

ಶ್ರಾವಣವೆಂದರೆ ಹಬ್ಬಗಳ ಸಡಗರ. ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಸಾಲು ಸಾಲು ಹಬ್ಬಗಳು ಮಹಿಳೆಯರನ್ನು ಬಿಡುವಿಲ್ಲದಂತೆ ಮಾಡಿಬಿಡುತ್ತವೆ. ದೇಗುಲಗಳಿಗೆ ಹೋಗಬೇಕು, ಮನೆಯಲ್ಲಿ ಹಬ್ಬದ ಅಡುಗೆ ಮಾಡಬೇಕು. ದೇವರ ಪೂಜೆಗೆ ಸಿದ್ಧತೆ ಮಾಡಬೇಕು, ಹೀಗೆ ಹತ್ತು ಹಲವು ಕೆಲಸಗಳು. ಇವುಗಳ ಮಧ್ಯೆ ಹಬ್ಬದ ತಯಾರಿ ಆಷಾಢದಿಂದಲೇ ಪ್ರಾರಂಭ ಆಗಬೇಕು. ಹೂ ಬತ್ತಿ, ಗೆಜ್ಜೆ ವಸ್ತ್ರಗಳು, ಮನೆಮಂದಿಗೆ ಬಟ್ಟೆ ಬರೆಗಳು... ಸಂಭ್ರಮವೋ ಸಂಭ್ರಮ. ದೇವರಿಗೆ ಗೆಜ್ಜೆ ವಸ್ತ್ರಗಳ ತಯಾರಿ ನೈಪುಣ್ಯದ ಕೆಲಸ. ಹಲವರು ಅದರಲ್ಲೇ ಕುಸುರಿ ಕೆಲಸ ಮಾಡಿ ನೋಡುಗರನ್ನು ಆಶ್ಚರ್ಯಚಕಿತರನ್ನಾಗಿಸುತ್ತಾರೆ. ಗೆಜ್ಜೆವಸ್ತ್ರದಲ್ಲಿ ಇಂಥ ಕುಸುರಿ ಕೆಲಸವನ್ನು ನಾಜೂಕಾಗಿ ಮಾಡುವುದರಲ್ಲಿ ತುರುವೇಕೆರೆಯ ವಿಜಯಲಕ್ಷ್ಮೀ ವಿರೂಪಾಕ್ಷರದ್ದು ಎತ್ತಿದ ಕೈ. ಹಲವು ವರ್ಷಗಳಿಂದ ಇಂಥ ಬಗೆಬಗೆಯ ಕಣ್ಮನ ಸೆಳೆಯುವ ಗೆಜ್ಜೆವಸ್ತ್ರಗಳು, ಅಡಕೆ, ತೆಂಗಿನಚಿಪ್ಪು ಮುಂತಾದ ವಸ್ತುಗಳಿಂದ ಗೊಂಬೆಗಳನ್ನು ತಯಾರಿಸುವುದರಲ್ಲಿ ಸಿದ್ಧಹಸ್ತರು. ಬಹಳ ನಾಜೂಕಾದ ಎಳೆಗಳನ್ನು ತೆಗೆದು, ಅದರಲ್ಲಿ ಸೇವಂತಿಗೆ ಹೂವಿನ ಹಾರ, ಪಾರಿಜಾತದ ಹಾರ, ಪದ್ಮ ಕೂಡಿಸಿದ ಹಾರ ಹಾಗೂ ಗಣಪತಿಗೆ ಹತ್ತಿಯ ಮೋದಕದ ಹಾರ... ಹೀಗೆ ಹಲವು ಬಗೆಯ ಹಾರಗಳನ್ನು ಆಕರ್ಷಕವಾಗಿ ಹತ್ತಿಯಲ್ಲಿ ತಯಾರಿಸುತ್ತಾರೆ. ಪ್ರತಿ ಹಬ್ಬದಲ್ಲೂ ಬಗೆಬಗೆಯ ಗೆಜ್ಜೆವಸ್ತ್ರಗಳನ್ನು ಮಾಡಿ ದೇವರಿಗೆ ಧರಿಸಿ ಸಂತೋಷಿಸುತ್ತಾರೆ. ನವರಾತ್ರಿಯಲ್ಲಿ ತಾವೇ ತಯಾರಿಸಿದ ಗೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಹಬ್ಬ ಆಚರಿಸುತ್ತಾರೆ. ಮದುವೆ ಮನೆಯಲ್ಲಿ ಆಚರಿಸುವ ಗೌರಿಪೂಜೆಗೆ ವಿವಿಧ ಬಗೆಯ ಹತ್ತಿಯಿಂದ ತಯಾರಿಸಿದ ಬಣ್ಣಬಣ್ಣದ ಆಕರ್ಷಕ ಹಾರಗಳನ್ನು ಮಾಡಿಕೊಡುತ್ತಾರೆ. ಅಷ್ಟೇ ಅಲ್ಲ, ವಿಜಯಲಕ್ಷ್ಮೀ (8880994654) ಈ ಕಲೆಯನ್ನು ಆಸಕ್ತರಿಗೆ ಹೇಳಿಕೊಡುತ್ತಿದ್ದಾರೆ.
-ಉಷಾ ಶ್ರೀನಿವಾಸ್