ಹಾವೇರಿ ಜಿಲ್ಲೆಯಲ್ಲಿ ಮಳೆ ನೀರಿನಲ್ಲಿ 12 ವರ್ಷದ ಬಾಲಕನೋರ್ವ ಕೊಚ್ಚಿಕೊಂಡು ಹೋಗಿ ಬಳಿಕ ಪತ್ತೆಯಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ.
ಹಾವೇರಿ ಜಿಲ್ಲೆಯ ಹಳೇ ಪಿ.ಬಿ.ರಸ್ತೆಗೆ ಹೊಂದಿಕೊಂಡಿರುವ ಶಿವಾಜಿನಗರದ 3ನೇ ಕ್ರಾಸ್‌ನಲ್ಲಿರುವ ಕಾಲುವೆಯಲ್ಲಿ ಬಾಲಕ ನಿವೇದನ್ ಬಸವರಾಜ ಗುಡಿಗೇರಿ ಎಂಬ ಬಾಲಕ ಕೊಚ್ಚಿಕೊಂಡು ಹೋಗಿದ್ದಾನೆ.
ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಬಾಲಕ ಮೆಡಿಕಲ್ ಶಾಪ್ ಮುಂಭಾಗದಲ್ಲಿದ್ದ ಸ್ಲ್ಯಾಬ್ನಲ್ಲಿ ಪತ್ತೆಯಾಗಿದ್ದ.
ಪತ್ತೆಯಾದ ಬಾಲಕನನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸಾರ್ವಜನಿಕರು ತಕ್ಷಣವೇ ಜಿಲ್ಲಾಸ್ಪತ್ರೆಗೆ ಹೊತ್ತು ಸಾಗಿಸಿದ್ದಾರೆ. ಆ್ಯಂಬುಲೆನ್ಸ್ ನಲ್ಲಿ ಕೃತಕ ಆಕ್ಸಿಜನ್ ಹಾಕಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ವೇಳೆ ಬಾಲಕ ಬದುಕಿದ್ದಾನೆಂದು ಸಿಬ್ಬಂದಿಗಳು ಹೇಳಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ವೇದು ಸತ್ತಿಲ್ಲ ಭಯಬೇಡಬೇಡಿ ಎಂದು ಕೂಗಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಕಳೆದ 24 ಗಂಟೆಗಳ ಮಳೆಯ ಮಾಹಿತಿ ಪ್ರಕಾರ ದಾವಣಗೆರೆ ಜಿಲ್ಲೆಯಲ್ಲಿ ಗರಿಷ್ಠ 113 ಮಿಮೀ ಮತ್ತು ಹಾವೇರಿ ಜಿಲ್ಲೆಯಲ್ಲಿ ಸುಮಾರು 90 ಮಿಮೀ ಮಳೆ ದಾಖಲಾಗಿದೆ.