ಇಚ್ಛಾಶಕ್ತಿಯ ಕೊರತೆ: ಉತ್ತರ ಕನ್ನಡ ಜಿಲ್ಲೆಯ 88 ಪ್ರವಾಸೋದ್ಯಮ ಯೋಜನೆಗಳು ತಟಸ್ಥ

ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿವೆ. ಆದರೆ ಪ್ರವಾಸಿ ತಾಣಗಳನ್ನು ಶೋಧಿಸಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿವೆ. ಆದರೆ ಪ್ರವಾಸಿ ತಾಣಗಳನ್ನು ಶೋಧಿಸಿ ಹೊರತೆಗೆದು ಪ್ರವಾಸೋದ್ಯಮವನ್ನು ಬೆಳೆಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳಿಂದ ಹಲವು ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳು ಬಾಕಿ ಉಳಿದಿವೆ.
ಉತ್ತರ ಕನ್ನಡ ಜಿಲ್ಲೆಗೆ ಕಳೆದ ಆರು ವರ್ಷಗಳಲ್ಲಿ ಸುಮಾರು 187 ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳು ಅನುಮೋದನೆಯಾಗಿವೆ. ಅವುಗಳಲ್ಲಿ ಕೇವಲ 99 ಯೋಜನೆಗಳು ಪೂರ್ಣಗೊಂಡಿದ್ದು ಇನ್ನು 60 ಯೋಜನೆಗಳು ಕಾಮಗಾರಿ ಹಂತದಲ್ಲಿದೆ. ಹಲವು ಇಲಾಖೆಗಳಿಂದ ಅನುಮೋದನೆ ಸಿಗಲು ಬಾಕಿಯಿರುವ ಸುಮಾರು 28 ಕಾಮಗಾರಿಗಳು ಇನ್ನೂ ಆರಂಭಗೊಂಡಿಲ್ಲ.
ತಿಲ್ಮಟಿ ಬೀಚ್ ಟ್ರಕ್ಕಿಂಗ್ ಪಾಯಿಂಟ್ ನಲ್ಲಿ ಸಣ್ಣ ಸೇತುವೆಗಳು ಮತ್ತು ರೇಲಿಂಗ್ ನಿರ್ಮಾಣ, ಕಾರವಾರದಲ್ಲಿ ವಿಮಾನಯಾನ ಮ್ಯೂಸಿಯಂ ಸ್ಥಾಪನೆ, ಆಯ್ದ ಬೀಚ್ ಗಳಲ್ಲಿ ಸಿಸಿಟಿವಿ ಕ್ಯಾಮರಾ ನಿಯೋಜನೆ ಹೀಗೆ ಹಲವು ಕೆಲಸಗಳು ಅನೇಕ ಕಾರಣಗಳಿಂದ ನಿಂತುಹೋಗಿವೆ. 
ಉತ್ತರ ಕನ್ನಡ ಜಿಲ್ಲೆ ಬೆಟ್ಟ-ಗುಡ್ಡ, ಜಲಪಾತ, ಸಮುದ್ರ, ವನ್ಯಜೀವಿ ಅಭಯಾರಣ್ಯ, ಪ್ರಕೃತಿ ಸೌಂದರ್ಯಗಳಿಂದ ತುಂಬಿ ಹೋಗಿದೆ, ಆದರೆ ಜನರಿಗೆ ಇಲ್ಲಿನ ಪ್ರವಾಸಿ ತಾಣವೆಂದರೆ ನೆನಪಾಗುವುದು ಗೋಕರ್ಣ, ಮುರುಡೇಶ್ವರ, ದಾಂಡೇಲಿ, ಕಾರವಾರ ಮತ್ತು ಯಾನದಂತಹ ಪ್ರವಾಸಿ ತಾಣಗಳಷ್ಟೆ.
ಕಾಮಗಾರಿ ಏಕೆ ವಿಳಂಬವಾಗುತ್ತಿದೆ ಎಂದು ಕೇಳಿದರೆ ಪ್ರವಾಸೋದ್ಯಮ ಇಲಾಖೆ ಅರಣ್ಯ, ಕಂದಾಯ, ಬಂದರು ಮತ್ತು ಇತರ ಇಲಾಖೆಗಳಿಂದ ಅನುಮತಿ ಪಡೆಯಬೇಕು ಎನ್ನುತ್ತಾರೆ ಅಧಿಕಾರಿಯೊಬ್ಬರು. ಅರಣ್ಯ ಮತ್ತು ಇತರ ಇಲಾಖೆಗಳಿಂದ ಅನುಮತಿಗೆ ವಿಳಂಬವಾಗಿರುವುದರಿಂದ ಕೆಲವು ಕಾಮಗಾರಿ ಇನ್ನೂ ಕೈಗೆತ್ತಿಕೊಳ್ಳಲಾಗಿಲ್ಲ, ಇನ್ನು ಕೆಲವು ಯೋಜನೆಗಳಿಗೆ ಅಂದಾಜಿಗಿಂತ ಬಹಳ ಹೆಚ್ಚು ವೆಚ್ಚವಾಗುತ್ತಿದೆ ಎನ್ನುತ್ತಾರೆ.
ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ ಹೋಗುವವರಿಗೆ ಕಡಿಮೆ ವೆಚ್ಚದಲ್ಲಿ ಉಳಿದುಕೊಳ್ಳಲು ಯಾತ್ರಿ ನಿವಾಸ್ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಗೆ ಹಣ ಬಂದಿದೆ. ಇಲಾಖೆ ಕಟ್ಟಡ ನಿರ್ಮಾಣಕ್ಕೆ ಮುಂದಾದಾಗ ಸ್ಥಳೀಯ ಶಾಸಕರು ಬೇರೆ ಜಾಗ ತೋರಿಸಿದರು. ಅಲ್ಲಿ ಇಲಾಖೆಗೆ ಸ್ಥಳ ಮಂಜೂರಾಗಬೇಕಷ್ಟೆ. 6 ಕಟ್ಟಡಗಳ ನಿರ್ಮಾಣಕ್ಕೆ ಹಳಿಯಾಳ, ಹೊನ್ನಾವರ, ಸಿರ್ಸಿ, ಸಿದ್ದಾಪುರ ತಾಲ್ಲೂಕುಗಳಲ್ಲಿ ಸ್ಥಳವೇ ಸಿಗಲಿಲ್ಲ ಎನ್ನುತ್ತಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಕೆ, ಕೆಲವು ಇಲಾಖೆಗಳಿಂದ ಅನುಮತಿ ಸಿಗದಿರುವುದರಿಂದ ಕೆಲವು ಕಾಮಗಾರಿ ಬಾಕಿ ಉಳಿದಿದೆ. ಕಾರವಾರದ ರವೀಂದ್ರನಾಥ್ ಠಾಗೋರ್ ಬೀಚ್ ಹತ್ತಿರ ವಿಮಾನಯಾನ ಮ್ಯೂಸಿಯಂ ನಿರ್ಮಿಸಲು ಟುಪೊಲೆವ್ 142-ಎಂ ವಿಮಾನ ತರುವ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com