ಕಾಂಗ್ರೆಸ್-ಮೋದಿ (ಸಂಗ್ರಹ ಚಿತ್ರ)
ಕಾಂಗ್ರೆಸ್-ಮೋದಿ (ಸಂಗ್ರಹ ಚಿತ್ರ)

ಎರಡು ವರ್ಷಗಳ ಮೋದಿ ಸರ್ಕಾರ ಮತ್ತು ವಿಪಕ್ಷ ಕಾಂಗ್ರೆಸ್

2014 ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಶಿಸಿದ ದಿನದಿಂದಲೇ ಕಾಂಗ್ರೆಸ್ ಅಪಸ್ವರ ತೆಗೆದಿತ್ತು.
2014 ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಶಿಸಿದ ದಿನದಿಂದಲೇ ಕಾಂಗ್ರೆಸ್ ಅಪಸ್ವರ ತೆಗೆದಿತ್ತು. ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವುದಕ್ಕೆ ಭಾರತ ಅಧ್ಯಕ್ಷೀಯ ಚುನಾವಣೆ ನಡೆಸುತ್ತಿಲ್ಲ ಎಂದಿದ್ದ ಕಾಂಗ್ರೆಸ್, ಮೋದಿ ಪ್ರಧಾನಿಯಾದ ನಂತರವೂ ಅವರನ್ನು ಗುರಿಯಾಗಿರಿಸಿಕೊಂಡಿದೆ. 
ವಿಪಕ್ಷ ಸ್ಥಾನ ನೀಡದೇ ಇದ್ದದ್ದಕ್ಕೆ ಸರ್ಕಾರದ ವಿರುದ್ಧ ಅಸಮಾಧಾನ: ಲೋಕಸಭಾ ಚುನಾವಣೆಯಲ್ಲಿ 44 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಪಕ್ಷಕ್ಕೆ ವಿಪಕ್ಷ ಸ್ಥಾನ ಪಡೆಯುವುದಕ್ಕೆ ಅಗತ್ಯವಿದ್ದ ಸಂಸದರ ಬಲ ಇಲ್ಲದ ಕಾರಣ ಕೇಂದ್ರ ಸರ್ಕಾರ ಅಧಿಕೃತ ವಿಪಕ್ಷ ಸ್ಥಾನವನ್ನು ನಿರಾಕರಿಸಿತ್ತು. ಈ ಬಗ್ಗೆ ಸಂವಿಧಾನ, ಕಾನೂನಿನಲ್ಲಿರುವ ಅಂಶಗಳನ್ನು ಪರಿಶೀಲನೆ ನಡೆಸಲಾಗಿತ್ತಾದರೂ ಕಾಂಗ್ರೆಸ್ ಪಕ್ಷ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿತ್ತು. 
ವಿದೇಶ ಪ್ರವಾಸದ ಬಗ್ಗೆ ಟೀಕಾ ಪ್ರಹಾರ: ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಹೆಚ್ಚು ವಿದೇಶ ಪ್ರವಾಸ ಕೈಗೊಂಡಿದ್ದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್, ಬರಗಾಲ ಎದುರಾದರೂ ರೈತರ ಸಮಸ್ಯೆಗಳತ್ತ ಗಮನ ಹರಿಸದ ಮೋದಿ ಕೇವಲ ವಿದೇಶಪ್ರವಾಸದಲ್ಲೇ ಇರುತ್ತಾರೆ, ಇದು ಸೂಟು ಬೂಟಿನ ಸರ್ಕಾರ ಎಂಬ ಟೀಕೆಯೂ ಕೇಳಿಬಂತು. ಇಷ್ಟಕ್ಕೆ ನಿಲ್ಲಿಸದ ವಿಪಕ್ಷ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಹೋಗುವ ದೇಶಗಳಲ್ಲೆಲ್ಲಾ  ಹಿಂದಿನ ಸರ್ಕಾರದ ಹಗರಣಗಳನ್ನು ಉಲ್ಲೇಖಿಸಿ ಭಾರತದ ಮಾನ ಕಳೆಯುತ್ತಿದ್ದಾರೆ ಅಂತಲೂ ಆರೋಪಿಸಿತ್ತು. ಆದರೆ ಕಾಂಗ್ರೆಸ್ ನ ಟೀಕೆ ಹಾಗೂ ಆರೋಪಗಳಿಗೆ ಹೆಚ್ಚಿನ ಮಹತ್ವ ಸಿಗಲಿಲ್ಲವೆಂಬಂತೆ ಇಂದಿಗೂ ಮೋದಿ ಸರ್ಕಾರವನ್ನು ದೇಶದ ಶೇ.70 ರಷ್ಟು ಜನರು ಒಪ್ಪಿದ್ದಾರೆ.
ಅಸಹಿಷ್ಣುತೆ ಅಲೆ: ಮೋದಿ ಅವರ ಆಡಳಿತಾತ್ಮಕ ವಿಷಯದಲ್ಲಿನ ಲೋಪದೋಷಗಳನ್ನು ಹುಡುಕುವುದಕ್ಕಿಂತ, ಸಾಹಿತಿಗಳು ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು, ದಾದ್ರಿ ಹತ್ಯೆ ಪ್ರಕರಣ ಸೇರಿದಂತೆ ದೇಶದಲ್ಲಿ ನಡೆದ ಪ್ರಮುಖ ಅಹಿತಕರ ಘಟನೆಗಳನ್ನು ಉಲ್ಲೇಖಿಸಿ ಮೋದಿ ಆಡಳಿತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಬೀದಿಗಿಳಿದ ಘಟನೆಗಳು ಕಳೆದ 2  ವರ್ಷಗಳಲ್ಲಿ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರಲ್ಲಿ ಆತಂಕ ಉಂಟಾಗಿದೆ ಎಂಬ ಆರೋಪವೂ ವಿಪಕ್ಷಗಳಿಂದ ಕೇಳಿಬಂದಿತ್ತು. 
ಅಸಹಿಷ್ಣುತೆ ಅಲೆಯ ಹಿನ್ನೆಲೆಯಲ್ಲಿ ಸಂಸತ್ ಅಧಿವೇಶನ ಹಾಳು: ಅಸಹಿಷ್ಣುತೆ ವಿರುದ್ಧ ಚಳುವಳಿ ನಡೆದಿದ್ದ ಚಳುವಳಿ, ಪ್ರಶಸ್ತಿ ವಾಪಸ್ಸಾತಿಯನ್ನೇ ಸರ್ಕಾರದ ವಿರುದ್ಧದ ಪ್ರಮುಖ ಅಸ್ತ್ರವಾಗಿಟ್ಟುಕೊಂಡ ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು, ಸಂಸತ್ ಅಧಿವೇಶನದಲ್ಲಿ ಗದ್ದಲ ಉಂಟು ಮಾಡಿದ ಪರಿಣಾಮ ಸುಗಮ ಸಂಸತ್ ಕಲಾಪಗಳಿಗೆ ಅಡ್ಡಿ ಉಂಟಾಗಿ ಪ್ರಮುಖ ಮಸೂದೆಗಳ ಅಂಗೀಕಾರ ವಿಳಂಬವಾದರೆ ಮತ್ತೆ ಕೆಲವೊಂದಷ್ಟು ಮಸೂದೆಗಳಿಗೆ ಹಾಗೆಯೇ ಉಳಿದುಕೊಳ್ಳುವ ಸ್ಥಿತಿ ನಿರ್ಮಾಣವಾಯಿತು. 
ಪ್ರಮುಖ ಮಸೂದೆಗಳಿಗೆ ಕಾಂಗ್ರೆಸ್ ನ ವಿರೋಧ:  ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಳೆದ 2 ವರ್ಷಗಳಲ್ಲಿ ಮಹತ್ವದ ಮಸೂದೆಗಳನ್ನು ರೂಪಿಸಿತ್ತಾದರೂ ಅವುಗಳಿಗೆ ಸಂಸತ್ ನಲ್ಲಿ ಅಂಗೀಕಾರ ಸಿಗದೇ ಸುಗ್ರೀವಾಜ್ನೆ  ಮೂಲಕ ಜಾರಿಗೆ ತರಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.  ಈ ಪೈಕಿ ಭೂಸ್ವಾಧೀನ ತಿದ್ದು ಕಾಯ್ದೆ ಹಾಗೂ ಜಿಎಸ್ ಟಿ ಮಸೂದೆಗಳು ಬಹುಚರ್ಚಿತವಾದ ಮಸೂದೆಗಳಾಗಿವೆ. ಎರಡೂ ಮಸೂದೆಗಳು ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿತ್ತು. ಆದರೆ ಎರಡೂ ಮಸೂದೆಗಳಲ್ಲಿನ ಅಂಶಗಳನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿ ವಿರೋಧಿಸಿತ್ತು. ಕೇಂದ್ರ ಸರ್ಕಾರದ ಭೂಸ್ವಾಧೀನ ಮಸೂದೆ ತಿದ್ದುಪಡಿಯ ಕೆಲವೊಂದು ಅಂಶಗಳಿಂದ ರೈತರಿಗೆ ಅಪಾಯ ಎದುರಾಗಲಿದೆ, ಇದೊಂದು ರೈತವಿರೋಧಿ ಮಸೂದೆ ಎಂದು ಕಾಂಗ್ರೆಸ್ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಪರಿಣಾಮ ಭೂಸ್ವಾಧೀನಕ್ಕಾಗಿ ಮೋದಿ ಸರ್ಕಾರ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾಯಿತು. ಇನ್ನು ಜಿಎಸ್ ಟಿ ಮಸೂದೆ, ಜಿಎಸ್ ಟಿ ಮಸೂದೆ ಕಾಂಗ್ರೆಸ್ ಪಕ್ಷವೇ ಜಾರಿಗೆ ತಂದಿದ್ದಾರೂ ಅದರ ಅಂಶಗಳಿಗೂ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಒಂದೆರಡು ಅಂಶಳನ್ನು ಬದಲಾಯಿಸಬೇಕೆಂದು ಒತ್ತಾಯಿಸಿತ್ತು. ಆದರೆ ಜಿಎಸ್ ಟಿ ಮಸೂದೆ ಜಾರಿಗೆ ನಿರಂತರವಾಗಿ ಪ್ರಯತ್ನಿಸುತ್ತಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಕಾಂಗ್ರೆಸ್ ನ ಒತ್ತಾಯದಂತೆ ಜಿಎಸ್ ಟಿ ಮಸೂದೆಯಲ್ಲಿನ ಕೆಲವೊಂದು ಅಂಶಗಳನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಪಟ್ಟು ಬಿಡದ ಪರಿಣಾಮ ಜಿಎಸ್ ಟಿ ಇನ್ನೂ ಅಂಗೀಕಾರಗೊಳ್ಳದೇ ಹಾಗೆಯೇ ಉಳಿದಿದೆ. 

Related Stories

No stories found.

Advertisement

X
Kannada Prabha
www.kannadaprabha.com