ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಶೇರ್ ಮಾಡುವ ಮುನ್ನ ಗಮನಿಸಿ

ವೈಯಕ್ತಿಕ ವಿಷಯಗಳಷ್ಟೇ ಅಲ್ಲ, ಸಾಮಾಜಿಕ ತಾಣದಲ್ಲಿ ಇನ್ನೂ ಕೆಲವು ವಿಷಯಗಳನ್ನು ನಾವು ಯಾವತ್ತೂ ಶೇರ್ ಮಾಡಬಾರದು. ಅದು ತುಂಬಾ ಖಾಸಗಿ ಅಲ್ಲದೇ ಹೋದರೂ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಫೇಸ್ ಬುಕ್ ಗೆ ಲಾಗಿನ್ ಆದ ಕೂಡಲೇ ಸ್ಟೇಟಸ್  ಬಾಕ್ಸ್ ನಲ್ಲಿ ನಿಮ್ಮ ಮನಸ್ಸಲ್ಲೇನಿದೆ? ಎಂಬ ಪ್ರಶ್ನೆ ನಮಗೆ ಕಾಣ ಸಿಗುತ್ತದೆ. ಹಾಗಂತ ಅಲ್ಲಿ ನಮ್ಮ ಮನಸ್ಸಲ್ಲಿ ಏನಿದೆಯೋ ಅದನ್ನೆಲ್ಲಾ ಬರೆದುಕೊಳ್ಳಬಹುದು. ಆದರೆ ಅದು ಸಾಮಾಜಿಕ ತಾಣ, ನಮ್ಮ ಡೈರಿ ಅಲ್ಲ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಸಾಮಾಜಿಕ ತಾಣಗಳಲ್ಲಿ ನಮಗೆ ಇಷ್ಟವಾದದನ್ನು ಹಂಚಿಕೊಳ್ಳಬಹುದು. ಆದರೆ ವೈಯಕ್ತಿಕ ವಿಷಯಗಳನ್ನು ಯಾವತ್ತೂ ಹಂಚಿಕೊಳ್ಳಲೇ ಹೋಗಬಾರದು. ಅಲ್ಲಿ ನಮ್ಮ ಸ್ನೇಹಿತರ ಪಟ್ಟಿಯಲ್ಲಿ ಹಲವಾರು ಅಪರಿಚಿತ ಸ್ನೇಹಿತರಿರುತ್ತಾರೆ, ಸಹೋದ್ಯೋಗಿಗಳಿರುತ್ತಾರೆ, ಯಾರೋ ದೂರದ ಸಂಬಂಧಿಗಳೂ ಇರುತ್ತಾರೆ. ಸಾಮಾನ್ಯವಾಗಿ ನಾವು ತುಂಬಾ ಆಪ್ತರ ಜತೆಗೆ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುತ್ತೇವೆ. ಆದರೆ ಇಲ್ಲಿ ಅದೆಷ್ಟೋ ಜನ ನಮಗೆ ಗೊತ್ತಿಲ್ಲದೇ ಇದ್ದವರಿರುತ್ತಾರೆ. ಅಂಥವರ ಜತೆಯಲ್ಲಿ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವುದೆ? ಬೇಡವೇ ಬೇಡ.
ವೈಯಕ್ತಿಕ ವಿಷಯಗಳಷ್ಟೇ ಅಲ್ಲ, ಸಾಮಾಜಿಕ ತಾಣದಲ್ಲಿ ಇನ್ನೂ ಕೆಲವು ವಿಷಯಗಳನ್ನು ನಾವು ಯಾವತ್ತೂ ಶೇರ್ ಮಾಡಬಾರದು. ಅದು ತುಂಬಾ ಖಾಸಗಿ ಅಲ್ಲದೇ ಹೋದರೂ ಇಂಥಾ ಕೆಲವು ವಿಷಯಗಳು ಹಲವಾರು ಬಾರಿ ದುರ್ಬಳಕೆಯಾಗಿ ಫಜೀತಿ ತಂದೊಡ್ಡುತ್ತವೆ.
ನಿಮ್ಮ ಮೀಟಿಂಗ್, ಔಟಿಂಗ್ ವಿಷಯ
ನೀವು ಯಾರನ್ನು ಭೇಟಿ ಮಾಡುತ್ತಿದ್ದೀರಿ, ಯಾರ ಜತೆ ಸಮಯ ಕಳೆಯುತ್ತಿದ್ದೀರಿ ಎಂಬ ಖುಷಿಯನ್ನು ಹಂಚಿಕೊಳ್ಳುವುದು ತಪ್ಪೇನಲ್ಲ. ಆದರೆ ನೀವು ಆ ಖುಷಿಯನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿ ಯಾರ ಜತೆ ಅದನ್ನು ಹಂಚಿಕೊಳ್ಳುತ್ತಿದ್ದೀರಿ ಎಂಬುದು ಮುಖ್ಯ. ಸಾಮಾಜಿಕ ತಾಣಗಳಲ್ಲಿರುವ ಪ್ರೈವಸಿ ಸೆಟ್ಟಿಂಗ್ ಗಳನ್ನು ನೋಡಿ, ಅಲ್ಲಿ ನೀವು ಪೋಸ್ಟ್ ಗಳನ್ನು ಯಾರ ಜತೆಗೆ ಮಾತ್ರ ಹಂಚಿಕೊಳ್ಳಬೇಕೆಂದು ಬಯಸುತ್ತೀರೋ ಅ ಜತೆಗೆ ಮಾತ್ರ ಹಂಚಿಕೊಳ್ಳುವ ಅವಕಾಶ ಇದೆ. ಇನ್ನು ನಿಮ್ಮ ಇಂಥಾ ಮೀಟಿಂಗ್, ಔಟಿಂಗ್ ಗಳ ಬಗ್ಗೆ ಎಲ್ಲರಲ್ಲಿ ಹೇಳಿಕೊಳ್ಳಬೇಕಾದ ಅವಶ್ಯಕತೆಯೂ ಇಲ್ಲ. ನಿಮಗೆ ಆಗದವರು ಕೂಡಾ ಸೋಷ್ಯಲ್ ಮೀಡಿಯಾಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ನಿಮ್ಮ ಜತೆ ಕನೆಕ್ಟ್ ಆಗಿರಬಹುದು. ಅಂಥವರು ಇಂಥಾ ವಿಷಯಗಳಲ್ಲಿ ಮೂಗು ತೂರಿಸುವ ಸಾಧ್ಯತೆಯೂ ಇದೆ. ಕೆಲವೊಮ್ಮೆ ಇಂಥಾ ಪೋಸ್ಟ್‌ಗಳು ನಿಮ್ಮ ಜೀವನ ಅಥವಾ ವೃತ್ತಿ ಜೀವನಕ್ಕೆ ಮುಳುವಾಗಬಹುದು.
ಫೋಟೋಗಳನ್ನು ಶೇರ್ ಮಾಡುವಾಗ ಎಚ್ಚರಿಕೆ
ಸಾಮಾಜಿಕ ತಾಣಗಳಲ್ಲಿ ಫೋಟೋ ಗಳನ್ನು ಶೇರ್ ಮಾಡಿ ತಮ್ಮ ಸಂತೋಷದ ಕ್ಷಣಗಳನ್ನು ದಾಖಲಿಸುವುದು ಯಾರಿಗೆ ಇಷ್ಟ ಇಲ್ಲ ಹೇಳಿ? ಆದರೆ ನೀವು ಯಾವ ರೀತಿಯ ಫೋಟೋಗಳನ್ನು ಶೇರ್ ಮಾಡಬೇಕು, ಪ್ರೈವೆಸಿ ಸೆಟ್ಟಿಂಗ್ ಗಳನ್ನು ಹೇಗೆ ಬಳಸಬೇಕೆಂಬುದರ ಬಗ್ಗೆ ನಿಮಗೆ ಅರಿವು ಇರಲೇ ಬೇಕು. ತೀರಾ ಖಾಸಗಿ ಫೋಟೋಗಳನ್ನು ಯಾವತ್ತೂ ಶೇರ್ ಮಾಡಬೇಡಿ. ನೀವು ನಿಮ್ಮ ಫ್ರೆಂಡ್ಸ್ ಜತೆ ತೆಗೆದ ಫೋಟೋಗಳೇ ಆಗಿರಲಿ, ಸಾಮಾಜಿಕ ತಾಣಗಳಲ್ಲಿ ಅವುಗಳನ್ನು ಶೇರ್ ಮಾಡುವ ಮುನ್ನ ನಿಮ್ಮ ಸ್ನೇಹಿತರ ಅನುಮತಿಯನ್ನೂ ಪಡೆಯಬೇಕು ಎಂಬುದನ್ನು ಮರೆಯದಿರಿ. ನಿಮ್ಮ ಫೋಟೋದಲ್ಲಿರುವ ನಿಮ್ಮ ಫ್ರೆಂಡ್ಸ್‌ಗೆ ಆ ಫೋಟೋ ಶೇರ್ ಮಾಡುವುದು ಇಷ್ಟವಿಲ್ಲದೇ ಇರಬಹುದು, ಕೆಲವೊಮ್ಮೆ ಆ ಫೋಟೋದಲ್ಲಿ ಅವರ ಉಡುಗೆ ತೊಡುಗೆಗಳು ಸರಿಯಾಗಿಯೇ ಇಲ್ಲದಿರಬಹುದು. ಹೀಗಿರುವಾಗ ಇದು ಇನ್ಯಾವುದೋ ಸಮಸ್ಯೆಗೆ ಸಿಕ್ಕಿ ಹಾಕಿಕೊಳ್ಳಬಹುದು. ಆದ್ದರಿಂದ ಫೋಟೋ ಶೇರ್ ಮಾಡುವಾಗ ನಾವು ಯಾರ ಜತೆ ಆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದೇವೆ ಎಂಬುದರ ಬಗ್ಗೆ ಎಚ್ಚರಿಕೆಯಿಂದಿರಬೇಕು. ನೀವು ಯಾರ ಜತೆ ಇರುವ ಫೋಟೋಗಳನ್ನು ಹಾಕಿರುತ್ತೀರೋ ಅವರನ್ನು ಟ್ಯಾಗ್ ಮಾಡುವ ಅವಕಾಶವಿದೆ. ಟ್ಯಾಗ್ ಮಾಡುವ ಮುನ್ನವೂ ಆ ವ್ಯಕ್ತಿಯ ಅನುಮತಿ ಪಡೆಯಿರಿ. ವಿಶೇಷವಾಗಿ ಹೆಣ್ಮಕ್ಕಳು ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಳ್ಳುವಾಗ ಅತೀವ ಜಾಗ್ರತೆ ವಹಿಸಬೇಕು. ಇದು ತಂತ್ರಜ್ಞಾನದ ಯುಗ, ಒಂದು ಫೋಟೋವನ್ನು ಹೇಗೆ ಬೇಕಾದರೂ ಬಳಸಿಕೊಳ್ಳುವ ತಂತ್ರಗಳು ನಮ್ಮಲ್ಲಿವೆ. ಫೋಟೋಗಳನ್ನು ಹೇಗೆ ಬೇಕಾದರೂ ಎಡಿಟ್ ಮಾಡಿ, ಅವುಗಳ ದುರ್ಬಳಕೆ ಮಾಡುವ ಮಂದಿಯೂ ನಮ್ಮಲ್ಲಿದ್ದಾರೆ ಎಂಬ ವಿಷಯಗಳು ಯಾವತ್ತೂ ನೆನಪಿನಲ್ಲಿರಲಿ.
ಮಕ್ಕಳ ಫೋಟೋ ಶೇರ್ ಮಾಡುವಾಗ ಗಮನಿಸಿ
ಮಕ್ಕಳ ಫೋಟೋಗಳನ್ನು ಶೇರ್ ಮಾಡುವುದು ಎಲ್ಲರಿಗೂ ಖುಷಿ ಕೊಡುವ ವಿಚಾರವೇ ಆಗಿದ್ದರೂ ನಿಮ್ಮ ಮಕ್ಕಳ ಭದ್ರತೆಯ ದೃಷ್ಟಿಯಿಂದ ಫೋಟೋಗಳನ್ನು ಶೇರ್ ಮಾಡುವುದು ಬೇಡ. ನಿಮ್ಮ ಶತ್ರುಗಳು ನಿಮ್ಮನ್ನು ಟಾರ್ಗೆಟ್ ಮಾಡುವ ಬದಲು ನಿಮ್ಮ ಮಕ್ಕಳನ್ನು ಟಾರ್ಗೆಟ್  ಮಾಡುವ ಸಾಧ್ಯತೆ ಇರುವುದರಿಂದ ನಿಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಬಹಿರಂಗ ಪಡಿಸದಿರುವುದು ಒಳಿತು.
ಫೇಸ್ ಬುಕ್ ನಲ್ಲಿ ಅಷ್ಟೇ ಅಲ್ಲ, ಇನ್ ಸ್ಟಾ ಗ್ರಾಂ ನಲ್ಲಿ ಪೋಸ್ಟ್ ಮಾಡುವುದಾಗಲೀ, ವಾಟ್ಸಾಪ್ , ಹೈಕ್ ಅಥವಾ ಇನ್ಯಾವುದೇ ಮೆಸೆಂಜರ್ ಗಳಲ್ಲಿ ಖಾಸಗಿ ಚಿತ್ರಗಳನ್ನು ಯಾವತ್ತೂ ಕಳುಹಿಸಲು ಹೋಗಬೇಡಿ.
ಕಚೇರಿಯ ವಿಷಯಗಳು ಕಚೇರಿಯಲ್ಲೇ ಇರಲಿ
 ಕಚೇರಿಯಲ್ಲಿ, ಕಾರ್ಯ ಕ್ಷೇತ್ರದಲ್ಲಿ ಸಮಸ್ಯೆಗಳು ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೇ ಇರುತ್ತವೆ. ಹೀಗೆ ಸಮಸ್ಯೆಗಳು ಎದುರಾದಾಗ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತರಬೇಕೇ ಹೊರತು ಸಾಮಾಜಿಕ ತಾಣಗಳಲ್ಲಿ ಅದನ್ನು ಹೇಳಿಕೊಳ್ಳಬಾರದು. ಅಷ್ಟೇ ಅಲ್ಲ, ಆಫೀಸಿನ ಪ್ರಾಜೆಕ್ಟ್ ಗಳ ಬಗ್ಗೆಯಾಗಲಿ ಇನ್ನಿತರ ಕಚೇರಿ ಸಂಬಂಧಿತ ವಿಷಯಗಳೇ ಆಗಿರಲಿ, ಕಚೇರಿಯ ಅನುಮತಿ ಇಲ್ಲದೆ ಅದನ್ನು  ಶೇರ್ ಮಾಡಲು ಹೋಗಬಾರದು. ಕೆಲವೊಂದು ಕಚೇರಿಗಳಲ್ಲಿ ಸಾಮಾಜಿಕ ತಾಣಗಳ ಬಳಕೆಗೆ ನಿಷೇಧ ಹೇರಲಾಗುತ್ತಿರುವುದು ಕೂಡಾ ಇದೇ ಕಾರಣದಿಂದಲೇ.
ನಿಮ್ಮ ವಿಳಾಸ ಮತ್ತು ಫೋನ್ ನಂಬರ್
ಯಾವುದೇ ಕಾರಣಕ್ಕೂ ವಿಳಾಸ, ಫೋನ್ ನಂಬರ್ ಗಳನ್ನು ಇಲ್ಲಿ ಶೇರ್ ಮಾಡಬೇಡಿ. ನಿಮ್ಮ ಮನೆಯ ವಿಳಾಸ ನೀಡುವುದು ದರೋಡೆಗೆ ಆಹ್ವಾನವೂ ಆಗಬಹುದು. ಫೋನ್ ನಂಬರ್ ಶೇರ್ ಮಾಡುವಾಗಲೂ ಅಷ್ಟೇ ನಿಮ್ಮ ಖಾಸಗಿ ನಂಬರ್ ಗಳು ಖಾಸಗಿಯಾಗಿಯೇ ಇರಲಿ. ಫೋನ್ ನಂಬರ್ ಶೇರ್ ಮಾಡುವ ಮೂಲಕ ನಿಮಗೆ ಇನ್ಯಾರೋ ಕರೆ ಮಾಡಿ ಕಿರಿ ಕಿರಿ ಮಾಡುತ್ತಾರೆ ಎಂದಲ್ಲ, ಕೆಲವೊಮ್ಮೆ ಯಾವುದೋ ಅಶ್ಲೀಲ ಮಾಹಿತಿಗಳನ್ನು ರವಾನಿಸುವಾಗ ಅದರ ಜತೆ ನಿಮ್ಮ ಫೋನ್ ನಂಬರ್ ಗಳನ್ನೂ ದಾಖಲಿಸುವ ವಿಕೃತ ಸಂತೋಷಿಗಳೂ ನಮ್ಮ ನಡುವೆ ಇದ್ದಾರೆ. ತಂತ್ರಜ್ಞಾನ ಮುಂದುವರಿದಷ್ಟೂ ಅದನ್ನು ದುರ್ಬಳಕೆ ಮಾಡುವ ಜನರು ಇದ್ದೇ ಇರುತ್ತಾರೆ ಎಂಬುದನ್ನು ನೆನಪಿನಲ್ಲಿಡಿ.
ಖಾಸಗಿ ವ್ಯವಹಾರ, ವಹಿವಾಟು ಮತ್ತು ಆರ್ಥಿಕ ಮಾಹಿತಿ
ಯಾವುದೇ ವ್ಯವಹಾರ, ವಹಿವಾಟುಗಳಿರಲಿ ಅದರ ಬಗ್ಗೆ ಮಾಹಿತಿ  ನೀಡುವಂತ ಯಾವುದೇ ಪೋಸ್ಟ್ ಗಳನ್ನು ಶೇರ್ ಮಾಡಲೇ ಬಾರದು. ಆರ್ಥಿಕ ಮಾಹಿತಿಗಳ ಬಗ್ಗೆ ಯಾವುದೇ ಸಾಮಾಜಿಕ ತಾಣಗಳಲ್ಲಿ ಗುಟ್ಟು ಬಿಟ್ಟುಕೊಡಬೇಡಿ. 
ನಿಮ್ಮ ಪಾಸ್ ವರ್ಡ್  ಮತ್ತು ಪಾಸ್ ವರ್ಡ್ ಹಿಂಟ್
ಸಾಮಾಜಿಕ ತಾಣಗಳ ಮೂಲಕ ನಿಮ್ಮ ಸ್ನೇಹಿತರಲ್ಲಿ ನಿಮ್ಮ ಪಾಸ್‌ವರ್ಡ್ ಗಳನ್ನು ಶೇರ್ ಮಾಡಬೇಡಿ. ನಿಮ್ಮ ಸ್ನೇಹಿತ ನಿಮಗೆ ನಂಬಿಕಸ್ಥನಾಗಿರಬಹುದು. ಆದರೆ ಇನ್ಯಾವುದೋ ರೀತಿಯಲ್ಲಿ ಆ ಪಾಸ್ ವರ್ಡ್ ಬಹಿರಂಗವಾದರೆ ಅದು ದೊಡ್ಡ ಸಮಸ್ಯೆ ಯಾಗುತ್ತದೆ. ಅಷ್ಟೇ ಅಲ್ಲ, ಪ್ರೀತಿಸುವ ಜೋಡಿಗಳು ಪರಸ್ಪರ ಪಾಸ್ ವರ್ಡ್ ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಆದರೆ ಕೆಲವೊಂದು ಸಾರಿ ಇಂಥಾ ಅಪಾರ ನಂಬಿಕೆಗಳೂ ಮುಳುವಾಗುವುದುಂಟು. ಅದೆಷ್ಟೇ ನಂಬಿಕೆಯ ವ್ಯಕ್ತಿಯೇ ಆಗಿರಲಿ ನಿಮ್ಮ ಪಾಸ್ ವರ್ಡ್ ಗಳನ್ನು ಅವರೊಂದಿಗೆ ಶೇರ್ ಮಾಡುವ ಗೋಜಿಗೆ ಹೋಗದಿರಿ.
ಹೆಚ್ಚಿನ ವೆಬ್‌ಸೈಟ್ ಗಳಲ್ಲಿ ಪಾಸ್ ವರ್ಡ್ ಗಳನ್ನು ಕ್ರಿಯೇಟ್ ಮಾಡುವಾಗ ಪಾಸ್‌ವರ್ಡ್ ಹಿಂಟ್  ಪ್ರಶ್ನೆಗಳನ್ನು ಕೇಳಲಾಗುತ್ತದೆ. ನಿಮ್ಮ ಮುದ್ದಿನ ಸಾಕುಪ್ರಾಣಿಯಹೆಸರೇನು ನೀವು ವಾಸಿಸಿದ್ದ ಮೊದಲ ಜಾಗ ಯಾವುದು ನಿಮ್ಮ ಮೊದಲ ಟೀಚರ್ ಹೆಸರು ಏನು ಹೀಗೆ ಒಗಟು ಗಳಂತಿರುವ ಪ್ರಶ್ನೆಗಳನ್ನು ನಿಮ್ಮಲ್ಲಿ ಕೇಳಲಾಗುತ್ತದೆ. ನೀವು ಅದಕ್ಕೆ ಉತ್ತರಿಸಿ ಪಾಸ್ ವರ್ಡ್  ಕ್ರಿಯೇಟ್ ಮಾಡಿರುತ್ತೀರಿ. 
ಇತ್ತ ಫೇಸ್ ಬುಕ್ ನಲ್ಲಿ ಇನ್ನೇನೋ ಪೋಸ್ಟ್ ಹಾಕುವಾಗ ನಿಮ್ಮ ಸಾಕುಪ್ರಾಣಿಯ ಹೆಸರನ್ನೋ, ನಿಮ್ಮ ಟೀಚರ್ ಹೆಸರನ್ನೋ ಬಹಿರಂಗ ಮಾಡಿರುತ್ತೀರಿ. ಈ ಪೋಸ್ಟ್ ಗಳನ್ನು ಹಾಕುವಾಗ ನೀವು ಪಾಸ್ ವರ್ಡ್ ಕ್ರಿಯೇಟ್ ಮಾಡುವಾಗ ಯಾವ ಪ್ರಶ್ನೆಗೆ ಉತ್ತರಿಸಿದ್ದಿರಿ ಎಂಬ ವಿಷಯವೂ ನಿಮಗೆ ಮರೆತುಹೋಗಿರುತ್ತದೆ. ಆದರೆ ಹ್ಯಾಕರ್ ಗಳಿಗೆ ಇಂಥಾ ವಿಷಯಗಳು ಸಾಕು. ನಿಮ್ಮ ಬ್ಯಾಂಕ್ ಅಕೌಂಟ್ ನ್ನು ಹ್ಯಾಕ್ ಮಾಡುವಾಗ ನಿಮ್ಮ ಪಾಸ್ ವರ್ಡ್ ಮರೆತು ಹೋಗಿದೆ ಎಂಬ ಆಪ್ಶನ್ ಕ್ಲಿಕ್ ಮಾಡಿ, ಸೆಕ್ಯುರಿಟಿ ಪ್ರಶ್ನೆಗೆ ಉತ್ತರಿಸಿ ಸುಲಭವಾಗಿ ಹ್ಯಾಕ್ ಮಾಡಿಕೊಳ್ಳಬಹುದು. 
ಆದ್ದರಿಂದ ಸಾಮಾಜಿಕ ತಾಣಗಳಲ್ಲಿ ಈ ಎಲ್ಲ ಮಾಹಿತಿಗಳನ್ನು ಶೇರ್ ಮಾಡುವ ಮುನ್ನ ಜಾಗ್ರತೆ ವಹಿಸಿ.
-ರಶ್ಮಿ ಕಾಸರಗೋಡು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com