
ಆಫೀಸ್ ನಲ್ಲಿ ಬ್ಯುಸಿ ದಿನವೊಂದನ್ನು ಕಳೆದ ನಂತರ ಮನೆಯ ಬಾಲ್ಕನಿಗೋ, ನಿಮ್ಮ ಕೋಣೆಗೋ ಹೋಗಿ ಉಯ್ಯಾಲೆಯ ಮೇಲೆ ಕುಳಿತು ಎಲ್ಲ ಟೆನ್ಷನ್‍ಗಳನ್ನೂ ಮರೆತು ಸುಮ್ಮನೆ ತೊನೆದಾಡುವ ಖುಷಿಯೇ ಬೇರೆ. ಕಲ್ಪನಾ ಲೋಕದಲ್ಲಿ ವಿಹರಿಸುವ, ಇಷ್ಟದ ಕಾದಂಬರಿಯೊಂದಿಗೆ ಕಳೆದುಹೋಗುವ, ಕುರುಕಲು ತಿಂಡಿ ತಿನ್ನುತ್ತಾ ಸಂತೋಷವನ್ನು ಅನುಭವಿಸುವ ಮ್ಯಾಜಿಕ್ ಅನ್ನು ಉಯ್ಯಾಲೆ ತಂದುಕೊಡುತ್ತದೆ.
ತೂಗುಯ್ಯಾಲೆಗಳು ಮನಸ್ಸಿಗೆ ಸಂತೋಷ ತಂದುಕೊಡುವುದರೊಂದಿಗೆ ಮನೆಯ ಸೌಂದರ್ಯವನ್ನೂ ಹೆಚ್ಚಿಸುತ್ತವೆ. ಗ್ಲಾಮರಸ್ ಆಗಿ ಕಾಣಿಸುವ ಉಯ್ಯಾಲೆಗಳು ಮನೆಯ `ವಾವ್ ಫ್ಯಾಕ್ಟರ್'ನಂತೆ ಕೆಲಸ ಮಾಡುತ್ತವೆ. ಮಕ್ಕಳಿಗೆ ತೊಟ್ಟಿಲುಗಳು ನೀಡುವ ನೆಮ್ಮದಿಯನ್ನು ದೊಡ್ಡವರು ಉಯ್ಯಾಲೆಗಳಲ್ಲಿ ಪಡೆಯಬಹುದು. ಬೇಸಿಗೆಯಲ್ಲಿ ಮನೆಯ ಉದ್ಯಾನದಲ್ಲಿ ಕುಳಿತು ಸಂಜೆಗಾಳಿಯನ್ನು ಅನುಭವಿಸಲು, ಮಳೆಗಾಲದಲ್ಲಿ ಬಾಲ್ಕನಿಯ ಉಯ್ಯಾಲೆಯಲ್ಲಿ ಕುಳಿತು ಮರದ ಮೇಲಿನಿಂದ ತೊಟ್ಟಿಕ್ಕುವ ಹನಿಗಳನ್ನು ನೋಡುವ ಸುಖಕ್ಕಾಗಿ, ಚಳಿಗಾಲದಲ್ಲಿ ನಿಮ್ಮ ಕೋಣೆಯೊಳಗಿನ ಉಯ್ಯಾಲೆಯಲ್ಲಿ ಬೆಚ್ಚನೆ ಕುಳಿತು ಪುಸ್ತಕ ಹಿಡಿದು ನಿರಾಳರಾಗಬಹುದು.
ಹೀಗಾಗಿ ಉಯ್ಯಾಲೆಗಳನ್ನು ಮನೆಯಲ್ಲಿ ಎಲ್ಲಿ ಹಾಕಬೇಕೆಂಬ ಪರಿಕಲ್ಪನೆ ನಿಮಗಿರಬೇಕಾದುದು ಅಗತ್ಯ. ಡೆನ್ಮಾರ್ಕ್‍ನ ನನ್ನಾ ಡಿಟ್ಜೇಲ್ ಮೊದಲ ಬಾರಿಗೆ ಹ್ಯಾಂಗಿಂಗ್ ಚೇರ್ ಗಳನ್ನು ಪರಿಕಲ್ಪಿಸಿ ತಯಾರಿಸಿದ. ಇದು ಮೊಟ್ಟೆಯಾಕಾರದಲ್ಲಿತ್ತು. ಇದು ಪಾಶ್ಚಾತ್ಯರಿಗಾಯಿತು. ನಮ್ಮ ದೇಶಕ್ಕೆ ಬಂದರೆ ಅಜ್ಜನ ಅಜ್ಜನ ಮುತ್ತಜ್ಜನ ಕಾಲದಿಂದಲೂ ಮರದ ಕೆತ್ತನೆಯ ಬಾವಂತಿಗೆ ಮನೆಯ ಹಾಲ್‍ನಲ್ಲಿ ಎಲೆಅಡಕೆ ಡಬ್ಬಿಗಳೊಂದಿಗೆ ಉಯ್ಯಾಲೆಯಲ್ಲಿ ಕೂರುವ ಹಿರಿಯರ, ಲಂಗದಾವಣಿ ತೊಟ್ಟು ಕನಸಿನಲೋಕದಲ್ಲಿ ವಿಹರಿಸುವ ಹುಡುಗಿಯ ಚಿತ್ರಣ ಕಣ್ಣ ಮುಂದೆ ಬರುತ್ತದೆ.
ಇಂದು ಪ್ಲಾಸ್ಟಿಕ್, ಬಿದಿರು, ಫೈಬರ್ ಮುಂತಾದ ಮೆಟೀರಿಯಲ್‍ಗಳಲ್ಲಿ ದೊರೆಯುವ ಉಯ್ಯಾಲೆಗಳು ವಿವಿಧ ಬಣ್ಣಗಳಲ್ಲಿ ಕಲಾತ್ಮಕವಾಗಿಯೂ, ಮಾಡರ್ನ್ ಆಗಿಯೂ ಇರುತ್ತವೆ. ಕೂರುವುದರಿಂದ ಮಲಗುವ ತನಕವೂ ಅಗತ್ಯಕ್ಕೆ ತಕ್ಕ ಆಕಾರಗಳಲ್ಲಿ ದೊರೆಯುತ್ತವೆ. ಲಿವಿಂಗ್ ರೂಂ, ಬಾಲ್ಕನಿ, ವೆರಾಂಡಾ, ಗಾರ್ಡನ್‍ಗಳಿಗೆ ಹೆಚ್ಚು ಅಂದವನ್ನು ತಂದುಕೊಡುವ ಉಯ್ಯಾಲೆಗಳನ್ನು ಸುಲಭವಾಗಿ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ಉಯ್ಯಾಲೆ ಕೇವಲ ನೋಡಲು ಚೆಂದವಿದ್ದರಷ್ಟೇ ಸಾಲದು, ಕಂಫರ್ಟ್ ಕೂಡಾ ಅತಿ ಮುಖ್ಯ. ಹೀಗಾಗಿ ಕೊಳ್ಳುವಾಗ ಮನೆಯ ಯಾವ ಭಾಗದಲ್ಲಿ ಹಾಕುತ್ತೀರಿ, ಅಲ್ಲಿ ಜಾಗ ಎಷ್ಟಿದೆ, ಮಕ್ಕಳಿಗೋ, ಹಿರಿಯರಿಗೋ ಎಂಬ ಎಲ್ಲ ಅಂಶವನ್ನೂ ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ತೂಗುಯ್ಯಾಲೆ ಮನಸ್ಸಿಗೆ ಸಂತೋಷ ತಂದುಕೊಡುವುದರೊಂದಿಗೆ ಮನೆಯ ಸೌಂದರ್ಯವನ್ನೂ ಹೆಚ್ಚಿಸುತ್ತವೆ.
Advertisement