ಸಾಮಾಜಿಕ ತಾಣದಲ್ಲಿ ಬಳಸಲ್ಪಡುವ ಭಾಷೆಗಳ ಬಗ್ಗೆ...

ಅತ್ತ ಗ್ರಾಮ್ಯವೂ ಅಲ್ಲದ ಇತ್ತ ಗ್ರಾಂಥಿಕವೂ ಅಲ್ಲದ ಪದಗಳು ಹುಟ್ಟಿ ಕೊಂಡಿದ್ದು ಕೂಡಾ ಇಲ್ಲಿಯೇ. ಯಾವುದೇ ರಾಜಕೀಯ, ಭೌಗೋಳಿಕ ಚೌಕಟ್ಟುಗಳಿಲ್ಲದೆಯೇ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತಂತ್ರಜ್ಞಾನದ ಈ ಯುಗದಲ್ಲಿ ಜಗತ್ತಿನೆಲ್ಲೆಡೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೊಸ ಆಯಾಮವನ್ನು ನೀಡಿದ್ದು ಸಾಮಾಜಿಕ ತಾಣಗಳೇ ಎಂದರೆ ಅತಿಶಯೋಕ್ತಿ ಅಲ್ಲ. ಪ್ರತಿಯೊಬ್ಬ ವ್ಯಕ್ತಿಯೂ  ತನಗನಿಸಿದ್ದನ್ನು ವ್ಯಕ್ತ ಪಡಿಸಲು ಸಾಮಾಜಿಕ ತಾಣದ ಮೊರೆ ಹೋಗುತ್ತಾನೆ. ಅಲ್ಲಿ ಅವನಿಗೆ ಭಾಷೆಗಳ ಹಂಗಿಲ್ಲ. ತನಗೆ ಹೇಳಬೇಕೆಂದಿರುವುದನ್ನು ಅವನ ಭಾಷೆಯಲ್ಲೇ ಹೇಳಬಹುದು. ಆದರೆ ಇಂಗ್ಲಿಷ್ ಭಾಷೆ ಜಾಗತಿಕ ಭಾಷೆ (universal language) ಆಗಿರುವುದರಿಂದ ಹಾಗು ಸಾಮಾಜಿಕ ತಾಣದಲ್ಲಿ ಇದು ವ್ಯಾಪಕವಾಗಿ ಬಳಸಲ್ಪಡುವುದರಿಂದ ಇದು ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುತ್ತದೆ. ಹೀಗಿರುವಾಗಲೇ ಸಾಮಾಜಿಕ ತಾಣದಲ್ಲಿ ಬಳಸಲ್ಪಡುವ ಇಂಗ್ಲಿಷ್ ಭಾಷೆ ತನ್ನ ನೈಜತೆಯನ್ನು ಕಳೆದುಕೊಂಡು ಬಿಟ್ಟಿದೆ ಎಂಬ ವಾದವೂ ಕೇಳಿ ಬರುತ್ತಿದೆ. ಇದು ನಿಜವಾದ ಮಾತು ಯಾಕೆಂದರೆ ಇಲ್ಲಿ ಬಳಸಲ್ಪಡುವ ಇಂಗ್ಲಿಷ್ ಭಾಷೆಗೆ ಗ್ರಾಮರ್ಗಳ ಹಂಗಿಲ್ಲ, ಸ್ಪೆಲಿಂಗ್ ಮಿಸ್ಟೇಕ್ ಇದ್ರೂ ಚಿಂತೆಯಿಲ್ಲ. ಎಲ್ಲದಕ್ಕೂ ಶಾರ್ಟ್ ಫಾರ್ಮ್, ಇಂಟರ್ನೆಟ್ ಸ್ಲಾಂಗ್ಗಳನ್ನು ಬಳಸುವುದರಿಂದ ಇಂಟರ್ನೆಟ್ನಿಂದ ಹೊರಗೂ ಇಂಗ್ಲಿಷ್  ಬಳಸುವಾಗ ಇಂಥಾ ಸ್ಲಾಂಗ್ ಗಳು  ವ್ಯವಹಾರಿಕ ಭಾಷೆಯಲ್ಲಿ ಸೇರ್ಪಡೆಯಾಗಿವೆ.
ಇಂಟರ್ನೆಟ್ ಸ್ಲಾಂಗ್ ಅಥವಾ ಲಿಂಗೋ
ಯಾವುದೇ ಭಾಷೆಯೇ ಇರಲಿ ಸಾಮಾಜಿಕ ತಾಣಗಳಂತೂ ನಮ್ಮ ಭಾಷೆಗಳಿಗೆ ಹೊಸ ಹೊಸ ಪದಗಳನ್ನು ಪರಿಚಯಿಸಿದೆ. ಅತ್ತ ಗ್ರಾಮ್ಯವೂ ಅಲ್ಲದ ಇತ್ತ ಗ್ರಾಂಥಿಕವೂ ಅಲ್ಲದ ಪದಗಳು  ಹುಟ್ಟಿ ಕೊಂಡಿದ್ದು ಕೂಡಾ ಇಲ್ಲಿಯೇ. ಯಾವುದೇ ರಾಜಕೀಯ, ಭೌಗೋಳಿಕ ಚೌಕಟ್ಟುಗಳಿಲ್ಲದೆಯೇ ವಿವಿಧ ಪ್ರದೇಶಗಳ ಜನರು ಒಂದಾಗಿ ಒಂದೇ ವೇದಿಕೆಯಲ್ಲಿ ಸೇರುವಂತೆ ಮಾಡುವ ಈ ಸಾಮಾಜಿಕ ತಾಣಗಳಿಂದಾಗಿ ಎಲ್ಲ ಭಾಷೆಗಳು ಒಂದರ ಜತೆ ಬೆಸೆದುಕೊಂಡು ಹೊಸ ಪದಗಳ ಸೃಷ್ಟಿಗೆ ಕಾರಣವಾಗಿದೆ. 
ಇದು ಮಾತ್ರವಲ್ಲದೆ ಅಂತಜಾ೯ಲದಲ್ಲಿ ಬಳಸಲ್ಪಡುವ ಇಂಟನೆ೯ಟ್ ಸ್ಲಾಂಗ್ ಅಥವಾ ಲಿಂಗೋಗಳಿಂದ ಅಂತಜಾ೯ಲದಲ್ಲಿ ವ್ಯವಹರಿಸುವ ಭಾಷೆ ಇನ್ನಷ್ಟು ಸುಲಭವಾಗಿ ಬಿಟ್ಟಿದೆ.
 ಕಾಗುಣಿತ ಹಾಗು ವ್ಯಾಕರಣಗಳ ಹಂಗಿಲ್ಲದೆ ಅಂತಜಾ೯ಲದಲ್ಲಿ ವ್ಯವಹರಿಸಲು ಸಾಧ್ಯವಾಗುವಂತಹ ಪದಗಳೇ ಈ ಇಂಟನೆ೯ಟ್ ಸ್ಲಾಂಗ್ ಅಥವಾ ಲಿಂಗೋ ಗಳು.
 ಅಂತಜಾ೯ಲದಲ್ಲಿ ನಮ್ಮ ಭಾವನೆಗಳನ್ನು ಚುಟುಕಾಗಿ ವ್ಯಕ್ತಪಡಿಸಲು ಈ ಲಿಂಗೋಗಳು ಸಹಕರಿಸುತ್ತವೆ.  ಉದಾಹರಣೆಗೆ  LOL( Laughing out loud). ಅಂತಜಾ೯ಲದಲ್ಲಿ ಅತೀ ಹೆಚ್ಚು ಬಳಕೆಯಾಗುವ ಸ್ಲಾಂಗ್ ಇದು. ಈ ಬ್ಯುಸಿ ದುನಿಯಾದಲ್ಲಿ ಉದ್ದುದ್ದನೆಯ ಸಂದೇಶಗಳನ್ನು ಟೈಪ್ ಮಾಡುವ ವ್ಯವಧಾನ ಯಾರಿಗೂ ಇರುವುದಿಲ್ಲ. ಹಾಗಾಗಿ ಎಲ್ಲದಕ್ಕೂ ಶಾಟ್೯ ಫಾಮ್೯ ಗಳನ್ನು ಬಳಸುವ ಮೂಲಕ ಸಂವಹನದ ವೇಗವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅಂತಜಾ೯ಲದಲ್ಲಿ ಈ ರೀತಿಯ ಸಂವಹನ ಹೆಚ್ಚು ಅನುಕೂಲವಾಗಿರುತ್ತದೆ.
ಇಂಟನೆ೯ಟ್ ಸ್ಲಾಂಗ್ ಅಥ೯ ಮಾಡಿಸಲು  ಅಬ೯ನ್ ಡಿಕ್ಷನರಿ
ಅಂತಜಾ೯ಲದಲ್ಲಿ ಬಳಸಲ್ಪಡುವ ಸ್ಲಾಂಗ್ ಗಳು ನಿಮಗೆ ಅಥ೯ವಾಗುತ್ತಿಲ್ಲವೆ? ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಆನ್ ಲೈನ್ ನಲ್ಲಿ ಲಭ್ಯವಿರುವ ಅಬ೯ನ್ ಡಿಕ್ಷನರಿಯಲ್ಲಿ ಇವುಗಳ ಅಥ೯ವನ್ನು ಸುಲಭವಾಗಿ ಪಡೆಯಬಹುದು.ಪ್ರಸ್ತುತ ಡಿಕ್ಷನರಿಯಲ್ಲಿ 10.5 ಮಿಲಿಯನ್ ಇಂಟನೆ೯ಟ್ ಸ್ಲಾಂಗ್ ಗಳ ಅಥ೯ ಲಭ್ಯವಿದೆ. ಸಂದೇಶಗಳನ್ನು ಕಳುಹಿಸುವಾಗಲೂ, ಕಾಮೆಂಟಿಸುವಾಗಲೂ ಈ ಸ್ಲಾಂಗ್ ಗಳನ್ನು ಬಳಸುವ ಮೂಲಕ ಅಂತಜಾ೯ಲದಲ್ಲಿ ಸಂವಹನವನ್ನು ಸುಲಭಗೊಳಿಸಬಹುದು.
ಅತೀ ಹೆಚ್ಚು ಪ್ರಚಲಿತವಿರುವ ಸ್ಲಾಂಗ್ ಗಳು
ASAP: As Soon As Possible
BBL/BBS: Be Back Later/Soon
IRL: In Real Life
JK: Just Kidding
IDK: I Don't Know
L8R: Later
NP: No Problem
ORLY: Oh Really?
TMI: Too Much Information
U: You
Y: Why
ಅದೇ ವೇಳೆ ಟ್ವಿಟರ್ ನಲ್ಲಿ ಪದಗಳ ಮಿತಿ ಇರುವ ಕಾರಣ ಅಲ್ಲಿಯೂ ಸಾಕಷ್ಟು ಚುಟುಕು ಪದಗಳು ಬಳಸಲ್ಪಡುತ್ತವೆ. ಉದಾಹರಣೆಗೆ
b4: before
BFN: bye for now
BR: best regards
LOL, OMG, TTYL!
ಸಾಮಾಜಿಕ ತಾಣಗಳಲ್ಲಿ ಬಳಸಲ್ಪಡುವ ಈ ಚುಟುಕು ಪದಗಳು ಅಥವಾ acronyms ಸ್ಥಳಮಿತಿಯನ್ನು ಕಡಿಮೆ ಮಾಡುತ್ತವೆ. ನಾಲ್ಕೈದು ಪದಗಳಲ್ಲಿ ಹೇಳಬೇಕಾದುದನ್ನು ಮೂರಕ್ಷರಗಳಲ್ಲಿ ಹೇಳಿ ಬಿಡಬಹುದು. ಚಾಟ್ ಗಳಲ್ಲಿ ಹಾಗು ಕಾಮೆಂಟ್ ಗಳಲ್ಲಿ ಅತೀ ಹೆಚ್ಚು ಬಳಸಲ್ಪಡುವ  LOL, OMG, TTYL!  ಈ ಮೂರು ಪದಗಳು ನಮ್ಮ ದೈನಂದಿನ ವ್ಯವಹಾರಿಕ ಭಾಷೆಗಳಲ್ಲಿ ಎಷ್ಟು ಹಾಸುಹೊಕ್ಕಾಗಿವೆ ಎಂಬುದಕ್ಕೆ ಇವುಗಳ ಜನಪ್ರಿಯತೆಯೇ ಸಾಕ್ಷಿ. ಇಂಗ್ಲೀಷ್ನನಲ್ಲಿ ಮಾತ್ರವಲ್ಲ ಕನ್ನಡದಲ್ಲಿಯೂ ಇಂಥಾ ಪದಗಳನ್ನು ಫೇಸ್ ಬುಕ್ ಹುಟ್ಟು ಹಾಕಿದೆ ಎಂದರೆ ನೀವು ನಂಬಲೇ ಬೇಕು. ಫೇಸ್ ಬುಕ್  ನಲ್ಲಿ ಜಾಲಾಡುವಾಗ ನಿಮಗೆ DOM ಎಂಬ ಕಾಮೆಂಟ್ ಕಾಣಿಸಿದರೆ ತಲೆ ಕೆರೆದುಕೊಳ್ಳಬೇಕಿಲ್ಲ. DOM ಅಂದ್ರೆ ದೇವರು ಒಳ್ಳೇದು ಮಾಡ್ಲಿ ಎಂದಥ೯.
Emoticons ಗಳೆಂಬ ಸಂಜ್ಞಾ ಸೂತ್ರ
Emoticons ಗಳು ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸಲಿರುವ ಸಂಜ್ಞಾ ಸೂತ್ರಗಳು. ಸಾಮಾನ್ಯವಾಗಿ ಸ್ಮೈಲಿಗಳೆಂದು ಕರೆಯಲ್ಪಡುವ ಇವು ಅಂತಜಾ೯ಲದಲ್ಲಿ ಚಾಟ್ ಮಾಡುವಾಗಲೂ, ಸಂದೇಶಗಳನ್ನು ರವಾನಿಸುವಾಗ  Emoticonsಗಳ ಬಳಕೆಯ ಮೂಲಕ ನಮ್ಮ ಮುಖದ ಭಾವಗಳನ್ನು ಬಿಂಬಿಸಬಹುದು. ಉದಾಹರಣೆಗೆ ನಗುಮುಖ :) , ಬೇಸರ :(, ಕಿಸ್ಸಿಂಗ್  :-*, ಲವ್ <3   ಯಾವುದೇ ಇರಲಿ ಅವೆಲ್ಲವನ್ನೂ ಸಂಜ್ಞೆಯ ರೂಪದಲ್ಲಿ ವ್ಯಕ್ತ ಪಡಿಸಬಹುದು.
# Hash tags (ಹ್ಯಾಶ್ ಟ್ಯಾಗ್ಗಳು)
ಸಾಮಾಜಿಕ  ತಾಣ ಟ್ವೀಟರ್ನಲ್ಲಿ ಟ್ವೀಟ್ಗಳನ್ನು categorize ಮಾಡುವುದಕ್ಕಾಗಿ # ಹ್ಯಾಶ್ ಟ್ಯಾಗ್ಗಳು ಬಳಸಲ್ಪಡುತ್ತವೆ. ಸಾಮಾಜಿಕ ತಾಣಗಳಲ್ಲಿ ಈ #ಗಳ ಮೂಲಕ ಅದೆಷ್ಟೋ ಕೆಟಗರಿಗಳು ದಿನಾ ಹುಟ್ಟುಕೊಳ್ಳುತ್ತವೆ. ಈ ರೀತಿ ಟ್ವೀಟ್ ಗಳನ್ನು categorize ಮಾಡುವುದರಿಂದ ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದ ಟ್ವೀಟ್ ಗಳನ್ನು ನಾವು ಒಂದೆಡೆ ಪಡೆಯಬಹುದು. ಅದೇ ರೀತಿ ಫೇಸ್ ಬುಕ್ ನಲ್ಲಿಯೂ ಹ್ಯಾಶ್ ಟ್ಯಾಗ್ ಬಳಸಿ ವಿಷಯಗಳನ್ನು categorize ಮಾಡಬಹುದಾಗಿದೆ.
ಉದಾಹರಣೆಗೆ 
#NaMo
#FIFA
#Cricket
Punಡಿತರ ಲೋಕ
ಅಂತಜಾ೯ಲದಲ್ಲಿ ಬರೆಯುವಾಗ ಕ್ಲೀಷೆ ಅಥವಾ ಪನ್ ಗಳು ಹೆಚ್ಚಾಗಿ ಬಳಸಲ್ಪಡುವುದು ಇನ್ನೊಂದು ವಿಶೇಷ. ಸಾಮಾಜಿಕ ತಾಣದಲ್ಲಿ ಬರೆಯುವವರು ತಮ್ಮ ಬರಹಗಳನ್ನು ಆಕಷ೯ಕವಾಗುವಂತೆ ಮಾಡಲು ಪನ್ ಗಳನ್ನು ಧಾರಾಳವಾಗಿ ಬಳಸುತ್ತಾರೆ. ಪನ್ ಗಳ ಬಳಕೆಯಿಂದಾಗಿ ಹೊಸ ಪದಗಳು ಹುಟ್ಟಿ ಕೊಳ್ಳುವುದು ಮಾತ್ರವಲ್ಲದೆ ಸಾಮಾನ್ಯ ಪದಗಳಿಗೂ ಹೊಸ ಅಥ೯ ಸಿಕ್ಕಿದಂತಾಗುತ್ತದೆ. ಒಬ್ಬ ವ್ಯಕ್ತಿ ಪನ್ ಬಳಸಿ ಒಂದು ಪೋಸ್ಟ್ ಹಾಕಿದರೆ ಅದಕ್ಕೆ ಪನ್ ಮೂಲಕವೇ ಕಾಮೆಂಟ್  ಹಾಕುವ ಅನೇಕ Punಡಿತರನ್ನು ನಾವಿಲ್ಲಿ ಕಾಣಬಹುದಾಗಿದೆ. 
ಬೀಚಿ, ದುಂಡಿರಾಜ್ ಮೊದಲಾದವರ ಬರಹಗಳಲ್ಲಿ ಕಾಣುವ ಪನ್ ಇದೀಗ ಸಾಮಾಜಿಕ ತಾಣದಲ್ಲಿ ಹೆಚ್ಚೆಚ್ಚು ಜನಪ್ರಿಯವಾಗುತ್ತಿರುವುದು ಒಳ್ಳೆಯ ಬೆಳವಣಿಗೆ. 
ಯಾವುದೇ ಗಂಭೀರ ವಿಷಯವನ್ನು ಪನ್ ಬಳಸಿ ಪ್ರಸ್ತುತ ಪಡಿಸಿದರೆ ಅದನ್ನು ಓದಲೂ ಖುಷಿಯಾಗುತ್ತದೆ. ಈ ಮೂಲಕ ಓದುಗರನ್ನು ತಮ್ಮತ್ತ ಸೆಳೆಯುವ ಶಕ್ತಿ ಪನ್ ಗಳಿಗಿವೆ.
ಅಂದಹಾಗೆ ಪನ್ ಎಂಬುದು ಯಾರಪ್ಪನ್ ಸೊತ್ತು ಅಲ್ಲ ಅಲ್ವಾ? ಎಂಬುದು ಫೇಸ್ ಬುಕ್ನಲ್ಲಿ ಗೆಳಯರೊಬ್ಬರು ಪನ್ ಬಗ್ಗೆ ಬರೆದ ಪೋಸ್ಟೊಂದಕ್ಕೆ ಬಂದ ಕಾಮೆಂಟ್ !
ಸಂವಹನ ರೀತಿಯ ಮೇಲೆ ಎಫ್ ಬಿ ಇಫೆಕ್ಟ್ 
ನಮ್ಮ ಜೀವನದ ಮೇಲೆ ಫೇಸ್ ಬುಕ್ ಅದೆಷ್ಟು ಪರಿಣಾಮವನ್ನು ಬೀರಿದೆ ಎಂಬುದರ ಬಗ್ಗೆ ಇಲ್ಲಿ ವಿವರಿಸುವ ಅಗತ್ಯವಿಲ್ಲ. ಆದರೆ ಫೇಸ್ ಬುಕ್ ನಿಂದಾಗಿ ನಮ್ಮ ಸಂವಹನ ರೀತಿಯಲ್ಲಿ ಬದಲಾವಣೆಗಳಾಗಿವೆ ಎಂಬ ಸತ್ಯವನ್ನು ಒಪ್ಪಲೇ ಬೇಕು. ಫೇಸ್ ಬುಕ್ ನಲ್ಲಿರುವ  friend,like,Share , profile, status, unfriend,Wall, Tag, poke ಮೊದಲಾದ ಪದಗಳು ಬೇರೆಯೇ ಅಥ೯ವನ್ನು ಕಲ್ಪಿಸಿಕೊಟ್ಟಿದ್ದು ಮಾತ್ರವಲ್ಲದೆ ನಿದಿ೯ಷ್ಟ ಪದಗಳ ಅಥ೯ ವ್ಯಾಪ್ತಿಯನ್ನೂ ಹೆಚ್ಚಿಸಿದೆ. ಉದಾಹರಣೆಗೆ status ಎಂಬ ಪದಕ್ಕೆ ಸ್ಥಾನಮಾನ ಎಂಬ ಅಥ೯ವಿದ್ದರೂ, ಫೇಸ್ ಬುಕ್ ನಲ್ಲಿ ಅದರ ಅಥ೯ ಬದಲಾಗಿದೆ. ಏತನ್ಮಧ್ಯೆ, ಫೇಸ್ ಬುಕ್ ನಲ್ಲಿ poke ಅಂದರೇನು? ಎಂಬುದರ ಬಗ್ಗೆ ತಲೆಕೆಡಿಸಿಕೊಂಡವರೇ ಹೆಚ್ಚು. ನಿಘಂಟುವಿನಲ್ಲಿ poke ಎಂಬ ಪದಕ್ಕೆ ತಿವಿಯು ಎಂಬ ಅಥ೯ವಿದೆ. ಆದರೆ poke ಎನ್ನುವ ಪದಕ್ಕೆ ವಿಶೇಷ ಅಥ೯ವೇನೂ ಕಲ್ಪಿಸಬೇಕಾಗಿಲ್ಲ, ಫೇಸ್ ಬುಕ್ ನಲ್ಲಿ ಅಂಥದೊಂದು Cool Feature ಇರಲಿ ಎಂದು ನಾವು poke ಬಳಕೆ ಮಾಡಿದ್ದೆವು ಎಂದಿದ್ದರು ಫೇಸ್ ಬುಕ್ ಸಂಸ್ಥಾಪಕ Mark Zuckerberg. ಈಗೀಗ ಗೆಳೆಯರ ಜತೆ ಮಾತನಾಡುವಾಗ ಮಾತು ಮಾತಿನೆಡೆಯಲ್ಲಿ ನಾನು ನಿನ್ನ ಮಾತನ್ನು ಲೈಕ್ ಮಾಡುತ್ತೇನೆ, ಅವನು ನನ್ನ ಮ್ಯೂಚ್ವಲ್ ಫ್ರೆಂಡ್ ಎಂದು ಮಾತುಗಳು ಕೇಳಿಬಂದರೆ ತಪ್ಪೇನಿಲ್ಲ. ಇದೆಲ್ಲಾ ಎಫ್ ಬಿ ಎಫೆಕ್ಟ್ ಎಂದು ಕಾಮೆಂಟಿಸಿ ನೀವು ಸುಮ್ಮನಾಗಬೇಕಷ್ಟೇ.
ಹೊಸ ಪದಗಳು ಹುಟ್ಟುವುದು ಇಲ್ಲೇ
ಕಾದಂಬರಿ,ರತೆ, ನಾಟಕಗಳನ್ನು ರಚಿಸುವಾಗ ಬರಹಗಾರರು ಹೊಸ ಪದಗಳನ್ನು ಸೃಷ್ಟಿಸುತ್ತಿದ್ದ ಕಾಲವೊಂದಿತ್ತು. ಆದರೆ ಈಗ ಹೊಸ ಪದಗಳು ಅಂತಜಾ೯ಲದಲ್ಲೇ ಹುಟ್ಟುತ್ತವೆ. ಅಂಥಾ ಪದಗಳಲ್ಲೊಂದು ಸೆಲ್ಫೀ .2013ರಲ್ಲಿ ಸೆಲ್ಪೀ ಎಂಬ ಪದ ಆಕ್ಸ್ಫರ್ಡ್ ಡಿಕ್ಷನರಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿತ್ತು. ಹೀಗೆ ಅಂತಜಾ೯ಲದಲ್ಲಿ ಹುಟ್ಟುವ ಪದಗಳು ಡಿಕ್ಷನರಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಭಾಷೆಯ ವ್ಯಾಪ್ತಿಯನ್ನು ಹೆಚ್ಚಿಸಿದೆ. ಇಂಗ್ಲೀಷ್ ಭಾಶೆಯಲ್ಲಿ ಮಾತ್ರ ಅಲ್ಲ ನಮ್ಮ ಮಾತೃಭಾಷೆಗಳಲ್ಲಿಯೂ ಇಂಥಾ ಪದಗಳು ಸೇರಿಕೊಂಡು ಹೊಸ ಪದವನ್ನೇ ಸೃಷ್ಟಿಸಿವೆ. ಉದಾಹರಣೆಗೆ ಗೂಗಲ್ ಅನ್ನೋದು ಸರ್ಚ್ ಇಂಜಿನ್. ಏನಾದರೂ ಹುಡುಕು ಅನ್ನೋದಕ್ಕೆ ನಾವೀಗ ಗೂಗಲಿಸಿ (Google it)ಎಂದು ಹೇಳುವಂತಾಗಿದೆ. ಅಂತಜಾ೯ಲದಲ್ಲಿನ ಭಾಷಾ ಪ್ರಭಾವಕ್ಕೆ ಇದು ಉದಾಹರಣೆ.
ಭಾಷೆಯ ಮೇಲೆ ಪರಿಣಾಮ
ಅಂತಜಾ೯ಲದಲ್ಲಿ ಬಳಸಲ್ಪಡುವ ಭಾಷೆಗಳಿಂದಾಗಿ ನಮ್ಮ ಭಾಷೆಯ ಸೊಗಡು ಮಾಯವಾಗುತ್ತಿದೆಯೆ? ವಿದ್ಯಾಥಿ೯ಗಳು ಪರೀಕ್ಷೆಯಲ್ಲಿಯೂ ಅಂತಜಾ೯ಲದಲ್ಲಿ ಬಳಸುವಂತೆ ಶಾಟ್೯ ಫಾಮ್೯ಗಳನ್ನು ಬರೆಯುತ್ತಿದ್ದಾರೆ, ಕಾಗುಣಿತ ದೋಷಗಳ ಬಗ್ಗೆ ವ್ಯಾಕರಣಗಳ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ ಎಂಬ ದೂರುಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ನಿಜ, ಸಾಮಾಜಿಕ ತಾಣಗಳು ನಮ್ಮ ಭಾಷೆಯ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮ ಬೀರಿದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ಅದೇ ವೇಳೆ ಸಾಮಾಜಿಕ ತಾಣಗಳು ನಮ್ಮ ಭಾಷೆ, ಮಾತಾಡುವ ರೀತಿಯನ್ನೇ ಬದಲಿಸಿವೆ. ನಮ್ಮ ವೈಯಕ್ತಿಕ ವಿಚಾರಗಳನ್ನು  ನಮ್ಮ ಭಾವನೆಗಳನ್ನು  ಹೆಚ್ಚು ಜನರಿಗೆ ತಲುಪಂತೆ ಮಾಡಿದ್ದೇ ಸಾಮಾಜಿಕ ಜಾಲ ತಾಣಗಳು. 
ಈ  ಹಿಂದೆ ನಮ್ಮ ವಿಚಾರಗಳನ್ನು ಇನ್ನೊಬ್ಬರಿಗೆ ತಲುಪುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿದ್ದುವು. ಆದರೆ ಇದೀಗ ಸಾಮಾಜಿಕ ಜಾಲ ತಾಣಗಳು ಪರ್ಯಾಯ ಪತ್ರಿಕೋದ್ಯಮವಾಗಿ ಬೆಳೆದು ನಿಂತಿವೆ. ಸುದ್ದಿಗಳನ್ನು ಬೇಗನೆ ತಿಳಿಯಲಿರುವ ಮಾಧ್ಯಮಗಳಾಗಿ ಸಾಮಾಜಿಕ ತಾಣಗಳು ಬದಲಾಗುತ್ತಿವೆ. ಇಲ್ಲಿ ಹೋರಾಟದ ಕಿಚ್ಚಿದೆ, ಆಕ್ರೋಶದ ದನಿಯಿದೆ, ನಕ್ಕು ಹಗುರಾಗುವ, 
ಟೀಕೆ ಮಾಡುವ ಹಕ್ಕು ಇದೆ. ಹೀಗೆ ಎಲ್ಲವನ್ನೂ ಒಂದೆಡೆ ಸೇರಿಸುವ ಸಾಮಾಜಿಕ ತಾಣಗಳು ಇಂದು ಸಮಾಜದ ಪ್ರತಿಬಿಂಬವೆಂಬಂತೆ ಕಾರ್ಯವೆಸಗುತ್ತಿವೆ. ಹೀಗಿರುವಾಗ ಅದರ ಪ್ರಭಾವ ಭಾಷೆಯ ಮೇಲೆ ಬೀಳುವುದು ಸಹಜವೇ.
ಯಾವುದೇ ಸಾಮಾಜಿಕ ತಾಣಕ್ಕೆ ಲಾಗಿನ್ ಆದ  ಕೂಡಲೇ ಏನಾದರೂ ಗೀಚಲೇ ಬೇಕು, ನಮ್ಮ ಮನಸ್ಸಲ್ಲಿರುವುದನ್ನು ಬರೆದೇ ಬಿಡೋಣ ಎನ್ನುವಷ್ಟು ಟೆಂಪ್ಟ್ ಮಾಡುವ ತಾಕತ್ತು ಅವುಗಳಿಗಿವೆ. ಇದರ ಇವುಗಳ ಪ್ರಭಾವದಿಂದ ನಮ್ಮ ನಡುವಿನ ಸಂವಹನ ರೀತಿಯೂ ಬದಲಾಗಿದೆ. ವ್ಯಕ್ತಿಗಳ ನಡುವೆ ನಡೆಯುವ ಸಂಭಾಷಣೆಯಿಂದ ಭಿನ್ನವಾಗಿ ಸಾಮಾಜಿಕ ತಾಣದಲ್ಲಿ ನಾವು ತುಂಬಾ ಇನ್ಫಾರ್ಮಲ್  ಮತ್ತು ಮುಕ್ತವಾಗಿ ವ್ಯವಹರಿಸುತ್ತೇವೆ. ಮಾತ್ರವಲ್ಲದೆ ನಮ್ಮ ಬರವಣಿಗೆಯ ರೀತಿಯೂ ಇಲ್ಲಿ ಬದಲಾಗುತ್ತದೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿ ನೋಡಿ ಸಾಮಾಜಿಕ ತಾಣ ಅದೆಷ್ಟೋ ಕವಿ , ಬರಹಗಾರರನ್ನು ಹುಟ್ಟು ಹಾಕಿದೆ. ಫೇಸ್ ಬುಕ್ ಗೋಡೆಯಲ್ಲಿ ಬರೆದ ಕವನಗಳು, ಸ್ಟೇಟಸ್ ಗಳು ಪುಸ್ತಕ ರೂಪದಲ್ಲಿ ಹೊರ ಬರುತ್ತಿವೆ. ಸಾಮಾಜಿಕ ತಾಣಗಳು ಬರಹದ ವ್ಯಾಪ್ತಿಯನ್ನೂ ಹೆಚ್ಚಿಸುವ ಜತೆಗೆ ಬರಹಗಾರರಿಗೆ ಎಕ್ಸ್ ಪೋಷರ್ ನ್ನು ನೀಡುತ್ತಿದೆ ಎಂಬುದಕ್ಕೆ ಈ ಬೆಳವಣಿಗೆಗಳೇ ಸಾಕ್ಷಿ.
ನಮ್ಮ ಮನಸ್ಸಿಗೆ ತೋಚಿದ್ದನ್ನು ಸರಾಗವಾಗಿ ಬರೆಯುವಂತೆ ಫೇಸ್ ಬುಕ್ ಅನುಮತಿ ನೀಡಿದರೆ, ನೀವು ಹೇಳೋಕೆ ಇರೋದನ್ನ 140 ಅಕ್ಷರಗಳಲ್ಲಿ ಹೇಳಿ ಮುಗಿಸಿ ಅನ್ನುತ್ತೆ ಟ್ವಿಟರ್. 
ನಿಮ್ಮ ಮನಸ್ಸಿಗೆ ಅನಿಸಿದ್ದನ್ನು ನೇರ ಹಾಗು ಧೈರ್ಯವಾಗಿ ಹೇಳುವಂತೆ ಮಾಡುತ್ತದೆ ಬ್ಲಾಗ್  ಗಳು. ನಿಮಗಿಷ್ಟವಾದ ಯಾವುದೇ ವಿಷಯವನ್ನು ಹಂಚಿಕೊಳ್ಳಲು ಈ ಸಾಮಾಜಿಕ ತಾಣಗಳು ಅನುವು ಮಾಡಿಕೊಡುವ ಮೂಲಕ ಇವು ಜಗತ್ತನ್ನೇ ಕಿರಿದು ಮಾಡಿವೆ. ಹೀಗೆ ಎಲ್ಲ ಸಾಮಾಜಿಕ ತಾಣಗಳು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವೇದಿಕೆ ಕಲ್ಪಿಸಿಕೊಟ್ಟರೂ ಇಲ್ಲಿ ಬರೆಯುವ ಶೈಲಿ ಒಂದಕ್ಕಿಂತ ಒಂದು ಭಿನ್ನವಾಗಿರುತ್ತದೆ. ಇಲ್ಲಿ ನೀವು ಹೇಳಬೇಕಾದುದನ್ನು ಚೊಕ್ಕವಾಗಿ ಹೇಳಬೇಕು ಇಲ್ಲವೇ ನಿಮ್ಮ ಬರಹಗಳು ಆಕಷ೯ಕವಾಗಿರಬೇಕು. ಹಾಗಿದ್ದರೆ ಮಾತ್ರ ಸೋಷ್ಯಲ್ ಸೈಟ್ನಲ್ಲಿ ಬರಹಗಳು ಗಮನ ಸೆಳೆಯಬಹುದು. ಸೋಷ್ಯಲ್ ಸೈಟ್ನಲ್ಲಿ ನಮ್ಮ ಭಾಷೆ  ಹಾಳಾಗುತ್ತೆ ಅಂತ ಒಂದು ವರ್ಗ ವಾದಿಸಿದರೂ ಇಂದಿನ ಯುವ ಜನಾಂಗ ಭಾಷೆ ಹಾಳಾಗಿಲ್ಲ, ಅದು ಇನ್ನೊಂದು ಸಾಧ್ಯತೆಯನ್ನು ಕಲ್ಪಿಸಿದೆ ಅಂತ ವಾದಿಸುತ್ತಿದೆ. ಒಟ್ಟಿನಲ್ಲಿ ಯಾವುದೇ ಭಾಷೆಯಾಗಲಿ, ಸಾಮಾಜಿಕ ತಾಣಗಳಲ್ಲಿ ಬರೆಯುವಾಗ ಮಾತೃಭಾಷೆಯಲ್ಲಿ ಬರೆದ ಬರಹಗಳೇ ನಮಗೆ ಹೆಚ್ಚು ಖುಷಿ ನೀಡುತ್ತವೆ. ಭಾಷೆ ಎಂಬುದು ಸಂವಹನ ಮಾಧ್ಯಮ ಅಷ್ಟೇ ಅಲ್ಲ ಅದು ನಮ್ಮೊಳಗಿನ ಚೈತನ್ಯದ ಭಾವ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಕ್ತಪಡಿಸಲಿರುವ ಸಾಧನ. ಸಾಮಾಜಿಕ ತಾಣದಲ್ಲಿ ಯಾವ ಭಾಷೆ ಬೇಕು , ಯಾವುದು ಬೇಡ ಎಂಬ  ಚಚೆ೯ ಒತ್ತಟ್ಟಿಗಿರಲಿ, ಅಂತಜಾ೯ಲದಲ್ಲಿ ಬಳಕೆಯಾಗುವ ಭಾಷೆಯ ಬಗ್ಗೆ ಹೇಳುವುದಾದರೆ ಭಾಷೆ ಯಾವುದೇ ಇರಲಿ ಇಂಟರ್ನೆಟ್ ಸ್ಲಾಂಗ್ಗಳಿಂದಾಗಿ ಸೋಷ್ಯಲ್ ಮೀಡಿಯಾ ಭಾಷೆಯಂತೂ ಸಮೃದ್ಧವಾಗಿದೆ. 
-ರಶ್ಮಿ ಕಾಸರಗೋಡು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com