
ಸಾಮಾನ್ಯವಾಗಿ ಮನೆಗಳು ಪ್ರತ್ಯೇಕವಾಗಿ ನಿರ್ಮಾಣವಾಗಿರುತ್ತವೆ ಅರ್ಥಾತ್ ಒಂಟಿಯಾಗಿರುತ್ತವೆ. ಹಳೇ ಕಾಲದ ವಠಾರಗಳು, ಈಗಿನ ಕಾಲದ ಅಪಾರ್ಟ್‌ಮೆಂಟ್‌ಗಳನ್ನು ಹೊರತುಪಡಿಸಿದರೆ ಮನೆಗಳನ್ನು ಬೇರೆ ಬೇರೆಯಾಗಿಯೇ ನಿರ್ಮಿಸಲಾಗುತ್ತದೆ. ಆದರೆ ಎಲ್ಲಿಯೂ ಜಂಟಿಯಾಗಿರುವುದಿಲ್ಲ. ಅಣ್ಣ, ತಮ್ಮಂದಿರು ಸಹ ಬೇರೆ ಬೇರೆ ಮನೆಗಳನ್ನು ನಿರ್ಮಿಸಿಕೊಳ್ಳುತ್ತಾರೆ.
ಆದರೆ, ಮೈಸೂರಿನಲ್ಲಿ ನಾಲ್ಕು ಜಂಟಿ ಮನೆಗಳ ಮನೆಯೊಂದಿದೆ. ಚೌಕಾಕಾರದಲ್ಲಿ ನಿರ್ಮಿಸಿರುವ ಇಲ್ಲಿ ಒಂದು ಮನೆಯಿಂದ ಮತ್ತೊಂದು ಮನೆಗೆ ಹೋಗಲು ಮೆಟ್ಟಿಲುಗಳಿವೆ. ಉದಯಗಿರಿಯಲ್ಲಿರುವ ಈ ನಾಲ್ಕು ಜಂಟಿ ಮನೆಗಳಲ್ಲಿ ಒಂದೇ ಕುಟುಂಬದಲ್ಲಿ 19 ಸದಸ್ಯರಿದ್ದಾರೆ. ಶಾರದಾವಿಲಾಸ ಕಾಲೇಜಿನ ರಾಸಾಯನಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ನೂರ್ ಅಹಮದ್ ಖಾನ್ ಮನೆಯ ಯಜಮಾನರು. ಉಮೆ ಸಲ್ಮಾ ಬೇಗಂ ಮನೆಯ ಯಜಮಾನ್ತಿ.
ಈ ಮನೆಯಲ್ಲಿ ಮೂರು ಪೀಳಿಗೆಯವರಿದ್ದಾರೆ. ನೂರ್ ಅಹಮದ್ ಖಾನ್ ದಂಪತಿಗೆ ನಾಲ್ವರು ಮಕ್ಕಳು. ಅತೀಕ್ ಖಾನ್- ಸಿವಿಲ್ ಎಂಜಿನಿಯರ್, ಲೈಕ್ ಖಾನ್- ಪತ್ರಕರ್ತರು, ಇಶ್ರತ್ ಫಾತಿಮಾ- ಶಾಲಾ ಶೈಕ್ಷಣಿಕ ಅಧಿಕಾರಿ, ತೌಫಿಕ್ ಖಾನ್- ನೆಟ್‌ವರ್ಕ್ ಎಂಜಿನಿಯರ್. ಇಶ್ರತ್ ಫಾತಿಮಾಗೆ ಮೂವರು ಮಕ್ಕಳು, ಉಳಿದವರಿಲ್ಲ ತಲಾ ಇಬ್ಬರು ಮಕ್ಕಳು. ಎಲ್ಲ ಮಕ್ಕಳು ಒಟ್ಟಿಗೆ ಇರಬೇಕು ಎಂಬುದು ಮನೆಯ ಯಜಮಾನರ ಆಶಯ. ಹೀಗಾಗಿ ಈ ಹಿಂದೆ ನಜರ್‌ಬಾದ್ ಮೊಹಲ್ಲಾದಲ್ಲಿರುವ ಪಾರಂಪರಿಕ ಶೈಲಿಯ ಮನೆಯಲ್ಲೂ ಎಲ್ಲ ಒಟ್ಟಿಗೆ ಇದ್ದರು. ಈಗಲೂ ಉದಯಗಿರಿಲ್ಲಿ ವೃತ್ತಾಕಾರದಲ್ಲಿ ಒಂದಕ್ಕೊಂದು ಜೋಡಿಯಾಗಿರುವಂತೆ ನಾಲ್ಕು ಮನೆಗಳನ್ನು ನಿರ್ಮಿಸಿದ್ದು, ಎಲ್ಲರೂ ಒಟ್ಟಿಗೆ ವಾಸ ಮಾಡುತ್ತಾರೆ.
60್ಢ40 ಅಳತೆಯ ನಾಲ್ಕು ನಿವೇಶನಗಳನ್ನು ಅಕ್ಕಪಕ್ಕವೇ ಖರೀದಿಸಿ, ಚೌಕಾರದಲ್ಲಿ ಈ ಮನೆಗಳನ್ನು ನಿರ್ಮಿಸಲಾಗಿದೆ. ಈ ಮನೆಗಳಿಗೆ ಆವರಣ ಪ್ರವೇಶದಲ್ಲಿ ಎರಡು ಬೃಹತ್ ದ್ವಾರಗಳಿವೆ. ನಂತರ ಪ್ರತಿ ಮನೆಗೂ ಪ್ರತ್ಯೇಕ ಮುಖ್ಯ ದ್ವಾರ. ಪ್ರತಿ ಮನೆಯಲ್ಲೂ ನೆಲ ಅಂತಸ್ತಿನಲ್ಲಿ ವರಾಂಡ, ಒಂದು ಹಾಲ್, ಅಡುಗೆ ಮನೆ, ಒಂದು ರೂಂ ಇದೆ. ಮೊದಲ ಅಂತಸ್ತಿನಲ್ಲಿ 5 ರೂಂಗಳಿವೆ. ನಾಲ್ಕು ಮನೆಗಳ ವಿನ್ಯಾಸವೂ ಒಂದೇ ರೀತಿ. ನಾಲ್ಕು ಮನೆಯವರು ಒಟ್ಟಿಗೆ ಸೇರಲು ಮಧ್ಯದಲ್ಲಿ ದೊಡ್ಡದಾದ ಜಾಗ. ಅದಕ್ಕೆ ಹೆಸರು 'ಕೋರ್ಟ್ ಯಾರ್ಡ್'. ಎಲ್.ಎ. ಖಾನ್‌ರ ಸಂಪರ್ಕ: 94480 52786.
- ಅಂಶಿ ಪ್ರಸನ್ನಕುಮಾರ್
Advertisement