ಇನ್ಮುಂದೆ ಟೀಬ್ಯಾಗ್ ಬಿಸಾಡಬೇಡಿ

ಟೀ ಬ್ಯಾಗ್ ಬಳಸಿ ಚಹಾ ತಯಾರಿಸಿದ ನಂತರ ಆ ಟೀ ಬ್ಯಾಗ್ ನಿರುಪಯೋಗಿ ಎಂದರೆ ನಿಮ್ಮ ಊಹೆ ತಪ್ಪು. ಬಳಸಿ ಬಿಸಾಡುವ ಈ ಟೀ ಬ್ಯಾಗ್‌ನಿಂದ...
ಟೀ ಬ್ಯಾಗ್
ಟೀ ಬ್ಯಾಗ್

ಟೀ ಬ್ಯಾಗ್ ಬಳಸಿ ಚಹಾ ತಯಾರಿಸಿದ ನಂತರ ಆ ಟೀ ಬ್ಯಾಗ್ ನಿರುಪಯೋಗಿ ಎಂದರೆ ನಿಮ್ಮ ಊಹೆ ತಪ್ಪು. ಬಳಸಿ ಬಿಸಾಡುವ ಈ ಟೀ ಬ್ಯಾಗ್‌ನಿಂದ ಹಲವಾರು ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತಾ? ಒಂದ್ಸಾರಿ ಟೀ ಮಾಡಿದ ನಂತರ ಬಿಸಾಡಲ್ಪಡುವ ಈ ಟೀಬ್ಯಾಗ್‌ಗಳಿಂದ ಏನೇನು ಮಾಡಬಹುದು ?ಎಂದು ಕೇಳಿದರೆ ಅದಕ್ಕೆ ಉತ್ತರ ಇಲ್ಲಿದೆ.

ಗಿಡಗಳಿಗೆ ಕೀಟಬಾಧೆ ತಡೆಯಲು
ಬಳಸಿ ಬಿಸಾಡುವ ಟೀ ಬ್ಯಾಗ್‌ಗಳನ್ನು ಒಂದು ಬಕೆಟ್ ನೀರಿನಲ್ಲಿ ಹಾಕಿ ಆ ನೀರನ್ನು ಗಿಡಗಳಿಗೆ ಸಿಂಪಡಿಸಿ. ಇದು ಫಂಗಲ್ ಇನ್‌ಫೆಕ್ಷನ್ ತಡೆಯುತ್ತದೆ. ಟೀ ಬ್ಯಾಗ್‌ನ್ನು ಓಪನ್ ಮಾಡಿ ಅದರಲ್ಲಿರುವ ಟೀ ಪುಡಿಯನ್ನು ಗಿಡದ ಬುಡಕ್ಕೆ ಹಾಕಿ ಇದು ಗಿಡಗಳಿಗೆ ಒಳ್ಳೆಯ ಗೊಬ್ಬರ.

ಕಾರ್ಪೆಟ್, ರಗ್ ಶುಚಿಗೊಳಿಸಲು
ಒಂದು ಕಪ್ ನೀರಿನಲ್ಲಿ ಟೀ ಬ್ಯಾಗ್‌ನ್ನು ಹಾಕಿ ಫ್ರಿಡ್ಜ್‌ನಲ್ಲಿಡಿ. ಆಮೇಲೆ ಅದನ್ನು ಬಿಡಿಸಿ ಸ್ವಲ್ಪ ಹೊತ್ತು ಒಣಗಲು ಬಿಡಿ. ಈ ಟೀ ಪುಡಿಯನ್ನು ರಗ್, ಕಾರ್ಪೆಟ್ ಮೇಲೆ ಚಿಮುಕಿಸಿ ಒಣಗಿಸಿ. ಒಣಗಿದ ನಂತರ ಅದರ ಮೇಲಿಂದ ಟೀ ಪುಡಿಯನ್ನು ಕೆಡವಿ ತೆಗೆಯಿರಿ.


ವಾಸನೆ ಮುಕ್ತ ಗೊಳಿಸಲು
ರೆಫ್ರಿಜರೇಟರ್ ವಾಸನೆ ಬರುತ್ತಿದ್ದರೆ ಒಂದೆರಡು ಟೀ ಬ್ಯಾಗ್ ಗಳನ್ನು ರೆಫ್ರಿಜರೇಟರ್‌ನಲ್ಲಿರಿಸಿ. ಕಸದ ಬುಟ್ಟಿಯಲ್ಲಿ ಒಣಗಿದ ಟೀ ಬ್ಯಾಗ್ ಇರಿಸಿದರೆ ಅಲ್ಲಿ ವಾಸನೆ ಬರಲ್ಲ.
ಒಣಗಿದ ಟೀ ಬ್ಯಾಗ್‌ಗೆ ನಿಮ್ಮಿಷ್ಟದ ಸುವಾಸನೆಯುಕ್ತ ಎಣ್ಣೆಯನ್ನು ಬೆರೆಸಿ ಒಣಗಲು ಬಡಿ. ಮನೆ, ಆಫೀಸು ಅಥವಾ ಕಚೇರಿಗಳಲ್ಲಿ ಇದನ್ನು ತೂಗು ಹಾಕಿದರೆ ಕೊಠಡಿ ಸುವಾಸನೆಯಿಂದ ಕೂಡಿರುತ್ತೆ. ಈ ಟೀ ಬ್ಯಾಗ್ ಗಳು ವಾಸನೆಯನ್ನು ಹೀರುವುದರಿಂದ ಇವು ಗಾಳಿಯಲ್ಲಿ ಒಣಗಿದ ಕೂಡಲೇ ಮತ್ತೊಮ್ಮೆ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಫ್ರೆಶ್ ಆಗಿರುವಂತೆ ಮಾಡಬಹುದು.


ಇಲಿ ಕಾಟ ತಡೆಯಲು

ಇಲಿ, ಹೆಗ್ಗಣಗಳಿಗೆ ಟೀ ವಾಸನೆ ಆಗಲ್ಲ. ಆದ್ದರಿಂದ ಕಪಾಟು, ಅಡುಗೆ ಮನೆಯಲ್ಲಿ ಇದನ್ನಿಡಿ. ಪೆಪ್ಪರ್ ಮಿಂಟ್ ಎಸೆನ್ಶಲ್ ಆಯಿಲ್ ನಿಂದ ಟೀ ಬ್ಯಾಗ್ ಅದ್ದಿ ಇಟ್ಟರೆ, ಜೇಡ, ಇರುವೆ ಯಾವುದೂ ಮನೆಯೊಳಗೆ ಕಾಲಿಡಲ್ಲ.


ಜಿಡ್ಡು ಹೋಗಲು ಒಳ್ಳೆ ಉಪಾಯ


ಪಾತ್ರೆಗಳಲ್ಲಿ ಜಿಡ್ಡಿದ್ದರೆ ಬಿಸಿ ನೀರಲ್ಲಿ ಪಾತ್ರೆಗಳನ್ನಿಟ್ಟು ಅದಕ್ಕೆ ಟೀ ಬ್ಯಾಗ್  ಹಾಕಿಡಿ. ಜಿಡ್ಡು ಹೋಗುತ್ತೆ. ಅಷ್ಟೇ ಅಲ್ಲ  ಕೈಗಳಲ್ಲಿ ಬೆಳ್ಳುಳ್ಳಿ, ನೀರುಳ್ಳಿ ಅಥವಾ ಮೀನಿನ ವಾಸನೆ ಇದ್ದರೆ ಟೀ ಬ್ಯಾಗ್ ನ್ನು ಕೈಗೆ ತಿಕ್ಕಿ ಕೈ ತೊಳೆದುಕೊಳ್ಳಿ.

ತ್ವಚೆಗೂ ಉತ್ತಮ

ಉಗುರು ಬೆಚ್ಚಗಿನ ನೀರಲ್ಲಿ ಟೀ ಬ್ಯಾಗ್ ಹಾಕಿ ಆ ನೀರಿನಿಂದ ಸ್ನಾನ ಮಾಡಿದರೆ ತ್ವಚೆಗೆ ತುಂಬಾ ಒಳ್ಳೆದು. ನಲ್ಲಿಯಲ್ಲಿ ಟೀ ಬ್ಯಾಗ್ ತೂಗು ಹಾಕಿ ಅದರ ಮೂಲಕ ನೀರು ಹರಿಯ ಬಿಡಬೇಕು ಇಲ್ಲವೇ ಸ್ನಾದ ನೀರಿನಲ್ಲಿ ಟೀ ಬ್ಯಾಗ್ ಹಾಕಿದರೆ ತಾಜಾತನ ಸಿಗುತ್ತೆ. ಟೀ ಬ್ಯಾಗ್ ನಲ್ಲಿರುವ ಆ್ಯಂಟಿ ಓಕ್ಸಿಡೆಂಟ್ ದೇಹದ ತಾಜಾತನಕ್ಕೆ ಉತ್ತಮ.

ಕಣ್ಣಿಗೆ ತಂಪು ತಂಪು

ಟೀ ಬ್ಯಾಗ್‌ನ್ನು ಚೆನ್ನಾಗಿ ತೊಳೆದು ಫ್ರಿಜ್‌ನಲ್ಲಿರಿಸಿ, ಇಲ್ಲವೇ ತಣ್ಣೀರಲ್ಲಿ ಅದ್ದಿ ಕಣ್ಣಿನ ಮೇಲಿಟ್ಟರೆ ಕಣ್ಣು ಉರಿ ಕಡಿಮೆಯಾಗುತ್ತದೆ. ಸೂರ್ಯನ ಶಾಖದಿಂದ ಚರ್ಮದ ಮೇಲೆ ಗುಳ್ಳೆ ಎದ್ದಿದ್ದರೆ, ತುರಿಕೆ, ತರಚಿದ ಗಾಯಗಳಾಗಿದ್ದರೆ ಅದರ ಮೇಲೆ ಟೀ ಬ್ಯಾಗ್ ನ್ನು ಮೆಲ್ಲನೆ ತಿಕ್ಕಿದರೆ ಚರ್ಮ ಊದಿಕೊಳ್ಳುವುದಿಲ್ಲ. ಗಾಯ ಬೇಗ ಗುಣವಾಗುತ್ತದೆ. ಚರ್ಮದ ಮೇಲೆ ಸೋಂಕು ತಗಲಿದ್ದರೆ, ತುಸು ಬಿಸಿ ಇರುವ ಟೀ ಬ್ಯಾಗ್ ನ್ನು ಅದರ ಮೇಲಿಟ್ಟರೆ ಬೇಗನೆ ಗುಣಮುಖವಾಗಬಹುದು.


ಬಾಯಿ ವಾಸನೆ, ಕೂದಲು ಸಂರಕ್ಷಣೆಗೆ


ಬಾಯಿ ವಾಸನೆ ನಿಯಂತ್ರಿಸಲು ಬಳಸಿದ ಟೀ ಬ್ಯಾಗ್ ನ್ನು ಇನ್ನೊಮ್ಮೆ ಬಿಸಿ ನೀರಲ್ಲಿ ಹಾಕಿ. ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ ಸಾಕು. ಶ್ಯಾಂಪೂ ಮಾಡಿದ ನಂತರ ಟೀ ಬ್ಯಾಗ್ ಅದ್ದಿ ತೆಗೆದ ನೀರಿನಿಂದ ತೊಳೆದರೆ  ಕೂದಲಿಗೆ ಒಳ್ಳೆಯದು.

ಫರ್ನೀಚರ್ ಫಳಫಳ
ಪಾಲಿಶ್ ಮಾಡಿದ ಫರ್ನೀಚರ್ ಮತ್ತು ಹಾರ್ಡ್‌ವುಡ್ ನೆಲವನ್ನು ಟೀ ಬ್ಯಾಗ್ ಹಿಂಡಿದ ನೀರಿನಿಂದ ಒರೆಸಿದರೆ ಕ್ಲೀನ್ ಆಗುತ್ತದೆ. ಗಾಜಿನಲ್ಲಿ ಅಂಟಿದ ಬೆರಳಿನ ಅಚ್ಚು, ಕಿಟಕಿ, ಕನ್ನಡಿಯನ್ನು ಒರೆಸಲು ಕೂಡಾ ಈ ನೀರನ್ನು ಬಳಸಿದರೆ ಗಾಜಿನ ಮೇಲಿರುವ ಕಲೆ ಮಾಯವಾಗುತ್ತದೆ.

-ಸಾರಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com