

ಹೆಣ್ಣು ಸಹಜವಾಗಿಯೇ ಶೃಂಗಾರಪ್ರಿಯೆ. ಕನ್ನಡಿಯೆದುರು ನಿಂತರಂತೂ ತನಗೆ ಸಾಟಿಯಾರು ಎಂಬಂತೆ ಸಿಂಗರಿಸಿಕೊಳ್ಳುವುದು ಅವಳ ಗುಣ. ಹಬ್ಬ ಹರಿದಿನಗಳಲ್ಲಂತೂ ವಿವಿಧ ಒಡವೆಗಳನ್ನು ಧರಿಸಿ ಸರ್ವಾಲಂಕಾರಭೂಷಿತೆಯಾಗಿ ಎಲ್ಲರ ಕಣ್ಮನ ಸೆಳೆಯುತ್ತಾಳೆ. ಮದುವೆಗಳಲ್ಲಂತೂ ಹೆಣ್ಣಿನ ಅಲಂಕಾರವೇ ವಿಶೇಷ. ಒಂದು ಕಚ್ಚೆಪಂಚೆ, ಬಿಳಿಅಂಗಿ ಹಾಗೂ ತಲೆಗೆ ಪೇಟ- ಇವಿಷ್ಟೇ ಮದುಮಗನ ದಿರಿಸಾದರೆ, ಮದುಮಗಳಿಗೆ ಏನಿಲ್ಲವೆಂದರೂ ಹತ್ತು ಕೆಜಿಗಳಷ್ಟು ತೂಗುವ ಅಲಂಕಾರಿಕೆ ಇರುತ್ತದೆ. ಕಿವಿ, ಮೂಗು, ಹಣೆ, ಕತ್ತು, ಕಾಲು, ಕೈ, ಬೆರಳು, ತೋಳು, ಸೊಂಟ ಹೀಗೆ ದೇಹದ ಒಂದೊಂದು ಭಾಗವನ್ನೂ ಒಂದೊಂದು ಒಡವೆ ಅಲಂಕರಿಸಿರುತ್ತದೆ.
ಈ ಒಡವೆ ಧರಿಸುವ ರೂಢಿ ಎಲ್ಲಿಂದ ಬಂತು? ಯಾವಾಗಿಂದ ಬಂತು? ಎಂದು ಕೆದಕುತ್ತಾ ಹೋದರೆ ಅನೇಕ ಸ್ವಾರಸ್ಯ ಕತೆಗಳು ಸಿಗುತ್ತವೆ. ಈ ಕತೆ ತುಂಬ ಸ್ವಾರಸ್ಯವಾಗಿದೆ- ಒಬ್ಬ ಶ್ರೇಷ್ಠಿ ಹೆಣ್ಣೊಬ್ಬಳನ್ನು ಮೋಹಿಸುತ್ತಾನೆ. ಆ ಹೆಣ್ಣು ರಾಕ್ಷಸ ಗುಣದವಳಾಗಿರುತ್ತಾಳೆ. ಆದರೂ ಆ ಶ್ರೇಷ್ಠಿ ಅವಳನ್ನೇ ಮದುವೆಯಾಗುವುದಾಗಿ ನಿರ್ಧರಿಸುತ್ತಾನೆ. ಮದುವೆಯ ಸಮಯದಲ್ಲಿ ಪುರೋಹಿತರು ಸಾವಧಾನ ಸಾವಧಾನ ಎಂದು ಎಚ್ಚರಿಕೆ ಕೊಡುತ್ತಾರೆ. ತರುವಾಯ 'ಸುಲಗ್ನಾ ಸಾವಧಾನ, ಶುಭ ಮೂಹೂರ್ತ ಸಾವಧಾನ' ಎಂದು ಹೇಳುತ್ತಾರೆ. ಇದು ಆ ಶ್ರೇಷ್ಠಿಗೆ ಅರ್ಥವಾಗದೇ 'ಏಕೆ ಹೀಗೆ ಕೂಗುತ್ತಿರುವಿರಿ' ಎಂದು ಕೇಳಿದಾಗ ಆ ಪುರೋಹಿತರು, 'ಒಬ್ಬ ರಾಕ್ಷಸಿ ನಿನ್ನ ಮೇಲೆ ಬಂದು ಬೀಳುತ್ತಿದ್ದಾಳೆ, ಸಾವಧಾನವಾಗಿ ತಪ್ಪಿಸಿಕೋ' ಎಂದು ಹೇಳಿದರೂ ಮೋಹಕ್ಕೊಳಗಾದ ಆತ ಆಕೆಯನ್ನು ಮದುವೆ ಮಾಡಿಕೊಳ್ಳುತ್ತಾನೆ.
ಆಕೆ ಎಲ್ಲಿಯೂ ಓಡಿಹೋಗದಿರಲೆಂದು ಮೊದಲು ಮಂಗಳಸೂತ್ರವೆಂಬ ಪಾಶವನ್ನು ಆಕೆಯ ಕೊರಳಲ್ಲಿ ಕಟ್ಟುತ್ತಾನೆ. ಆ ರಾಕ್ಷಸಿಯು ಅಂಥ ಪಾಶಕ್ಕೆ ಒಳಗಾಗಲಾರಳು ಎಂದು ಭಾವಿಸಿ ಅನೇಕ ಸರಪಳಿಗಳನ್ನು ಅವಳ ಕೊರಳಲ್ಲಿ ಹಾಕಿ ಬಂಧಿಸುತ್ತಾನೆ. ಅವುಗಳೇ ಈಗ ವಿವಿಧ ಬಗೆಯ ಕತ್ತಿನ ಸರಗಳಾಗಿರುವುದು. ಅವಳು ಅದಕ್ಕೂ ಬಗ್ಗುವುದಿಲ್ಲ ಎಂಬ ಅನುಮಾನದಿಂದ ಕೈಕಾಲುಗಳನ್ನು ಬಿಗಿಯುವ ಸಲುವಾಗಿ ಬಂಗಾರ ಮತ್ತು ಬೆಳ್ಳಿಗಳಿಂದ ಮಾಡಿದ ಸಂಕೋಲೆಗಳನ್ನು ತೊಡಿಸುತ್ತಾನೆ. ಅವುಗಳೇ ಈಗ ತೊಡುವ ಕಾಲುಚೈನು, ಕಾಲಂದಿಗೆಗಳು, ವಡ್ಯಾಣಗಳು. ಅವಳನ್ನು ತನ್ನ ಅಂಕೆಯಲ್ಲಿ ಇರಿಸಿಕೊಳ್ಳಲೆಂಬಂತೆ ಮೂಗುಬೊಟ್ಟು, ಬುಲಾಕು, ಮುಕ್ಕರಗಳನ್ನು ತೊಡಿಸುತ್ತಾನೆ. ಮುಖವನ್ನು ಅತ್ತಿತ್ತ ತಿರುಗಿಸಿ ತೋರಿಸದಿರುವುದಕ್ಕೆ ಕಿವಿಗಳಿಗೆ ಬೆಂಡೋಲೆ, ಲೋಲಾಕುಗಳನ್ನು ತೊಡಿಸುತ್ತಾನೆ. ಆಕೆ ಹೆಚ್ಚಾಗಿ ಮಾತನಾಡದಿರಲೆಂದು ಅಡ್ಡಿಕೆಯನ್ನು ಬಿಗಿಯಲಾಗುತ್ತದೆ. ಹೀಗೆ ಆಭರಣ ರೂಪದ ಪಾಶಗಳಿಂದ ಅವಳನ್ನು ಬಂಧಿಸುತ್ತಾ ಬರುತ್ತಾನೆ. ಆದರೆ ಇದೇನೂ ತಿಳಿಯದ ಹೆಣ್ಣು ಅವುಗಳನ್ನೇ ಇಷ್ಟಪಡಲು ಪ್ರಾರಂಭಿಸುತ್ತಾಳೆ. ಬರಬರುತ್ತಾ ಹೆಣ್ಣಿಗೆ ಆಭರಣಗಳೇ ಹೆಮ್ಮೆಯ ಸಂಕೇತಗಳಾದವು. ಹೆಚ್ಚು ಹೆಚ್ಚು ಆಭರಣಗಳನ್ನು ತೊಟ್ಟಷ್ಟೂ ಆಕೆಯ ಅಂತಸ್ತು ಹೆಚ್ಚುತ್ತಾ ಹೋಯಿತು. ಹಿಂದೆ ಹೆಣ್ಣನ್ನು ಬಂಧಿಸಲೆಂದು ಹಾಕಲಾದ ಆಭರಣಗಳೇ ಇಂದು ಗಂಡಂದಿರಿಗೆ ಉರುಳಾಗಲಾರಂಭಿಸಿದೆ!
ತನಗೆ ಹಾಕಿದ ಬಂಧನವನ್ನೇ ತನಗೆ ಅನುಕೂಲವಾಗಿ ಮಾಡಿಕೊಳ್ಳುವುದು ಹೆಣ್ಣಿನ ಕಲೆ. ಇದೇ ಅಲ್ಲವೇ ಹೆಣ್ಣಿಗಿರುವ ಶಕ್ತಿ. ತಾನು ತೋಡಿದ ಹಳ್ಳಕ್ಕೆ ತಾನೇ ಬೀಳುವುದು ಗಂಡಿನ ಕಲೆ. ಇದಲ್ಲವೆ ವಿಪರ್ಯಾಸ?
-ಕೆ.ಎನ್. ಭಾನುಪ್ರಸಾದ್