ಅಮ್ಮನಿಗೆ ತಿಳಿಯದ 'ಲವ್ ಮ್ಯಾರೇಜ್'

ವರ್ಷಕೊಮ್ಮೆ ನಿನಗೆ ಅಧಿಕೃತವಾಗಿ ಐ ಲವ್ ಯೂ ಹೇಳಿದರೂ, ನನ್ನ ಜೀವನದ ಪ್ರತಿ ದಿನ ಪ್ರತಿ ಕ್ಷಣ ನಾನು ನನಗೇ ತಿಳಿಯದೇ ನಿನಗೆ ಐ ಲವ್ ಯೂ ಹೇಳುತ್ತಿರುತ್ತೇನೆ...
ಅಮ್ಮನಿಗೆ ತಿಳಿಯದ 'ಲವ್ ಮ್ಯಾರೇಜ್'

ಹೆಸರು ಬೇಡ
ನಾನು ಮೂಲತಃ ಶಿವಮೊಗ್ಗ ಜಿಲ್ಲೆಯವನು. ನಾನು ಮತ್ತು ನನ್ನಾಕೆ ಪ್ರೀತಿಸಿ ಮದುವೆಯಾದವರು. ನನ್ನ ಮಟ್ಟಿಗೆ ಹೇಳುವುದಾದರೇ ಬೇರೆಯವರ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಪ್ರೀತಿಸಿ ಮದುವೆಯಾದವರ ಪೈಕಿ ನಾನೇ ಅತ್ಯಂತ್ಯ ಅದೃಷ್ಟ ಶಾಲಿ ಎಂದೆನಿಸುತ್ತದೆ. ಮದುವೆಯಾದ ಬಳಿಕ ನನ್ನಾಕೆಯೊಂದಿಗೆ ಅತ್ಯಂತ ಸಂತೋಷಕರ ಜೀವನ ನಡೆಸುತ್ತಿದ್ದೇನೆ.

ಇನ್ನು ನಮ್ಮಿಬ್ಬರ ಪ್ರೀತಿ ಮೊಳಕೆಯೊಡೆದಿದ್ದು, ಕಾಲೇಜಿನ ಸಮಯದಲ್ಲಿ. ನಾವು ಇಬ್ಬರೂ ಒಂದೇ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದೆವು. ಆಕೆ ನನ್ನ ಜೂನಿಯರ್ ಆಗಿದ್ದಳು. ಪತ್ರಿಕೋದ್ಯಮ ವಿಷಯದ ವಿಚಾರವಾಗಿ ಚರ್ಚಿಸಲು ಇಬ್ಬರೂ ಪರಸ್ಪರ ಆಗಾಗ ಭೇಟಿಯಾಗುತ್ತಿದ್ದೆವು. ಆರಂಭದಲ್ಲಿ ನಾವು ಒಳ್ಳೆಯ ಸ್ನೇಹಿತರಾಗಿದ್ದೆವು. ಬಳಿಕ ನಮ್ಮ ನಡುವಿನ ಸ್ನೇಹ ಗಾಢವಾಗಿ ಅದು ಯಾವಾಗ ಪ್ರೀತಿಯಾಗಿ ಮಾರ್ಪಟ್ಟಿತೋ ನಮಗೇ ತಿಳಿಯಲಿಲ್ಲ. ಆದರೆ ಒಮ್ಮೆ ಅವರಿಗೆ ಈ ವಿಚಾರ ಹೇಳಲೇಬೇಕು ಎಂದು ನಿರ್ಧರಿಸಿ ಅಂತಿಮವಾಗಿ 5 ನೇಸೆಮಿಸ್ಟರ್ ವೇಳೆಯಲ್ಲಿ ಫೆಬ್ರವರಿ 14 ಪ್ರೇಮಿಗಳ ದಿನದಂದು ಆಕೆಯ ಮುಂದೆ ನನ್ನ ಪ್ರೀತಿಯ ನಿವೇದನೆ ಮಾಡಿದೆ. ಆಕೆ ಕೊಂಚ ಸತಾಯಿಸಿ ಕೊನೆಗೆ ಫೆಬ್ರವರಿ 28ರಂದು ಓಕೆ ಹೇಳಿದಳು.

ಗೆಳೆಯರಿಗೆ ತಿಳಿದರೆ ಮನೆಯವರಿಗೆ ತಿಳಿಯುತ್ತದೆ ಎಂಬ ಅಂಜಿಕೆಯಿಂದ ನನ್ನ ಸ್ನೇಹಿತರಿಗೆ ಈ ವಿಚಾರ ತಿಳಿಸಲೇ ಇಲ್ಲ. ಕಾಲೇಜಿನಲ್ಲಿ ಪದೇ ಪದೇ ಭೇಟಿ ಮಾಡುತ್ತಿದ್ದರೆ ಅನುಮಾನ ಮೂಡುತ್ತದೆ ಎಂಬ ಭಾವನೆಯಿಂದ ಕಾಲೇಜಿನಲ್ಲಿಯೂ ಹೆಚ್ಚಾಗಿ ನಾವು ಒಟ್ಟಾಗಿ ಬೆರೆಯುತ್ತಿರಲಿಲ್ಲ. ಕನಿಷ್ಠ ಪಕ್ಷ ಫೋನ್ನಲ್ಲಿಯೂ ನಾವು ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಇದನ್ನು ಹೊರತು ಪಡಿಸಿ ಕಾಲೇಜು ತರಗತಿಗಳು ಬಿಟ್ಟ ಬಳಿಕ ಕೆಲ ಸ್ನೇಹಿತರೊಂದಿಗೆ ಬಸ್ ಸ್ಟಾಪ್ವರೆಗೂ ಹೋಗಿ ಅವರನ್ನು ಬಸ್ ಹತ್ತಿಸುತ್ತಿದ್ದೆ. ಆದರೆ ಈ ವಿಚಾರಗಳಾವುದು ಸದಾಕಾಲ ನನ್ನೊಂದಿಗಿರುತ್ತಿದ್ದ ಸ್ನೇಹಿತರಿಗೆ ತಿಳಿಯುತ್ತಿರಲಿಲ್ಲ.

ನಾನು ಕಾರಣಾಂತರಗಳಿಂದಾಗಿ ನನ್ನ ಹುಟ್ಟೂರಾದ ಶಿವಮೊಗ್ಗಗೆ ಹೋಗಬೇಕಾಯಿತು. ಆಗ ಪರಸ್ಪರ ಇಬ್ಬರೂ ಮೊಬೈಲ್ನಲ್ಲಿ ಮಾತನಾಡುತ್ತಿದ್ದೆವು. ಆದರೆ ಈ ವೇಳೆ ಅವರ ಪೋಷಕರಿಗೆ ನಮ್ಮ ವಿಚಾರ ತಿಳಿಯಿತು. ನನ್ನಾಕೆಯ ಮೊಬೈಲ್ ಫೋನ್ ಕಸಿದುಕೊಂಡಿದ್ದರು. ಕಾಲೇಜಿಗೆ ಕಳುಹಿಸಲು ಕೂಡ ನಿರ್ಬಂಧ ಹೇರಿದರು. ಆದರೆ ಪರೀಕ್ಷಾ ಸಮಯವಾದ್ದರಿಂದ ಪರೀಕ್ಷೆ ಬರೆಯಲೇಬೇಕು ಎಂದು ಹಠ ಹಿಡಿದು ನನ್ನಾಕೆ ಕಾಲೇಜಿಗೆ ಬಂದು ತನ್ನ ಸ್ನೇಹಿತೆಯ ಮೊಬೈಲ್ ನಿಂದ ನನಗೆ ಕರೆ ಮಾಡುತ್ತಿದ್ದಳು. ಅದೇ ಸಮಯದಲ್ಲಿ 6ನೇ ಸೆಮಿಸ್ಟರ್ನ ಪರೀಕ್ಷಾ ಸಮಯದಲ್ಲಿ ಆಕೆಯ ಪೋಷಕರು ಒತ್ತಾಯಪೂರ್ವಕವಾಗಿ ನನ್ನಾಕೆಗೆ ಬೇರೆಯವರೊಂದಿಗೆ ಮದುವೆ ಮಾಡಲು ಯತ್ನಿಸಿದರು. ಮದುವೆಯಾಗಲು ಇಷ್ಟವಿಲ್ಲದ ಆಕೆ ಧೈರ್ಯ ಮಾಡಿ ಅಂತಿಮವಾಗಿ ಒಂದು ದಿನ ಮನೆ ಬಿಟ್ಟು ನನ್ನ ಬಳಿ ಬಂದಳು.

ಆಕೆಯ ಪೊಷಕರು ನನ್ನ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಆದರೆ ಅಂತಿಮವಾಗಿ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ನಾನು ಮತ್ತು ನನ್ನಾಕೆ ನಮ್ಮ ಕೆಲ ಗೆಳೆಯರ ಸಮ್ಮುಖದಲ್ಲಿ ಮದುವೆಯಾದೆವು. ಆದರೆ ನಾವು ಮದುವೆಯಾಗಿ ವರ್ಷಗಳೇ ಕಳೆದರೂ ನಮ್ಮ ಅಮ್ಮನಿಗೆ ನಾವು ಮದುವೆಯಾದ ವಿಚಾರವೇ ತಿಳಿದಿಲ್ಲ. ನನ್ನ ಮದುವೆ ವಿಚಾರ ತಿಳಿದರೆ ಆಕೆಗೆ ಆಘಾತವಾಗಬಹುದು ಎಂಬ ಏಕೈಕ ಕಾರಣದಿಂದಾಗಿ ನಾನು ಆ ವಿಚಾರ ತಿಳಿಸಿಲ್ಲ. ಆದರೆ ನಮ್ಮ ಕುಟುಂಬದ ಇತರೆ ಸದಸ್ಯರಿಗೆ ತಿಳಿದಿದೆ. ಇದೊಂದು ಕೊರಗನ್ನು ಹೊರತು ಪಡಿಸಿದರೆ ವಿಶ್ವದ ಎಲ್ಲ ಪ್ರೇಮಿಗಳಿಗಿಂತ ನಾವು ಬಹಳ ಸಂತೋಷವಾಗಿದ್ದೇವೆ.

ಈ ಸುಸಮಯದಲ್ಲಿ ನನ್ನಾಕೆಗೆ ಒಂದು ಮಾತು ಹೇಳಬೇಕು...
ನೋಡು ನೋಡುತ್ತಿದ್ದಂತೆಯೇ ನಮ್ಮ ಪ್ರೀತಿಗೆ ಮತ್ತೊಂದು ವಾರ್ಷಿಕೋತ್ಸವ... ವರ್ಷಕೊಮ್ಮೆ ನಿನಗೆ ನಾನು ಅಧಿಕೃತವಾಗಿ ಐ ಲವ್ ಯೂ ಹೇಳಿದರೂ, ನನ್ನ ಜೀವನದ ಪ್ರತಿ ದಿನ ಪ್ರತಿ ಕ್ಷಣ ನಾನು ನನಗೇ ತಿಳಿಯದೇ ನಿನಗೆ ಐ ಲವ್ ಯೂ ಹೇಳುತ್ತಿರುತ್ತೇನೆ...

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com