

ಮಕ್ಕಳು ನಮ್ಮ ಮಾತು ಕೇಳುವುದಿಲ್ಲ. ಅಂದುಕೊಂಡಿದ್ದನ್ನೇ ಮಾಡುತ್ತಾರೆ. ಅವರು ಹೇಳಿದ್ದನ್ನು ತಂದು ಕೊಡದಿದ್ದರೆ ಅವಾಂತರ ಸೃಷ್ಟಿಸುತ್ತಾರೆ- ಇದು ಪೋಷಕರೆಲ್ಲರ ಸಾಮಾನ್ಯ ದೂರು. ಆದರೆ, ಕೆಲ ಪಾಲಕರು ಮತ್ತು ಮಕ್ಕಳು ಇಂಥ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಅವರೇಕೆ ಎದುರಿಸುವುದಿಲ್ಲ ಎನ್ನುವ ಸೂಕ್ಷ್ಮತೆಯನ್ನು ಗಮನಿಸಿದಾಗ ನೆನಪಾಗುವುದು ನಮ್ಮ ಹಿರಿಯ ಗಾದೆ, 'ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ?'.
ಹೌದು, ಇಂದು ಲಕ್ಷಾಂತರ ಪಾಲಕರು ಮಕ್ಕಳಿಂದ ಎದುರಿಸುತ್ತಿರುವ ಸಮಸ್ಯೆ, ಮುಜುಗರ ಮುಂತಾದ ಸಮಸ್ಯೆಗಳಿಗೆ ಅವರೇ ಹೊಣೆಗಾರರು ಎನ್ನುವುದನ್ನು ಈ ಗಾದೆ ಮಾತು ಕಾಲ ಕಾಲದಿಂದಲೂ ಸಾರಿ ಹೇಳುತ್ತಿದೆ. ಆದರೆ, ನಮಗೆ ಸಿಗದೇ ಇರುವುದು ನಮ್ಮ ಮಕ್ಕಳಿಗೆ ಸಿಗಲಿ ಎನ್ನುವ ಆತುರದಲ್ಲಿ ಅವರು ಚಿಕ್ಕವರಿದ್ದಾಗ ನೀಡಿದ ಅತಿಯಾದ ಸ್ವಾತಂತ್ರ್ಯವೇ ಇಂದು ಸಮಸ್ಯೆಯ ಕೇಂದ್ರಬಿಂದು. ಅದಕ್ಕಾಗಿ ಮಕ್ಕಳಿಗೆ ಸ್ವಾತಂತ್ರ್ಯ ನೀಡಿ, ಆದರೆ ಅದು ಅತಿಯಾದಾಗ, ಪಾಲಕರು ಸಮಾಜದಲ್ಲಿ ಮಕ್ಕಳಿಂದಲೇ ಮುಜುಗರ, ಅವಮಾನ ಸೇರಿದಂತೆ ಮನಸ್ಸಿಗೆ ನೋವಾಗುವಂಥ ಎಲ್ಲ ಘಟನೆಗಳನ್ನು ಎದುರಿಸಬೇಕಾಗುತ್ತದೆ.
ಹೀಗೆ ಮಾಡಿ...
ಚಿಕ್ಕವರಿದ್ದಾಗಿನಿಂದಲೂ ಅವರ ಬಗ್ಗೆ ಕಾಳಜಿ ವಹಿಸಿ, ಪ್ರೀತಿ ತೋರಿಸಿ, ಆದರೆ ಅತಿಯಾಗಿ ಬೇಡ. ಅವರು ಬೇಕೆನ್ನುವ ಎಲ್ಲ ವಸ್ತುಗಳನ್ನು ನೀವು ತೊಂದರೆ ಮಾಡಿಕೊಂಡು (ಸಾಲ ಮಾಡಿ) ಕೊಡಿಸಬೇಡಿ. ಮನೆಯ ಆರ್ಥಿಕ ಪರಿಸ್ಥಿತಿ ಮಕ್ಕಳಿಗೆ ಕಾಲ ಕಾಲಕ್ಕೆ ತಿಳಿಸುತ್ತಾ ಇರಿ. ಅವರು ಸ್ವತಂತ್ರವಾಗಿ ಬೆಳೆಯಲು ಬಿಡಿ, ಆದರೆ ಅವರ ನಿತ್ಯದ ಬೆಳವಣಿಗೆಯ ಬಗ್ಗೆ ಸದಾ ನಿಗಾ ವಹಿಸಿ.
ಮಕ್ಕಳು ಹದಿ ಹರೆಯಕ್ಕೆ ಕಾಲಿಡುತ್ತಿದ್ದಂತೆ ಹೆಚ್ಚಿನ ಸ್ವಾತಂತ್ರ್ಯ ಬಯಸುತ್ತಾರೆ. ನೀವು ನಿಮ್ಮ ಕೆಲಸದ ಒತ್ತಡದಲ್ಲಿ ಮಕ್ಕಳ ಕಡೆ ಗಮನ ನೀಡದೇ ಇದ್ದಲ್ಲಿ ಹೆಚ್ಚಿನ ಅನಾಹುತ ಖಂಡಿತ.
ಚಿಕ್ಕವರಿದ್ದಾಗ ಅತಿಯಾದ ಪ್ರೀತಿ ಮತ್ತು ಅವಲಂಬನೆ ತೋರಿಸಿ, ದೊಡ್ಡವರಾದ ನಂತರ ಅವರನ್ನು ನಿರ್ಲಕ್ಷಿಸಿದಲ್ಲಿ ಮಕ್ಕಳಲ್ಲಿ ಸಹಜವಾಗಿ ಅಭದ್ರತೆಯ ಭಾವನೆ ಮೂಡಿ ಅವರು ಬೇರೆ ಗೆಳೆತನ ಅಥವಾ ಪ್ರೀತಿ ತೋರುವವರನ್ನು ಹುಡುಕುವ ಅಪಾಯವಿದೆ. ಅದಕ್ಕೆ ಅವಕಾಶ ಕಲ್ಪಿಸಬೇಡಿ.
ಜಗತ್ತು ವಿಶಾಲವಾಗಿದೆ, ನಿನ್ನಲ್ಲಿ ಬದುಕುವ ಸಾರ್ಮಥ್ಯವಿದೆ ಎನ್ನುವ ಆತ್ಮವಿಶ್ವಾಸ ಮಕ್ಕಳಲ್ಲಿ ಮೂಡಿಸಿ. ಹದಿಹರೆಯದ ಮಕ್ಕಳು ಮನೆಯಲ್ಲಿದ್ದರಂತೂ ಅವರೊಂದಿಗೆ ಗೆಳೆಯರಂತೆ ವರ್ತಿಸಿ, ಆಗ ಅವರಾಗಿಯೇ ತಮ್ಮ ಸಮಸ್ಯೆಗಳ ಬಗ್ಗೆ ನಿಮ್ಮ ಬಳಿ ಹೇಳಿಕೊಳ್ಳುವುದರಿಂದ ತೊಂದರೆ ಎದುರಾಗುವ ಮೊದಲು ಅದು ಇತ್ಯರ್ಥವಾಗಲು ಸಾಧ್ಯ.
ಹೀಗೆ ಮಾಡಬೇಡಿ
ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ನಾವೆಲ್ಲ ಗೊತ್ತಿಲ್ಲದೆ ಆಧುನಿಕತೆಗೆ ಒಗ್ಗಿ ಕೊಳ್ಳುತ್ತಿದ್ದೇವೆ. ಆಧುನಿಕತೆಯ ಹೆಸರಿನಲ್ಲಿ ಮನೆಯ ಯಜಮಾನರಾದ ನೀವು ತಡರಾತ್ರಿ ಮನೆಗೆ ಬರುವ ಅಭ್ಯಾಸವಿದ್ದರೆ ತಕ್ಷಣವೇ ನಿಲ್ಲಿಸಿ.
ಗೆಳೆಯರೊಂದಿಗೆ ಪಾರ್ಟಿಗಳಿಗೆ ಹೋಗುವ ಸಂದರ್ಭ ಎದುರಾದರೂ ನಿಗದಿತ ಸಮಯದಲ್ಲೇ ಮುಗಿಸಿ, ತಡರಾತ್ರಿಯವರೆಗೂ ಪಾರ್ಟಿಗಳು ಬೇಡ.
ಯಾವುದೇ ಕಾರಣಕ್ಕೂ ಮನೆಯಲ್ಲೇ ಗುಂಡು ಪಾರ್ಟಿಗಳನ್ನು ನಡೆಸಬೇಡಿ.
ನೀವು ನಿಮ್ಮ ಕಚೇರಿಗಳಲ್ಲಿನ ಗಾಸಿಪ್ಗಳು ಮತ್ತು ಬಾಸ್ ಅಥವಾ ಗುಮಾಸ್ತರ ಅಕ್ರಮ ಸಂಬಂಧಗಳ ಬಗ್ಗೆ ಮನೆಯಲ್ಲಿ ವಿಜೃಂಭಿಸಿ ಮಾತನಾಡಬೇಡಿ.
ಕ್ಷುಲ್ಲಕ ವಿಚಾರಕ್ಕಾಗಿ ಮನೆಯಲ್ಲಿ ಪದೇಪದೆ ಕಿತ್ತಾಡುತ್ತಿದ್ದರೆ, ಅದನ್ನು ತಕ್ಷಣದಿಂದಲೇ ನಿಲ್ಲಿಸಿ.
ನಿಮ್ಮಲ್ಲಿ ಯಾವುದಾದರೂ ದುರಭ್ಯಾಸಗಳಿದ್ದಲ್ಲಿ, ಅದು ಮೊದಲು ಗೊತ್ತಾಗುವುದು ನಿಮಗೆ, ಹಾಗಾಗಿ ಅದನ್ನು ಬಿಟ್ಟು ಬಿಡಿ.
= ಶಿವಕುಮಾರ ಕುಷ್ಟಗಿ