ಕಲಾಸಿಪಾಳ್ಯದಲ್ಲಿ ಕುಳಿತು ಮನಸ್ಸು ಊಟಿಯಲ್ಲಿದ್ದರೆ ಹಾಡು ಬರೆಯಬಹುದು

ನನ್ನದಲ್ಲದ ಭಾವನೆಯನ್ನು ನಾನು ಗೀತೆಯ ಮೂಲಕ ವ್ಯಕ್ತ ಪಡಿಸುವಾಗ ನನ್ನ ಸೃಜನಶೀಲತೆಯ ಮಟ್ಟ ಹೆಚ್ಚುತ್ತದೆ. ನನ್ನದಲ್ಲದ ಭಾವನೆಯನ್ನು ನಾನು...
ಕವಿರಾಜ್
ಕವಿರಾಜ್
1. ಸಾಮಾನ್ಯವಾಗಿ  ಸಿನಿಮಾ ಗೀತೆ ಅಂದರೂ ಅದು ಕಾವ್ಯದ ಒಂದು ಭಾಗ.  ಇಲ್ಲಿ ನೀವು  ಸ್ವಯಂ ಸ್ಫೂರ್ತಿ ಬದಲು ಇನ್ನೊಬ್ಬರ ಅಭಿರುಚಿಗೆ ತಕ್ಕಂತೆ ಬರೆಯಬೇಕು. ಹೀಗಿರುವಾಗ ಇದು ಮೂಲಗುಣಕ್ಕೆ ಅನುಗುಣವಾಗಿ ಇರುತ್ತದೋ ಇಲ್ಲವೋ?
ಹೌದು  ಸಿನಿಮಾ ಸಾಹಿತ್ಯವೂ ಕಾವ್ಯದ ಮೂಲಗುಣಕ್ಕೆ ತಕ್ಕಂತೆ ಅನುಗುಣವಾಗಿರುತ್ತದೆ.  ಯಾರದ್ದೇ ಭಾವನೆಯನ್ನು ಬರೆದರೂ ಅಲ್ಲಿ ಕಲ್ಪನೆಗಳು ಬೇಕೇ ಬೇಕು.  ನಮ್ಮ ಕಲ್ಪನೆಯೇ ಅದು . ಬೇರೆ ಕಾವ್ಯಗಳನ್ನು ಬರೆಯುವಾಗ  ಓಪನ್ ಆಗಿರುತ್ತದೆ ಗ್ರೌಂಡ್.  ನಾವು ಎಲ್ಲಿ , ಏನು ಬೇಕಾದರೂ ಯೋಚನೆ ಮಾಡಬಹುದು.  ಆದರೆ ಇಲ್ಲಿ ಇದೇ ದಿಕ್ಕಿನಲ್ಲಿ ಬರೆಯಿರಿ ಎಂದು ಹೇಳಿರುತ್ತಾರೆ. ಅಷ್ಟೇ ವ್ಯತ್ಯಾಸ.  ಕಾವ್ಯದ ಮೂಲ ಗುಣಕ್ಕೆ ಇಲ್ಲಿ ಧಕ್ಕೆಯಾಗಲ್ಲ . ಏನೇ ಬರೆದರೂ ಕಾವ್ಯದ ಮೂಲಗುಣ ಇದ್ದೇ ಇರುತ್ತದೆ.  ಜನ ಸಾಮಾನ್ಯರಿಗೆ ಇದು ಬೇಗನೆ ತಲುಪುತ್ತದೆ.  ಏನೇನೋ ಬರೆದು ಯಾರಿಗೂ ಅರ್ಥವಾಗದ ಕಾವ್ಯ ಅಲ್ಲ ಇದು.  ದೊಡ್ಡ ದೊಡ್ಡ ಕಾವ್ಯಗಳನ್ನು ಓದಿರುವವರು ಕಡಿಮೆ. ತಿಳ್ಕೊಂಡಿರುವವರು ಕಡಿಮೆ. ಬದುಕಿನಲ್ಲಿ ಅಳವಡಿಸಿಕೊಂಡವರು ಕಡಿಮೆ. ಹೀಗಿರುವಾಗ ಸಿನಿಮಾ ಹಾಡುಗಳು ಜಾಸ್ತಿ ಜನರನ್ನು ತಲುಪುತ್ತವೆ.
2.ನೀವು ಸಾಹಿತ್ಯ ರಚನೆ ವೇಳೆ ವೃತ್ತಿಪರ ವ್ಯಕ್ತಿಯಾಗಿ ಯೋಚನೆ ಮಾಡ್ತೀರಾ ಅಥವ ಕವಿಯಾಗಿ?. ವೃತ್ತಿಪರ ವ್ಯಕ್ತಿಯಾಗಿ  ಯೋಚನೆ ಮಾಡುವಾಗ ಸಹಜತೆ ಕಂಡುಕೊಳ್ಳಲು ಸಾಧ್ಯವಾಗುತ್ತದೆಯೇ?
ವೃತ್ತಿಪರ ವ್ಯಕ್ತಿಯಾಗಿ ಯೋಚಿಸುತ್ತೇನೆ. ಸಿನಿಮಾಗೆ  ಎರಡೂ ಮಿಕ್ಸ್ ಆಗಬೇಕು.  ಸಿನಿಮಾದ ಅಭಿರುಚಿಗೆ , ಅವಶ್ಯಕತೆಗೆ ತಕ್ಕಂತೆ ಸಾಹಿತ್ಯ ರಚನೆ ಮಾಡಬೇಕು. ನನ್ನನ್ನು ವೃತ್ತಿಪರ ಕವಿ ಅಂದರೆ ತಪ್ಪೇನಿಲ್ಲ . ಈಗ ಜನರನ್ನು ಮೆಚ್ಚಿಸುವುದಕ್ಕೆ ಕೂತಿದ್ದೀವಿ ನಾವು. ಜನರನ್ನು ಮೆಚ್ಚಿಸಲೇ ಬೇಕು. ನನಗಾಗಿ ನಾನು ಕಾವ್ಯ ಬರೆದುಕೊಳ್ಳುವುದು , ಆತ್ಮ ತೃಪ್ತಿಗೆ ಬರೆದುಕೊಳ್ಳುವುದೇ ಬೇರೆ.  ಜನರನ್ನು ಖುಷಿ ಪಡಿಸಲು ಬರೆಯುವಾಗ ನಾವು ಅವರನ್ನು ಗಮನದಲ್ಲಿಟ್ಟುಕೊಂಡೇ ಬರೆಯಬೇಕು.  . ಸಿನಿಮಾಗೆ ಬಂದ ಮೇಲೆ ಇಲ್ಲೇನೂ ಮಡಿಯಿಲ್ಲ.  ನಾನು ಆ ಥರದ್ದು ಬರೆಯಲ್ಲ, ಈ ಥರದ್ದು ಬರೆಯಲ್ಲ ಅಂಥದ್ದೇನೂ ಅಲ್ಲ.  ಏನೇ ಬರೆದರೂ ಅದರಲ್ಲಿ ನನ್ನ ತನ ಇದ್ದೇ ಇರುತ್ತದೆ. ಬರೆಯುವವನು ನಾನೇ ಅಲ್ವಾ. ಸಿನಿಮಾದಲ್ಲಿ ಸನ್ನಿವೇಶಗಳನ್ನು ಹೇಳ್ತಾರೆ ನಿಜ, ಆದರೆ  ಕೊನೆಗೆ ಬರೆಯುವ ವ್ಯಕ್ತಿ ನಾನೇ ಆಗಿರುವುದರಿಂದ ಅಲ್ಲಿ ನನ್ನತನ ಇದ್ದೇ ಇರುತ್ತದೆ.
3. ನಿಮಗೆ ಪರಿಸ್ಥಿತಿ, ಸನ್ನಿವೇಶಗಳು  ಗೊತ್ತಿರುತ್ತದೆ. ಅದಕ್ಕೆ ತಕ್ಕಂತೆ ಗೀತ ರಚನೆ ಮಾಡಬೇಕು. ಹಾಗೆ ರಚನೆ ಮಾಡುವಾಗ ಹೊಸ ಹೊಳಹು ಕಂಡರೆ   ಅದನ್ನೇನು ಮಾಡುತ್ತೀರಿ. ಸನ್ನಿವೇಶಕ್ಕೆ ತಕ್ಕಂತೆ ಅದನ್ನು ಬ್ಲೆಂಡ್ ಮಾಡುತ್ತೀರೋ  ಹೇಗೆ?
ಹೊಳಹು ಸಿಕ್ಕಿದರೆ ಅದನ್ನು ಸನ್ನಿವೇಶಕ್ಕೆ ತಕ್ಕಂತೆ ಬ್ಲೆಂಡ್ ಮಾಡಲು ಟ್ರೈ ಮಾಡ್ತೀನಿ. ಕೆಲವೊಂದು ವೇಳೆ ಅದು ಸಾಧ್ಯವಾಗುವುದಿಲ್ಲ ಆಗ ಅದನ್ನು ಇನ್ನೆಲ್ಲಿಯೋ ಬಳಕೆ ಮಾಡಿಕೊಳ್ತೀವಿ.
4.ಸಿನಿಮಾ ಸಾಹಿತ್ಯಕ್ಕೆ ಚೌಕಟ್ಟು ಇದೆಯೋ ಇಲ್ಲವೋ., ಕಾವ್ಯದ ಗುಣಕ್ಕೆ ಸ್ವಲ್ಪ ಬದ್ದವಾಗಿರಬೇಕು ಎಂದು ಬಯಸುತ್ತೀರಾ?. ಕೆಲವೊಂದು ಹಾಡುಗಳು ಚೆನ್ನಾಗಿರುತ್ತವೆ. ಇನ್ನು ಕೆಲವು ಉಡಾಫೆಯಿಂದ ಕೂಡಿರುತ್ತವೆ. ಇದರ ಬಗ್ಗೆ ಏನಂತೀರಿ?
 ಕಾವ್ಯದ ಗುಣ ತುಂಬಾ ದೊಡ್ಡದು. ಆದರೆ ಅದಕ್ಕೆ ಬದ್ಧವಾಗಿರಬೇಕು ಎಂದೇನೂ ಅನಿಸಿಲ್ಲ. ಸಿನಿಮಾಗಿಂತ ಕಾವ್ಯ ಮೇಲು ಎಂದು ನನಗೆ ಅನಿಸಿಲ್ಲ. ಯಾಕೆಂದರೆ ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು ಎಂದು ಹೇಳುವ ಸಿನಿಮಾ ಹಾಡು  ಬಡಿದೆಬ್ಬಿಸಿದ  ಕನ್ನಡಪ್ರೇಮವನ್ನು ಯಾವ ದೊಡ್ಡ  ದೊಡ್ಡ ಕವಿಗಳ  ಹಾಡುಗಳೂ ಬಡಿದೆಬ್ಬಿಸಿರಲಿಲ್ಲ. ಅಮ್ಮನ ಬಗ್ಗೆಯಾಗಲೀ ಇನ್ಯಾವುದೇ ವಿಷಯದ ಬಗ್ಗೆಯಾಗಗಲಿ ಯಾವ ದೊಡ್ಡ ಕವಿಗಳ ಕವನ, ಯಾವ ದೊಡ್ಡ ಗ್ರಂಥಗಳೂ ಮಾಡದೇ ಇರುವ ಸಾಧನೆಯನ್ನು ಸಿನಿಮಾ ಹಾಡುಗಳು ಮಾಡಿವೆ. ಹಾಗಾಗಿ ಕಾವ್ಯಕ್ಕೆ ಬದ್ಧವಾಗಿಯೇ ಇರಬೇಕು,  ಕಾವ್ಯವೇ ಶ್ರೇಷ್ಠ ಎಂಬ ಅನಿಸಿಕೆ ನನಗಿಲ್ಲ. 
ನೀವು ಹೇಳಿದ್ರಿ, ಕೆಲವು ಹಾಡುಗಳು ಚೆನ್ನಾಗಿರುತ್ತವೆ. ಇನ್ನು ಕೆಲವು ಉಡಾಫೆಯಿಂದ ಕೂಡಿರುತ್ತದೆ ಎಂದು.  ಆ ಉಡಾಫೆ ಸಾಹಿತ್ಯದಲ್ಲಿಯೂ ಇದೆ. ಕಾವ್ಯ ಬರೆಯುವ ಎಲ್ಲರೂ ಚೆನ್ನಾಗಿ ಬರೆಯಲ್ಲ. . ಕೆಲವರು ಏನೇನೋ  ಬರೆದು ಬಿಡ್ತಾರೆ. ಪೆನ್ನು , ಪೇಪರ್ ಸಿಕ್ಕಿದರೆ ನಾನು ಏನು ಬೇಕಾದರೂ ಬರೆಯ ಬಲ್ಲೆ  ಎಂದು ಬರೆದವರೂ ಇದ್ದಾರೆ.  ಚೆನ್ನಾಗಿ ಬರೆಯುವವರೂ ಇದ್ದಾರೆ.   ಹಾಗಾಗಿ ಕಾವ್ಯಕ್ಕೆ ಅಡಿಯಾಳು ಆಗಿರಬೇಕು, ಕಾವ್ಯಕ್ಕೆ ಬದ್ಧರಾಗಿರಬೇಕು , ಕಾವ್ಯ ದೊಡ್ಡದು ಎಂಬ ಯಾವ ಹಿರಿಮೆಯನ್ನೂ ನಾನು ಕೊಡಲ್ಲ. ಸಿನಿಮಾ ಸಾಹಿತ್ಯ ಅಷ್ಟು ಸುಲಭದ ಕೆಲಸ ಅಲ್ಲ. ಎಲ್ಲರಿಗೂ ಬರೆಯಲು ಆಗುವುದೂ ಇಲ್ಲ.  ದೊಡ್ಡ ದೊಡ್ಡ ವ್ಯಕ್ತಿಗಳು ಟ್ರೈ ಮಾಡಿ ಕೈ ಸುಟ್ಟುಕೊಂಡವರೂ ಇದ್ದಾರೆ.ಸಿನಿಮಾ ಸಾಹಿತ್ಯ ಎಂದರೆ ಅದೂ ಒಂದು ಸಾಹಿತ್ಯದ ಪ್ರಕಾರವೇ.  ಅದು ಅದರ ಮಟ್ಟಿಗೆ ಶ್ರೇಷ್ಠ.  ಅದು ಯಾವ ಹಂತದಲ್ಲಿಯೂ ಕೀಳು ಅಲ್ಲ.
5. ಸಿನಿಮಾದಲ್ಲಿ ಬರುವ ಪ್ರೀತಿಯ ಅನುಭವವನ್ನು ಹೇಗೆ ಸೃಜನಶೀಲತೆ ಜತೆ ಹೊಂದಿಸಿಕೊಳ್ಳುತ್ತೀರಿ. ನೀವು ಪ್ರತಿ ದಿನವೂ ಹಾಡು ಬರೆಯುತ್ತಾ ಇರುತ್ತೀರಿ. ಒಂದೊಂದು ಹಾಡು ಒಂದೊಂದು ಸನ್ನಿವೇಶಕ್ಕೆ ತಕ್ಕಂತೆ ಇರುತ್ತದೆ. ಹೀಗೆ ಆಗಾಗ ಆಗುವ ಸನ್ನಿವೇಶಗಳ ಬದಲಾವಣೆಗಳ ನಡುವೆ ಏಕಾಗ್ರತೆ ಸಾಧಿಸುವುದು ಹೇಗೆ?
 ನೀವು ಅಭ್ಯಾ ಸ ಮಾಡುತ್ತಾ ಹೋದಂತೆ ಏಕಾಗ್ರತೆ ಸಾಧಿಸಬಹುದು. ಒಂದು ಹಾಡು ಬರೆಯುವಾಗ ಧ್ಯಾನಸ್ಥ ಸ್ಥಿತಿಗೆ ತಲುಪಬೇಕು. ನಿಮಗೆ ಹೊರಗಿನ  ಪ್ರಪಂಚದ ಅರಿವು ಇರಬಾರದು.  ಆ ಹೊತ್ತಿಗೆ ಹೊರಗಿನ ಸದ್ದು ಕೇಳಿಸಬಾರದು,  ಹೊರಗಿನ ಹೊಯ್ದಾಟಗಳೂ ಕೇಳಿಸಬಾರದು.  ನಿಮ್ಮೊಳಗೆ ನೀವೇ ಶಾಂತ ಪ್ರಪಂಚವೊಂದನ್ನು  ಸೃಷ್ಟಿ ಮಾಡಬೇಕು. ಅದು ಮುಖ್ಯ. ಹೀಗಿದ್ದರೆ ನೀವು ಯಾವ ಮೂಡ್ ಗೆ ಬೇಕಾದರೂ ಹೋಗಬಹುದು.  ನಿಮ್ಮ ಮನಸ್ಸನ್ನು  ಹತೋಟಿಗೆ ತಂದು ಬಿಟ್ಟರೆ ಮುಗೀತು. ನೋಡಿ ನೀವು ವೃಂದಾವನದಲ್ಲೋ, ಊಟಿಯಲ್ಲೋ ಕುಳಿತಿದ್ದು, ಮನಸ್ಸು ಕಲಾಸಿಪಾಳ್ಯ ಆಗಿದ್ದರೆ ಹಾಡು ಬರೆಯಲು ಸಾಧ್ಯವಿಲ್ಲ. ಅದೇ ರೀತಿ ಕಲಾಸಿಪಾಳ್ಯದಲ್ಲಿ ಕುಳಿತು ಮನಸ್ಸು ಊಟಿಯಲ್ಲಿದ್ದರೆ ಹಾಡು ಬರೆಯಬಹುದು. ಇಂಥಾ  ಸಾಧನೆಯನ್ನು ನಾವು ದಕ್ಕಿಸಿಕೊಳ್ಳಬೇಕು. ನಮ್ಮ ಮನಸ್ಸನ್ನು ತಹಬದಿಗೆ ತಂದರೆ ಅದು ಹೇಳಿದಂತೆ ಕೇಳುತ್ತದೆ. ನನ್ನದಲ್ಲದ ಭಾವನೆಯನ್ನು  ನಾನು ಗೀತೆಯ ಮೂಲಕ  ವ್ಯಕ್ತ ಪಡಿಸುವಾಗ ನನ್ನ ಸೃಜನಶೀಲತೆಯ ಮಟ್ಟ ಹೆಚ್ಚುತ್ತದೆ. ನನ್ನದಲ್ಲದ ಭಾವನೆಯನ್ನು ನಾನು ಗಟ್ಟಿಯಾಗಿ ಇನ್ನೊಬ್ಬರಿಗೆ ತಲುಪಿಸಬೇಕು. ನನಗನಿಸಿದಂತೆ ನಾನು ಬರೆಯುತ್ತಾ ಹೋಗುತ್ತೀನಿ. ಹೀಗೆ ಬರೆಯುವಾಗ  ಕಾವ್ಯಗಳಿಗೆ ಚೌಕಟ್ಟು ಇರಲ್ಲ, ಆದರೆ ನಮಗೆ ಬಹಳಷ್ಟು ಚೌಕಟ್ಟುಗಳಿರುತ್ತವೆ .  ನೋಟ್ಸ್, ಸಂದರ್ಭ, ಲಯ ಹೀಗೆ ಸಾಕಷ್ಟು ಚೌಕಟ್ಟುಗಳಿವೆ.  ಈ ಚೌಕಟ್ಟುಗಳಲ್ಲಿಯೂ ನಾವು ಸೃಜನಶೀಲತೆಯನ್ನು ತೋರಿಸೇಕು.  ಹಾಗಾಗಿ ಇದು ತುಂಬಾ ಸವಾಲಿನ ವಿಷಯ. ಹೊರಗಡೆಯವರಿಗೆ ತುಂಬಾ ಸುಲಭ ಅನಿಸಿದರೂ, ಅದಷ್ಟು ಸುಲಭವಲ್ಲ. ಇನ್ಯಾರೋ ಬರೆದ ಹಾಡುಗಳನ್ನು  ಕೇಳಿ ಸಿನಿಮಾ ಸಾಹಿತ್ಯ ಕೆಟ್ಟದು ಅನ್ನುವವರಿದ್ದಾರೆ. ಎಲ್ಲ ಕಡೆಯೂ ಜೊಳ್ಳುಗಳು ಇದ್ದೇ ಇವೆ. ಸಾಹಿತ್ಯದಲ್ಲಿ, ಕಾವ್ಯದಲ್ಲಿ ಜೊಳ್ಳುಗಳಿಲ್ಲವಾ ? ಹಾಗೆಯೇ ಇಲ್ಲಿ ಗಟ್ಟಿ ಕಾಳು ಮತ್ತು ಜೊಳ್ಳು ಎರಡೂ ಇದೆ. ಆದರೆ ಉದಾಹರಣೆಗೆ ತೆಗೆದುಕೊಳ್ಳುವಾಗ ಜೊಳ್ಳುಗಳನ್ನೇ ಹೈಲೈಟ್ ಮಾಡಲಾಗುತ್ತದೆ. ಯಾಕೆ ಉದಾಹರಣೆ ಕೊಡುವಾಗ ಒಳ್ಳೆಯ ಹಾಡುಗಳನ್ನು ಉದಾಹರಣೆ ಕೊಡಬಾರದು? . ಸಿನಿಮಾ ಸಾಹಿತ್ಯದಲ್ಲಿ ಕನ್ನಡಾಭಿಮಾನವನ್ನು ಬಡಿದೆಬ್ಬಿಸಿದ ಹಾಡುಗಳಿವೆ, ಜೀವನ ಪ್ರೀತಿ ಹುಟ್ಟಿಸಿದ ಹಾಡುಗಳು, ಮನುಷ್ಯನ ಬದುಕನ್ನೇ ಬದಲಾಯಿಸಿದ ಹಾಡುಗಳಿವೆ. ಸಿನಿಮಾ ಸಾಹಿತ್ಯದ ಬಗ್ಗೆ ಮಾತನಾಡುವಾಗ ಇಂಥಾ ಹಾಡುಗಳನ್ನೂ ಪರಿಗಣಿಸಿ.  ಎಲ್ಲೋ ಒಂದು ಕಡೆ  ಸನ್ನಿವೇಶಕ್ಕೆ ತಕ್ಕಂತೆ ಹಳೇ ಪಾತ್ರೆ, ಕಬ್ಬಿಣ, ಎಕ್ಕಡ ಪದ ಬಳಸಿದ ಹಾಡುಗಳು ಬಂತು ಎಂದಾಗ ಸಿನಿಮಾ ಸಾಹಿತ್ಯವನ್ನೇ ಪ್ರಶ್ನಿಸಲಾಗುತ್ತದೆ. ಹಳೇ ಪಾತ್ರೆ, ಕಬ್ಬಿಣ , ಎಕ್ಕಡ ಎಲ್ಲವೂ ನಾವು ಆಡುವ ಪದಗಳೇ. ಅದ್ಯಾಕೆ ಸಿನಿಮಾ ಸಾಹಿತ್ಯದಲ್ಲಿ ಬರಬಾರದು? ಆ ಪದಗಳನ್ನು ಯಾಕೆ ಅಸ್ಪಶೃತೆ
ಗೊಳಪಡಿಸಬೇಕು.  ಸಿನಿಮಾ ಸಾಹಿತ್ಯದಲ್ಲಿ ಆ ಪದ ಬೇಡ, ಇದು ಬೇಡ ಎಂದು ವಿಂಗಡಣೆ ಮಾಡುವುದು ಬೇಡ.  ಇದನ್ನೇ ಸಾಹಿತ್ಯಕ್ಕೆ ಬಳಸಬೇಕು, ಇದನ್ನೇ ಆಡು ಭಾಷೆಗೆ ಬಳಸಬೇಕು ಎಂಬ ನಿಯಮಗಳು ಬೇಡ. ಹೊಸತನವನ್ನು  ಸ್ವೀಕರಿಸುವ ಮನಸ್ಥಿತಿ ಜನರಿಗೆ ಇರಬೇಕು. ಪದಗಳಿಗೂ ಅಸ್ಪಶೃತೆಯನ್ನು ಹುಟ್ಟು ಹಾಕಬೇಡಿ .ದಯವಿಟ್ಟು..ಅಷ್ಟೇ ನಾನು ಹೇಳುವುದು.
- ರಶ್ಮಿ ಕಾಸರಗೋಡು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com