ನಾ ರಿಯಲ್!

ಇಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಕೇವಲ ಕಾಲ್ಪನಿಕವಲ್ಲ... ನಿಜ ಜೀವನದ ವ್ಯಕ್ತಿ, ಘಟನೆಯೊಡನೆ...
ನಾ ರಿಯಲ್!
Updated on: 

ಇಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಕೇವಲ ಕಾಲ್ಪನಿಕವಲ್ಲ... ನಿಜ ಜೀವನದ ವ್ಯಕ್ತಿ, ಘಟನೆಯೊಡನೆ ಸಾಮೀಪ್ಯವಿದ್ದರೆ ಅದು ಕೇವಲ ಕಾಕತಾಳೀಯ ಮಾತ್ರ ಎಂದು ಇಲ್ಲಿ ಹೇಳುವುದೂ ಇಲ್ಲ. ಇಲ್ಲಿ ಉಲ್ಲೇಖಿಸಿದ ಘಟನೆಗಳ ಪಾತ್ರಧಾರಿಗಳು ಹೆಣ್ಣು ಮತ್ತು ಗಂಡು ಮಾತ್ರ...
-
ದೃಶ್ಯ-1
'ಹೈವೇ' ಚಿತ್ರದ ನಾಯಕಿ ತನ್ನ ಅಪ್ಪನನ್ನು ಉದ್ದೇಶಿಸಿ, ಅಪ್ಪಾ ನೀನು ಹೇಳಿದ್ದೇನು? ಜಗತ್ತು ಸರಿಯಿಲ್ಲ. ನೀನು ಹುಡುಗಿ, ಮನೆಯ ಹೊರಗೆ ಕಾಲಿಡುವಾಗ ಜಾಗರೂಕತೆಯಿಂದ ಇರಬೇಕು. ಹೊರಗಿನ ಜನರು ಹೇಗಿರುತ್ತಾರೆ ಎಂದು ಹೇಳೋಕಾಗಲ್ಲ, ಹುಷಾರಾಗಿರಬೇಕು ಎಂದು. ಆದರೆ ನೀವ್ಯಾವತ್ತೂ ಮನೆಯ ಒಳಗಿನ ಜನರ ಜತೆ ವ್ಯವಹರಿಸುವಾಗಲೂ ಹುಷಾರಾಗಿರು ಎಂದು ಹೇಳಲೇ ಇಲ್ಲ. ಚಿಕ್ಕಂದಿನಲ್ಲಿ ನನ್ನೊಂದಿಗೆ ಅಂಕಲ್ ಲೈಂಗಿಕ ದೌರ್ಜನ್ಯ ನಡೆಸಿ ನನ್ನ ಬಾಯಿ ಮುಚ್ಚಿಸಿದ್ದರು. ಅಮ್ಮನಲ್ಲಿ ಹೇಳಿದಾಗ ಅಮ್ಮ 'ಶ್‌' ಯಾರಲ್ಲೂ ಹೇಳ್ಬೇಡ ಅಂದಿದ್ದರು...
ಮನೆಗೆ ಬಂದ ಅಂಕಲ್ ಮಗಳನ್ನು ಮುದ್ದಿಸುತ್ತಾರೆ. ಅವರು ತರುವ ಚಾಕ್ಲೇಟ್, ಆಟಿಕೆಗಳನ್ನು ಮಗಳು ಇಷ್ಟ ಪಡುತ್ತಾಳೆ. ಕ್ರಮೇಣ ನನ್ನ ಪುಟ್ಟಿ ಅಂಕಲ್ ಬಂದ್ರು ಎಂದು ಹೇಳಿದರೆ ಹೆದರಿ ಕಂಪಿಸುತ್ತಾಳೆ. ಮಗುವಿನ ಈ ವರ್ತನೆಗೆ ಕಾರಣ ಏನು ಎಂಬುದು ಗೊತ್ತಾಗಿದ್ದು ಅಮೀರ್ ಖಾನ್ ನಡೆಸಿಕೊಡುವ 'ಸತ್ಯಮೇವ ಜಯತೇ' ಕಾರ್ಯಕ್ರಮದಿಂದ. ಆ ಅಂಕಲ್ ನನ್ನ ಮಗುವಿನ ಪಾಲಿಗೆ ರಕ್ಕಸನಾಗಿದ್ದ. ನನ್ನ ಪುಟ್ಟಿ ಅದೆಷ್ಟು ನೋವು ಅನುಭವಿಸಿರಬಹುದು?
ದೃಶ್ಯ- 2
'ವಂಶಿ' ಚಿತ್ರದ ಫ್ಲಾಶ್‌ಬ್ಯಾಕ್‌ನಲ್ಲಿ ತನ್ನ ಗೆಳತಿಯನ್ನು ಛೇಡಿಸಿದ್ದಕ್ಕಾಗಿ ಪೋಲಿಯೊಬ್ಬನ ಕೆನ್ನೆಗೆ ಬಾರಿಸುತ್ತಾಳೆ ಲಕ್ಷ್ಮಿ. ಈ ಕಾರಣಕ್ಕಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಗುತ್ತದೆ. ಆಕೆ ಮಾಡಿದ್ದು ಸರಿ ಎಂದೆನಿಸಿದರೂ, ಅದರಿಂದ ಆಕೆ ಅನುಭವಿಸಿದ ಕಷ್ಟ ಏನು ಎಂಬುದನ್ನು ನಾವು ಸಿನಿಮಾದಲ್ಲಿ ನೋಡಿದ್ದೇವೆ.
ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿಯನ್ನು ಹುಡುಗರಿಬ್ಬರು ಛೇಡಿಸುತ್ತಿದ್ದಾರೆ. ಅಕ್ಕಪಕ್ಕದವರಲ್ಲಿ ಸಹಾಯ ಕೇಳಿದರೆ ಯಾರೂ ಆಕೆಗೆ ಸಹಾಯ ಮಾಡಲು ಮುಂದಾಗುವುದಿಲ್ಲ. ಕೊನೆಗೆ ಯುವತಿ ಆ ಪೋಲಿಗಳ ಕಾಲರ್ ಹಿಡಿದು ಎರಡು ಬಾರಿಸಿಯೇ ಬಿಟ್ಟಳು! ಇದು ಬಿಂದಾಸ್ ಚಾನೆಲ್‌ನಲ್ಲಿ ಬಿತ್ತರವಾಗುವ 'ಬಿ ಫಾರ್ ಚೇಂಜ್‌' ಅಭಿಯಾನದ ವಿಡಿಯೋ ತುಣುಕು. ಹುಡುಗಿಯರನ್ನು ಛೇಡಿಸುವವರ ವಿರುದ್ಧ ದನಿಯೆತ್ತಿ ಅನ್ನುವುದೇ ಈ ಅಭಿಯಾನದ ಉದ್ದೇಶ. ಆದರೆ ನಾವು ಹುಡುಗಿಯರು ಎಷ್ಟು ಜನ ದನಿಯೆತ್ತುವ ಧೈರ್ಯ ತೋರಿಸಿದ್ದೇವೆ?
ದೃಶ್ಯ-3
'ನಿನ್ನನ್ನು ನಂಬಿ ಪ್ರೀತಿಸಿದೆ. ಆದರೆ ನೀನು ಮಾಡಿದ್ದಾದರೂ ಏನು? ಇನ್ಮುಂದೆ ಇಂಥ ಕೃತ್ಯಗಳನ್ನು ಮಾಡುವುದಕ್ಕೆ ನಿನಗೆ ಸಾಧ್ಯವಾಗಬಾರದು. ನಾನು penectomy ಮೂಲಕ ಅದನ್ನೇ ಕಟ್ ಮಾಡಿದ್ದೀನಿ. ಹೆದರಬೇಡ, ಮೂತ್ರ ವಿಸರ್ಜನೆಗೆ ಪೈಪ್ ಜೋಡಿಸಿದ್ದೀನಿ. ನಾನೇನಿದ್ದರೂ ಸಾಮಾನ್ಯ ನರ್ಸ್ ಅಲ್ವಾ?'. '22 ಫೀಮೇಲ್ ಕೊಟ್ಟಯಂ' ಚಿತ್ರದಲ್ಲಿ ತನಗೆ ಮೋಸ ಮಾಡಿದ ಪ್ರಿಯಕರನಿಗೆ ತಕ್ಕ ಶಿಕ್ಷೆ ನೀಡಿದ ಹುಡುಗಿ ಹೇಳುವ ಡೈಲಾಗ್ ಇದು.
ಸುದ್ದಿ ವಾಹಿನಿಯೊಂದರಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕುಳಿತ ಯುವತಿ. ಆಕೆಯ ಜೀವನದಲ್ಲಿ ಏನೆಲ್ಲಾ ಆಯ್ತು ಎಂಬುದನ್ನು ವಿವರಿಸುವಂತೆ ಒತ್ತಾಯಿಸುವ ನಿರೂಪಕರು. ಇಲ್ಲಿ ಆಕೆಯ ಪ್ರಿಯಕರನೇ ವಿಲನ್! ಫೇಸ್ಬುಕ್‌ನಲ್ಲಿ ಪರಿಚಯವಾದ ಆತ, ಮದುವೆ ಆಗುತ್ತೇನೆ ಎಂದು ನಂಬಿಸಿ ಮೋಸ ಮಾಡಿದ ಎಂದು ಹುಡುಗಿ ಕಣ್ಣೀರು ಹಾಕುತ್ತಾಳೆ. ಟೀವಿ ಪರದೆಯಲ್ಲಿ ಆಕೆಯ ದುರಂತ ಪ್ರೇಮಕಥೆಯನ್ನು ಮರುಸೃಷ್ಟಿಸಿ ತೋರಿಸಲಾಗುತ್ತದೆ. ಆತನಿಗೆ ಪ್ರೇಮವಲ್ಲ ಕಾಮ ಮಾತ್ರ ಬೇಕಾಗಿತ್ತು.
ನಿತ್ಯ ಇಂಥ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಹೆಣ್ಣುಮಕ್ಕಳು ಅದ್ಯಾಕೆ ಅಷ್ಟು ಬೇಗ ಎಲ್ಲರನ್ನೂ ನಂಬಿ ಬಿಡುತ್ತಾರೆ? ಪ್ರೀತಿಸುತ್ತಿದ್ದೇನೆ ಎಂದ ಮಾತ್ರಕ್ಕೆ ಮದುವೆಗೆ ಮುನ್ನ ದೇಹ ಒಪ್ಪಿಸಬೇಕಾ?
ದೃಶ್ಯ- 4
'ಅತ್ಯಾಚಾರದ ವಿರುದ್ಧ ನಾವು ಹೆಣ್ಮಕ್ಕಳೇ ಹೋರಾಡಬೇಕು. ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಮೇಲೆ ದೌರ್ಜನ್ಯ  ನಡೆಸುವ ಗಂಡಸರ ವಿರುದ್ಧ ಹೋರಾಡೋಣ.' 'ಗುಲಾಬ್ ಗ್ಯಾಂಗ್‌' ಸಿನಿಮಾದಲ್ಲಿನ ರಜ್ಜೋ ತನ್ನ ತಂಡದ ಸದಸ್ಯರನ್ನು ಹುರಿದುಂಬಿಸುವ ರೀತಿ ಇದು. ದೇಶದ ಯಾವ ಮೂಲೆಯಲ್ಲೇ ಆಗಲಿ, ಹೆಣ್ಣಿನ ವಿರುದ್ಧ ದೌರ್ಜನ್ಯ ನಡೆದಾಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಬರೆದು ರೋಷ ವ್ಯಕ್ತಪಡಿಸುತ್ತೇವೆ. ಒಂದುವೇಳೆ ಅತ್ಯಾಚಾರಿಗಳಿಗೆ ಸಜೆಯಾದರೂ ಅತ್ಯಾಚಾರವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಯಾಕೆ? ಅತ್ಯಾಚಾರವೆಸಗಿದವನನ್ನು ಬಂಧಿಸಿದರೂ ಪ್ರಭಾವಿ ವ್ಯಕ್ತಿಗಳ ಕೃಪೆಯಿಂದ ಬಚಾವಾಗುತ್ತಾನೆ.
ಇಂಥ ಪರಿಸ್ಥಿತಿಯಲ್ಲಿ ಆಕೆ ದೌರ್ಜನ್ಯದ ವಿರುದ್ಧ ದನಿಯೆತ್ತಲೇಬೇಕು, ಅದು ಬರೀ ದನಿಯಾಗಿರದೆ ನ್ಯಾಯಕ್ಕಾಗಿ ಹೋರಾಡುವ ಘರ್ಜನೆಯಾಗಿರಬೇಕು. ಒಗ್ಗಟ್ಟಿನಲ್ಲಿ ಶಕ್ತಿ ಇದೆ ಎಂದು ತೋರಿಸಬೇಕಾದುದು ಇಲ್ಲಿಯೇ.
ದೃಶ್ಯ-5
ಮಹಿಳೆಯರನ್ನು ಗೌರವಿಸುವ ನಮ್ಮ ನಾಡಿನಲ್ಲಿ ಇಂದು ಏನಾಗುತ್ತಿದೆ? ದಿನಪತ್ರಿಕೆಯ ಪುಟ ತಿರುವಿದರೆ, ಚಾನೆಲ್ ಬದಲಿಸಿದರೆ ಬರೀ ಮಹಿಳೆಯ ಮೇಲೆ ಅತ್ಯಾಚಾರ, ದೌರ್ಜನ್ಯಗಳ ಸುದ್ದಿಗಳು. ಅತ್ಯಾಚಾರಕ್ಕೊಳಗಾದ ಹೆಣ್ಣು ನಮ್ಮ ತಂಗಿ, ಅಮ್ಮ, ಅಕ್ಕ ಆಗಿರಬಹುದು ಅಲ್ಲವೆ? ಹಾಗಾದರೆ ಅತ್ಯಾಚಾರವೆಸಗುವ ಗಂಡಸರು? ಅವರೂ ನಮ್ಮ ಅಣ್ಣ, ತಮ್ಮ, ಚಿಕ್ಕಪ್ಪ, ಮಾವ ಇವರಲ್ಲಿ ಯಾರು ಬೇಕಾದರೂ ಆಗಿರಬಹುದು. ಯಾರೇ ಆಗಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು. ನಮ್ಮ ಜತೆಯಿರುವ ಹುಡುಗಿಯೊಬ್ಬಳಿಗೆ ಅತ್ಯಾಚಾರವಾಗಿದೆ ಎಂದರೆ ಆಕೆಯ ಜತೆಗೆ ನಿಲ್ಲಬೇಕಾದವರೂ ನಾವೇ ಅಲ್ಲವೆ? ಹೀಗಿರುವಾಗ ನಮ್ಮ ಓರಗೆಯ ಹೆಣ್ಣು ಮಗಳಿಗೆ ನ್ಯಾಯ ಕೊಡಿಸುವಲ್ಲಿ ನಾವ್ಯಾಕೆ 'ದಾಮಿನಿ' ಆಗಬಾರದು?

ಅತ್ಯಾಚಾರ, ದೌರ್ಜನ್ಯಗಳನ್ನು ಸಿನಿಮಾ ವೈಭವೀಕರಿಸಿ ತೋರಿಸುತ್ತದೆ. ಅಂಥ ಘಟನೆಗಳನ್ನು ಸಿನಿಮಾದಲ್ಲಿ ಮಾತ್ರ ನೋಡಲು ಸಾಧ್ಯ ಎಂದು ನಂಬಿಕೊಂಡಿದ್ದ ಕಾಲವೊಂದಿತ್ತು. ಪ್ರಸ್ತುತ ಸಿನಿಮಾಗಳಲ್ಲಿ ತೋರಿಸುವುದಕ್ಕಿಂತ ಹೆಚ್ಚಿನ ಕ್ರೌರ್ಯ ನಮ್ಮ ಕಣ್ಣಮುಂದೆಯೇ ನಡೆಯುತ್ತಿದೆ. ಕ್ರೌರ್ಯವನ್ನು, ಕಾಮುಕತೆಯನ್ನು ತೋರಿಸುವ ಸಿನಿಮಾ ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಬಹುದು. ಆದರೆ ರಿಯಲ್ ಲೈಫ್‌ನಲ್ಲಿ ಕಾಮುಕರ ಕ್ರೌರ್ಯಕ್ಕೆ ಬಲಿಯಾಗಿರುವ ಹೆಣ್ಣು ಮಗಳ ಗತಿಯೇನು?

 - ಇಬ್ಬನಿ
loveibbani@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com