ಅಮ್ಮಾ ಪಬ್

ಮಹಿಳೆಯರಿಗಾಗಿ ಪ್ರತ್ಯೇಕ ಆಸನ, ಸಮಯ ನಿಗದಿಪಡಿಸಿರುವ ಪಬ್ ಬೆಂಗಳೂರಿನಲ್ಲಿ ಇದೇ...
ಅಮ್ಮಾ ಪಬ್

ಮಹಿಳೆಯರಿಗಾಗಿ ಪ್ರತ್ಯೇಕ ಆಸನ, ಸಮಯ ನಿಗದಿಪಡಿಸಿರುವ ಪಬ್ ಬೆಂಗಳೂರಿನಲ್ಲಿ ಇದೇ ಪ್ರಥಮ. ಇದರ ಮಾಲಿಕರೂ ಮಹಿಳೆಯರೇ.

ಬೆಂಗಳೂರಿನ ವೀಕೆಂಡ್‌ಗಳು ಕ್ಲಬ್ ಪಬ್‌ಗಳಿಲ್ಲದೆ ಪೂರ್ಣವಾಗಲಾರವು. ಮೇಲ್ಮಧ್ಯಮ ಮತ್ತು ಶ್ರೀಮಂತ ವರ್ಗದ ಜನತೆ ವಾರದ ದುಡಿಮೆಯ ದಣಿವು ಕಳೆಯಲು ಇಲ್ಲಿಗೆ ಭೇಟಿ ನೀಡಲು ಸದಾ ಬಯಸುತ್ತಾರೆ.

ವಾರದ ದಿನಗಳಲ್ಲೂ ಇವು ಬ್ಯುಸಿಯೇ. ಇಲ್ಲಿಗೆ ಬರುವ ಮಹಿಳೆಯರ ಸಂಖ್ಯೆಯೂ ಸಾಕಷ್ಟು. ರಾಜ್ಯ ಸರ್ಕಾರ ಇತ್ತೀಚೆಗೆ ವಾರಾಂತ್ಯದ ಸಂಭ್ರಮಾಚರಣೆಗೆ ಇದ್ದ ಕಟ್ಟುಪಾಡುಗಳನ್ನು ಸಡಿಲಿಸಿದ್ದು ಸಾಕಷ್ಟು ಜನರಲ್ಲಿ ಉತ್ಸಾಹ ಮೂಡಿಸಿದೆ ಎನ್ನಲಡ್ಡಿಯಿಲ್ಲ.

ಅದೆಲ್ಲ ಏನೇ ಇದ್ದರೂ, ಮಹಿಳೆಯರು ಒಬ್ಬಂಟಿಯಾಗಿ ಪಬ್‌ಗೆ ಹೋಗುವುದು, ಅಲ್ಲಿ ಯಾವುದೇ ತೊಂದರೆಯಿಲ್ಲದ ತನಗೆ ಬೇಕಾದಂತೆ ಕಾಲ ಕಳೆಯುವುದು ಹಾಗೂ ತನಗೆ ಬೇಕಾದುದನ್ನು ಸವಿಯುವುದು ಕಷ್ಟವೇ ಸರಿ. ವಿದೇಶಗಳಲ್ಲಿ ಇದಕ್ಕೆ ಬೇಕಾದ ಪ್ರೈವಸಿ ಸಿಗುತ್ತದೆ. ನಮ್ಮಲ್ಲಿ ಹಾಗಿಲ್ಲ, ಈಗ ಆ ಚಿಂತೆಯೂ ಬೇಡ.

ಮಹಿಳೆಯರಿಗಾಗಿಯೇ ಸಿಲಿಕಾನ್ ಸಿಟಿಯಲ್ಲಿ ಒಂದು ಪಬ್ ಇತ್ತೀಚೆಗೆ ತಲೆ ಎತ್ತಿದೆ. ಇಲ್ಲಿ ಯುವತಿ/ಮಹಿಳೆಯರು ತಮಗೆ ಬೇಕಾದಂತೆ ಎಷ್ಟು ಹೊತ್ತಾದರೂ ಕಾಲ ಕಳಯಬಹುದು. ಫ್ರೇಝರ್ ಟೌನ್‌ನಲ್ಲಿರುವ 'ಶೆರ್ಲಾಕ್ಸ್ ಹೋಮ್ ಪಬ್‌' ಈ ಸೌಲತ್ತು ನೀಡಿದೆ.

ವಿಶೇಷತೆ ಏನು?

ಇಲ್ಲಿ ಮಹಿಳೆಯರ ಸುರಕ್ಷತೆಗಾಗಿ 'ಮಹಿಳಾ ಸಮಯ' ಇದೆ. ಈ ಸಮಯದಲ್ಲಿ ಕೇವಲ ಮಹಿಳೆಯರು ಮತ್ತು ಅವರೊಂದಿಗೆ ಬರುವ ಪುರುಷರಿಗೆ ಮಾತ್ರ ಅವಕಾಶ. ಮಹಿಳೆಯರು ಪುರುಷರಿಂದ ದೂರ ಕೂರಲು ಬಯಸಿದರೆ ಅವರಿಗಾಗಿಯೇ ಪ್ರತ್ಯೇಕ ಸ್ಥಳ ಮೀಸಲು. ಇದರ ಮತ್ತೊಂದು ವಿಶೇಷತೆ ಎಂದರೆ ಇದರ ಮಾಲಿಕರು ಮಹಿಳೆಯರೇ.

ಪಬ್‌ನಲ್ಲಿ ಒಬ್ಬಳೇ ಮಹಿಳೆ ಯಾವುದೇ ತೊಂದರೆ ಇಲ್ಲದೆ ಸಮಯ ಕಳೆಯುವ ಹಾಗೂ ತನಗೆ ಬೇಕಾದ್ದನ್ನು ಸವಿಯುವ ಅವಕಾಶ ಇಲ್ಲಿದೆ ಎಂಬುದು ಈ ಮಾಲೀಕರ ಅಭಿಪ್ರಾಯ. ಈ ಪಬ್ ಇಂಗ್ಲಿಷ್ ಸೆಮಿ-ಅರ್ಬನ್ ಪಬ್‌ನ ವಾತಾವರಣ ಹೊಂದಿದೆ. ಹಳೆಯ ಪೀಠೋಪಕರಣಗಳು ಆಂತರಿಕ ವಿನ್ಯಾಸವನ್ನು ಚಂದಗಾಣಿಸಿವೆ. ಇಲ್ಲಿನ ಮೆನು ಕಾಂಟಿನೆಂಟಲ್, ತಂದೂರಿ ಮತ್ತು ಚೈನೀಸ್ ಆಹಾರವನ್ನು ಉಣಬಡಿಸಲಿವೆ.

ಬಹುಶಃ ಮಹಿಳೆಯರಿಗಾಗಿ ಪಬ್‌ನಲ್ಲಿ ಪ್ರತ್ಯೇಕ ಆಸನ ಹಾಗೂ ಅವರಿಗಾಗಿ 'ಮಹಿಳಾ ಅವರ್‌' ಕಲ್ಪಿಸಿರುವುದು ಭಾರತದಲ್ಲೇ ಮೊದಲು. ವಾರದ ಎಲ್ಲಾ ದಿನವೂ ಸಂಜೆ 6 ರಿಂದ 8ರವರೆಗೆ ಹಾಗೂ ಪಬ್‌ನ ಮೂರನೇ ಒಂದು ಭಾಗ ಸ್ಥಳವನ್ನು ಮಹಿಳೆಯರಿಗಾಗಿ ಮೀಸಲಿಡಲಾಗಿದೆ. ಈ ವೇಳೆ ಪಬ್‌ಗೆ ಪುರುಷರ ಆಗಮನ ನಿಷೇಧಿಸಲಾಗಿದೆ.

ಪೊಲೀಸರು ಸೂಚಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದ್ದು, ಭದ್ರತೆ, ಸಿಸಿ ಕ್ಯಾಮರಾ ಎಲ್ಲವನ್ನೂ ಅಳವಡಿಸಲಾಗಿದೆ. ವೀಕೆಂಡ್ ದಿನಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ ಎನ್ನುತ್ತಾರೆ ಪಬ್‌ನ ಮಾಲೀಕರಲ್ಲೊಬ್ಬರಾದ ಅನಿತಾ. ಮದ್ಯ ಮಾರಾಟ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನದನ್ನು ಸಾಧಿಸಬಹುದು ಎಂದು ತೋರಿಸುವ ಮಹತ್ವಾಕಾಂಕ್ಷೆಯಿಂದ ಇಂತಹ ಹೊಸ ಪ್ರಯತ್ನಕ್ಕೆ ಕೈ ಹಾಕಿ, ಈ ಯೋಜನೆ ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎನ್ನುತ್ತಾರೆ. 

- ಶಾಂತ ತಮ್ಮಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com