ಆ ಹರಕೆ ಇನ್ನೂ ಹಾಗೇ ಉಳಿದಿದೆ..

ಇನ್ನೇನು ಬಸ್ ಹೊರಡುವ ಟೈಮ್ಗೆ ಬಸ್ ಸ್ಟ್ಯಾಂಡ್ಗೆ ಬಂದು ಬಸ್ ಹತ್ತಿದ ತಕ್ಷಣ ಕಣ್ಣು ಹಿಂಬದಿ ಕಡೆ ತಿರುಗಿ ಎರಡು ಮೂರು ಸೆಕೆಂಡುಗಳಲ್ಲಿ ಹುಡುಕಿ ಸಮಾಧಾನವಾಗಿ..
ಆ ಹರಕೆ ಇನ್ನೂ ಹಾಗೇ ಉಳಿದಿದೆ..

ಅಮ್ಮಾ ತಿನ್ನೋಕಾಗಲ್ಲ ಟೈಮ್ ಆಯ್ತು, ಬಸ್ ಹೊರ್ಟೋಗುತ್ತೆ... ಅಂತ ಹೇಳಿ ಇನ್ನೇನು ಬಸ್ ಹೊರಡುವ ಟೈಮ್ಗೆ ಬಸ್ ಸ್ಟ್ಯಾಂಡ್ಗೆ  ಬಂದು ಬಸ್ ಹತ್ತಿದ ತಕ್ಷಣ ಕಣ್ಣು ಹಿಂಬದಿ ಕಡೆ ತಿರುಗಿ ಎರಡು ಮೂರು ಸೆಕೆಂಡುಗಳಲ್ಲಿ ಹುಡುಕಿ ಸಮಾಧಾನವಾಗಿ, ಮತ್ತೆ ಗೆಳತಿಯ ಜೊತೆ ಲೇಟಾಯ್ತು ತಿಂಡಿ ಮಾಡಿಲ್ಲ ಅಂತ ಹೇಳಿ, ಮತ್ತೆ ಹಿಂದೇ ತಿರುಗಿ ನೋಡ್ತಾ ಇದ್ದೆ.

ಯಾಕೆಂದ್ರೆ ಅಲ್ಲಿ ನನ್ನ ಬರುವಿಕೆಗಾಗಿ ಮತ್ತೊಂದು ಜೀವ ಹಂಬಲಿಸುತ್ತಿತ್ತು. ನಾನು ಬರೋದನ್ನೇ ಕಾಯುತ್ತಿದ್ದ ಆ ಹುಡುಗಾ... ಬಸ್ನ ಸೀಟಿನಲ್ಲಿ ಕಿಟಕಿ ಬಳಿ ಕುಳಿತ್ತಿದ್ದಾಗ, ಆಚೆಯಿಂದ ಆತ ನನ್ನ ಕಡೆಗೆ ನೋಡಿತ್ತಿದ್ದಾ, ಯಾರಪ್ಪಾ ಇದು ನನ್ನ ಕಡೆ ನೋಡ್ತಾ ಇದಾನೆ ಅಂತಾ ಅಂದ್ಕೊಂಡು, ಮತ್ತೆ ಅವನ ಕಡೆ ಕಣ್ಣು ತಿರುಗುತ್ತಿತ್ತು.

ಅಂದಿನಿಂದ ಆರಂಭವಾಯ್ತು ನಮ್ಮಿಬ್ಬರ ಕಣ್ಣಿನ ಭಾಷೆ. ಪ್ರಥಮ ಪಿಯುಸಿ ಓದುತ್ತಿದ್ದ ನಾನು ಪ್ರತಿದಿನ ಬೆಳಿಗ್ಗೆ 8 ಗಂಟೆ ಬಸ್ನಲ್ಲಿ ಹೋಗಿ ಕಾಲೇಜಿಗೆ ತೆರಳುತ್ತಿದ್ದೆ. ಹೀಗೆ, ಬಸ್ ನಲ್ಲಿ ಪ್ರತಿ ದಿನ ಇಬ್ಬರು ಒಬ್ಬರನ್ನೊಬ್ಬರನ್ನು ನೋಡ್ತಾ ಇದ್ವಿ. ಒಂದು ದಿನ ಅವ್ನು ನನ್ ಕಡೆ ತಿರುಗಿ ನೋಡ್ಲಿಲ್ಲಾ, ಆಗ ಅವನು ನನ್ ಗೆಳತಿನಾ ನೋಡ್ತಿರ್ಬೇಕು ಅಂತ ಅಂದ್ಕೊಂಡೇ, ಸ್ವಲ್ಪ ಬೇಸರಾನು ಆಯ್ತು.

ಅದಕ್ಕೆ ಮಾರನೇ ದಿನ 8 ಗಂಟೆ ಬಸ್ಗೆ ಹೋಗೋದ್ ಬೇಡ, ಅಂತ ಅಂದ್ಕೊಂಡು, ಬಸ್ ಸ್ಟ್ಯಾಂಡ್ಗೆ ಲೇಟಾಗಿ ಬಂದೆ. ಬಸ್ ಹೊರಟು ಹೋಗಿತ್ತು, ಹಾಗೆ ಮುಂದಿನ ಸ್ಟಾಪ್ನಿಂದ ಬೇರೆ ಬಸ್ ಹತ್ತಿ ಹೋಗೋಣ ಅಂತ ನಡ್ಕೊಂಡು ಅವನು ಅವಳನ್ನಾ ನೋಡ್ತಾ ಇದ್ದಾ, ನಾನ್ ತಪ್ಪು ತಿಳಿದ್ಕೊಂಡೆ ಅಂತ ಮನಸ್ಸಲ್ಲೇ ಅಂದುಕೊಂಡು ಹೋಗ್ತಾ ಇದ್ದೆ. ಮುಂದಿನ ಸ್ಟಾಪ್ಗೆ ಬಂದು ಬಸ್ ಕಾಯ್ದು ನಿಂತಿದ್ದೆ, ಹಾಗೆ ಬಸ್ ಬಂತು.

ಬಸ್ ಹತ್ಕೊಂಡು ನಿಂತಿದ್ದೆ, ಕಂಡೆಕ್ಟರ್ ಒಳಗಡೆ ಹೋಗ್ರಮ್ಮಾ ಅಂತಾ ಹೇಳಿ ಹೇಳಿ ನಮ್ಮನ್ನಾ ಹಿಂದೆ ಕಳುಹಿಸಿಬಿಟ್ಟಾ. ಸಿಕ್ಕಾ ಪಟ್ಟೆ ಜನ ತುಂಬಿದ್ರು. ಅಬ್ಬಾ ಸಾಕಾಯ್ತು... ಅಂತ ಒಂದು ಸೈಡಿನಲ್ಲಿ ಸೀಟನ್ನು ಹಿಡಿದು ನಿಂತುಕೊಂಡು, ನನ್ನ ಹತ್ರಾನೇ ನಿಂತಿದ್ದ ಗಂಡಸರು ಮೇಲ್ ಮೇಲ್ ಬೀಳೋಕೆ ಪ್ರಯತ್ನಿಸುತ್ತಿದ್ದರು, ಅವರನ್ನು ಬೈಯ್ಯೊಕಂತಾ ಹಿಂದೆ ತಿರುಗಿ ನೋಡ್ದೆ...

ಹಾಗೇ ಬೈಯ್ದೇ ಕೂಡ. ಆದ್ರೆ ಕಣ್ಣಲ್ಲಿ ಮಾತ್ರ ಆನಂದ ತುಂಬಿತ್ತು. ಯಾಕಂದ್ರೆ, ಆ ಹುಡುಗ ನೋಡ್ತಾ ಇದ್ದಿದ್ದು ನನ್ನನ್ನೇ ಅಂತಾ ನನಗೆ ಆಗ ಪಕ್ಕಾ ಆಯ್ತು. ಯಾಕೆಂದ್ರ, ಅವ್ನು ನಾನ್ ಬರ್ಲಿಲ್ಲ ಅಂತಾ ನೆಕ್ಸ್ಟ್ ಸ್ಟಾಪ್ನಲ್ಲಿ ಬಸ್ ಇಳಿದ್ದು, ನಮ್ ಬಸ್ ಹತ್ತಿದ್ದ, ನನ್ನನ್ನಾ ಹುಡುಕ್ತಾ ಇದ್ದ. ಹೀಗೆ ಒಬ್ರನ್ನೊಬ್ರರನ್ನು ನೋಡದ್ರಲ್ಲೇ 2 ವರ್ಷ ಕಳೆಯಿತು., ಆದ್ರೂ ಆ ಹುಡುಗ ಬಂದು ಮಾತನಾಡ್ಸಿಲ್ಲ. ಕೊನೆಗೆ ಎಕ್ಸಾಮ್ ಬರೆಯೋ ದಿನ ಬಂದು ಮಾತಾಡ್ಸ್ದಾ... ಉಸಿರು ನಿಂತಂಗಾಯ್ತು. ಮರುದಿನ ಇರೋ ಪರೀಕ್ಷೆ ದಿನಾನೇ ಕೇಳ್ದಾ ಮದ್ವೇ ಆಗ್ತೀರಾ ಅಂತಾ...

ಅಬ್ಬಾ ಅಲ್ಲಿಂದ ಶುರುವಾಯ್ತು ಮಾತಿನ ಪ್ರೀತಿ. ಹೀಗೆ ಮಾತಾಡಿ ಮೂರು ವರ್ಷ ಆಯ್ತು, ಅವನು ಖಾಸಗಿ ಕಂಪನಿಯಲ್ಲಿ ಕೆಲ್ಸಾ ಮಾಡ್ತಾ ಇದ್ದಾ. ಅದಕ್ಕೆ ನಾನು ಸರ್ಕಾರಿ ನೌಕರಿ ತಗೋ ಚೆನ್ನಾಗಿರುತ್ತೆ ಅಂದೆ.

ಅದೇ ರೀತಿ ಸರ್ಕಾರಿ ನೌಕರಿ ಕಾಲ್ ಮಾಡಿದ್ರು, ನಾನೇ ಆ ಅಪ್ಲಿಕೇಷನ್ ಫಿಲ್ ಮಾಡಿಕೊಟ್ಟೆ. ದೇವರಲ್ಲಿ ಹರಕೆ ಹಾಕೊಂಡಾಯ್ತು, ಅದೇ ರೀತಿ ಸರ್ಕಾರಿ ನೌಕರಿ ಸಿಕ್ತು. ಆದ್ರೆ, ಸರ್ಕಾರಿ ನೌಕರಿ ಸಿಕ್ತು ಅಂತ ನನ್ನ ಹತ್ರ ಹೇಳ್ದೇನೇ ಹೊರಟು ಹೋದ. ಹಾಗೇ ಹೀಗೆ ಮಾಡಿ, ಅವನ್ನಾ ಫೋನ್ ನಂಬರ್ ಕಲೆಕ್ಟ್ ಮಾಡಿ, ಸರ್ಕಾರಿ ಕೆಲ್ಸಾ ಸಿಕ್ಕಿದಿಯಂತೆ, ಹೇಳ್ ಲೇ ಇಲ್ಲಾ, ಅಂದೆ. ಅದಕ್ಕೆ ಅವನಂದಾ ನಮ್ಮ ಮನೇಲಿ ನಿನ್ನನ್ನಾ ಒಪ್ಪೋದಿಲ್ಲ.

ನಿನ್ನ ಜಾತಿ ಬೇರೆ ನಮ್ಮ ಜಾತಿ ಬೇರೆ. ಅದಕ್ಕೆ ನಿನ್ನನ್ನಾ ಬಿಟ್ಟು ಬಂದೆ. ಇನ್ ಮೇಲೆ ನಂಗೆ ಕಾಲ್ ಮಾಡ್ಬೇಡಾ ಅಂತ ಹೇಳಿ, ನಂಬರ್ ಚೇಂಜ್ ಮಾಡ್ದಾ. ಆಗ್ ಬಿಟ್ಟು ಹೋದ ಹುಡುಗ ಮತ್ತೆ ಬರ್ಲಿಲ್ಲ, ಅವನು ಮದ್ವೆ ಆಗಿ ಖುಷಿಯಾಗಿ ಇದಾನೆ. ಆದ್ರೆ, ಅವನಿಗೆ ಕೆಲ್ಸಾ ಸಿಕ್ಕರೆ ಅವನ್ ಜೊತೆ ಬಂದು ಹರಕೆ ತೀರಿಸ್ತೀನಿ ಅಂತ ದೇವರಲ್ಲಿ ಕೇಳ್ಕೊಂಡು ಇದ್ದೇ. ಅದ್ ಮಾತ್ರ ಹಾಗೇ ಉಳಿದುಕೊಂಡಿದೆ.  ಅವನು ಬಿಟ್ಟು ಹೋದ್ರೆ ಏನು, ಅವನು ಸರ್ಕಾರಿ ಕೆಲಸ ಸಿಕ್ಕಿ ಸೆಟೆಲ್ ಆದ್ನಲ್ಲಾ ಬಿಡು. ಅಂತ ನನ್ನೊಳಗಿನ ಪ್ರೀತಿ ಸಮಾಧಾನ ಮಾಡ್ತು. ಆದ್ರೆ ಹರಕೆ ಮಾತ್ರ ಹಾಗೇ ಉಳಿದುಕೊಂಡಿದೆ.

-ಮೈನಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com