ಕೇದಾರನಾಥಕ್ಕೆ ಹೋಗ್ತಿದ್ದೀರಾ? ಹಾಗಾದ್ರೆ ದೇವಸ್ಥಾನದ ಹಿಂಭಾಗದಲ್ಲಿರುವ ಈ ಅದ್ಭುತ ಜಾಗಗಳನ್ನ ಮಿಸ್ ಮಾಡ್ಬೇಡಿ..!

ಹಲವರಿಗೆ ಕೇದಾರನಾಥ ಎಂದರೆ ಕೇವಲ ದೇವರ ದರ್ಶನ ಮತ್ತು ಹಿಮಾಚ್ಛಾದಿತ ಪರ್ವತಗಳ ಸೌಂದರ್ಯ ತಾಣವಾಗಿದೆ. ಆದರೆ ದೇವಾಲಯದಾಚೆಗೂ ಹರಡಿರುವ ಕೇದಾರ ಕಣಿವೆ ಅನೇಕ ಅಪರೂಪದ ಪ್ರಕೃತಿ, ಆಧ್ಯಾತ್ಮಿಕ ಮತ್ತು ಸಾಹಸಮಯ ತಾಣಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ.
Kedarnath temple
ಕೇದಾರನಾಥ ದೇವಸ್ಥಾನ
Updated on

ಹಿಮಾಲಯದ ಮಡಿಲಿನಲ್ಲಿ ನೆಲೆಸಿರುವ ಕೇದಾರನಾಥ ದೇವಸ್ಥಾನವು ಕೋಟ್ಯಂತರ ಭಕ್ತರ ನಂಬಿಕೆಯ ಕೇಂದ್ರ. ಪ್ರತಿ ವರ್ಷ ದೇವಸ್ಥಾನದ ಬಾಗಿಲು ತೆರೆಯುತ್ತಿದ್ದಂತೆಯೇ ಸಾವಿರಾರು ಯಾತ್ರಿಕರು ಹಿಮಪರ್ವತಗಳ ಮಧ್ಯೆ ಇರುವ ಈ ಪವಿತ್ರ ಕ್ಷೇತ್ರದತ್ತ ಭೇಟಿ ನೀಡುತ್ತಾರೆ.

ಹಲವರಿಗೆ ಕೇದಾರನಾಥ ಎಂದರೆ ಕೇವಲ ದೇವರ ದರ್ಶನ ಮತ್ತು ಹಿಮಾಚ್ಛಾದಿತ ಪರ್ವತಗಳ ಸೌಂದರ್ಯ ತಾಣವಾಗಿದೆ. ಆದರೆ ದೇವಾಲಯದಾಚೆಗೂ ಹರಡಿರುವ ಕೇದಾರ ಕಣಿವೆ ಅನೇಕ ಅಪರೂಪದ ಪ್ರಕೃತಿ, ಆಧ್ಯಾತ್ಮಿಕ ಮತ್ತು ಸಾಹಸಮಯ ತಾಣಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ.

ಕೇದಾರನಾಥ ಯಾತ್ರೆಯ ನಿಜವಾದ ಸೌಂದರ್ಯ ದೇವಾಲಯದ ದರ್ಶನದ ನಂತರ ಆರಂಭವಾಗುತ್ತದೆ ಎಂದರೂ ತಪ್ಪಾಗುವುದಿಲ್ಲ.

ಬೆಳಗಿನ ಮಂಜಿನ ನಡುವೆ ಕೇದಾರ ಶಿಖರಗಳ ಮೇಲೆ ಬೀಳುವ ಮೊದಲ ಸೂರ್ಯಕಿರಣ, ಮಂದಾಕಿನಿ ನದಿ ಹರಿಯುವ ಶಬ್ಧ, ಹಿಮನದಿಗಳ ತಂಪಾದ ಗಾಳಿ—ಇವೆಲ್ಲವೂ ಯಾತ್ರಿಕರನ್ನು ಬೇರೆ ಲೋಕಕ್ಕೇ ಕರೆದೊಯ್ಯುವ ಅನುಭವ ನೀಡುತ್ತವೆ.

Bhairav Nath Temple
ಭೈರವನಾಥ ದೇವಾಲಯ

ದೇವಾಲಯದಿಂದ ಸ್ವಲ್ಪ ಮೇಲಕ್ಕೆ ಏರಿದರೆ ಕಾಣಿಸುವ ಭೈರವನಾಥ ದೇವಾಲಯ ಕೇದಾರ ಕಣಿವೆಯ ಅತ್ಯಂತ ಮೌನ ಮತ್ತು ಆಧ್ಯಾತ್ಮಿಕ ತಾಣಗಳಲ್ಲಿ ಒಂದು.

ಭೈರವ ದೇವರು ಕೇದಾರನಾಥ ಕ್ಷೇತ್ರದ ರಕ್ಷಕ ಎಂಬ ನಂಬಿಕೆ ಇದೆ. ಚಳಿಗಾಲದಲ್ಲಿ ಮುಖ್ಯ ದೇವಸ್ಥಾನ ಮುಚ್ಚಿದ ಬಳಿಕವೂ ಈ ಕಣಿವೆಯನ್ನು ಭೈರವ ದೇವರೇ ಕಾಪಾಡುತ್ತಾರೆ ಎಂದು ಸ್ಥಳೀಯರು ನಂಬುತ್ತಾರೆ.

Kedarnath temple
ರಾಜ-ಮಹಾರಾಜರ ಕಾಲದ ವಿಲಾಸ, ರಾಜವೈಭವದ ಅನುಭವ ಪಡೆಯಬೇಕೇ? ಈ ಹೇರಿಟೇಜ್ ಹೋಟೆಲ್‌ಗಳಿಗೆ ಭೇಟಿ ನೀಡಿ...

ಕೆಳಗೆ ಬೆಳ್ಳಿಯಂತೆ ಹೊಳೆಯುವ ಮಂದಾಕಿನಿ ನದಿ, ದೂರದಲ್ಲಿ ಹಿಮಾವೃತ ಶಿಖರಗಳು, ಕಣಿವೆಯೊಳಗೆ ಹರಡಿರುವ ಮಂಜು—ಇವುಗಳು ಮನಸ್ಸಿಗೆ ಅದ್ಭುತ ಶಾಂತಿಯನ್ನು ನೀಡುತ್ತವೆ.

ಮುಖ್ಯ ದೇವಾಲಯದ ಹಿಂದಿನ ಭಾಗದಲ್ಲಿ ಆದಿ ಶಂಕರಾಚಾರ್ಯರ ಸಮಾಧಿ ಸ್ಥಳವಿದೆ. ಭಾರತದಲ್ಲಿ ಚಾರ್ ಧಾಮ ಯಾತ್ರಾ ಪರಂಪರೆಯನ್ನು ಬಲಪಡಿಸಿದ ಶಂಕರಾಚಾರ್ಯರು ಕೇವಲ 32ನೇ ವಯಸ್ಸಿನಲ್ಲಿ ಕೇದಾರನಾಥದಲ್ಲೇ ಸಮಾಧಿಯಾದರೆಂದು ನಂಬಲಾಗಿದೆ.

2013ರ ಭೀಕರ ಪ್ರವಾಹದಲ್ಲಿ ಈ ಭಾಗ ಹಾನಿಗೊಳಗಾದರೂ ನಂತರ ಅದನ್ನು ಸುಂದರವಾಗಿ ಮರುನಿರ್ಮಿಸಲಾಗಿದೆ. ಇಲ್ಲಿ ಸ್ಥಾಪಿಸಲಾದ ಶಂಕರಾಚಾರ್ಯರ ಧ್ಯಾನಮಗ್ನ ಪ್ರತಿಮೆ ಯಾತ್ರಿಕರಲ್ಲಿ ಆಧ್ಯಾತ್ಮಿಕ ಭಾವನೆ ಮೂಡಿಸುತ್ತದೆ.

Vasuki Tal
ವಾಸುಕಿ ತಾಲ್

ಸಾಹಸಪ್ರಿಯರ ಪಾಲಿಗೆ ವಾಸುಕಿ ತಾಲ್ ನಿಜಕ್ಕೂ ಹಿಮಾಲಯದ ಗುಪ್ತ ಸ್ವರ್ಗ. ಸಮುದ್ರಮಟ್ಟದಿಂದ 4,135 ಮೀಟರ್ ಎತ್ತರದಲ್ಲಿರುವ ಈ ಸರೋವರ ತಲುಪಲು ಕೇದಾರನಾಥದಿಂದ ಸುಮಾರು 8 ಕಿ.ಮೀ ಕಾಲ್ನಡಿಗೆ ಮೂಲಕ ಸಾಗಿ ಬರಬೇಕು. ದಾರಿಯುದ್ದಕ್ಕೂ ಹಿಮಪರ್ವತಗಳು, ಬಂಡೆಗಳು ಮತ್ತು ಆಮ್ಲಜನಕ ಕಡಿಮೆಯಾಗಿ ಉಸಿರಾಡುವುದು ಕಠಿಣ ಎನಿಸಿದರೂ ಗಮ್ಯ ಸ್ಥಾನ ತಲುಪಿದ ನಂತರ ಕಾಣುವ ದೃಶ್ಯ ಎಲ್ಲ ಕಷ್ಟವನ್ನೂ ಮರೆಸುತ್ತದೆ.

ಸ್ಫಟಿಕದಂತೆ ಪಾರದರ್ಶಕ ನೀರಿನಲ್ಲಿ ಪ್ರತಿಬಿಂಬಿಸುವ ಚೌಖಂಬಾ ಶಿಖರಗಳು ಪ್ರಕೃತಿಯ ಕಲಾಕೃತಿಯಂತಿರುತ್ತವೆ. ಈ ಪ್ರದೇಶದಲ್ಲಿ ಅಪರೂಪದ ಬ್ರಹ್ಮಕಮಲ ಹೂವುಗಳು ಅರಳಿರುವುದನ್ನೂ ನಾವು ನೋಡಬಹುದು.

ಕಡಿಮೆ ದೂರದ ಆದರೆ, ಅತ್ಯಂತ ಸುಂದರವಾದ ಟ್ರೆಕ್ ಬಯಸುವವರು ಗಾಂಧಿ ಸರೋವರಕ್ಕೆ ಭೇಟಿ ನೀಡಬಹುದು. ಇದನ್ನು ಚೋರಾಬರಿ ತಾಳ್ ಎಂದೂ ಕರೆಯಲಾಗುತ್ತದೆ.

Kedarnath temple
ಹಿಮದ ಮಡಿಲಲ್ಲಿ ವಿಷ್ಣುವಿನ ಸನ್ನಿಧಿ: ಭಕ್ತಿ-ಪ್ರಕೃತಿಯ ಅಪೂರ್ವ ಸಂಗಮ ಬದರಿನಾಥ; ಆಧ್ಯಾತ್ಮಿಕ ಯಾತ್ರೆಯ ಸಂಪೂರ್ಣ ಮಾಹಿತಿ ಇಲ್ಲಿದೆ...

ದೇವಾಲಯದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಈ ಸರೋವರ, ಚೋರಾಬರಿ ಹಿಮನದಿಯ ತುದಿಯಲ್ಲಿದೆ. ಬೆಳಗಿನ ಸಮಯದಲ್ಲಿ ಸರೋವರದ ನೀರಿನಲ್ಲಿ ಪ್ರತಿಬಿಂಬಿಸುವ ಕೇದಾರ ಶಿಖರಗಳ ದೃಶ್ಯ ಛಾಯಾಗ್ರಾಹಕರಿಗೆ ಕನಸಿನ ಲೋಕವೆಂದೆನಿಸುತ್ತದೆ. ಮಹಾತ್ಮ ಗಾಂಧೀಜಿಯವರ ಅಸ್ಥಿಯನ್ನು ಇಲ್ಲಿ ವಿಸರ್ಜನೆ ಮಾಡಲಾಗಿದೆ ಎಂಬ ನಂಬಿಕೆಯೂ ಇದೆ.

ಗೌರಿಕುಂಡದಿಂದ ಕೇದಾರನಾಥಕ್ಕೆ ಸಾಗುವ ಟ್ರೆಕ್ಕಿಂಗ್ ದಾರಿಯೇ ಪ್ರಕೃತಿಯ ಅದ್ಭುತ ಅನುಭವ. ಅನೇಕರು ಕೇವಲ ದೇವಾಲಯ ತಲುಪುವ ಆತುರದಲ್ಲಿ ಸಾಗಿಬಿಡುತ್ತಾರೆ. ಆದರೆ, ಜಂಗಲ್ ಚಟ್ಟಿ ಭಾಗದ ಸುತ್ತಮುತ್ತ ಇರುವ ಸಣ್ಣ ಹಿಮನದಿ ಜಲಪಾತಗಳು, ಮಂಜಿನಿಂದ ಮುಚ್ಚಿರುವ ಕಾಡು ದಾರಿಗಳು, ಪರ್ವತಗಳ ಮಧ್ಯೆ ಹರಿಯುವ ಚಿಕ್ಕ ಚಿಕ್ಕ ಜನರಿ ನೀರು ನಿಜಕ್ಕೂ ಹಿಮಾಲಯದ ಅಪರೂಪದ ಸೌಂದರ್ಯವನ್ನು ಪರಿಚಯಿಸುತ್ತವೆ.

ಈ ಪ್ರದೇಶ ಕೇದಾರನಾಥ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿದೆ. ಹಿಮಾಲಯನ್ ಮೊನಾಲ್ ಎಂಬ ಬಣ್ಣಬಣ್ಣದ ಪಕ್ಷಿ, ಕಸ್ತೂರಿ ಜಿಂಕೆ, ಹಿಮಾಲಯದ ಅಪರೂಪದ ಪ್ರಾಣಿ-ಪಕ್ಷಿಗಳನ್ನು ಇಲ್ಲಿ ಕಾಣುವ ಅವಕಾಶ ಸಿಗುತ್ತದೆ. ಬೇಸಿಗೆಯ ಸಮಯದಲ್ಲಿ ರೋಡೋಡೆಂಡ್ರಾನ್ ಕಾಡುಗಳು ಕೆಂಪು ಹೂಗಳಿಂದ ಕಂಗೊಳಿಸುವ ದೃಶ್ಯ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

Himalayan Monal
ಹಿಮಾಲಯನ್ ಮೊನಾಲ್

ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾದ ತಾಣವೆಂದರೆ ರುದ್ರ ಗುಹೆ. ದೇವಾಲಯದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಈ ಧ್ಯಾನ ಗುಹೆಗಳಲ್ಲಿ ವಾಸ್ತವ್ಯ ವ್ಯವಸ್ಥೆಯೂ ಇದೆ.

ವಿದ್ಯುತ್ ಮತ್ತು ಮೂಲಭೂತ ಸೌಲಭ್ಯಗಳಿದ್ದರೂ ಸಂಪೂರ್ಣ ಮೌನ ವಾತಾವರಣ ಹೊಂದಿರುವ ಈ ಗುಹೆಗಳು ಆಧ್ಯಾತ್ಮಿಕ ಧ್ಯಾನಕ್ಕೆ ಸೂಕ್ತವೆಂದು ಪರಿಗಣಿಸಲಾಗುತ್ತದೆ. ಹಿಮಾಲಯದ ಸನ್ಯಾಸಿಗಳ ಜೀವನಶೈಲಿಯನ್ನು ಅನುಭವಿಸಲು ಬಯಸುವವರಿಗೆ ಇದು ವಿಶಿಷ್ಟ ಅನುಭವ ನೀಡುತ್ತದೆ.

ಒಟ್ಟಾರೆ ಕೇದಾರನಾಥ ಕೇವಲ ಯಾತ್ರಾ ತಾಣವಲ್ಲ. ಅದು ಪ್ರಕೃತಿ, ಭಕ್ತಿ, ಸಾಹಸ ಮತ್ತು ಆಧ್ಯಾತ್ಮ ಒಂದೇ ಜಾಗದಲ್ಲಿ ಸಿಗುವ ಅಪರೂಪದ ಸಂಗಮ. ದೇವರ ದರ್ಶನದ ನಂತರವೂ ಕಣಿವೆಯಲ್ಲಿ ಒಂದು-ಎರಡು ದಿನ ಉಳಿದು ಈ ಅದ್ಭುತ ತಾಣಗಳನ್ನು ಅನ್ವೇಷಿಸಿದರೆ, ಹಿಮಾಲಯದ ಮತ್ತೊಂದು ಅದ್ಭುತ ಮುಖ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com