ವಿಂಡೋ ಪವರ್

ತಕ್ಷಣ ನಮಸ್ತೆ ಎಂದು ಹೇಳಿ ಇದ್ದಕ್ಕಿದ್ದಂತೆ ಥಟ್ಟನೆ ಬಾಗಿಲು ಮುಚ್ಚಿದರೆ ನಿಮ್ಮ ಸಂಬಂಧಿಕರು...
ತಂಪೆನಿಸುವ ಸುಮಧುರ ವಾತಾವರಣದ ಆಹ್ಲಾದಕರ
ತಂಪೆನಿಸುವ ಸುಮಧುರ ವಾತಾವರಣದ ಆಹ್ಲಾದಕರ

ನಿಮ್ಮನೆಗೆ ನಿಮಗೆ ಬೇಕಾದ ಆಪ್ತರು ಅಥವಾ ಸಂಬಂಧಿಕರು ನೆಂಟರಿಷ್ಟರು ಬಂದಾಗ ದಿಢೀರ್ ಎಂದು ಬಾಗಿಲು ತೆಗೆದು ಒಳ ನಡೆದ ತಕ್ಷಣ ನಮಸ್ತೆ ಎಂದು ಹೇಳಿ ಇದ್ದಕ್ಕಿದ್ದಂತೆ ಥಟ್ಟನೆ ಬಾಗಿಲು ಮುಚ್ಚಿದರೆ ನಿಮ್ಮ ಸಂಬಂಧಿಕರು ಗಾಬರಿಯಾಗುತ್ತಾರೆ.

ಈ ಗಾಬರಿಗೆ ಕಾರಣ ನೀವು ಬಾಗಿಲು ಮುಚ್ಚಿದಾದರೂ ಅದರ ಹಿಂದಿನ ಸತ್ಯ ಮನೆಗೆ ಸೊಳ್ಳೆ ನುಗ್ಗುತ್ತವೆಂಬುದು.ಮನೆಗೆ ದೊಡ್ಡ ದೊಡ್ಡ ಕಿಟಕಿಗಳಿದ್ದರೂ ಅದರ ಗಾಜಿನ ಬಾಗಿಲುಗಳೆಲ್ಲ ಮುಚ್ಚಿಕೊಂಡೇ ಇರುತ್ತವೆ.

ಒಳಗೆ ಬಂದು ಆಸನ ಸ್ವೀಕರಿಸಿದೊಡನೆ ಗಾಳಿ ಸ್ತಬ್ಧವಾದಂತಾಗಿ ಬಿಸಿಬಿಸಿಯಾದ ವಾತಾವರಣದಲ್ಲಿರುವ ಅನುಭವವಾಗತೊಡಗುತ್ತದೆ. ಚಳಿಗಾಲದಲ್ಲೂ ಸೆಖೆಯಾಗಿ ಫ್ಯಾನ್ ಹಾಕಿದರೂ ಬಳಸಿದ ಗಾಳಿಯನ್ನೇ ಮತ್ತೇ ಸೇವಿಸಿದಂತಾಗಿ ಹಿಂಸೆಯಾಗುತ್ತದೆ.

ಮನೆ ಕಟ್ಟುವಾಗ ಬಹು ಮುಖ್ಯವಾಗಿ ಗಾಳಿ ಸರಾಗ ಓಡಾಟಕ್ಕಾಗಿ ಅನುಕೂಲ ಮಾಡಿಕೊಟ್ಟಿರುವುದಿಲ್ಲ. ಹೊರಗಿನಿಂದ ಮನೆಯೊಳಗೆ ಬಂದೊಡನೆ ತಂಪೆನಿಸುವ ಸುಮಧುರ ವಾತಾವರಣವಿದ್ದರೆ ಇಡೀ ದಿನ ಮನೆ ಆಹ್ಲಾದಕರವಾಗಿರುತ್ತದೆ. ಇಂಥ ವಾತಾವರಣಕ್ಕಾಗಿ ಮನೆಗೆ ಪ್ಲಾನ್ ಸಿದ್ಧಪಡಿಸುವಾಲೆ ಗಾಳಿಯು ಒಂದು ಕಡೆಯಿಂದ ಮತ್ತೊಂದೆಡೆಗೆ ಹಾದು ಹೋಗುವಂತೆ ವಿನ್ಯಾಸ ಮಾಡಿರಬೇಕು.

ಕಿಟಕಿ ಚೌಕಟ್ಟಿಗೆ ಒಳಬದಿಯಿಂದ ಜಾಲರಿ(ಮೆಸ್) ಅಳವಡಿಸಿದ ಬಾಗಿಲುಗಳನ್ನು ಜೋಡಿಸಿಕೊಳ್ಳಬೇಕು. ಇದು ಸೊಳ್ಳೆಗಳು ಒಳಬರುವುದನ್ನು ತಡೆಯುತ್ತದೆ. ಅದೇ ವೇಳೆ ಗಾಳಿಯ ಒಳಪ್ರವೇಶವೂ ಸರಾಗವಾಗಿ ನಡೆಯುತ್ತದೆ. ಮನೆಯಲ್ಲಿ ಸದಾ ಹೊಸಗಾಳಿ ಬೀಸುತ್ತಿರುತ್ತದೆ. ಇದು ಸಂಬಂಧಿಕರು ೊಳ ಬಂದಂತೆ ಥಟ್ಟನೆ ಬಾಗಿಲು ಮುಚ್ಚುತ್ತಾ ಕ್ರಿಯೆಗೆ ತಕ್ಕ ಮಟ್ಟಿಗೆ ಬ್ರೇಕ್ ಹಾಕಿದಂತೆ.

ಹೆಚ್ಚಿನ ಜನ ಮನೆ ನಿರ್ಮಿಸುವಾಗ ಮನೆ ಚೆನ್ನಾಗಿ ಕಾಣಬೇಕೆನ್ನುವುದಕ್ಕೇ ಪ್ರಾಮುಖ್ಯತೆ ನೀಡುತ್ತಾರೆ. ಸಣ್ಣ ವಿಚಾರಗಳೆಂದು ಅತಿ ಮಹತ್ವದ ವ್ಯವಸ್ಥೆಗಳನ್ನು ಮರೆಯುತ್ತಾರೆ. ಮನೆ ಕಟ್ಟುವಾಗಲೇ ಕೆಲವೊಂದು ಸೂಕ್ಷ್ಮ ಸಂಗತಿಗಳನ್ನು ಮರೆಯದೇ ಸರಳ ರಚನೆಗಳನ್ನು ಮಾಡಿಕೊಂಡರೆ ಗಾಳಿ ಸಂಚಾರಕ್ಕೆ ಅನುಕೂಲವಾಗುವುದು.

ಕಿಟಕಿ ನಿರ್ಮಿಸುವಾಗ ಮರದ ಚೌಕಟ್ಟಿನ ಎರಡೂ ಬದಿಗೆ ಚಾನೆಲ್ ಮಾಡಿಸಬೇಕು. ಇದರಿಂದ ಹೊರಬದಿಗೆ ಗ್ಲಾಸ್ ಬಾಗಿಲು ಅಳವಡಿಸಿದರೆ, ಒಳಬದಿಗೆ ಮೆಶ್‌ನ ಬಾಗಿಲು ಜೋಡಿಸಲು ಅನುಕೂಲವಾಗುವುದು. ಮೆಶ್ ಅಳವಡಿಸುವಾಗ ತುಕ್ಕು ಬಾರದಂತೆ ಉಕ್ಕಿನ ಅಥವಾ ನೈಲಾನ್ ಮೆಶ್ ಬಳಸಬೇಕು. ಮೆಶ್‌ಗೆ ಎಂದೇ ಕಿಟಕಿಗೆ ಬೇರೆ ಬಾಗಿಲು ಮಾಡಿ ಕೂರಿಸುವುದರಿಂದ ನಿರ್ವಹಣೆ ಸುಲಭ. ಇಲಿ, ಬೆಕ್ಕು, ಹಾವಿನ ಕಾಟಗಳಿಂದ ಮನೆ ಮುಕ್ತವಾಗಿರುವುದು.

ಹಜಾರ ಅಥವಾ ಕೊಠಡಿಗಳಿಗೆ ಕಿಟಕಿಗಳನ್ನು ಗಾಳಿ ಅಡ್ಡವಾಗಿ ಚಲಿಸುವಂತೆ ಅಳವಡಿಸಬೇಕು, ಒಂದೇ ಸ್ಲ್ಯಾಬ್‌ನ ಆರ್‌ಸಿಸಿ ಮನೆಯಾದಲ್ಲಿ ತಾರಸಿಗೆ ಬಿಸಿಲು ತಾಗದಂತೆ ಸಿಮೆಂಟ್ ಶೀಟ್ ಅಥವಾ ಹೆಂಚಿನ ಮುಚ್ಚಿಗೆ ಮಾಡಿಕೊಳ್ಳುವುದು ಸೂಕ್ತ.

ನಿತ್ಯ ಮಳೆಯಿಂದ ಕೂಡಿರುವ ಪ್ರದೇಶಗಳಲ್ಲೂ ಈ ರೀತಿಯ ಮುಚ್ಚಿಗೆ ಮಾಡಿಕೊಳ್ಳುವುದು ಅನಿವಾರ್ಯ. ಅನುಕೂಲವಿದ್ದಲ್ಲಿ ಮನೆಯ ನಡುವೆ ಅಥವಾ ಮಹಡಿ ಏರುವ ಮೆಟ್ಟಿಲುಗಳ ಮೇಲಿರುವ ಸ್ಲ್ಯಾಬ್ ಮೇಲೆ ಚಿಮಣಿಯೊಂದನ್ನು ಅಥವಾ ಹಿಂದಿನ ಕಾಲದಲ್ಲಿ ಬಳಕೆಯಲ್ಲಿದ್ದಂತೆ ಗವಾಕ್ಷಿಗಳನ್ನು ನಿರ್ಮಿಸಿಕೊಂಡರೆ ಬಿಸಿಗಾಳಿ ಹೊರ ಹೋಗಲು ಅನುಕೂಲವಾಗುವುದು.

ಕಿಟಕಿಯ ಮೆಶ್ ಮೂಲಕ ಒಳಬರುವ ಗಾಳಿ ಚಿಮಣಿ ಮೂಲಕ ಹೊರ ಹೋಗಿ, ಮನೆಯಿಡೀ ಹೊಸ ತಂಪು ಗಾಳಿಯ ಚಲನೆ ಇರುತ್ತದೆ. ಚಿಮಣಿ ನಿರ್ಮಿಸುವಾಗ ಗಾಳಿ ಮಳೆಗೆ ನೀರು ಒಳಬರದಂತೆ ಮುತುವರ್ಜಿ ವಹಿಸಬೇಕು.

ಈ ರೀತಿ ಚಿಮಣಿ ನಿರ್ಮಿಸಿಕೊಳ್ಳುವುದು, ಗಾಳಿ ಸರಾಗವಾಗಿ ಹೋಗುವಂತೆ ಮಾಡುವುದರಿಂದ ಮನೆಯಲ್ಲಿ ನವಚೈತನ್ಯ ತುಂಬುವುದರೊಂದಿಗೆ ಮನೆಯವರ ಮನೋಲ್ಲಾಸಕ್ಕೂ ಕಾರಣವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com