿ ನೆಲೆಸಿರುವ ಬಯಲು ಸೀಮೆ ಪ್ರದೇಶವಾದ ಬಿಜಾಪುರ ಜಿಲ್ಲೆಯು ಅದ್ಭುತ ಸ್ಮಾರಕಗಳುಳ್ಳ ಐತಿಹಾಸಿಕ ಪ್ರಸಿದ್ಧ ಕ್ಷೇತ್ರವಾಗಿದೆ...
ಗತಕಾಲದ ವೈಭವತೆ ಸಾರುವ ಐತಿಹಾಸಿಕ ಸ್ಮಾರಕಗಳ ಒಡಲಲ್ಲಿ ತುಂಬಿಕೊಂಡಿದೆ ಬಿಜಾಪುರ
ಗತಕಾಲದ ವೈಭವತೆ ಸಾರುವ ಐತಿಹಾಸಿಕ ಸ್ಮಾರಕಗಳ ಒಡಲಲ್ಲಿ ತುಂಬಿಕೊಂಡಿದೆ ಬಿಜಾಪುರ
ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿ ಹಾಗೂ ಬೆಂಗಳೂರು ನಗರದ ವಾಯುವ್ಯ ದಿಕ್ಕಿನಲ್ಲಿ ನೆಲೆಸಿರುವ ಬಯಲು ಸೀಮೆ ಪ್ರದೇಶವಾದ ಬಿಜಾಪುರ ಜಿಲ್ಲೆಯು ಅದ್ಭುತ ಸ್ಮಾರಕಗಳುಳ್ಳ ಐತಿಹಾಸಿಕ ಪ್ರಸಿದ್ಧ ಕ್ಷೇತ್ರವಾಗಿದೆ. ಬಿಜಾಪುರದ ಪುರಾತನ ಹೆಸರು ವಿಜಯಪುರ. ಈ ಜಿಲ್ಲೆಯು ಐತಿಹಾಸಿಕ ಸ್ಥಳಗಳಿಂದ ಕೂಡಿದ್ದು, 10-11ನೇ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರಿಂದ ಸ್ಥಾಪಿತವಾಗಿದೆ. 13ನೇ ಶತಮಾನದ ಕೊನೆಯ ಹೊತ್ತಿಗೆ ದೆಹಲಿಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಬಂದ ಬಿಜಾಪುರ ಕ್ರಿ.ಶ. 1347ರಲ್ಲಿ ಬೀದರಿನ ಬಹುಮನಿ ಸುಲ್ತಾನರ ಆಳ್ವಿಕೆಗೆ ಒಳಗಾಗಿತ್ತು. 
ಕ್ರಿ.ಶ 1518ರಲ್ಲಿ ಬಹುಮನಿ ಸುಲ್ತಾನ್ ಸಾಮ್ರಾಜ್ಯ ಒಡೆದು 5 ರಾಜ್ಯಗಳಾಗಿ ಹಂಚಿಹೋಯಿತು. ಆಗ ರೂಪುಗೊಂಡ ರಾಜ್ಯಗಳಲ್ಲಿ ಬಿಜಾಪುರವೂ ಒಂದಾಗಿತ್ತು. ಈ ಬಿಜಾಪುರ ಹಲವಾರು ಅದ್ಭುತಗಳ್ನು ತನ್ನ ಒಡಲಲ್ಲಿರಿಸಿಕೊಂಡು ಪ್ರೇಮಿಗಳನ್ನು ಹಾಗೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. 
ಬಿಜಾಪುರ ಎಂದರೆ ಗೋಲ್ ಗುಂಬಜ್ (ಗೋಳಗುಮ್ಮಟ). ಗೋಲಗುಂಬಜ್ ಎಂದರೆ ಬಿಜಾಪುರ ಎಂದು ಹೇಳಲಾಗುತ್ತದೆ. ವಿಶ್ವದ 7 ಅದ್ಭುತಗಳಲ್ಲಿ ಗೋಲಗುಂಬಜ್ ಕೂಡ ಒಂದು. ಈ ವಿಸ್ಮಯ ಗೋಲಗುಂಬಜ್ ನ್ನು ಮಹಮ್ಮದ್ ಆದಿಲ್ ಶಾ ಕಟ್ಟಿಸಿದ್ದರು ಎಂದು ಇತಿಹಾಸದಲ್ಲಿ ಬರೆಯಲಾಗಿದೆ.
ಗೋಲಗುಂಬಜ್ ಉದ್ದ ಮತ್ತು ಅಗಲ 50 ಮೀ ಇದ್ದು, ಹೊರಗಡೆ ಎತ್ತರೆ 198 ಅಡಿ ಮತ್ತು ಒಳಗಿನ ಎತ್ತರ 175 ಅಡಿ ಆಗಿದೆ. ಮೇಲಿನ ಗೋಲಾಕಾರದ ಗುಂಬಜ್ 39 ಮೀ (124 ಅಡಿ) ವ್ಯಾಸವನ್ನು ಹೊಂದಿದೆ. ಆದರಂತೆ 8 ಅಂತಸ್ತುಗಳಿವೆ. 
ಗೋಲಗುಂಬಜ್ ನ ವಿಶೇಷವೆಂದರೆ, ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ಧವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ. ಹಾಗೆಯೇ ಇಲ್ಲಿರುವ ಪಿಸುಗುಟ್ಟುವ ಜಗುಲಿಯಲ್ಲಿ ನಿಂತು ಪಿಸುಗುಟ್ಟಿದರೆ ಅತಿ ಸಣ್ಣ ಶಬ್ಧ ಕೂಡ 37 ಮೀ ದೂರದಲ್ಲಿ ಸ್ಪಷ್ಟವಾಗಿ ಕೇಳಿ ಬರುತ್ತದೆ. ವಿಜಯುಪುರದ ಗೋಲಗುಂಬಜ್ ವಿಶ್ವಪ್ರಸಿದ್ಧಿಯನ್ನು ಹೊಂದಿದ್ದು, ವಿಶಿಷ್ಟ ಐತಿಹಾಸಿಕ ಹಿನ್ನಲೆಯಲನ್ನು ಹೊಂದಿರುವ ಈ ರಚನೆಯನ್ನು ಗೋಲಗುಮ್ಮಟವೆಂದೂ ಕೂಡ ಕರೆಯುತ್ತಾರೆ. 
ಗೋಲಗುಂಬಜ್ ಅಲ್ಲದೆ ಬಿಜಾಪುದಲ್ಲಿ ನೋಡಲು ಇನ್ನು ಅನೇಕ ಐತಿಹಾಸಿಕ ಸ್ಮಾರಕಗಳೂ ಕೂಡ ಇವೆ. ಅವುಗಳಲ್ಲಿ ಮುಖ್ಯವಾದದ್ದು ಇಬ್ರಾಹಿಂ ರೋಜಾ. 
ಇದು ಇಬ್ರಾಹಿಮ್ ಆದಿಲ್ ಶಾ ಮತ್ತು ಆತನ ರಾಣಿಯಾದ ತೇಜ್ ಸುಲ್ತಾನಳ ಗೋರಿಯಾಗಿದೆ. ಇದನ್ನು 1627ರಲ್ಲಿ ನಿರ್ಮಾಣ ಮಾಡಲಾಗಿತ್ತು. ಕರ್ನಾಟಕದಲ್ಲಿರುವ ಇಸ್ಲಾಮಿಕ್ ವಾಸ್ತುಗಳಲ್ಲಿ, ಇಬ್ರಾಹಿಂ ರೋಜಾ ಅತ್ಯಂತ ಹೆಸರುವಾಗಿಯಾಗಿದೆ. ಇದರಲ್ಲಿ ಇಮ್ಮಡಿ ಇಬ್ರಾಹಿಂ ಆದಿಲ್ ಷಾ ಅವರ ಸಮಾಧಿಯಿದೆ. ಅದರ ಹತ್ತಿರವೇ ಒಂದು ಮಸೀದಿಯಿದೆ. ತಾಜ್ ಮಹಲ್ಲಿಗಿಂತ ಮುಂಚಿತವಾಗಿಯೇ ನಿರ್ಮಿಸಲಾದ ಈ ಸ್ಮಾರಕದಲ್ಲಿ ತಾಜ್'ಮಹಲ್ಲಿನ ಅನೇಕ ಲಕ್ಷಣಗಳನ್ನು ಕಾಣಬಹುದು. ಇದರ ವಿನ್ಯಾಸ ಮುಂದೆ ಪ್ರಸಿದ್ಧಿ ಪಡೆದ ತಾಜ್ ಮಹಲ್ ನ ವಿನ್ಯಾಸಕ್ಕೆ ಸ್ಫೂರ್ತಿಯಾಯಿತು ಎಂದ ಹೇಳಿಕೆಯಿದೆ. 
ಇಷ್ಟೇ ಅಲ್ಲದೆ ಬಿಜಾಪುರದಲ್ಲಿ ಜುಮ್ಮು ಮಸೀದಿ, ಬಾರಾ ಕಮಾನ್, ಅಸರ್ ಮಹಲ್, ಗಗನ್ ಮಹಲ್, ಸಂಗೀತ್ ಮಹಲ್, ಉಪ್ಪಲಿ ಬುರಜ್, ಚಾಂದ್ ಬೌಡಿ, ಜೋಡ ಗುಮ್ಮಟ, ಮೆಹತರ ಮಹಲ್, ಸಾತ್ ಮಂಜಿಲ್, ಜಲ ಮಂಜಿಲ್, ಬೇಸಿಕೆ ಅರಮನೆ ಕುಮಟಗಿ, ಬಿಜಾಪುರ ಕೋಟೆ ಸೇರಿದಂತೆ ಸಾಕಷ್ಟು ಐತಿಹಾಸಿಕ ಸ್ಥಳಗಳಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. 
ಬೆಂಗಳೂರಿನಿಂದ ಹಿಜಾಪುರಕ್ಕೆ ಅಂದಾಜು 575 ಕಿಲೋ ಮೀಟರ್ ದೂರವಿದ್ದು, ಬೆಂಗಳೂರಿನಿಂದ ವಿಜಾಪುರಕ್ಕೆ ರೈಲು, ಬಸ್ ವ್ಯವಸ್ಥೆಗಳಿವೆ. ಬಿಜಾಪುರಕ್ಕೆ ಹೋದ ಬಳಿಕ ಅಲ್ಲಿಂದ ಆಟೋ, ಕುದುರೆಗಾಡಿಗಳ ಮೂಲಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com