"ಪತ್ರ ನಿಮ್ಮ ಕೈಸೇರುವುದರೊಳಗೆ ನಾನು ನಿಮ್ಮನ್ನು ಮೇಲಿನಿಂದ ನೋಡುತ್ತಿರುತ್ತೇನೆ": ಪೋಷಕರಿಗೆ ಯೋಧನ ಪತ್ರ!

ಜು.26, 2017, ಭಾರತೀಯ ಯೋಧರು ಪಾಕಿಸ್ತಾನದ ಕುತಂತ್ರದ ಆಕ್ರಮಣದಿಂದ ಕಾರ್ಗಿಲ್ ನ್ನು ಉಳಿಸಿಕೊಟ್ಟ ದಿನ, ಇದನ್ನು ವಿಜಯ್ ದಿವಸ್ ಎಂದೂ ಕರೆಯುತ್ತಾರೆ.
"ಪತ್ರ ನಿಮ್ಮ ಕೈಸೇರುವುದರೊಳಗೆ ನಾನು ನಿಮ್ಮನ್ನು ಮೇಲಿನಿಂದ ನೋಡುತ್ತಿರುತ್ತೇನೆ": ಪೋಷಕರಿಗೆ ಯೋಧನ ಪತ್ರ!
ಜು.26, 2017, ಭಾರತೀಯ ಯೋಧರು ಪಾಕಿಸ್ತಾನದ ಕುತಂತ್ರದ ಆಕ್ರಮಣದಿಂದ ಕಾರ್ಗಿಲ್ ನ್ನು ಉಳಿಸಿಕೊಟ್ಟ ದಿನ, ಇದನ್ನು ವಿಜಯ್ ದಿವಸ್ ಎಂದೂ ಕರೆಯುತ್ತಾರೆ. ಕಾರ್ಗಿಲ್ ಯುದ್ಧ ನಮ್ಮ ಪೀಳಿಗೆಯ ಅವಧಿಯಲ್ಲಿ ನಡೆದ ಹೋರಾಟವಾಗಿದ್ದು, ಇಂದಿನ ಪೀಳಿಗೆಯ ಬಹುತೇಕರು ಆ ಯುದ್ಧವನ್ನು ನೋಡಿದ್ದೇವೆ. ಹಾಗಾಗಿಯೇ ಕಾರ್ಗಿಲ್ ವಿಜಯ್ ದಿವಸ್ ನಮ್ಮೆಲ್ಲರಿಗೆ ಉಳಿದ ಯುದ್ಧದ ಸಾಹಸಗಾಥೆಗಳಿಂದ ಹೆಚ್ಚು ಪ್ರೇರಣೆ ನೀಡಿ, ವಿಶೇಷವಾಗಿ ಕಾಣುತ್ತದೆ. ಹಾಗೆಯೇ ಯೋಧರ ತ್ಯಾಗ ಬಲಿದಾನದ ಸಾಹಸಗಾಥೆಗಳೂ ಸಹ ನಮ್ಮೆಲ್ಲರಲ್ಲಿ ಸೈನಿಕರ ಬಗ್ಗೆ ವಿಶೇಷ ಗೌರವಗಳುಂಟಾಗುವುದಕ್ಕೆ ಕಾರಣವಾಗಿದೆ.
ಕಾರ್ಗಿಲ್ ಯುದ್ಧದ ವೇಳೆಯಲ್ಲಿ ಭಾರತೀಯ ಯೋಧರ ಸಾಹಸಗಳನ್ನು ಮೆಲುಕು ಹಾಕಿದರೆ ಅನೇಕ ರೋಚಕ ಸಂಗತಿಗಳು ಬಹಿರಂಗವಾಗುತ್ತದೆ. ಕೆಲವರು ಯುದ್ಧರಂಗದಲ್ಲಿ ಸಿಡಿಲಬ್ಬರದಿಂದ ಕಾದಾಡಿ ವೀರಮರಣವನ್ನಪ್ಪಿದರೆ ಇನ್ನೂ ಕೆಲವರು ಗುಂಡುಗಳನ್ನು ಮೈಯಲ್ಲಿ ಹೊಕ್ಕಿಸಿಕೊಂಡು ಯಮನಿಗೂ ಸವಾಲು ಹಾಕು ದೇಶಕ್ಕೋಸ್ಕರ ಹೋರಾಡಿ ಮೃತ್ಯುವನ್ನೇ ಗೆದ್ದ ಉದಾಹರಣೆಗಳಿವೆ. ಅಂತೆಯೇ ಯುದ್ಧ ಎಂದರೆ ಸಾವು ಬದುಕಿನ ಅನಿಶ್ಚಿತತೆ ಎಂಬುದನ್ನು ನಿರ್ಲಿಪ್ತವಾಗಿ ಒಪ್ಪಿರುವ ಯೋಧರ ಮನಸ್ಥಿತಿಯೂ ಅಚ್ಚರಿ ಮೂಡಿಸುತ್ತದೆ. ಅಂತಹ ಮನಸ್ಥಿತಿಗೆ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ಯೋಧ ವಿಜಯಂತ್ ಥಾಪರ್ ಅವರು ಯುದ್ಧ ಘೋಷಣೆಯಾಗುತ್ತಿದ್ದಂತೆಯೇ ಪೋಷಕರಿಗೆ ಬರೆದ ಪತ್ರ ಉತ್ತಮ ಉದಾಹರಣೆಯಾಗಬಲ್ಲದು.
ಯುದ್ಧ  ಘೋಷಣೆಯಾಗುತ್ತಿದ್ದಂತೆಯೇ ತನ್ನ ಸಾವವನ್ನೂ ಅಷ್ಟೇ ಖಚಿತವಾಗಿರಿಸಿಕೊಂಡಿದ್ದರೇನೋ ಎಂಬಂತಿದೆ ವಿಜಯಂತ್ ಥಾಪರ್ ತಮ್ಮ ಪೋಷಕರಿಗೆ ಬರೆದ ಪತ್ರ. ಅಷ್ಟೇ ಅಲ್ಲದೇ, ಸಾವನ್ನು ಎದುರುಹಾಕಿಕೊಂಡರೂ ದೇಶಕ್ಕಾಗಿ ಹೋರಾಡಬೇಕೆಂಬ ವಿಜಯಂತ್ ಥಾಪರ್ ಅವರ ಮನಸ್ಥಿತಿ ಈ ದೇಶದ ಯೋಧರ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಂತೆ ಎಂದು ಅನ್ನಿಸದೇ ಇರದು. "ಈ ಪತ್ರ ನಿಮಗೆ ತಲುಪುವಷ್ಟರಲ್ಲಿ ನಾನು ನಿಮ್ಮನ್ನು ಆಗಸದಿಂದ ನೋಡುತ್ತಿರುತ್ತೇನೆ" ಎಂದೇ ಪ್ರಾರಂಭವಾಗುವ ಪತ್ರದ ಒಕ್ಕಣೆ, ಯೋಧರ ಬಗ್ಗೆ ನೆನೆದಾಗ ಎಂಥವರೂ ಕಣ್ಣೀರಾಗಬೇಕು ಹಾಗಿದೆ. ಅಷ್ಟೇ ಅಲ್ಲದೇ, ಈ ಪತ್ರ ನಿಮ್ಮ ಕೈ ಸೇರುವುದರ ವೇಳೆಗೆ ಮೇಲಿನಿಂದ ನಿಮ್ಮನ್ನು ನೋಡುವ ನಾನು ಅಪ್ಸರೆಯರಿಂದ ಆತಿಥ್ಯ ಸ್ವೀಕರಿಸುತ್ತಿರುತ್ತೇನೆ. ಮತ್ತೊಂದು ಮನುಷ್ಯ ಜನ್ಮವೆಂದಿದ್ದರೆ ಮತ್ತೆ ಭಾರತೀಯ ಸೇನೆಗೆ ಸೇರುತ್ತೇನೆ, ನಿಮ್ಮ ನಾಳೆಗಳಿಗಾಗಿ ಭಾರತೀಯ ಸೇನೆ ಹೋರಾಡಿದ ಪ್ರದೇಶಕ್ಕೆ ಒಮ್ಮೆ ಭೇಟಿ ನೀಡಿ, ಮುಂದಿನ ಪೀಳಿಗೆಗೆ ಭಾರತೀಯ ಯೋಧರ ಬಲಿದಾನದ ಬಗ್ಗೆ ತಿಳಿಸಿ" ಎಂದು ಯುದ್ಧ ಘೋಷಣೆಯಾದ ಬೆನ್ನಲ್ಲೇ ಸಾವು ತನ್ನ ಬೆನ್ನ ಹಿಂದಿದೆ ಎಂಬುದನ್ನು ಅರಿತೂ ನಿರ್ಲಿಪ್ತವಾಗಿ ದೇಶಕ್ಕಾಗಿ ಹೋರಾಡಿದ ವಿಜಯಂತ್ ಥಾಪರ್ ನ ಸಾಹಸಗಾಥೆಗಳನ್ನು ನೆನೆಸಿಕೊಂಡರೆ, ಕಣ್ಣಂಚು ತೇವವಾಗುತ್ತದೆ. ಭಾರತೀಯ ಯೋಧರ ಬಗ್ಗೆ ಇರುವ ಗೌರವ ನೂರ್ಮಡಿಯಾಗುತ್ತದೆ. ಯೋಧರ ತ್ಯಾಗ ಬಲಿದಾನಗಳಿಗೆ ನಾವು ನತಮಸ್ತಕರಾಗಿ ನಿಲ್ಲಲು ಅಷ್ಟೇ ಸಾಧ್ಯ ಎನಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com