
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಪೂರ್ಣಗೊಳ್ಳುತ್ತಿದ್ದು, ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಯೋಜನೆಗಳನ್ನು ಘೋಷಣೆ ಮಾಡಿದ್ದರು. ಆದರೆ ಪ್ರಧಾನಿ ಮೋದಿ ಘೋಷಣೆ ಮಾಡಿದ ಹಲವು ಯೋಜನೆಗಳು ಈ ಹಿಂದಿನಿಂದಲೇ ಅಸ್ತಿತ್ವದಲ್ಲಿದ್ದು, ಈ ಹಿಂದಿನ ಸರ್ಕಾರಗಳು ಆ ಯೋಜನೆಗಳನ್ನು ಅದಾಗಲೇ ಜಾರಿಗೆ ತಂದಿದ್ದವು. ಈ ಯೋಜನೆಗಳಿಗೆ ಒಂದಷ್ಟು ತಿದ್ದುಪಡಿ ತಂದು ಅದಕ್ಕೆ ಮರುನಾಮಕರಣ ಮಾಡಿ ಪ್ರಧಾನಿ ಮೋದಿ ಸರ್ಕಾರ ಮತ್ತೆ ಆ ಯೋಜನೆಗಳನ್ನು ಜಾರಿಗೆ ತಂದಿದೆ.
ಹೀಗೆ ತಿದ್ದುಪಡಿಯೊಂದಿಗೆ ಮರು ಜಾರಿಗೆ ಬಂದಿರುವ ಒಂದಿಷ್ಟು ಯೋಜನೆಗಳ ಮಾಹಿತಿ ಇಲ್ಲಿದೆ.
ಸ್ವಚ್ಛ ಭಾರತ ಅಭಿಯಾನ
ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಪ್ರಮುಖ ಯೋಜನೆಗಳಲ್ಲಿ ಸ್ವಚ್ಛ ಭಾರತ ಅಭಿಯಾನ ಕೂಡ ಒಂದು. ಸ್ವಚ್ಛ ಭಾರತ ಅಭಿಯಾನದ ಪರಿಕಲ್ಪನೆ ಮೂಲತಃ ಮಾಜಿ ಪ್ರಧಾನಿ ವಾಜಪೇಯಿ ಅವರ ಕಲ್ಪನೆ. 199ರಲ್ಲಿ ವಾಜಪೇಯಿ ಅವರು ಜಾರಿಗೆ ತಂದಿದ್ದ ನಿರ್ಮಲ ಭಾರತ ಅಭಿಯಾನ ಯೋಜನೆಯೇ ಇದೀಗ ಮರು ನಾಮಕರಣವಾಗಿ ಸ್ವಚ್ಛ ಭಾರತ ಅಭಿಯಾನವಾಗಿದೆ.
ಗ್ರಾಹಕರ ಖಾತೆಗೆ ನೇರವಾಗಿ ಹಣದ ವರ್ಗಾವಣೆ (ಡಿಬಿಟಿ)
ಸರ್ಕಾರ ನೀಡುವ ವಿವಿಧ ಸಬ್ಸಿಡಿಗಳನ್ನು ನೇರ ಗ್ರಾಹಕರ ಬ್ಯಾಂಕ್ ಖಾತೆಗೆ ಹಾಕುವ ಯೋಜನೆ ಇದಾಗಿದ್ದು, ಇದರ ಮೂಲ ಪರಿಕಲ್ಪನೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರದ್ದು. 2013ರ ಜನವರಿ 1ರಂದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಈ ಯೋಜನೆಯನ್ನು ಜಾರಿಗೆ ತಂದಿದ್ದರು. ಈ ಹಣದ ವರ್ಗಾವಣೆಯು ವೃದ್ಧರ ಪಿಂಚಣಿ, ಅರೋಗ್ಯದ ವಿಮೆ, ಉದ್ಯೋಗ ಖಾತ್ರಿ ಯೋಜನೆ ನರೇಗಾದಂತಹ ಯೋಜನೆಗಳಿಗೆ ಅನುಕೂಲವಾಗುವಂತೆ ರೂಪಿಸಲಾಗಿತ್ತು.
ಆಧಾರ್-ವಿವಿಧೋದ್ದೇಶ ರಾಷ್ಟ್ರೀಯ ಗುರುತಿನ ಚೀಟಿ
ಆಧಾರ್ ಕಾರ್ಡ್ ಯೋಜನೆ ಯುಪಿಎ ಸರ್ಕಾರದ ಯೋಜನೆ ಎಂದು ತಿಳಿದಿದೆ ಯಾದರೂ ಇದರ ಮೂಲ ಪರಿಕಲ್ಪನೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ್ದು. ವಿವಿಧೋದ್ದೇಶ ಬಳಕೆಗಾಗಿ ರಾಷ್ಟ್ರೀಯ ಗುರುತಿನ ಚೀಟಿ ವಿತರಿಸುವ ಯೋಜನೆಯ ಪರಿಕಲ್ಪನೆಯಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಆಧಾರ್ ಯೋಜನೆಯನ್ನು ಜಾರಿಗೆ ತಂದಿತ್ತು.
ಎಲ್ಲರಿಗೂ ವಸತಿ ಯೋಜನೆ
ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳಲ್ಲಿ ಹೌಸಿಂಗ್ ಫಾರ್ ಆಲ್ ಯೋಜನೆ ಕೂಡ ಪ್ರಮುಖವಾಗಿದ್ದು, ಈ ಯೋಜನೆ ಮೂಲ ಪರಿಕಲ್ಪನೆ ಯುಪಿಎ-2 ಸರ್ಕಾರದ್ದು. 2013ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಇದನ್ನು ಜಾರಿಗೆ ತಂದಿತ್ತು. ದೇಶದಲ್ಲಿನ ಪ್ರತಿಯೊಬ್ಬ ಪ್ರಜೆಯೂ ತನ್ನದೇ ಆದ ಮನೆ ಹೊಂದುವುದು ಈ ಯೋಜನೆಯ ಉದ್ದೇಶವಾಗಿದೆ.
ನೀತಿ ಆಯೋಗ
ನೀತಿ ಆಯೋಗ ಪರಿಕಲ್ಪನೆ ಕೂಡ ಸುಮಾರು 64 ವರ್ಷಗಳಷ್ಟು ಹಳೆಯದಾದ ಯೋಜನಾ ಆಯೋಗದ ಮರು ನಾಮಕರಣವಾಗಿದೆ. ಯೋಜನಾ ಆಯೋಗದ ರಚನೆಯಲ್ಲಿ ಒಂದಷ್ಟು ಮಾರ್ಪಾಟು ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಜನಾ ಆಯೋಗವನ್ನು 2015ರಲ್ಲಿ ನೀತಿ ಆಯೋಗವಾಗಿ ಮರು ನಾಮಕರಣ ಮಾಡಿದರು.
ಕ್ಲೀನ್ ಗಂಗಾ ಯೋಜನೆ
ಪವಿತ್ರ ಗಂಗಾ ನದಿ ಸ್ವಚ್ಛತೆಗಾಗಿ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ಕ್ಲೀನ್ ಗಂಗಾ ಯೋಜನೆ ಕೂಡ ಈ ಹಿಂದಿನ ಸರ್ಕಾರದ ಯೋಜನೆಯಾಗಿದ್ದು, ಈ ಹಿಂದಿನ ಯುಪಿಎ ಸರ್ಕಾರ ರಾಜೀವ್ ಗಾಂಧಿ ಮಿಷನ್ ಫಾರ್ ಕ್ಲೀನ್ ಗಂಗಾ ಯೋಜನೆ ಅಡಿಯಲ್ಲಿ ಗಂಗಾ ನದಿ ಸ್ವಚ್ಛತಾ ಅಭಿಯಾನ ಆರಂಭಿಸಿತ್ತು.
ರಾಷ್ಟ್ರೀಯ ಗ್ರಾಮೀಣ ಯೋಜನೆ
ದೇಶದ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಜಾರಿಗೆ ತರಲಾಗಿರುವ ರಾಷ್ಟ್ರೀಯ ಗ್ರಾಮೀಣ ಯೋಜನೆ ಕೂಡ ಈ ಹಿಂದಿನ ಯೋಜನೆಯ ಮರು ನಾಮಕರಣವಾಗಿದ್ದು, ಯುಪಿಎ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ಜಾರಿಗೆ ತರಲಾಗಿತ್ತು.
ಜನಧನ ಯೋಜನೆ
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮುಖ ಯೋಜನೆಗಳಲ್ಲಿ ಜನಧನ ಯೋಜನೆ ಕೂಡ ಒಂದಾಗಿದ್ದು, ಇದರ ಮೂಲ ಪರಿಕಲ್ಪನೆ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ್ದು. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮನಮೋಹನ್ ಸಿಂಗ್ ಅವರು 100% Finance Inclusion ಎನ್ನುವ ಯೋಜನೆಯನ್ನು ರೂಪಿಸಿ ಪ್ರತಿಯೊಬ್ಬ ನಾಗರಿಕನೂ ಬ್ಯಾಂಕ್ ಖಾತೆ ಹೊಂದಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದ್ದರು.
ಕೌಶಲ್ಯ ಅಭಿವೃದ್ಧಿ ಯೋಜನೆ
ಎನ್ ಡಿಎ ಸರ್ಕಾರದ ಕೌಶಲ್ಯ ಅಭಿವೃದ್ಧಿ ಕಲ್ಪನೆ ಕೂಡ ಈ ಹಿಂದಿನ ಯುಪಿಎ ಸರ್ಕಾರದ ಸ್ಕಿಲ್ ಇಂಡಿಯಾ ಯೋಜನೆಯ ಮರು ನಾಮಕರಣವಾಗಿದೆ.
Advertisement