

ಮೊನ್ನೆ ಎರಡೂ ಕೈ ತುಂಬ ಹಸಿರು ಗಾಜಿನ ಬಳೆ ತೊಟ್ಟ ಮಹಿಳೆಯನ್ನು ನೋಡಿದ್ದೇ ತಡ ಖುಷಿ ತಡೆಯಲಾರದೆ ಮಾತಿಗೆಳೆದೆ. ಅದೂ ಇದೂ ಮಾತಾಡುತ್ತಾ, ಚೆನ್ನಾಗಿದೆ ಬಳೆ, ಎಲ್ಲಿ ತಗೊಂಡ್ರಿ, ಇದು ಬೇಗನೇ ಒಡೆದು ಹೋಗಲ್ವ? ಹೀಗೆ ಪ್ರಶ್ನೆಗಳ ಮಳೆಯನ್ನೇ ಸುರಿಸಿಬಿಟ್ಟೆ. ಅವಳಿಗೂ ನನ್ನ ಮಾತಿನಿಂದ ಖುಷಿಯಾಗಿರಬೇಕು. ಬಳೆಗಳನ್ನು ಹೆಮ್ಮೆಯಿಂದ ಸವರಿಕೊಳ್ಳುತ್ತ ನಗುಮೊಗದಿಂದಲೇ ಉತ್ತರಿಸುತ್ತಿದ್ದಳು.
ಹಿಂದೆ, ಈಗಿನಂತೆ ಬಳೆ ಖರೀದಿಸಲು ಬಳೆ ಅಂಗಡಿಗಳಿಗೆ ಹೋಗುತ್ತಿರಲಿಲ್ಲ. ಜಾತ್ರೆಗೋ ಹಬ್ಬಕ್ಕೋ ಹೀಗೆ ವರ್ಷಕ್ಕೊಂದೆರಡಾವರ್ತಿ ಬರುತ್ತಿದ್ದ ಬಳೆಗಾರ್ತಿಯಿಂದಲೇ ಬಳೆ ತೊಡಿಸಿಕೊಳ್ಳುತ್ತಿದ್ದರು. ಮೈಸೂರು ಮಲ್ಲಿಗೆಯ ಬಳೆಗಾರ ಚೆನ್ನಯ್ಯ ನಮ್ಮೂರಿನ ಕಡೆ ಬರುತ್ತಿರಲಿಲ್ಲ. ನನಗೆ ನೆನಪಿರುವಂತೆ ಬಳೆಗಾರ್ತಿ ಕಾವೇರಿಯೇ ನಮ್ಮೂರಿನ ಆಸುಪಾಸುಗಳಿಗೆ ಬರ್ತಾ ಇದ್ದದ್ದು. ಹಬ್ಬ ಬಂತೆಂದರೆ, ಕೈಗೆ ಬಳೆ ಏರಿಸಿಕೊಳ್ಳಲೋಸುಗ ಬಳೆಗಾರ್ತಿಗಾಗಿ ಕಾಯುವುದೂ ನಮ್ಮ ಸಂಭ್ರಮದ ಕ್ಷಣಗಳಲ್ಲೊಂದು. ಅಕ್ಕ ಪಕ್ಕದ ಗೆಳತಿಯರ ಕೂಡೆ ಅದಾಗಲೇ ಲೆಕ್ಕವಿಲ್ಲದಷ್ಟು ಬಾರಿ ವಿಚಾರಿಸಿದ್ದಾಯಿತು. ನಿಮ್ಮ ಮನೆಗೆ ಬಳೆಗಾರ್ತಿ ಬಂದಿದ್ದಳಾ? ನಮ್ಮ ಮನೆಗೆ ಇನ್ನೂ ಬಂದಿಲ್ಲ. ಈ ಸಲ ಬರುತ್ತಾಳೋ.. ಇಲ್ಲವೋ.. ಇದೇ ಕಳವಳದ ಕನವರಿಕೆ. ಈ ಸಲ ಕಾಡಿ ಬೇಡಿ ನಾನೂ ಗಾಜಿನ ಬಳೆಯನ್ನೇ ಧರಿಸುವುದು ಅಂತ ಅದಾಗಲೇ ನಿರ್ಧರಿಸಿಯಾಗಿತ್ತು. ಪ್ರತಿಸಲ ನಮಗೆಲ್ಲ ಪ್ಲಾಸ್ಟಿಕ್ ಬಳೆಯನ್ನು ಹಾಕುವುದೇ ಹೆಚ್ಚು. ಗಾಜಿನ ಬಳೆ ಹಾಕಿದರೆ ಆಟ ಆಡುವಾಗ ಒಡೆದು ಕೈ ಬೋಳಾಗಿಬಿಡುತ್ತದೆ. ಅದಕ್ಕೋಸ್ಕರ ಗಾಜಿನ ಬಳೆ ಮಕ್ಕಳಿಗೆಲ್ಲ ನಿಷಿದ್ಧ. ಅಜ್ಜಿ, ಅಮ್ಮ ಚಿಕ್ಕಮ್ಮಂದಿರಿಗೆ ಮಾತ್ರ ಬಣ್ಣ ಬಣ್ಣದ ಗಾಜಿನಬಳೆ ಧರಿಸುವ ಭಾಗ್ಯ. ನನ್ನ ಅಜ್ಜಿಯ ಕೈಯಲ್ಲಂತೂ ಈ ಸಲ ಹಬ್ಬಕ್ಕೆ ಹಾಕಿದ ಬಳೆ ಮುಂದಿನ ಹಬ್ಬದವರೆಗೂ ಬಣ್ಣ ಕಳೆದುಕೊಂಡರೂ ಅಸ್ತಿತ್ವ ಕಾಯ್ದುಕೊಳ್ಳುತ್ತಿತ್ತು. ಇದು ಅಜ್ಜಿಯ ಕೈಯ ಮಹಿಮೆಯೋ, ಬಳೆಯ ಮಹಿಮೆಯೋ ಗೊತ್ತಾಗದ ಸೋಜಿಗ!
ತರಹೇವಾರಿ ಬಣ್ಣದ ಬಳೆಗಳಿದ್ದರೂ ಕೆಲವು ಬಣ್ಣದ ಬಳೆಗಳು ಕೆಲವು ವಿಶೇಷತೆಗಳಿಗಾಗಿಯೇ ಹೆಸರು ಮಾಡಿವೆ. ಕಪ್ಪು ಬಳೆಗಳು ಕೈಯನ್ನು ಅಲಂಕರಿಸಿದಾಗ ಚೆಂದವಾಗಿ ಕಂಡರೂ ಅದನ್ನು ಎಲ್ಲ ಹೆಣ್ಣು ಮಕ್ಕಳೂ ಧರಿಸುವಂತಿಲ್ಲ. ಪುಟ್ಟ ಮಕ್ಕಳಿಗೆ ದೃಷ್ಟಿ ತಾಕದಿರಲೆಂದು ಕೈಗೆ ಕಪ್ಪು ಬಳೆಯನ್ನು ಹಾಕುತ್ತಾರೆ. ಉಳಿದಂತೆ ಮದುವೆಯಾದ ಹೆಣ್ಣುಮಕ್ಕಳಿಗೆ ಮಾತ್ರ ಕಪ್ಪುಬಳೆ ಧರಿಸುವ ಭಾಗ್ಯ. ಕೈಯಲ್ಲಿ ಕಪ್ಪುಬಳೆ ಕಂಡಾಕ್ಷಣ ಅವಳಿಗೆ ಮದುವೆಯಾಗಿದೆ ಅಂತ ನಿರ್ಧರಿಸಿಬಿಡುವ ಕಾಲವೊಂದಿತ್ತು. ಇನ್ನು ಹಸಿರು ಬಳೆ, ಯಾರೂ ಕೂಡ ಯಾವುದೇ ಕಟ್ಟಳೆಗಳಿಲ್ಲದೆ ಧರಿಸಬಹುದು. ಹಸಿರು ಬಳೆಯನ್ನು ಶುಭ ಸೂಚಕದ ಸಂಕೇತವೆಂದೇ ಪರಿಭಾವಿಸುತ್ತಾರೆ. ಹಾಗಾಗಿ ಹೆಂಗಳೆಯರಿಗೆ ಸೀಮಂತದ ಸಮಯದಲ್ಲಿ ಹಸಿರು ಸೀರೆ, ಹಸಿರು ರವಿಕೆಯೊಂದಿಗೆ ಹಸಿರು ಗಾಜಿನ ಬಳೆಗಳನ್ನು ತೊಡಿಸಿಯೇ ಸಿಂಗರಿಸುವುದು. ಸ್ತ್ರೀ ಕುಲದ ಶುಭ ಸಂಕೇತವಾಗಿ ಹಸಿರು ಬಳೆಯನ್ನು ಗುರುತಿಸುತ್ತಾರೆ. ಅದಕ್ಕೇ ಇರಬೇಕು ಎರಡು ಕಡುಹಸಿರು ಬಳೆಗಳ ನಡುವೆ ಒಂದು ಬಂಗಾರದ ಬಳೆ ಧರಿಸಿ ಬರುತ್ತಿದ್ದ ಪ್ರೈಮರಿ ಶಾಲೆಯ ಕನ್ನಡ ಟೀಚರ್ ನಮಗೆ ಹೆಚ್ಚು ಪ್ರಿಯವಾಗುತ್ತಿದ್ದುದು. ಇದರ ನಡುವೆ 'ನಮ್ಮ ಜನ್ಮವಿಡೀ ಗಾಜಿನ ಬಳೆ ಹಾಕುವುದರಲ್ಲೇ ಕಳೆದುಹೋಯಿತು, ಚಿನ್ನದ ಬಳೆ ಏರಿಸಿಕೊಳ್ಳುವ ಭಾಗ್ಯ ಈ ಜನ್ಮದಲ್ಲಿ ಬರೆಯಲಿಲ್ಲವೋ ಏನೋ' ಎನ್ನುವ ಹೆಂಗಳೆಯರ ನಿಟ್ಟುಸಿರ ಸದ್ದನ್ನು ಗಾಳಿಯಷ್ಟೇ ಕೇಳಿಸಿಕೊಳ್ಳಲು ಸಾಧ್ಯವೇನೋ.
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹನು... ಅಂತ ಹಾಡು ಗುನುಗುತ್ತಾ, ಬಳೆಗಾರ/ಬಳೆಗಾರ್ತಿಯರು ಹೆಗಲಿಗೆ ಬಳೆಚೀಲ ಏರಿಸಿಕೊಂಡು, ಊರು ಕೇರಿ ಸುತ್ತಿ ಮನೆಯ ಪಡಸಾಲೆಯಲ್ಲಿ ಕುಳಿತು, ಸುಖ ದುಃಖ ಕೇಳುತ್ತಾ ಮಜ್ಜಿಗೆ, ನೀರು ಕುಡಿಯುತ್ತಾ ಮಾತಿಗಿಳಿಯುವ ಕಾಲ ಈಗ ಇತಿಹಾಸ ಸೇರಿಬಿಟ್ಟಿದೆ. ಹಾಗೇ ವರ್ಷಕ್ಕೊಂದಾವರ್ತಿ ಮಾತ್ರ ಬಳೆ ಏರಿಸಿಕೊಳ್ಳುವ ಕ್ರಮಗಳೂ ತಪ್ಪಿ ಹೋಗಿವೆ. ಈಗ ಬೀದಿಗಿಳಿದರೆ ಸಾಲು ಸಾಲು ಬಳೆ ಅಂಗಡಿಗಳು... ಗಾಜು, ಪ್ಲಾಸ್ಟಿಕ್, ಮೆಟಲ್... ಹೀಗೆ ಬದಲಾದ ಕಾಲದೊಂದಿಗೆ ಅಭಿರುಚಿಗೆ ತಕ್ಕಂತೆ ಬಳೆಗಳು ಮಾರ್ಪಾಟಾಗುತ್ತಲೇ ಇವೆ. ಬಟ್ಟೆಗೆ ಒಪ್ಪುವ ಮ್ಯಾಚಿಂಗ್ ಬಳೆಗಳು ಇವತ್ತು ಪ್ರಾಮುಖ್ಯ ಪಡೆದುಕೊಂಡಿವೆ. ಇವತ್ತು ದಿನಕ್ಕೊಂದು ಬಳೆ ತೆಗೆದು, ಹಾಕುವವರ ನಡುವೆ ಇದ್ಯಾವುದರ ಗೋಜಿಗೇ ಹೋಗದೆ ಖಾಲಿ ಕೈಯ ಮಹಿಳಾ ಮಣಿಗಳೂ ಹೆಚ್ಚಾಗುತ್ತಿದ್ದಾರೆ. ಈಗೆಲ್ಲ ಏನಿದ್ದರೂ ಅನುಕೂಲ ಶಾಸ್ತ್ರಗಳು. ಯಾರು ಬಳೆ ತೊಟ್ಟರೂ, ತೊಡದಿದ್ದರೂ ಅಂಥ ದೊಡ್ಡ ವ್ಯತ್ಯಾಸವಾಗುವ ಕಾಲ ಈಗಂತೂ ಇಲ್ಲ.
ಸ್ಮಿತಾ ಅಮೃತರಾಜ್