ನೈಟಿ ಮಣಿ

ಕರ್ನಾಟಕದ ನಿಟ್ಟೂರಿಗೆ ಹೋಗಿ, ಬ್ರೆಜಿಲ್‌ನ ಯಾವುದಾದರೂ ಹಳ್ಳಿಗೆ ಹೋಗಿ... ವಿಶ್ವವೇ ಒಪ್ಪಿಕೊಂಡ ಒಂದು...
ನೈಟಿ ಮಣಿ
Updated on: 

ಕರ್ನಾಟಕದ ನಿಟ್ಟೂರಿಗೆ ಹೋಗಿ, ಬ್ರೆಜಿಲ್‌ನ ಯಾವುದಾದರೂ ಹಳ್ಳಿಗೆ ಹೋಗಿ... ವಿಶ್ವವೇ ಒಪ್ಪಿಕೊಂಡ ಒಂದು ಡ್ರೆಸ್ಸು ನಿಮಗೆ ಇಲ್ಲೂ ಅಲ್ಲೂ ಕಾಣಿಸುತ್ತದೆ. ಬಹುಶಃ ಅದು ನೈಟಿಯಲ್ಲದೆ ಬೇರಾವುದೂ ಆಗಿರಲಿಕ್ಕಿಲ್ಲ.
ಕಪಾಟಿನ ತುಂಬಾ ಸೀರೆಗಳು, ತಿಂಗಳು ಪೂರ್ತಿ ಹಾಕಿದರೂ ರಿಪೀಟ್ ಆಗದ ಚೂಡಿದಾರ್‌ಗಳು, ಸೊಂಟದಳತೆ ಹೆಚ್ಚಿದರೂ ಇನ್ನೂ ಬಳಸದ ಹೊಸಾ ಜೀನ್ಸ್ ಪ್ಯಾಂಟ್‌ಗಳು ಏನೇ ಇರಲಿ... ಮನೆಗೆ ಬಂದು ನಿರಾಳರಾಗಬೇಕೆಂದರೆ ನೈಟಿಯೇ ಬೇಕು. ಈ ನೈಟಿಗೂ ಮಹಿಳೆಯರಿಗೂ ಅದೆಷ್ಟು ನಂಟೆಂದರೆ, ನೈಟು ಮಾತ್ರವಲ್ಲದೇ ಹಗಲು ಕೂಡ ಅದನ್ನೇ ಹಾಕಿಕೊಂಡು ಇರುವಷ್ಟು. ದೇಹದ ಯಾವುದೇ ಭಾಗದಲ್ಲೂ ಬಿಗಿಯಾಗಿರದೇ, ಆರಾಮಾಗಿ ಉಸಿರಾಡಿಕೊಂಡು ಬಿಡಬಹುದೆಂದರೆ ಅದು ನೈಟಿಯಿಂದ ಮಾತ್ರ ಸಾಧ್ಯ.
ಸಾವಿರಾರು ಬ್ರ್ಯಾಂಡ್‌ಗಳ ಬಟ್ಟೆ ಎಷ್ಟಿದ್ದರೇನು? ಹಾಕಿಕೊಂಡಾಗ ಕಂಫರ್ಟ್ ಆಗಿ ಅನಿಸೋದು ನೈಟಿಯೇ ಎಂದು ಹಲವು ಮಹಿಳೆಯರ ಅಂಬೋಣ. ನೈಟಿಯ ಮೇಲೆಯೇ ಶಾಲು ಹಾಕ್ಕೊಂಡು ತರಕಾರಿ ತರಲು ಮಾರ್ಕೆಟ್ಟಿಗೆ ಹೋಗುವ ಮಹಿಳೆಯರು ಇಂದು ನಿಮ್ಮ ಗಲ್ಲಿಯಲ್ಲೂ ಕಾಣ್ಸಲ್ಲ ಅಂತ ಹೇಳುವ ಹಾಗಿಲ್ಲ. ನಗರಗಳಲ್ಲಿ ಅವರ ಸಂಖ್ಯೆ ದೊಡ್ಡದಿದೆ. ನೈಟಿಯಲ್ಲೂ ಹೊಸತನ ಕಾಣುವುದು, ಫ್ಯಾಶನ್ ಹುಡುಕುವುದನ್ನು ಮಹಿಳೆ ಯಾವತ್ತೂ ಮರೆಯುವುದಿಲ್ಲ.
ನೈಟಿ ಪದವೇ ಅದರ ಹುಟ್ಟನ್ನು ಸಾರಿ ಹೇಳುತ್ತದೆ. ನೈಟ್ ಮಾತ್ರ ಹಾಕುವ ಡ್ರೆಸ್ ಆಗಿದ್ದರಿಂದ ಇದಕ್ಕೆ ಈ ಹೆಸರು ಬಂತು. ಆದರೆ ಇದಕ್ಕೆ ಒಗ್ಗಿಕೊಂಡ ಮಹಿಳೆಯರು ಆಫೀಸಿಗೆ ಹೋಗುವಾಗ ಒಂದು ಬಿಟ್ಟು ಇನ್ನೆಲ್ಲ ಕಡೆಯೂ ನೈಟಿ ಹಾಕಿಕೊಂಡೇ ಹೋಗುತ್ತಾರೆಂದರೆ ಅದೆಷ್ಟು ಕಂಫರ್ಟೇಬಲ್ ಅಂತ ನೀವೇ ಯೋಚಿಸಿ.
ಪಕ್ಕದ ಸ್ನೇಹಿತೆಯ ಮನೆಗೆ ಹೋಗುವಾಗ, ಹತ್ರದಲ್ಲೇ ಇರುವ ರೇಶನ್ ಅಂಗಡಿಗೆ, ಹಾಲು ಖಾಲಿ ಆಯಿತೆಂದು ನಂದಿನಿ ಬೂತ್‌ಗೆ ಓಡುವಾಗೆಲ್ಲ ಚೂಡಿದಾರ್ ಹಾಕ್ಕೊಂಡೇ ಹೋಗ್ಬೇಕು ಎಂಬ ಧೋರಣೆ ಈಗಿಲ್ಲ. ಇಲ್ಲಿ ನೈಟಿಯೇ ಹೆಚ್ಚು ಶೋಭಿಸುತ್ತದೆ. ಈ ನೈಟಿಯ ದರ್ಬಾರನ್ನು ನೋಡಿ ನೋಡಿ ಸಾಕಾದ ಬೆಂಗಳೂರಿನ ಶಾಲೆಯೊಂದರಲ್ಲಿ ನೈಟಿ ಹಾಕಿ ಮಕ್ಕಳನ್ನು ಬಿಡಲು ಬರುವಂತಿಲ್ಲವೆಂಬ ಹೊಸ ನಿಯಮವನ್ನು ರೂಪಿಸಿದ್ದಾರೆಂದರೆ ಈ ನೈಟಿಯ ಅಲೆಯನ್ನು ಲೆಕ್ಕ ಹಾಕಿ.
ಸೀರೆ ಉಟ್ಟುಕೊಳ್ಳಲು ಬಾರದ ಹುಡುಗಿಯರು ನಿಮಗೆ ಸಾವಿರ ಸಿಗಬಹುದು. ಆದರೆ, ನೈಟಿ ಹಾಕಲು ಬಾರದ ಹುಡುಗಿಯನ್ನು ಎಲ್ಲಾದರೂ ಕಂಡಿರಾ? ಈ ನೈಟಿಯನ್ನು ಸೀರೆಯಂತೆ ಪದೇಪದೆ ಸರಿಪಡಿಸಿಕೊಳ್ಳಬೇಕೆಂಬ ನಿಯಮವಿಲ್ಲ. ತೊಳೆಯಲು ಬೇಜಾರು ಪಡುವ ಅಗತ್ಯವೇ ಇಲ್ಲ. ಇಸ್ತ್ರಿ ಹಾಕಿಕೊಂಡೇ ಧರಿಸಬೇಕೆಂಬ ತಲೆನೋವಿಲ್ಲದ ನೈಟಿಯನ್ನು ಕಂಡರೆ ತುಂಬಾ ಜನರಿಗೆ ಹೆಚ್ಚು ಲವ್ವು.
ಈ ನೈಟಿ ಚಳಿಗಾಲಕ್ಕೂ ಸೈ, ಬೇಸಿಗೆಕಾಲಕ್ಕೂ ಜೈ. ಎಲ್ಲ ಕಾಲದಲ್ಲೂ ಹೊಂದಿಕೆಯಾಗುವ ಈ ಡ್ರೆಸ್ಸು ಮಳೆಗಾಲಕ್ಕೂ ಹೇಳಿಮಾಡಿಸಿದ್ದೇ. ಬೆಚ್ಚಗೆ ಕಾಲಿನವರೆಗೂ ಮುಚ್ಚಿಕೊಳ್ಳುತ್ತದೆ. ದಿಲ್ಲಿಯಿಂದ ಹಿಡಿದು ಹಳ್ಳಿಯ ಮೂಲೆ ಮೂಲೆಯಲ್ಲಿರುವ ಹೆಂಗಸರಿಗೂ ಇದರ ಬಗ್ಗೆ ಪರಿಚಯವಿದೆ.
ಅಡುಗೆ ಮನೆಯಿಂದ ಹಿಡಿದು, ವಾಕಿಂಗಿಗೆಂದು ಪಾರ್ಕಿಗೆ ಹೋಗೋವರೆಗೂ ಉಪಯೋಗವಾಗುವ ನೈಟಿಯ ಪಾತ್ರ ಮಹಿಳೆಯರ ಬದುಕಿನಲ್ಲಿ ಮಹತ್ವದ್ದೇ ಎಂದರೆ ಸುಳ್ಳಾಗಲಾರದು.

-  -ಪದ್ಮಾ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com