ತಣ್ಣಗಿನ ಕ್ರೌರ್ಯ

ಕೈತುಂಬಾ ಸಂಬಳ ತರುವ ಗಂಡ. ದುರಭ್ಯಾಸಗಳಿಲ್ಲದ ಸುಸಂಸ್ಕೃತ ಕುಟುಂಬದ ಹಿನ್ನೆಲೆಯಿರುವ ವ್ಯಕ್ತಿ ಆತ...
ತಣ್ಣಗಿನ ಕ್ರೌರ್ಯ
Updated on: 

ಕೈತುಂಬಾ ಸಂಬಳ  ತರುವ ಗಂಡ. ದುರಭ್ಯಾಸಗಳಿಲ್ಲದ ಸುಸಂಸ್ಕೃತ ಕುಟುಂಬದ ಹಿನ್ನೆಲೆಯಿರುವ ವ್ಯಕ್ತಿ ಆತ. ಆದರೆ ಆತನ ವ್ಯಂಗ್ಯಪೂರಿತ ಮಾತುಗಳಿಂದ ಹೆಂಡತಿ, ಮಕ್ಕಳಿಗೆ ಹೇಳಿಕೊಳ್ಳಲಾಗದ ಸಂಕಟ. ಏನಾದರೂ ಹೇಳಲು ಹೋದರೆ, 'ಜೀವನದಲ್ಲಿ ಇನ್ನೂ ಎಷ್ಟೋ ಕಷ್ಟಗಳಿವೆ ಎಂಬುದು ನಿನಗೆ ಗೊತ್ತಿಲ್ಲ. ಕೈತುಂಬಾ ಸಂಬಳ ತರೋ ಗಂಡ, ಯಾವುದೇ ಚಟಗಳಿಲ್ಲದ ವ್ಯಕ್ತಿ. ಈಗೇನು ಧಾಡಿಯಾಗಿರುವುದು?' ಎಂಬ ಕೊಂಕು ಮಾತು.
ಉದಾ: ಮಗಳೇನಾದರೂ ಒಂದು ಹುಳಕ್ಕೋ, ಹಲ್ಲಿಗೋ ಹೆದರಿದರೆ, 'ರೂಂ ತುಂಬಾ ಹಲ್ಲಿ ತುಂಬಿಸಿ ನಿನ್ನನ್ನ ಕೂಡಿ ಹಾಕಿಬಿಡ್ತೀನಿ' ಎನ್ನುವುದು. ಹೆಂಡತಿ ಏನಾದರೂ ನಿದ್ರೆ ಬರಲಿಲ್ಲ ಎಂದರೆ, 'ಮೂವತ್ತು ನಿದ್ರೆ ಮಾತ್ರೆ ಹಾಕಿಬಿಡಬೇಕು' ಎನ್ನುವುದು. ಇದನ್ನು ಮಕ್ಕಳೇನಾದರೂ ವಿರೋಧಿಸಿದರೆ ಅದಕ್ಕೆ ಹೆಂಡತಿಯನ್ನು ದೂರುವುದು. 'ಮಕ್ಕಳನ್ನು ಎತ್ತಿಕಟ್ಟಿದ್ದಾಳೆ. ಅವರಿಗೆ ನನ್ನ ಬೆಲೆ ಗೊತ್ತಿಲ್ಲದ ಹಾಗೆ ಮಾಡಿದ್ದಾಳೆ' ಎಂದು ರೇಗುವುದು. ಸತ್ಯವೆಂದರೆ, ಮಕ್ಕಳು ತಂದೆಯ ವಿರುದ್ಧ ಮಾತನಾಡಿದಾಗ ಆಕೆ ಯಾವ ಕಾರಣಕ್ಕೂ ಅವರಿಗೆ ಕುಮ್ಮಕ್ಕು ಕೊಟ್ಟಿರುವುದಿಲ್ಲ. ಬದಲಿಗೆ ಮಕ್ಕಳನ್ನೇ ಗದರಿಸಿ ಸುಮ್ಮನಾಗಿಸುತ್ತಾಳೆ. ಅಂಥ ವೇಳೆ ಅಸಹಾಯಕರಾದ ಮಕ್ಕಳು ತಾಯಿಯೂ ತಂದೆಯ ಪರ ವಹಿಸಿರುವುದನ್ನು ಕಂಡು ತಬ್ಬಿಬ್ಬಾಗುತ್ತಾರೆ. 'ನೀವಿಬ್ಬರೂ ಒಂದೇ. ನಾವೇ ಬೇರೆ' ಎಂದು.
ನಿತ್ಯ ಪ್ರತಿಕ್ಷಣ ಹಂಗಿಸುವ, ವ್ಯಂಗ್ಯದ ಮಾತುಗಳನ್ನು ಕೇಳಿ ಕೇಳಿ ಬೇಸತ್ತಿದ್ದ ಮಗಳು, 'ಅಪ್ಪಾ, ನಾನು ಎಷ್ಟು ಕಷ್ಟಪಟ್ಟು ಓದುತ್ತೇನಲ್ಲಪ್ಪ. ಎಲ್ಲದರಲ್ಲೂ ಶೇ.90 ಅಂಕ ಪಡೆದಿದ್ದೇನೆ. ಏಕೆ ಹೀಗೆ ಮಾತನಾಡುತ್ತೀರಿ?' ಎಂದು ಮಗಳು ಕೇಳಿದರೆ, 'ಯಾರ ಉದ್ಧಾರಕ್ಕೆ ತೆಗೀತೀಯಮ್ಮ? ನಿನ್ನ ಉದ್ಧಾರಕ್ಕೆ ನೀನು ತೆಗೀತೀಯಾ'. ಈ ಮಾತನ್ನು ಕೇಳಿದಾಕ್ಷಣ ಆ ಮಗುವಿನ ಉತ್ಸಾಹ ಕುಗ್ಗುತ್ತದೆ. ಅಂಥ ವೇಳೆ ತಾಯಿ, 'ಹೋಗ್ಲಿ ಬಿಡಮ್ಮ. ಅವರ ಮಾತನ್ನೂ ಕಿವಿಗೆ ಹಾಕ್ಕೊಳ್ಳಬೇಡ. ಲೋಕಕ್ಕೆ ಹೇಳಿಕೊಳ್ಳುವ ಸಮಸ್ಯೆ ನಮ್ಮದಲ್ಲ. ಕುಡುಕನೇ? ಕೆಡುಕನೇ? ಏನೆಂದು ಹೇಳುವೆ?' ಎಂದು ಸಮಾಧಾನಿಸುತ್ತಿದ್ದರೆ 'ಹ್ಞೂಂ, ಹೇಳು... ಅವನದೇನು ಲೆಕ್ಕ. ಅವನು ದುಡಿಯೋ ಕತ್ತೆ. ಅವನ ಮಾತೇನು ಕೇಳ್ತೀಯಾ ಅಂತ. ತಾಯಿಯೇ ಹೀಗೆ ಮಕ್ಕಳಿಗೆ ಬೋಧಿಸಿದರೆ ಇನ್ಯಾವ ಮಕ್ಕಳು ತಂದೆಗೆ ಬೆಲೆ ಕೊಡ್ತಾರೆ. ನಿಮಗೆ ಕುಡಿದು ಬಂದು ಒದೆಯೋನಾಗ್ಬೇಕಿತ್ತು. ಆವಾಗ ಗೊತ್ತಾಗೋದು, ನನ್ನಂಥವರು ಕೋಟಿಗೊಬ್ಬರು ಎಂದು, ತಿಳ್ಕೊಳಿ!' ಎಂದು ಸಿಟ್ಟಿನಿಂದ ಹೊರ ಹೋಗಿಬಿಡುವನು. ಅಲ್ಲಿಗೆ ತಾಯಿ, ಮಕ್ಕಳ ಕಣ್ಣೀರು ಯಾರ ಗಮನಕ್ಕೂ ಬಾರದೆ ಹರಿದು ಬತ್ತುವುದು. ಇಂಥ ತಣ್ಣಗಿನ ಕ್ರೌರ್ಯಕ್ಕೆ ಎಷ್ಟೋ ತಾಯಂದಿರು ಬಲಿಯಾಗುತ್ತಿದ್ದಾರೆ. ಈ ಸ್ವಭಾವವಿರುವ ತಂದೆಯರೇ, ದಯವಿಟ್ಟು ಬದಲಾಗಿ. ತಂದೆ-ಮಕ್ಕಳ ಮಧ್ಯೆ ಸಾಮರಸ್ಯ ಮೂಡಿಸಲು ಆ ತಾಯಿ ಹೆಣಗಾಡುತ್ತಿದ್ದಾಳೆ. ನಿಮ್ಮನ್ನು ಅನಾದರ ಮಾಡುವುದು ಆಕೆಗೆ ಎಷ್ಟು ಹೊತ್ತು? ಆದರೆ ನಿಮ್ಮನ್ನು ಹಾಗೆ ನೋಡಲು ಆಕೆ ಸಿದ್ಧಳಿಲ್ಲ. ನಿಮ್ಮನ್ನು ಯಾರಾದರೂ ದೂರಿದರೂ ಸಹಿಸುವ ಮನಸ್ಥಿತಿ ಅವಳದಲ್ಲ. ನಿಮ್ಮ ಬದಲಾವಣೆಗಾಗಿ ಕಾದಿದ್ದಾಳೆ.

- ಬಿ. ತ್ರಿವೇಣಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com