ಹಬ್ಬಕ್ಕೆಂದು ಮನೆಗೆ ಹೋದಾಗ ಕಾಲ್ಗೆಜ್ಜೆ ಶಬ್ದ ಕೇಳಿತು

ತಾಂಬೂಲ ತೆಗೆದುಕೊಂಡು ಆಕೆ ಹೊರಬಂದು ಟೇಬಲ್ ಮೇಲಿಟ್ಟಳು. ಆಕೆಯ ಕಾಲ್ಗೆಜ್ಜೆ ಶಬ್ದ ಕೇಳಿದಾಗ ಮನದ ಮೂಲೆಯಲ್ಲಿ ಮೊಹಬ್ಬತ್...
ವಿಜಯ್ ಕುಮಾರ್ ಮತ್ತು ಅನಿತ
ವಿಜಯ್ ಕುಮಾರ್ ಮತ್ತು ಅನಿತ

ನೆಂಟರ ಮನೆಯಲ್ಲಿ ಹಬ್ಬ.. ಆಮಂತ್ರಣದ ಮೇರೆಗೆ ಅವರ ಮನೆಗೆ ಊಟಕ್ಕೆ ಹೋಗಿದ್ದೆ. ಊಟದ ಬಳಿಕ ತಾಂಬೂಲ ನೀಡುವಂತೆ ಮಾವ ಹೇಳಿದರು. ತಾಂಬೂಲ ತೆಗೆದುಕೊಂಡು ಆಕೆ ಹೊರಬಂದು ಟೇಬಲ್ ಮೇಲಿಟ್ಟಳು. ನಾನಾಗ ಆಕೆಯ ಮುಖ ಕೂಡ ನೋಡಿರಲಿಲ್ಲ. ಆದರೆ ತಾಂಬೂಲವನ್ನು ಟೇಬಲ್ ಮೇಲಿಟ್ಟಾಗ ಆಕೆಯ ಕಾಲ್ಗೆಜ್ಜೆ ಶಬ್ದ ಕೇಳಿ ನಾನು ಕಾಲುಗಳನ್ನು ನೋಡಿದೆ. ಆಗಲೇ ಮನದ ಮೂಲೆಯಲ್ಲಿ ಮೊಹಬ್ಬತ್ ಚಿನ್ಹೆಗಳು ಗೋಚರಿಸಿತು.

ಬಹುಶಃ ಆಕೆ ಆಗ 10ನೇ ತರಗತಿ ಓದುತ್ತಿದ್ದಳು. ನಾನು ಖಾಸಗಿ ಸಂಸ್ಥೆಯಲ್ಲಿ ನೌಕರಿ ಮಾಡುತ್ತಿದ್ದೆ. ಈ ಪ್ರಸಂಗದ ಬಳಿಕ ಅದೇಕೋ ನಾನು ಬೇಡವೆಂದುಕೊಂಡರೂ ಆಕೆಯನ್ನು ಪದೇ ಪದೇ ನೋಡಬೇಕೆನಿಸಿತು. ಹೀಗಾಗಿ ನಾನು ನನಗರಿವಿಲ್ಲದೆಯೇ ಆಕೆಯನ್ನೇ ಹಿಂಬಾಲಿಸುತ್ತಿದ್ದೆ. ಆಕೆಯ ಶಾಲೆಗೆ ಹೋಗುವುದನ್ನೇ ಕಾದು ಆಕೆಯ ಬಸ್ ನಲ್ಲಿಯೇ ನಾನು ಕೂಡ ಪ್ರಯಾಣ ಮಾಡುತ್ತಿದ್ದೆ. ಆಕೆ ಶಾಲೆಗೆ ಹೋದ ಬಳಿಕ ಸಂಜೆ ಮತ್ತೆ ಅದೇ ಬಸ್ ನಲ್ಲಿ ವಾಪಸ್ ಆಗುತ್ತಿದ್ದೆ. ಆದರೆ ನನ್ನ ಪ್ರೀತಿ ವಿಚಾರವನ್ನು ಆಕೆಗೆ ಹೇಗಾದರೂ ಹೇಳಬೇಕು ಎಂದು ನಾನು ಹಪಹಪಿಸುತ್ತಿದ್ದೆ. ಆದರೆ ಒಂದು ಸೂಕ್ತ ವೇದಿಕೆಗಾಗಿ ಕಾಯುತ್ತಿದ್ದೆ.

ಆ ದಿನ ಬಂದೇ ಬಿಟ್ಟಿತು. ನಮ್ಮೂರಲ್ಲಿ ಜಾತ್ರೆ ಇದ್ದ ಕಾರಣ ಆಕೆಯ ಮನೆಯವರನ್ನೆಲ್ಲಾ ಜಾತ್ರೆಗೆ ಆಹ್ವಾನಿಸಿ ಅಲ್ಲಿ ನನ್ನ ಪ್ರೇಮ ನಿವೇದನೆ ಮಾಡೋಣವೆಂದು ನಿರ್ಧರಿಸಿದೆ. ಆದರೆ ಪಾಪಿ ಸಮುದ್ರಕ್ಕೆ ಇಳಿದರೂ ಮೊಣಕಾಲುದ್ದ ನೀರು ಎಂಬಂತೆ ಆಕೆಯ ಮನೆಯವರೆಲ್ಲಾ ಬೇಡ ಎಂದರು. ಆದರೂ ಪಟ್ಟು ಬಿಡದೆ ಜಾತ್ರೆಗೆ ಬರುವಂತೆ ಮನವೊಲಿಸಿದೆ. ಜಾತ್ರೆಯಲ್ಲಿ ಆಕೆಗೆ ನನ್ನ ಪ್ರೇಮ ನಿವೇದನೆ ಮಾಡಿಕೊಂಡೆ. ಆದರೆ ಆಕೆ ಅದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ನನಗೆ ತಿಳಿಯದಂತೆ ಮುಗುಳ್ನಗೆಯೊಂದನ್ನು ಚೆಲ್ಲಿ ಹೊರಟು ಹೋಗಿದ್ದಳು. ನಾನು ಇತ್ತ ಆಕೆ ಪ್ರೀತಿಗೆ ಒಪ್ಪಿಗೆ ನೀಡಿದಳೇ ಇಲ್ಲವೇ ಎಂಬ ಗೊಂದಲದಲ್ಲಿ ಮುಳುಗಿದ್ದೆ. ನನ್ನನ್ನು ತಿರಸ್ಕರಿಸಿರಬಹುದು ಎಂದು ಒಲ್ಲದ ಮನಸ್ಸಿನಿಂದಲೇ ನನ್ನ ಕೆಲಸ ಕಾರ್ಯಗಳಲ್ಲಿ ತೊಡಗಿದೆ.

ಆದರೆ ಒಂದು ದಿನ ನನ್ನ ಮೊಬೈಲ್ ಗೆ ಕರೆಯೊಂದು ಬಂದಿತ್ತು. ಅದು ಆಕೆಯೇ ಮಾಡಿದ್ದು. ಸಾಕಷ್ಟು ಹರಸಾಹಸ ಪಟ್ಟು ಆಕೆ ನನ್ನ ಮೊಬೈಲ್ ನಂಬರ್ ಕಲೆಹಾಕಿದ್ದಳು. ಮೊಬೈಲ್ ಇಲ್ಲದ ಆಕೆ ತನ್ನ ಮನೆಯ ಸಮೀಪದ ಕಾಯಿನ್ ಬಾಕ್ಸ್ ನಿಂದ ಕರೆ ಮಾಡಿದ್ದಳು. ನನಗೂ ಕರೆ ಮಾಡಿದ್ದು ಆಕೆಯೇ ಎಂಬ ವಿಚಾರ ಆ ಬಳಿಕ ತಿಳಿಯಿತು. ಸಾಮಾನ್ಯ ಸ್ನೇಹಿತನೇನೋ ಎಂಬಂತೆ ನನ್ನೊಂದಿಗೆ ಮಾತನಾಡಿದಳು. ಸುಮಾರು ಹೊತ್ತು ಮಾತುಕತೆ ನಡೆಯಿತು. ಬಳಿಕ ಆಕೆಯೊಂದಿಗೆ ಮಾತನಾಡಬೇಕು ಎಂದು ಮತ್ತೆ ಅದೇ ಕಾಯಿನ್ ಬಾಕ್ಸ್ ಗೆ ಕರೆ ಮಾಡಿದರೆ ಬೇರೆಯವರು ರಿಸೀವ್ ಮಾಡುತ್ತಿದ್ದರು. ಹೀಗಾಗಿ ನಾನು ಆ ಪಬ್ಲಿಕ್ ಕಾಯಿನ್ ಬಾಕ್ಸ್ ನಂಬರ್ ಅನ್ನು ಸೇವ್ ಮಾಡಿಟ್ಟುಕೊಂಡಿದ್ದೆ. ಆ ನಂಬರಿನಿಂದ ಯಾವಾಗ ಕರೆ ಬರುತ್ತದೊ ಎಂದು ಕಾದು ಕುಳಿತಿರುತ್ತಿದ್ದೆ. ಹೀಗೇ ಒಂದಷ್ಟು ಕಾಲ ಕಾಯಿನ್ ಬಾಕ್ಸ್ ಮಾತುಕತೆ ಹಾಗೆಯೇ ಮುಂದುವರೆದಿತ್ತು. ಪರೋಕ್ಷವಾಗಿ ಆಕೆ ನನ್ನನ್ನು ಒಪ್ಪಿಕೊಂಡಿದ್ದು ನನಗೆ ತಿಳಿಯಿತು.

ಬಳಿಕ ದೂರವಾಣಿ ಪ್ರೀತಿ ನಮ್ಮನ್ನು ಇನ್ನಷ್ಟು ಹತ್ತಿರ ಮಾಡಿತು. ನಡು-ನಡುವೆ ಗಿಫ್ಟು-ಲಿಫ್ಟು ಕಾಮನ್ ಆಗಿತ್ತು. ಈ ನಡುವೆ ನಮ್ಮ ವಿಚಾರ ಅವರ ಪೋಷಕರಿಗೆ ತಿಳಿಯಿತು. ಅವರು ನನಗೆ ಕರೆ ಮಾಡಿ ಇದೆಲ್ಲ ಸರಿಹೊಂದುವುದಿಲ್ಲ ಎಂದು ಹೇಳಿದ್ದರು. ಎಲ್ಲಿ ಈ ವಿಚಾರ ತಿಳಿದು ರಂಪಾಟವಾಗುತ್ತದೆಯೋ ಎಂದು ಭಯ ಪಟ್ಟಿದ್ದೆ. ಕೊನೆಗೆ ಆಕೆಯೇ ಮತ್ತೆ ನವಗೆ ಕರೆ ಮಾಡಿದಳು. ಮನೆಯವರಿಗೆ ನಾನು ನಮ್ಮ ವಿಚಾರ ಹೇಳಿದೆ. ನನಗೆ ಹೊಡೆದರು. ಆದರೂ ನಾನು ಆತನನ್ನೇ ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದೆ. ಬಳಿಕ ನಿನ್ನಕ್ಕನ ಮದುವೆಯಾದ ಬಳಿಕ ಆ ಬಗ್ಗೆ ಯೋಚಿಸುತ್ತೇವೆ ಎಂದರು ಎಂದು ಹೇಳಿದಳು.

ಬಳಿಕ ನಾನು ಕೂಡ ನಮ್ಮ ಮನೆಯವರನ್ನು ಕಷ್ಟಪಟ್ಟು ಒಪ್ಪಿಸಿದೆ. ಎರಡೂ ಕುಟುಂಬದವರು ನೆಂಟರಾದ್ದರಿಂದ ಒಪ್ಪಿಕೊಂಡರು. ಬಳಿಕ ಆಕೆಯ ತಂದೆಯ ಸಲಹೆಯಂತೆ ಸುಮಾರು 2 ವರ್ಷಗಳ ಬಳಿಕ 2011 ಏಪ್ರಿಲ್ 24ರಂದು ನಮ್ಮ ಮದುವೆ ನೆರವೇರಿತು. ಇಂದಿಗೂ ನಾವು ಅನ್ಯೋನ್ಯವಾಗಿದ್ದೇವೆ. ಜಗಳ ಕೂಡ ಆಡುತ್ತೇವೆ ಆದರೆ ನಮ್ಮ ಜಗಳವೇನಿದ್ದರೂ ಉಂಡು ಮಲಗೋ ತನಕ ಮಾತ್ರ. ಎಂತಹುದೇ ಜಗಳವನ್ನು ಒಂದು ದಿನಕ್ಕಿಂತ ಹೆಚ್ಚಾಗಿ ಬೆಳೆಸೋದು ನನಗಿಷ್ಟವಿಲ್ಲ. ಹಾಗಾಗಿ ಮೊದಲು ನಾನೇ ಸೋಲೊಪ್ಪಿಕೊಂಡು ಮಾತನಾಡಿಸುತ್ತೇನೆ... ನಾನು ಸೋಲುವುದು ನನ್ನ ಪತ್ನಿಗೇ ತಾನೇ....

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com