ಓದುವ ಆಸೆ ಕಾಡುವ ಅತ್ತೆ

ಸಂಧ್ಯಾಗೆ ಇಪ್ಪತ್ಮೂರು ವಯಸ್ಸು. ಓದುವ ವಯಸ್ಸಲ್ಲಿ ಮದುವೆ. ಈಗ ಎರಡು ವರ್ಷದ ಮಗಳಿದ್ದಾಳೆ. ಅವಳಿಗೋ...
ಓದುವ ಆಸೆ ಕಾಡುವ ಅತ್ತೆ
Updated on: 

ಸಂಧ್ಯಾಗೆ ಇಪ್ಪತ್ಮೂರು ವಯಸ್ಸು. ಓದುವ ವಯಸ್ಸಲ್ಲಿ ಮದುವೆ. ಈಗ ಎರಡು ವರ್ಷದ ಮಗಳಿದ್ದಾಳೆ. ಅವಳಿಗೋ ಓದುವ ಹಂಬಲ. ಮನೆಯಲ್ಲಿ ಅತ್ತೆ, ಮಾವ, ಮೈದುನ, ವಾರಗಿತ್ತಿ ನಾದಿನಿ ಇರುವ ತುಂಬಿದ ಸಂಸಾರ. ಅಂತೂ ಗಂಡನ ಬೆಂಬಲದಿಂದ ಸ್ನಾತಕೋತ್ತರ ಪದವಿಗೆ ಸೇರಿದ್ದಾಯಿತು. ಮನೆಯಲ್ಲಿ ನಾನಾ ಸಮಸ್ಯೆಗಳಿದ್ದರೂ ಎಲ್ಲವನ್ನೂ ನಿಭಾಯಿಸಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಬೆಳಗ್ಗೆಯಿಂದ ಸಂಜೆಯವರೆಗೆ ಮಗಳನ್ನು ಮನೆಯಲ್ಲಿ ಬಿಟ್ಟಿರುವ ಕಷ್ಟ ಸಂಧ್ಯಾಳ ರೀತಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೋ ಕಾಲೇಜಿಗೋ ಹೋಗುವ ತಾಯಂದಿರಿಗೇ ಗೊತ್ತು. ನಿತ್ಯ ಮಗಳನ್ನು ಮನೆಯಲ್ಲಿ ಬಿಟ್ಟು ಕಾಲೇಜಿಗೆ ಮನಸ್ಸಿಲ್ಲದ ಮನಸ್ಸಿನಲ್ಲಿ ಹೊರಡುತ್ತಾಳೆ. ಓದಿನ ಕನಸು ಒಂದೆಡೆ, ಮಗಳು ಆರೈಕೆಯಿಲ್ಲದೇ ಸೊರಗುತ್ತಾಳೇನೋ ಎಂಬ ಭಯ ಮತ್ತೊಂದೆಡೆ. ಇತ್ತ ಮಗಳು ದಿನಪೂರ್ತಿ ಅಮ್ಮನ ಬರುವಿಕೆಯನ್ನೇ ಕಾಯುತ್ತಿರುತ್ತಾಳೆ.
ಸಂಧ್ಯಾಗೆ ಮೊದಲಿನಿಂದಲೂ ಓದುವ ಕನಸು. ಅದಕ್ಕೆ ಪೂರಕವಾಗಿ ಆಕೆಯ ಪತಿ ಹೆಂಡತಿಗೆ ಸ್ನಾತಕೋತ್ತರ ಪದವಿ ಮಾಡಿಸಲು ನಿರ್ಧರಿಸಿದ್ದಾನೆ. ತನ್ನ ಆಸೆಯನ್ನು ಹೆಂಡತಿಯ ಮೂಲಕ ಪೂರೈಸಿಕೊಳ್ಳುವ ಹಂಬಲ ಆತನದು. ಅವಳ ಎಲ್ಲ ಪ್ರಯತ್ನಕ್ಕೂ ತಾನೇ ಮೆಟ್ಟಿಲಾಗಿ ಆಸರೆ ಕೊಡುತ್ತಾನೆ. ಆದರೆ ಹರ್ಷನ ತಾಯಿಗೆ ಸೊಸೆ ಓದಲು ಹೋಗುವುದು ಇಷ್ಟವಿಲ್ಲ. ಅತ್ತೆ ಸೊಸೆ ಸಮರವಿಲ್ಲದ ಮನೆಗಳಿವೆಯೇ?
ನಿಮ್ಗೆ ಮಾಡಕ್ಕೆ ಬೇರೆ ಕೆಲ್ಸ ಇಲ್ಲ. ಈಗ ಓದಿರೋದು ಸಾಕು. ಯಾವುದಾದ್ರೂ ಕೆಲ್ಸಕ್ಕೆ ಹೋದ್ರೆ ತಿಂಗಳಿಗೆ 5-6 ಸಾವಿರ ಸಂಬಳ. ಎಂದು ಮುಖ ಮುರಿಯುತ್ತಾ ಸೊಸೆಯ ಓದಿನ ಬಗ್ಗೆ ಅಸಮಾಧಾನ ಪ್ರದರ್ಶಿಸುತ್ತಾರೆ. ಸಂಧ್ಯಾ ಗಂಡನ ಆಸೆ ತನ್ನ ಕನಸನ್ನು ಹೊತ್ತು ಓದಲು ಹೋಗುತ್ತಿರುತ್ತಾಳೆ. ಆದರೆ ಕಾಲೇಜಿನಿಂದ ಮನೆಗೆ ಬಂದ ನಂತರ ಮನೆ ಕೆಲಸ, ಮಗುವನ್ನು ನೋಡಿಕೊಳ್ಳುವುದು ಎಲ್ಲದರ ಹೊಣೆ ಅವಳದೇ.
ಕಾಲೇಜು ಪ್ರಾರಂಭವಾದ ದಿನದಿಂದಲೂ ಮನೆಗೆ ಹಿಂದಿರುಗಿದ ನಂತರ ಪುಸ್ತಕ ಮುಟ್ಟಲು ಸಮಯ ಸಿಗದೇ ಓದಿಕೊಳ್ಳಲು ಒದ್ದಾಡುವ ಸಂಧ್ಯಾ ಪರೀಕ್ಷೆ ಹತ್ತಿರ ಬರುತ್ತಿದ್ದ ಹಾಗೆ ಗಾಬರಿಯಿಂದ ಓದಲು ಮುಂದಾಗುತ್ತಾಳೆ. ಆದರೆ ಅತ್ತೆ ಗೊಣಗಾಟ ಕೇಳಿಸಿಕೊಂಡು ಓದಲು ಸಾಧ್ಯವಾಗದೆ ಸಂಧ್ಯಾ ಪುಸ್ತಕಗಳನ್ನು ಪಕ್ಕಕ್ಕಿಟ್ಟು ಮನೆ ಕೆಲಸದಲ್ಲಿ ತೊಡಗಿಕೊಳ್ಳುತ್ತಾಳೆ. ಪರೀಕ್ಷೆಯನ್ನು ಹೇಗೋ ಬರೆದು ಮುಗಿಸಿ, ಫಲಿತಾಂಶ ನೋಡಿದರೆ ಸಂಧ್ಯಾ ಫಸ್ಟ್ ಕ್ಲಾಸ್‌ನಲ್ಲಿ ಪಾಸು!
ಈ ರೀತಿಯ ಸಮಸ್ಯೆಗಳು ಕೇವಲ ಸಂಧ್ಯಾಳದ್ದೇ ಅಲ್ಲ. ಮದುವೆಯಾಗಿ, ಮಗುವಾಗಿ ನಂತರ ಓದುತ್ತಿರುವ ಎಷ್ಟೋ ಮಹಿಳೆಯರಿದ್ದಾರೆ. ಅತ್ತೆಯನ್ನು ತಾಯಿ ಸಮಾನ ಎನ್ನುತ್ತಾರೆ. ತನ್ನ ಮಗಳು ವಿದ್ಯಾವಂತೆಯಾಗಿ ಒಳ್ಳೆಯ ಕೆಲಸಕ್ಕೆ ಸೇರಿದರೆ ನೆಂಟರಿಷ್ಟರೆದುರಿಗೆ ಬಡಾಯಿ ಕೊಚ್ಚುವ ಅತ್ತೆ, ಸೊಸೆಯ ವಿಷಯದಲ್ಲಿ ಮಾತ್ರ ಕೊಂಕು ನುಡಿಯುತ್ತಾಳೆ ಏಕೆ? ಅತ್ತೆಯಾದವರು ಸೊಸೆಯನ್ನು ಮಗಳಂತೆ ನೋಡಿಕೊಂಡು ಓದಲು ಅವಕಾಶ ಮಾಡಿಕೊಟ್ಟರೆ ಸೊಸೆಯೂ ವಿದ್ಯಾವಂತೆಯಾಗುತ್ತಾಳೆ. ಸಂಸಾರವೂ ಚೆನ್ನಾಗಿರುತ್ತದೆ.

ಅಶ್ವಿನಿ ಎನ್.ಆರ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com