ಬದುಕು ಟೆಂಪಲ್ ರನ್!

ಅಂದು ಸರ್ಫ್ ಎಕ್ಸೆಲ್ ಇರಲಿಲ್ಲ. ಆದರೆ ಮಕ್ಕಳು ಬಟ್ಟೆ ಕಲೆ ಮಾಡಿಕೊಳ್ಳುತ್ತಿದ್ದರು...
ಬದುಕು ಟೆಂಪಲ್ ರನ್!

ಅಂದು ಸರ್ಫ್ ಎಕ್ಸೆಲ್ ಇರಲಿಲ್ಲ. ಆದರೆ ಮಕ್ಕಳು ಬಟ್ಟೆ ಕಲೆ ಮಾಡಿಕೊಳ್ಳುತ್ತಿದ್ದರು. ಇಂದು ಸರ್ಫ್ ಎಕ್ಸೆಲ್ 'ಕೊಳೆ ಒಳ್ಳೆಯದು' ಎಂದು ಜಾಹೀರಾತು ಕೊಟ್ಟು ಬಟ್ಟೆ ಕೊಳೆ ಮಾಡಿಕೊಳ್ಳುವಂತೆ ಮಕ್ಕಳನ್ನು ಪ್ರೋತ್ಸಾಹಿಸುತ್ತಿದೆ. ಆದರೆ ಬಟ್ಟೆ ಕೊಳೆ ಮಾಡಿಕೊಳ್ಳುವವರೇ ಇಲ್ಲ!

ಈ ಹಿಂದೆ ಮಕ್ಕಳನ್ನು ಶಾಲೆಗೆ ದೂಡಿ ಕಳಿಸಬೇಕಿತ್ತು. ಓದು ಎಂದು ಪುಸ್ತಕವನ್ನು ಕೈಗಿಟ್ಟು ಅಮ್ಮ ಹೋದರೆ ಹಿಂದಿರುಗಿ ಬರುವಷ್ಟರಲ್ಲಿ ಪುಸ್ತಕ ಮಾತ್ರ ಅಲ್ಲಿರುತ್ತಿತ್ತು. ಶಾಲೆ ತಪ್ಪಿಸಲು ನೆಪ ಸಿಕ್ಕರೆ ಸಾಕು ಖುಷಿಯೋ ಖುಷಿ. ಆದರೆ ಕಾಲ ಬದಲಾಗಿದೆ. ಒತ್ತಾಯ ಮಾಡಿ ಓದಲು ಕೂರಿಸುವ ಬದಲು ಮಕ್ಕಳನ್ನು ಒತ್ತಾಯ ಮಾಡಿ ಹೊರಗೆ ಆಡಲು ಕಳುಹಿಸುವಂತಾಗಿದೆ.

ಪಾಲಕರೇ ಶಾಲೆ ತಪ್ಪಿಸೋಣ ಅಂದರೂ ಮಕ್ಕಳು ಶಾಲೆ ತಪ್ಪಿಸಲು ಮನಸ್ಸು ಮಾಡುವುದಿಲ್ಲ! ಅಪ್ಪ-ಅಮ್ಮನಿಗಿಂತ ಮೊಬೈಲ್‌ನಲ್ಲಿ ಮಕ್ಕಳೇ ಫಾಸ್ಟು. ಅಪ್ಪನಿಗೆ ಏನಾದರೂ ಮಾಡಲು ಗೊತ್ತಾಗದಿದ್ದರೆ ಮಕ್ಕಳನ್ನು ಕೇಳಬೇಕು. ಮಕ್ಕಳು ಅಷ್ಟು ಸ್ಮಾರ್ಟು!

ಮಕ್ಕಳು ಬೇಗ ದೊಡ್ಡವರಾಗ್ತಾರೆ ಅನ್ನೋದು ಇದಕ್ಕೇನಾ? ಅವರು ದೊಡ್ಡವರಾಗುವುದಲ್ಲ ನಾವೇ ಒತ್ತಡ ತಂದು ಬಲವಂತವಾಗಿ ದೊಡ್ಡವರನ್ನಾಗಿ ಮಾಡುತ್ತಿದ್ದೇವಾ? ಅಥವಾ ಕಾಲವೇ ಅಷ್ಟು ಫಾಸ್ಟಾ?

ಬಾಲ್ಯ ಎಂದರೆ ಮೊದಲು ಸುಮಾರು 10 ವರ್ಷವಿದ್ದಿದ್ದು ಕ್ರಮೇಣವಾಗಿ 4 ಕ್ಕೆ ಬಂದು ಈಗ ಕೇವಲ ಒಂದೂವರೆ ವರ್ಷಕ್ಕೆ ಬಂದು ನಿಂತಿದೆ. ಎರಡು ವರ್ಷದಿಂದಲೇ ಬೇಬಿ ಸಿಟ್ಟಿಂಗ್ ಎಂದು ಕಳುಹಿಸಿದರೆ, ಆ ಮಗುವಿಗೆ ಅಲ್ಲಿಂದಲೇ ಶುರು ವಿದ್ಯಾಭ್ಯಾಸ. ಇನ್ನೂ ಸ್ವಲ್ಪ ದಿನವಾದರೆ ಮಗು ಹುಟ್ಟಿದ ಕೆಲವು ದಿನ ಮಾತ್ರ ಬಾಲ್ಯವಾಗಿ ಉಳಿಯಬಹುದೇನೊ.

ಮಗುವಿಗೆ ತೊದಲು ನುಡಿಯನ್ನು ಕೇಳಲು ಕೂಡ ಪೋಷಕರಿಗಾಗಲಿ, ಶಿಕ್ಷಕರಿಗಾಗಲಿ ಸಮಯವಿಲ್ಲ. ಮಗುವಿಗೆ ಸರಿಯಾಗಿ ಇನ್ನೂ ಸರಿಯಾದ ಉಚ್ಛಾರ ಬರುವುದಿಲ್ಲ ಎಂದೇ ಶಾಲೆಯಲ್ಲಿ 4 ವರ್ಷಕ್ಕೇ ಸೀಟು ನೀಡದಿರುವ ಎಷ್ಟೋ ನಿದರ್ಶನಗಳಿವೆ.

ಶಾಲೆ ಮುಗಿದರೆ ಸಾಕು ಅಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ಸುಮಾರು ಗಂಟೆಗಳ ಕಾಲ ಗದ್ದಲಗಳು ಕೇಳಿ ಬರುತ್ತಿತ್ತು. ಮಕ್ಕಳು ಅಲ್ಲೇ ಆಟವಾಡಿಕೊಂಡು ಮನೆಗೆ ಹೋಗುವ ಪದ್ಧತಿಯಿತ್ತು. ಸೂರ್ಯ ಮುಳುಗಿದರೂ ಅಪ್ಪ-ಅಮ್ಮ ಕರೆಯುವ ತನಕ ಮನೆಯ ಒಳಗೆ ಮಕ್ಕಳು ಸುತಾರಾಂ ಹೋಗುತ್ತಿರಲಿಲ್ಲ. ಆದರೆ ಈಗ ಅದು ಮರೆಯಾಗಿ, ಅಪ್ಪ-ಅಮ್ಮನೇ ಹೊರಗೆ ಹೋಗಿ ಆಡ್ರೋ ಎಂದು ಮಕ್ಕಳನ್ನು ಒತ್ತಾಯಿಸುವಂತಾಗಿದೆ. ಅಷ್ಟರಮಟ್ಟಿಗೆ ಮಕ್ಕಳು ಕಂಪ್ಯೂಟರ್, ಟಿವಿ, ಮೊಬೈಲ್‌ಗೆ ಅಂಟಿಕೊಂಡಿದ್ದಾರೆ. ಅವರಿಗೆ ಮೈದಾನದಲ್ಲಿ ಕ್ರಿಕೆಟ್ ಆಡುವುದಕ್ಕಿಂತ ಮೊಬೈಲ್‌ನಲ್ಲಿ ಕ್ರಿಕೆಟ್ ಆಡುವುದು ಇಷ್ಟ. ಕಾಡಿಗೆ ಹೋಗಿ ಹುಲಿ ನೋಡುವುದಕ್ಕಿಂತ ನ್ಯಾಷನಲ್ ಜಿಯಾಗ್ರಫಿಯಲ್ಲಿ ಹುಲಿ ನೋಡುವುದರಲ್ಲೇ ಆಸಕ್ತಿ.

ಇದು ಕೇವಲ ಮನರಂಜನೆಗೆ ಸಂಬಂಧಿಸಿದ ವಿಷಯವಲ್ಲ. ಮಕ್ಕಳನ್ನು ದೈಹಿಕವಾಗಿ ಸದೃಡ ಮಾಡುವ ಅಗತ್ಯವಿದೆ. ಹಾಗಾಗಿ ಮಕ್ಕಳಿಗೆ ಕೇವಲ ಬುದ್ಧಿವಂತಿಕೆ ಉಪಯೋಗಿಸಿ ಮಾಡುವ ಕೆಲಸದ ಜತೆಗೆ ದೇಹಕ್ಕೂ ವ್ಯಾಯಾಮ ಒದಗಿಸುವ ಬಗ್ಗೆ ವಿಚಾರ ಮಾಡುವ ಸ್ಥಿತಿ.

ಹಿಂದೆ ಮಕ್ಕಳಿರಲಿ ಮನೆತುಂಬ ಎಂದು ಬಯಸುತ್ತಿದ್ದರು. ನಂತರ ನಾವಿಬ್ಬರು ನಮಗೊಂದು ಮಗು ಎಂದು ಬಂದು ಇದೀಗ ಮದುವೆಯೂ ಬೇಡ ಮಕ್ಕಳೂ ಬೇಡ ಎಂಬಲ್ಲಿಗೆ ತಲುಪಿದ್ದೇವೆ. ಮೊದಲ ಸ್ನೇಹಿತರಾಗಬೇಕಿದ್ದ ಸಹೋದರತ್ವದ ಕೊರತೆ ನಮ್ಮನ್ನು ಮೊಬೈಲ್‌ನ ಸಂಗಾತಿಯಾಗಲು ಕಾರಣವಾಯಿತೆ ಎಂಬ ಅನುಮಾನ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಸಿಟಿ ಸಂಸ್ಕೃತಿಯಲ್ಲಿ ಮನೆಗಳಲ್ಲಿ ಅಂಗಳವೂ ಕೂಡ ಉಳಿದಿಲ್ಲ. ಮನೆ, ಸೈಟುಗಳಷ್ಟೇ ಅಲ್ಲ, ನಮ್ಮ ಮನಸ್ಸುಗಳು ಕೂಡ ಸಂಕುಚಿತಗೊಳ್ಳುತ್ತಿದೆ.

ಮೊದಲು ಕದ್ದು ಮುಚ್ಚಿ ಮಕ್ಕಳು ಆಡುತ್ತಿದ್ದ ಆಟಗಳು ಈಗ ಮನೆಯಲ್ಲಿರುವ ಮೊಬೈಲ್ ಫೋನ್‌ಗಳನ್ನೇ ಆವರಿಸಿದೆ. ಈಗ ಟ್ಯಾಬ್ಲೆಟ್‌ಗಳೆಂದರೆ ಮಾತ್ರೆಗಳಲ್ಲ. ದೊಡ್ಡ ಗಾತ್ರದ ಮೊಬೈಲ್‌ಗಳು. ಇವುಗಳ ದೊಡ್ಡಪರದೆ ವಿನ್ಯಾಸವಾಗಿರುವುದೇ ಈ ಗೇಮಿಂಗ್ ಸಲುವಾಗಿ.

ದೇವಸ್ಥಾನ, ದೇವರು ನಂಬಿಕೆ ಈ ವಿಷಯವಾಗಿ ಚರ್ಚೆಯಾಗುವುದು ಸಾಹಿತ್ಯ ಆಸಕ್ತರು ಅದರಲ್ಲೂ ಬುದ್ಧಿ ಜೀವಿಗಳಲ್ಲಿ ಮಾತ್ರ. ಮನೆಮುಂದಿನ ದೇವಸ್ಥಾನಕ್ಕೆ ಒಮ್ಮೆಯಾದರೂ ಭೇಟಿ ನೀಡುತ್ತೇವೆಯೋ ಗೊತ್ತಿಲ್ಲ. ಆದರೆ ಟೆಂಪಲ್ ರನ್‌ಗೆ ಮಾತ್ರ ಎಲ್ಲರೂ ಭೇಟಿ ನೀಡುತ್ತಾರೆ. ಈ ಟೆಂಪಲ್ ರನ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಆ್ಯಂಡ್ರಾಯ್ಡ್‌ನ ಆರಂಭಿಕ ಹಂತದಲ್ಲೇ ಜನಪ್ರಿಯವಾಗಿದ್ದ ಈ ಆಟಕ್ಕೆ ಕೊನೆ ಇದೆಯೋ ಇಲ್ಲವೋ ಎಂಬುದೇ ತಿಳಿದಿಲ್ಲ. ಎಷ್ಟು ಓಡಿದರೂ ಸುಸ್ತು ಆಗುವುದೂ ಇಲ್ಲ!

ಈ ತರಹದ ಆಟಗಳು ಮಕ್ಕಳನ್ನು ಆಟದಿಂದ, ಪಾಠದಿಂದ ದೂರ ಮಾಡುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಈ ಆಟಗಳು ಮಕ್ಕಳ ಕಲ್ಪನಾ ಶಕ್ತಿಯನ್ನು ಕೊಲ್ಲುತ್ತಿವೆ. ಮಕ್ಕಳಿಗೆ ಅದ್ಭುತವಾದ ಕಲ್ಪನಾ ಶಕ್ತಿಯಿರುತ್ತದೆ. ಆದರೆ ಟಿವಿ, ಮೊಬೈಲ್, ಗೇಮ್‌ಗಳು ಮಕ್ಕಳ ಕಲ್ಪನಾ ಶಕ್ತಿಗೇ ಕೊಡಲಿಯೇಟು ನೀಡುತ್ತಿವೆ. ಕೆಲವು ಗೇಂಗಳ ಹೆಸರು ಕೇಳಿದರೆ ಹೆದರಿಕೆಯಾಗುವಂತಿವೆ. ಹೀರೋಸ್ ಆಫ್ ಡ್ರ್ಯಾಗನ್, ಡೆಡ್ ಸ್ಪೇಸ್, ಡ್ರ್ಯಾಗ್‌ರೇಸ್ ಹೀಗೆ ಆಟಗಳ ಹೆಸರಿನ ತುಂಬಾ ಕ್ರೂರತೆ ತುಂಬಿಕೊಂಡಿದೆ. ಅಮೆರಿಕದಲ್ಲಿ ಮಕ್ಕಳ ಕೈಗೆ ಪಿಸ್ತೂಲ್ ಸಿಕ್ಕಿ ಆದ ಅವಾಂತರ ನೋಡಿದ್ದೀರ. ಅಂತಹ ದಿನಗಳು ನಮ್ಮ ದೇಶದಲ್ಲೂ ಬರಬಹುದಾ ಎಂಬ ಆಂತಕ ಮೂಡಿ ಮರೆಯಾಗುತ್ತದೆ.

ಹಾಗಂತ ಮೊಬೈಲ್, ಟಿವಿ ಹಾಳು ಎಂದು ಸಾರಾಸಗಟಾಗಿ ತಿರಸ್ಕರಿಸುವ ಅಗತ್ಯವಿಲ್ಲ. ಅವುಗಳಲ್ಲೂ ಒಳ್ಳೆಯದಿದೆ. ಆದರೆ ಅವುಗಳನ್ನು ಎಷ್ಟು ಬಳಸಬೇಕು ಎಂಬುದಕ್ಕೊಂದು ನಿಯಂತ್ರಣ ಹೇರುವ ಅಗತ್ಯವಿದೆ. ಅದನ್ನು ಮಕ್ಕಳಿಗೆ ತಿಳಿಹೇಳುವ ಅಗತ್ಯವೂ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com