ಲೈಟಾಗಿ ಲವ್ವಾಯ್ತು

ಬೆಳಕು. ಅಂತರಂಗಕ್ಕೂ ಅವಶ್ಯ, ಹೊರಗಿನ ಲೋಕಕ್ಕೂ ಅವಶ್ಯ. ಬೆಳಕಿಲ್ಲದ ಮನೆ, ಅಜ್ಞಾನಿಯ ಮನದಂತೆ....
ಲೈಟಾಗಿ ಲವ್ವಾಯ್ತು
Updated on

ಬೆಳಕು. ಅಂತರಂಗಕ್ಕೂ ಅವಶ್ಯ, ಹೊರಗಿನ ಲೋಕಕ್ಕೂ ಅವಶ್ಯ. ಬೆಳಕಿಲ್ಲದ ಮನೆ, ಅಜ್ಞಾನಿಯ ಮನದಂತೆ. ಈಗಿನ ಮನೆಗಳಲ್ಲಿ ಏನಿದ್ದರೂ ಅಂದಚೆಂದಕ್ಕೆ ಹೆಚ್ಚು ಒತ್ತು. ಅಂತೆಯೇ ಮನೆಯ ವಿವಿಧ ವಿಭಾಗಗಳಲ್ಲಿನ ಸಿಂಗಾರ ನಮಗೆ ಮುಖ್ಯವಾಗುತ್ತದೆ. ಅದಕ್ಕೇ ಹೆಚ್ಚು ಆದ್ಯತೆ ನೀಡುತ್ತೇವೆ. ಆದರೆ, ಇದರೊಂದಿಗೆ ಬೆಳಕಿಗೂ ಆದ್ಯತೆಯ ಅಗತ್ಯವಿದೆ. ಕಾಂಪೌಂಡ್‌ಗೆ ಹಾಕುವ ಬಲ್ಬ್‌ಗಳಿಂದ ಮನೆಯೊಳಗೆ ಸಿಂಗರಿಸುವ ವಿವಿಧ ಲೈಟ್‌ಗಳ ಬಗ್ಗೆಯೂ ಯೋಚಿಸುವುದು ಒಳಿತು.
ಈಗಂತೂ ವಿವಿಧ ವಿನ್ಯಾಸಗಳ ವಿದ್ಯುದ್ದೀಪಗಳು ಮಾರುಕಟ್ಟೆಯಲ್ಲಿ ಲಭ್ಯ. ಹಾಲ್‌ನಲ್ಲಿ ಬಳಸುವ ದೊಡ್ಡ ದೊಡ್ಡ ದೀಪಗಳು ನಮ್ಮ ಬಜೆಟ್‌ನಷ್ಟೇ ದೊಡ್ಡವುಗಳಿವೆ.
ದೇವರ ಮನೆ
ಇಲ್ಲಿ ಇರಲೇಬೇಕಾದ್ದು ನಂದಾದೀಪ. ಸದಾ ಉರಿಯಬೇಕು. ಅದು ಬೆಳಗಿದಂತೆ ನಮಗೆ ಒಳ್ಳೆಯದು ಎನ್ನುವುದು ನಮ್ಮ ನಂಬಿಕೆ. ಆದರೆ ದೀಪಕ್ಕೆ ಕಾಲಕಾಲಕ್ಕೆ ಎಣ್ಣೆ ಬತ್ತಿ ಹಾಕುತ್ತಿರುವುದು ಕಷ್ಟ ಕಷ್ಟ. ಈಗಿನ ಕಾಲದಲ್ಲಿ ಇದು ಸಾಧ್ಯವಾಗದ ಮಾತು. ಏನೋ ಹಬ್ಬ ಹರಿದಿನಗಳಲ್ಲಿ 3 ದಿನ ಅಥವಾ ನವರಾತ್ರಿಯಲ್ಲಿ 9 ದಿನ ಸಾಧ್ಯವಾಗಬಹುದು. ಆದರೆ ನಿತ್ಯ ಇದು ಕಷ್ಟದ ಕೆಲಸ. ಆದ್ದರಿಂದ ದೀಪದ ಥರದ ವಿದ್ಯುದ್ದೀಪಗಳಿವೆ. ಅಲ್ಲದೆ ಮಿಣುಗುಟ್ಟುವ ಬಲ್ಬ್‌ಗಳು ಲಭ್ಯ. ನಿಮ್ಮ ಇಷ್ಟ ದೇವರಿನ ಪೋಟೋದ ಮೇಲೆ ಹಾಕಿದರೆ ಚಂದ. ಇನ್ನು ಕೆಲವು ಫೋಟೋಗಳೊಳಗೆ ಲೈಟ್‌ಗಳಿರುವಂತೆಯೂ ವಿನ್ಯಾಸಗಳಿರುತ್ತವೆ. ಶ್ರೀನಿವಾಸ, ಗಣೇಶ ಮುಂತಾದ ಫೋಟೋಗಳು ಮಾರುಕಟ್ಟೆಯಲ್ಲಿ ನಿಮ್ಮಿಷ್ಟದಂತೆಯೇ ದೊರೆಯುತ್ತವೆ. ಇಂಥ ಫೋಟೋಗಳನ್ನು ನೀವು ಗಮನಿಸಿಯೇ ಇರುತ್ತೀರ.
ಅಡುಗೆ ಮನೆ
ಅಡುಗೆ ಮಾಡುವುದಷ್ಟೆ ಇಲ್ಲಿನ ಕೆಲಸ. ಆದರೂ ಅದರೊಂದಿಗೆ ನಮ್ಮ ನಂಟು ಪ್ರಶ್ನಾತೀತ. ಅಮ್ಮನ ಜೊತೆಗಿನ ನಮ್ಮ ಬಾಂಧವ್ಯ ಇಲ್ಲೇ ಹೆಚ್ಚು. ಇಲ್ಲಿನ ಸೌಂದರ್ಯಕ್ಕೂ ನಮ್ಮ ಆದ್ಯತೆ ಇದ್ದೇ ಇದೆ. ಶೆಲ್ಫ್‌ಗಳು, ಅದರೊಳಗಿನ ಸಾಮಾನು, ತಟ್ಟೆ ಲೋಟ, ಪಾತ್ರೆಗಳನ್ನು ಇಡಲು ಬಳಸುವ ಡ್ರಾಗಳು ಇವೆಲ್ಲ ಅಡುಗೆಮನೆಯ ಅಂಗಗಳು.
ಮುಖ್ಯವಾಗಿ ಅಡುಗೆ ಮನೆಗೆ ಹಿತವಾದ ಬೆಳಕು ಮತ್ತು ಗಾಳಿ ಅಗತ್ಯ. ತುಂಬಾ ಬೆಳಕಲ್ಲದ, ಕತ್ತಲೂ ಅಲ್ಲದಷ್ಟು ಬೆಳಕು ಅಗತ್ಯ. ಅದರ ಜೊತೆಗೆ ಶೆಲ್ಫ್‌ಗಳಲ್ಲಿ ಇಟ್ಟಿರುವ ಗ್ಲಾಸ್‌ಗಳು, ವಿವಿಧ ವಿನ್ಯಾಸದ ತಟ್ಟೆಗಳಿಗೂ ಒಂದು ವಿಶೇಷವಾದ ಲೈಟಿಂಗ್‌ನಿಂದ ಸಿಂಗರಿಸಿದರೆ ಇನ್ನೂ ಚೆಂದ.  ಹೂವಿನ, ಬಳ್ಳಿಯ, ಬಣ್ಣ ಬಣ್ಣದ ಹಣ್ಣುಗಳ ಚಿತ್ತಾರ ಇರುವ ತಟ್ಟೆ ಲೋಟಗಳಿಗೆ ಒಂದು ಲೈಟ್ ಇದ್ದರೆ ಅದರ ಚೆಂದವೇ ಬೇರೆ. ಹೆಚ್ಚಾಗಿ ಕೆಂಪು, ನೀಲಿ, ಅಥವಾ ಬಿಳಿ ಬಣ್ಣದ ಬಲ್ಬ್‌ಗಳ ಬಳಕೆ ಚೆಂದ.
ಬೆಡ್ ರೂಂ
ದಿನವಿಡೀ ಹೊರಗೆ ಕೆಲಸ ಮಾಡಿ ಮನೆಗೆ ಬಂದರೆ ದೇಹ, ಮನಸ್ಸುಗಳೆರಡೂ ನೆಮ್ಮದಿ ಬಯಸುತ್ತವೆ. ಕೆಲವು ಸಲ ಊಟ ಕೂಡ ಬೇಡ ಮಲಗಿದರೆ ಸಾಕು ಎನ್ನಿಸದೇ ಇರದು. ಇಂಥ ವೇಳೆ ನಮಗೆ ಮಲಗುವ ಕೋಣೆ ತೀರಾ ಆಪ್ತವೆನಿಸುತ್ತದೆ. ಇನ್ನು ಕೆಲವು ವೇಳೆ ನಮಗೆ ಮಾಡಲೇ ಬೇಕಾದ ಕೆಲಸವಿದ್ದು ಸಂಗಾತಿಗೆ ಸುಸ್ತು. ಓದುತ್ತಾ, ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡಲೇ ಬೇಕಾದ ಸಂದರ್ಭದಲ್ಲಿ ಅವರಿಗೆ ಮುಜುಗರ. ಒಬ್ಬರಿಗೆ ಕೆಲಸ ಮಾಡಲೇ ಬೇಕಾದ ಅನಿವಾರ್ಯ. ಇನ್ನೊಬ್ಬರಿಗೆ ಮಲಗುವುದು ಅನಿವಾರ್ಯ.
ಇಂಥ ವೇಳೆ ನಾವು ಓದುವುದು ಅಥವಾ ಲೈಟ್ ಹಾಕಿಕೊಂಡು ಕೂತರೆ ಇನ್ನೊಬ್ಬರಿಗೆ ತೊಂದರೆ ಆಗದ ರೀತಿಯ ಬೆಳಕು ಅನಿವಾರ್ಯ. ಗಂಡ, ಹೆಂಡತಿ ಇಬ್ಬರೂ ಕೆಲಸದಲ್ಲಿದ್ದರೆ ಈ ಥರದ ಸ್ಥಿತಿ ಸರ್ವೇ ಸಾಮಾನ್ಯ.  ಈಗ ನಮಗೆ ಲೈಟ್‌ಗಳ ವಿನ್ಯಾಸದ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಅನಿವಾರ್ಯ. ಟೇಬಲ್ ಲ್ಯಾಂಪ್, ರೀಡಿಂಗ್‌ಲ್ಯಾಂಪ್ ಮತ್ತು ಟೇಬಲ್ ಹೀಗೆ ಹೀಗೆ ವಿವಿಧ ವಿನ್ಯಾಸಗಳ ಲೈಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯ.  ಇನ್ನು ಮಲಗುವಾಗ ನೈಟ್ ಲ್ಯಾಂಪ್‌ಗಳಿದ್ದರೆ ಉತ್ತಮ. ಇಂಥ ನೈಟ್‌ಲ್ಯಾಂಪ್‌ಗಳು ನಿದ್ದೆ ಕೆಡಿಸದೆ ಮಂದ ಬೆಳಕು ಬೀರಿದರೆ ಉತ್ತಮ.
ಅಂದಹಾಗೆ ನಿಮ್ಮ ಬೆಡ್‌ರೂಂನಲ್ಲಿ ಇರುವ ನೈಟ್‌ಲ್ಯಾಂಪ್ ಯಾವ ಬಣ್ಣದ್ದು? ನಿಮ್ಮ ಆಯ್ಕೆ ಯಾವುದು ಅನ್ನುವುದರ ಮೇಲೆ ನಿಮ್ಮ ಮನಸ್ಸನ್ನು ಅರ್ಥೈಸಿಕೊಳ್ಳಬಹುದಂತೆ!

 -ಚನ್ನಮಲ್ಲಿಕಾರ್ಜುನ ಹದಡಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com