ಹೆಂಗಸರ ಬಾಯಿಯಲ್ಲೇಕೆ ಗುಟ್ಟು ಉಳಿಯೋದಿಲ್ಲ?

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಗತ್ಪ್ರಸಿದ್ಧ ಇಂಗ್ಲಿಷ್ ನಾಟಕಕಾರ ಶೇಕ್ಸ್‌ಪಿಯರ್. ಅವನು ಬರೆದ ದುರಂತ ನಾಟಕ 'ಮೆಕ್‌ಬೆತ್‌'ನಲ್ಲಿ ಒಬ್ಬ ಸೇನಾಧಿಪತಿಯ ಪಾತ್ರವಿದೆ. ಅವನೇ ನಾಟಕದ ಹೀರೋ ಮೆಕ್‌ಬೆತ್. ಭಾರಿ ಧೈರ್ಯಶಾಲಿ. ಅವನು ರಾಜನನ್ನೇ ಕೊಲೆ ಮಾಡಿಬಿಡುತ್ತಾನೆ. ಅದು ಅವನಿಗೆ ಹಾಗೂ ಅವನ ಹೆಂಡತಿಗೆ ಮಾತ್ರ ಗೊತ್ತು. ಅವರೇನೂ ಅದನ್ನು ಯಾರ ಬಳಿಯೂ ಹೇಳುವುದಿಲ್ಲ. ಆದರೂ ಅದು ಬೇರೆಯವರಿಗೆ ತಿಳಿಯುತ್ತದೆ. ಹೇಗೆ?
ಹೇಗೆಂದರೆ ಅವರು ಸ್ವಪ್ನದಲ್ಲಿ ಅದನ್ನು ಕನವರಿಸುತ್ತಾರೆ. ಉನ್ಮತ್ತ ಸ್ಥಿತಿ ತಲುಪಿದಾಗಲೆಲ್ಲ ತಾವು ಕೊಲೆ ಮಾಡಿದ್ದರ ಸುಳಿವು ನೀಡುತ್ತ ಹೋಗುತ್ತಾರೆ. ಯಾರಿಗೂ ಗೊತ್ತಿಲ್ಲದ ಗುಟ್ಟನ್ನು ತಾವೇ ಬಾಯಾರೆ ಬೇರೆಯವರಿಗೆ ತಿಳಿಯುವಂತೆ ಮಾಡುತ್ತಾರೆ.

ಮೆಕ್‌ಬೆತ್ ಇಲ್ಲೇಕೆ ಬಂದ ಎಂದರೆ, ಧೈರ್ಯಶಾಲಿಗಳು ಕೂಡ ಗುಟ್ಟೆಂಬ ಬೆಂಕಿಯನ್ನು ಹೆಚ್ಚು ದಿನ ಒಡಲೊಳಗೆ ಇರಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ತಿಳಿಸಲು. ಸಾಮಾನ್ಯವಾಗಿ ನಾವು 'ಹೆಂಗಸರ ಬಾಯಲ್ಲಿ ಗುಟ್ಟು ಉಳಿಯುವುದಿಲ್ಲ' ಎಂದು ದೂರುತ್ತೇವೆ. ವಾಸ್ತವವಾಗಿ ಸ್ವಲ್ಪ ದುರ್ಬಲ ಮನಸ್ಸಿನ ಯಾರಲ್ಲೂ ಗುಟ್ಟು ಉಳಿಯುವುದಿಲ್ಲ. ಹೆಂಗಸರ ಕತೆಯೂ ಅದೇ, ಗಂಡಸರ ಕತೆಯೂ ಅದೇ. ನಮಗೆ ತಿಳಿದಿರುವುದನ್ನು ಬೇರೆಯವರಿಗೆ ಹೇಳಬೇಕೆಂಬ ತುಡಿತ ಮಾನವ ಸಹಜ ಗುಣ. ಒಮ್ಮೊಮ್ಮೆ ಅದು ನಮ್ಮ ದೌರ್ಬಲ್ಯ.
ಶುಭಂ ವಾ ಯದಿ ವಾ ಪಾಪಂ
ಯನ್ನೃಣಾಂ ಹೃದಿ ಸಂಸ್ಥಿತಂ
ಸಗೂಢಮಪಿ ತಜ್ಞೇಯಂ
ಸ್ವಪ್ನವಾಕ್ಯಾತ್ತಥಾ ಮದಾತ್
'ಒಳ್ಳೆಯ ಸುದ್ದಿಯಾಗಿರಲಿ, ಕೆಟ್ಟ ಸುದ್ದಿಯೇ ಆಗಿರಲಿ, ನಮ್ಮೊಳಗೆ ಅದು ಇದೆಯೆಂದಾದರೆ ಸ್ವಪ್ನದಲ್ಲಿ, ಉನ್ಮತ್ತ ಸ್ಥಿತಿಯಲ್ಲಿ ಅಥವಾ ನನಗೆ ಗೊತ್ತಿದೆಯೆಂಬ ಮದದಲ್ಲಿ ಹೊರಬಿದ್ದೇ ಬೀಳುತ್ತದೆ. ಯಾವ ಗುಟ್ಟನ್ನೂ ನಾವು ಶಾಶ್ವತವಾಗಿ ಹಿಡಿದಿಟ್ಟುಕೊಳ್ಳಲು ಸಮರ್ಥರಲ್ಲ'.
ಗುಟ್ಟು ಯಾರದ್ದೇ ಆಗಿರಲಿ, ನಮಗೆ ಸಂಬಂಧಿಸಿದ್ದಾಗಿರಲಿ ಅಥವಾ ಕೇಳುವವರಿಗೆ ಸಂಬಂಧಿಸಿದ್ದಾಗಿರಲಿ, ನಮ್ಮೊಳಗಿದೆ ಎಂದಾದರೆ ಅದು ನಮ್ಮಿಂದಲೇ ಹೊರಬರುತ್ತದೆ. ಏಕೆಂದರೆ ನಮ್ಮೊಳಗಿನ ರಹಸ್ಯಗಳೆಲ್ಲ ಆತ್ಮನಿಗೆ ಸಂಬಂಧಿಸಿದ್ದು. ಆತ್ಮ ಅನಂತ. ಅದು ಎಲ್ಲರಿಗೂ ಸಂಬಂಧಿಸಿದ್ದು. ಅದಕ್ಕೆ ಅಡೆತಡೆಗಳಿಲ್ಲ. ಅದು ಎಷ್ಟು ನಿಗೂಢವೋ ಅಷ್ಟೇ ಪಾರದರ್ಶಕ. ಅಲ್ಲಿರುವುದು ಎಲ್ಲರಿಗೂ ತಿಳಿಯಬೇಕು. ಅದು ಅಧ್ಯಾತ್ಮದ ನಿಯಮ.
ಆದರೆ ನಾವು ಆತ್ಮನ ಸ್ವಭಾವಕ್ಕೆ ವಿರುದ್ಧವಾಗಿ ಏನೇನನ್ನೋ ಬಚ್ಚಿಡಲು ಪ್ರಯತ್ನಿಸುತ್ತೇವೆ. ಎಚ್ಚರದಲ್ಲಿರುವಷ್ಟು ಹೊತ್ತು ಅದು ನಡೆಯುತ್ತದೆ. ಆದರೆ ಜೀವನಪೂರ್ತಿ ನಾವು ಎಚ್ಚರವಾಗಿರಲು ಸಾಧ್ಯವಿಲ್ಲ. ಒಮ್ಮೊಮ್ಮೆ ಮನಸ್ಸು ಬೇರೆಯವರ ವಶಕ್ಕೆ ಹೋಗುತ್ತದೆ. ಇನ್ನೊಮ್ಮೆ ಸ್ವಪ್ನದಲ್ಲಿ ಕನವರಿಸುತ್ತೇವೆ. ಹೆಂಡ, ಹೆಂಗಸರ ಸಂಗದಲ್ಲಿ, ಬಹಳ ಖುಷಿಯಾದಾಗ, ಬಹಳ ದುಃಖವಾದಾಗ, ನಮಗೆಲ್ಲಾ ಗೊತ್ತು ಎಂದು ತೋರಿಸಿಕೊಳ್ಳುವ ಚಪಲ ಜಾಗೃತವಾದಾಗ ನಾವು ನಮಗೇ ಗೊತ್ತಿಲ್ಲದಂತೆ ಗುಟ್ಟನ್ನು ಹೇಳಿಬಿಡುತ್ತೇವೆ.
ಅನೇಕ ಸಲ ನಮ್ಮ ಬಗೆಗಿನ ಗುಟ್ಟು ರಟ್ಟಾದಾಗ ಅವಮಾನ ಎದುರಿಸುವ ಸಂದರ್ಭ ಬರುತ್ತದೆ. ಇದಕ್ಕೆ ಪರಿಹಾರವೆಂದರೆ, ನಮ್ಮ ಬದುಕನ್ನು ಬಹಳ ಪಾರದರ್ಶಕವಾಗಿ ಹಾಗೂ ಸರಳವಾಗಿ ಇರಿಸಿಕೊಳ್ಳುವುದು. ಆಗ ನಮ್ಮ ಬಗ್ಗೆ ಯಾವ ಗುಟ್ಟೂ ಇರುವುದಿಲ್ಲ. ಅದರಿಂದಾಗಿ ಅವಮಾನ ಎದುರಿಸುವ ಪ್ರಮೇಯವೂ ಬರುವುದಿಲ್ಲ.
-ತ್ರಿಮೂರ್ತಿ

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com