

ವ್ಯಕ್ತಿಯ ಉಡುಗೆ ತೊಡುಗೆಗಳಿಂದಲೇ ಆತನ ವರ್ತನೆ ಗೊತ್ತಾಗುತ್ತದೆ. ವಸ್ತ್ರ ವ್ಯಕ್ತಿತ್ವದ ಸಂಕೇತದ ಜೊತೆಗೆ ಆಕರ್ಷಣೆಯ ಅಸ್ತ್ರವೂ ಹೌದು. ಪ್ರತಿಯೊಬ್ಬರ ಜೀವನದಲ್ಲೂ ಒಂದೊಂದು ರೀತಿಯ ವಿಶೇಷ ಕಾರ್ಯಕ್ರಮಗಳು, ದಿನಗಳು ಬರುತ್ತಿರುತ್ತವೆ. ಸಂದರ್ಭಕ್ಕೆ ತಕ್ಕಂತೆ ವಸ್ತ್ರ ವಿನ್ಯಾಸ ಆಯ್ಕೆ ಮಾಡಿಕೊಂಡರೆ ಉತ್ತಮ.
ಮದುವೆ ಸಮಾರಂಭ
ಸೀರೆ, ಸಲ್ವಾರ್, ಗಾಗ್ರದ ಆಯ್ಕೆ ಜತೆಗೆ ಒಂದಿಷ್ಟು ಅಲಂಕಾರಿಕ ವಸ್ತುಗಳಾದ ಬಳೆ, ಓಲೆ, ಕುತ್ತಿಗೆ ಸರ ಮುಂತಾದವುಗಳನ್ನು ಧರಿಸಿ. ಸಂಬಂಧಿಕರ ಮದುವೆ ಸಮಾರಂಭಗಳಾದರೆ ಆಕರ್ಷಣೀಯವಾದ ಕುಂದನ್ವರ್ಕ್ ಹಾಗೂ ಕಡಿಮೆ ತೂಕದ ತಿಳಿ ಬಣ್ಣದ ಉಡುಗೆಗಳನ್ನು ಧರಿಸಿ. ಜತೆಗೆ ಒಂದಿಷ್ಟು ಮೇಕಪ್ ಕೂಡ ಇರಲಿ. ಆದರೆ ಕಪ್ಪು- ಬಿಳಿ, ಕೆಂಬಣ್ಣದ ಉಡುಗೆಗಳು ಸಮಂಜಸವಲ್ಲ.
ಹುಟ್ಟುಹಬ್ಬ
ಸ್ನೇಹಿತರ ಹುಟ್ಟುಹಬ್ಬ ಅಥವಾ ಪಾರ್ಟಿಗಳಿಗೆ ಹೊರಟಿದ್ದೀರಾ? ಹಾಗಾದರೆ ನಿಮ್ಮ ಹಾವ-ಭಾವಗಳಿಗೆ ಒಪ್ಪುವಂಥ ಲಾಂಗ್ ಫ್ರಾಕ್, ಸ್ಕರ್ಟ್ಸ್, ಫ್ಯಾನ್ಸಿ ಟಾಪ್ಸ್ ಹಾಗೂ ನೂತನ ವಿನ್ಯಾಸದ ಉಡುಗೆ ಧರಿಸಬಹುದು. ಜತೆಗೆ ಹೈಹೀಲ್ಡ್ ಅಥವಾ ಆಕರ್ಷಣೀಯವಾದ ಫ್ಲ್ಯಾಟ್ ಚಪ್ಪಲಿ ಆಯ್ಕೆಮಾಡಿಕೊಳ್ಳಿ. ಉಡುಗೆಗಳಿಗೆ ಸರಿಹೊಂದುವಂಥ ಫ್ಯಾನ್ಸಿ ಬಳೆ-ಓಲೆಗಳಿಂದ ಸಿಂಗರಿಸಿಕೊಳ್ಳಿ.
ಉದ್ಯೋಗ ಸಂದರ್ಶನ
ಈ ಸಂದರ್ಭದಲ್ಲಿ ನಿಮ್ಮ ಉಡುಗೆತೊಡುಗೆ ಬಹುಮುಖ್ಯ ಪಾತ್ರ ವಹಿಸುತ್ತದೆ. ದೊಡ್ಡ ಸಾಂಪ್ರದಾಯಿಕ ಕಂಪನಿಗಳಲ್ಲಿ ಸೂಟ್ ಸೂಕ್ತವಾಗಿರುತ್ತದೆ. ಸೂಟ್ ನೀವು ಉದ್ಯೋಗದ ಬಗ್ಗೆ ಆಸಕ್ತಿ ಹೊಂದಿರುವುದು ಹಾಗೂ ಗಂಭೀರವಾಗಿರುವುದನ್ನು ತೋರಿಸುತ್ತದೆ. ಅನೇಕ ಸೃಜನಾತ್ಮಕ, ಕಲಾತ್ಮಕ, ಮಾಧ್ಯಮ ಹಾಗೂ ತಂತ್ರಜ್ಞಾನ ಸಂಬಂಧಿ ಕೆಲಸಗಳಿಗೆ ಸೂಟ್
ಗಮನಾರ್ಹವಾಗಿರುತ್ತದೆ. ಉಣ್ಣೆಯ ಉಡುಗೆಗಳು, ಉದ್ದನೆಯ ಸ್ಕರ್ಟ್ಸ್ ಮತ್ತು ಶರ್ಟ್ಸ್ ಸಹ ಸಂದರ್ಶನಕ್ಕೆ ಸೂಕ್ತ.
ಧಾರ್ಮಿಕ ಸಮಾರಂಭ
ಈ ವೇಳೆ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ. ಸೀರೆ ಅಥವಾ ಸಲ್ವಾರ್ ಧರಿಸುವುದು ಸೂಕ್ತ. ಬಳೆ, ಕುಂಕುಮ, ಹೂಗಳಿಂದ ಅಲಂಕಾರ ಮಾಡಿದರೆ ಸಾಕು. ದೇಗುಲಗಳಿಗೆ ಹೋಗುವಾಗ ಸರಳ ಉಡುಪು ಧರಿಸಿ.
ಮೊದಲ ಭೇಟಿ
ಪ್ರತಿಯೊಬ್ಬರ ಜೀವನದಲ್ಲಿ ಒಮ್ಮೊಮ್ಮೆ ವಿಶೇಷ ವ್ಯಕ್ತಿಗಳನ್ನು ಭೇಟಿ ಮಾಡಬೇಕಾಗುತ್ತದೆ. ಫಸ್ಟ್ ಇಂಪ್ರೆಶನ್ ಈಸ್ ದ ಬೆಸ್ಟ್ ಇಂಪ್ರೆಶನ್. ಆದ್ದರಿಂದ ಇಂಥ ಸಂದರ್ಭದಲ್ಲಿ ನಿಮ್ಮ ವಸ್ತ್ರ ವಿನ್ಯಾಸದ ಬಗ್ಗೆ ಗಮನವಿರಲಿ. ನಿಮ್ಮ ಸ್ನೇಹಿತರು, ಆಪ್ತರಿಂದ ಹೆಚ್ಚು ಪ್ರಶಂಸೆ, ಹೊಗಳಿಕೆ ಸಿಕ್ಕಿದಂಥ ವಸ್ತ್ರವಿನ್ಯಾಸ ಆಯ್ಕೆ ಮಾಡಿಕೊಳ್ಳಿ.
ಪ್ರವಾಸ
ನಿಮಗಿಷ್ಟ ಬಂದ ಸ್ಥಳದಲ್ಲಿ ಆರಾಮದಾಯಕವಾಗಿ ಪ್ರಯಾಣಿಸಲು, ಮೋಜು-ಮಸ್ತಿ ಮಾಡಲು ಜೀನ್ಸ್, ಕುರ್ತಾ, ಟೀ-ಶರ್ಟ್ಸ್, ಸಲ್ವಾರ್ ಧರಿಸಿದರೆ ಒಳ್ಳೆಯದು. ಪ್ರವಾಸದ ವೇಳೆ ಡ್ರೆಸ್ ಆದಷ್ಟು ಕಂಫರ್ಟ್ ಆಗಿರಲಿ.
- ಲೀಲಾ