ಹಸಿರು ಮನೆ ಪರಿಣಾಮ

ಈ ಮನೆಗಳು ಕೇವಲ ಸೌಂದರ್ಯವರ್ಧನೆ, ಮನ ಸೆಳೆಯುವ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸುವ ಉದ್ದೇಶವನ್ನು ಮಾತ್ರ ಹೊಂದಿರುವುದಿಲ್ಲ.
ನೇಚರ್ ಹೋಮ್ (ಸಂಗ್ರಹ ಚಿತ್ರ)
ನೇಚರ್ ಹೋಮ್ (ಸಂಗ್ರಹ ಚಿತ್ರ)

ದುಡ್ಡಿದ್ದವರಿಗೆ ಇಂದು ನೇಚರ್ ಹೋಂ ದೊಡ್ಡ ಟ್ರೆಂಡಾಗಿದೆ. ಸಾವಯುವ ಅಲಂಕಾರವೇ ಇದರ ಸೊಬಗು. ಈ ಮನೆಗಳು ಕೇವಲ ಸೌಂದರ್ಯವರ್ಧನೆ, ಮನ ಸೆಳೆಯುವ
ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸುವ ಉದ್ದೇಶವನ್ನು ಮಾತ್ರ ಹೊಂದಿರುವುದಿಲ್ಲ. ಮನೆಯವರ ಆರೋಗ್ಯದ ರಕ್ಷಣೆಯನ್ನೂ ಮಾಡುವತ್ತ ಗಮನ ಹರಿಸುತ್ತದೆ...

ಕೇವಲ ಕಾಂಕ್ರಿಟ್ ಕಾಡಿನ ಮಧ್ಯೆ ಮನೆ
ನಿರ್ಮಿಸಿ ಕೈತೊಳೆದುಕೊಂಡರೆ ಸಾಲದು. ಮನೆ ಆರೋಗ್ಯ ವೃದ್ಧಿಸುವಂತಿರಬೇಕು. ಹಸಿರು ಮನೆಯ ಉದ್ದೇಶವೂ ಅದೇ. ಇದಕ್ಕಾಗಿ ಈಗ ಹುಟ್ಟಿಕೊಂಡಿರುವುದು. ಸಾವಯವ ಅಥವಾ ಹಸಿರು ವಿನ್ಯಾಸ ಎಂಬ ನೂತನ ಪರಿಕಲ್ಪನೆ. ಆರೋಗ್ಯಕ್ಕೆ ಪೂರಕವಾದ, ಸುಲಭ ಸಾಧ್ಯವಾದ ಹಾಗೂ ನಿಸರ್ಗಪ್ರಿಯ ವಸ್ತುಗಳಿಂದ ಮಾಡುವ ಅಲಂಕಾರವೇ ಸಾವಯವ ಅಲಂಕಾರ. ಇದು ಪರಿಸರದ ಮೇಲೆ ಕನಿಷ್ಠ ದುಷ್ಪರಿಣಾಮ ಮಾತ್ರ ಬೀರುವಂತಿದ್ದು, ಆರೋಗ್ಯಕರ ಜೀವನ ಕ್ರಮ ಅಳವಡಿಸಿಕೊಳ್ಳಲು ನಿಮಗೆ ಹಾಗೂ ಕುಟುಂಬಕ್ಕೆ ಅನುವು ಮಾಡಿಕೊಡುತ್ತದೆ.

ಪ್ರಾಕೃತಿಕ ಅಥವಾ ಸಾವಯುವ ಅಲಂಕಾರವೆಂದೇ ಹೆಸರುವಾಸಿಯಾಗಿರುವ ಈ ನೇಚರ್ ಹೋಂನ ಟ್ರೆಂಡ್ ಕೇವಲ ಸೌಂದರ್ಯವರ್ಧನೆ, ಮನಸೆಳೆಯುವ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸುವ ಉದ್ದೇಶವನ್ನು ಮಾತ್ರ ಹೊಂದಿರದೆ ಮನೆಯಲ್ಲಿರುವವರ ಆರೋಗ್ಯದ ರಕ್ಷಣೆಯನ್ನೂ ಮಾಡುವತ್ತ ಗಮನ ಹರಿಸುತ್ತದೆ.

ನೆಲದ ವಿನ್ಯಾಸ
ನಿಮ್ಮ ಸ್ವಂತ ಮನೆ ಈಗಾಗಲೇ ನಿರ್ಮಾಣಗೊಂಡಿದ್ದರೆ ಅಥವಾ ರೆಡಿಮೇಡ್ ಮನೆಯನ್ನು ಖರೀದಿಸಿದ್ದರೆ. ಅದರ ನೆಲವನ್ನು ಪ್ರಾಥಮಿಕ ಹಂತದಲ್ಲಿ ಸಾವಯುವಗೊಳಿಸಬೇಕು. ಇದಕ್ಕಾಗಿ ಮಾರ್ಬಲ್ ಗ್ರಾನೈಟ್ ಅಥವಾ ಸ್ಟೇಟನ್ನು ಬಳಸಬಹುದು. ಮರಮಟ್ಟುಗಳನ್ನು ಆಯ್ದುಕೊಳ್ಳುವಾಗ ಅರಣ್ಯ ಇಲಾಖೆ ಪ್ರಮಾಣೀಕರಿಸಿದ ಮರವನ್ನೇ ಬಳಸಿ. ಇದಕ್ಕಾಗಿ ಎಫ್ಎಸ್‍ಸಿ ಎಂಬ ಸಂಸ್ಥೆಯನ್ನು ಸಂಪರ್ಕಿಸಿ ಯಾವ ಮರಗಳು ಅಳಿವಿನಂಚಿನಲ್ಲಿರುವ ಮರ ಎಂದು ಪರಿಗಣಿತವಾಗಿಲ್ಲ ಎಂಬುದನ್ನು ಖಾತರಿಪಡಿಸಿಕೊಂಡು ಅಂಥ ಮರವನ್ನೇ ಖರೀದಿಸಿ. ವಿನೈಲ್ ಫ್ಲೋರಿಂಗ್ ಬೇಕಾದರೆ ಲಿನೋಲಿಯಂನ್ನು ಬಳಸಿ. ಇದರ ಬದಲಿ ಬಿದಿರು, ಕಾರ್ಕ್ ಪ್ರೋಗಳು ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗಿದ್ದು, ಇದರ ನಿರ್ವಹಣೆಯೂ ಸುಲಭ ಜೊತೆಗೆ ಹೆಚ್ಚು ಅಂದವನ್ನೂ ನೆಲಕ್ಕೆ ನೀಡುತ್ತದೆ.

ಉತ್ತಮ ಕಾರ್ಪೆಟ್
ಮನೆಯ ನೆಲದ ತುಂಬಾ ವಿವಿಧ ವೈವಿಧ್ಯ ಡಿಸೈನ್ ಗಳುಳ್ಳ ಪಾಲಿಮರ್ (ರಾಸಾಯನಿಕ) ವಸ್ತುಗಳಿಂದ ತಯಾರಿಸಿದ ಕಾರ್ಪೆಟ್‍ಗಳು ಮನೆಗೆ ವೈಭವದ, ಶ್ರೀಮಂತಿಕೆಯ ಲುಕ್ ನೀಡಬಹುದು. ಆದರೆ, ಈ ಪಾಲಿಮರ್‍ಗಳಿಂದ ಮಾಡಿದ ಕಾರ್ಪೆಟ್‍ಗಳು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುತ್ತವೆ. ಇದರಿಂದಾಗಿ ಬೆನ್ಝಿನ್‍ನಂಥ ರಾಸಾಯನಿಕಗಳು
ನಿಧಾನವಾಗಿ ಉತ್ಪಾದನೆಯಾಗುತ್ತವೆ. ಇದರಿಂದ ಅಲರ್ಜಿ ಮತ್ತಿತರ ತೊಂದರೆಗಳು ಕಾಡಬಹುದು. ಧೂಳು ಕುಳಿತುಕೊಳ್ಳುವುದರಿಂದ ಅದರಲ್ಲೂ ಮಳೆಗಾಲದಲ್ಲಿ ಕೀಟಗಳ ವಾಸಸ್ಥಾನವಾಗಿ ಇದು ಮಾರ್ಪಡಬಹುದು.

ಸಾಮಾನ್ಯವಾಗಿ ಮನೆಯಲ್ಲಿ ಅಸ್ತಮಾ ರೋಗಿಗಳಿದ್ದರೆ ಕಾರ್ಪೆಟ್ ಅನ್ನು ನಿರ್ಬಂಧಿಸಲಾಗುತ್ತದೆ. ಆದರೆ ಇದಕ್ಕೆ ಪರ್ಯಾಯವಾಗಿ ಸಾವಯವ ಕಾರ್ಪೆಟ್‍ಗಳು ಇಂದಿನ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವು ನೂರಕ್ಕೆ ನೂರರಷ್ಟು ರಾಸಾಯನಿಕ ಮುಕ್ತವಾಗಿದ್ದು, ಇವುಗಳನ್ನು ಉಣ್ಣೆಯಿಂದ ಹಾಗೂ ನೂತನ ಟ್ರೆಂಡ್ ಆಗಿ ಪುನರ್‍ಬಳಕೆಯ ವಸ್ತುಗಳನ್ನೇ ಬಳಸಿ ಮಾಡಲಾಗುತ್ತದೆ. ಆದರೆ ಖರೀದಿಸುವಾಗ ಎಚ್ಚರದಿಂದರಬೇಕಷ್ಟೆ.

ಪೇಂಟಿಂಗ್ ವಿಧಾನ
ಗೋಡೆಗಳಿಗೆ ಬಳಿಯುವ ಬಣ್ಣ ಆಯ್ಕೆ ಮಾಡುವಾಗಲೂ ಬಣ್ಣದಲ್ಲಿರುವ ರಾಸಾನಿಯಕ ಅಂಶಗಳ ಬಗ್ಗೆ ಗಮನ ನೀಡಿ. ಆದಷ್ಟು ಕಡಿಮೆ ರಾಸಾಯನಿಕಗಳಿರುವ ಬಣ್ಣ ಬಳಸಿ. ಕೆಲವೊಂದು ಬಣ್ಣಗಳು ಶೂನ್ಯ ವಿಒಸಿ ಎಂದು ಲೇಬಲ್‍ನಲ್ಲಿ ಬರೆದುಕೊಂಡಿರುತ್ತವೆ. ಆದರೂ ವಾಸ್ತವ ಸ್ಥಿತಿ ಅದಾಗಿರುವುದಿಲ್ಲ. ಹೀಗಾಗಿ ಪರಿಸರ ಸ್ನೇಹಿ, ನೈಸರ್ಗಿಕ ಬಣ್ಣ ಎಂದು ಡಬ್ಬದಲ್ಲಿ ಲೇಬಲ್ ಅಂಟಿಸಿರುವ ಬಣ್ಣಗಳ ಬಗ್ಗೆ ಕೂಲಂಕಷವಾಗಿ ವಿಚಾರಿಸಿ.

ಮೊದಲನೆಯದಾಗಿ ತೈಲ ಮತ್ತು ಸಾಲ್ವೆಂಟ್ ಆಧಾರಿತ ಬಣ್ಣವನ್ನು ಬಳಸಬೇಡಿ. ಹಾಲಿನ ಪ್ರೊಟೀನ್ ಅಥವಾ ಗಿಡದ ಮೂಲದಿಂದ ತಯಾರಿಸಿದ ಅಥವಾ ನೀರು ಆಧಾರಿತ ಅಥವಾ ಲೆಟ್ಸ್ ಆಧಾರಿತ ಪೇಂಟ್ ಬಳಸಿ. ಇನ್ನಷ್ಟು ಗುಣಮಟ್ಟ ಹೆಚ್ಚಿಸಲು ಗಂಧ ಅಥವಾ ಅರಿಶಿನದ ಬಣ್ಣಗಳನ್ನು ಬಳಸಿ.

ಅರೇಕಾ ಪಾಮ್
ಲೀವಿಂಗ್ ರೂಂಗಳಲ್ಲಿ ಬಳಸಲು ತಕ್ಕನಾದಂಥ ಗಿಡ ಅರೇಕಾ ಪಾಮ್. ಇದರ ಅಗಲ ಮತ್ತು ವಿಸ್ತಾರವಾದ ಎಲೆಗಳು ಸುಂದರವಾಗಿ ಕೊಠಡಿಯನ್ನೆಲ್ಲ ಹಸಿರು ಮಯವಾಗಿಸುತ್ತ
ದೆ. ಇದಕ್ಕೆ ನೇರ ಸೂರ್ಯನ ಬೆಳಕು ಬೀಳಬಾರದು ಎಂಬುದು ಒಂದು ಪ್ಲಸ್ ಪಾಯಿಂಟ್. ಹೀಗಾಗಿ ಇದನ್ನು ಕಿಟಕಿಯಿಂದ ಏಳೆಂಟು ಅಡಿ ದೂರದಲ್ಲಿ ಬೆಳೆಸಿ. ಇದು ಕೊಠಡಿಗೆ ಅಲಂಕಾರಪ್ರಿಯ ಆಗುವುದರ ಜೊತೆಗೆ ಗಾಳಿಯನ್ನೂ ಶುದ್ಧಗೊಳಿಸುತ್ತದೆ. ಕಾರ್ಬನ್ ಡೈ ಆಕ್ಸೈಡ್‍ನಂಥ ಹಾನಿಕಾರಕ ಅಂಶಗಳನ್ನು ಇದು ಗಾಳಿಯಿಂದ ಹೀರಿಕೊಳ್ಳುತ್ತದೆ.

ಅಲೊವೆರಾ
ಮನೆಯೊಳಗೆ ಸುಲಭವಾಗಿ ಬೆಳಸಲು ಸಾಧ್ಯವಾದ ಹಾಗೂ ಸೂಕ್ತವಾದ ಗಿಡವೆಂದರೆ ಆಲೋವೆರಾ ಇದರ ಎಲೆಗಳೇನಾದರೂ ತುಂಡಾದರೆ ಅದರಿಂದ ಮೇಣ ಹೊರಬರುತ್ತದೆ. ಇದು ಸನ್‍ಬರ್ನ್, ಗಾಯ ಮತ್ತು ನಾಯಿ ಕಡಿತಕ್ಕೆ ರಾಮಬಾಣ. ಇದಕ್ಕೆ ಕಡಿಮೆ ನೀರು ಸಾಕು. ಔಷಧಿ ಗುಣ ಇರುವ ಈ ಗಿಡ ಗಾಳಿಯಲ್ಲಿರುವ ಬಹುತೇಕ ವಿಷಕಾರಕ ಅಂಶಗಳನ್ನು ಹೀರಿಕೊಂಡು ಶುದ್ಧ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.

ಸ್ನೇಕ್ ಪ್ಲಾಂಟ್
ಬೇಡ ಬೇಡ ಎಂದು ಗಿಡ ಬೆಳೆಸುವವರಿಗೆ ಸೂಕ್ತವಾದ ಗಿಡ ಇದು. ಏಕೆಂದರೆ ನೀವೇ ಅದೆಷ್ಟು ಉದಾಸೀನ ತೋರಿದರೂ ಇದು ಕೊರಗಿ ಸೊರಗಿ ಸಾಯದು. ಇದೇ ಇದರ ಬಹುದೊಡ್ಡ ಅಡ್ವಾಂಟೇಜ್ ಇದರ ಎಲೆಗಳು ಕತ್ತಿಯ ಅಲುಗಿನಂತಿರುತ್ತವೆ. ಬುಡದಿಂದಲೇ ಎಲೆಗಳು ಬೆಳೆಯುತ್ತವೆ. ಕಡಿಮೆ ಖರ್ಚು, ಕಡಿಮೆ ನಿರ್ವಹಣೆ ಬೇಡುವ ಈ ಗಿಡವನ್ನು ಬೆಡ್ ರೂಂನಲ್ಲಿ ಇಡಬಹುದು. ಇದೂ ಇಂಗಾಲದ ಡೈಆಕ್ಸೈಡ್ ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುತ್ತದೆ.

ಮನಿ ಪ್ಲಾಂಟ್
ಇದಂತೂ ಎಲ್ಲರಿಗೂ ಗೊತ್ತಿರುವ ಸಸ್ಯ. ಬಿಳಲು ಸಸ್ಯವಾದ ಇದನ್ನು ಬಾಟಲಿಯಲ್ಲಿಟ್ಟೂ ಬೆಳೆಸಬಹುದು. ಇದಕ್ಕೆ ವಿಶೇಷ ಫಿಲ್ಟರ್ ಕ್ಯಾಪಬೆಲಿಟಿ ಇದೆ. ಈ ಕ್ಯಾಪಬೆಲಿಟಿ ಮೂಲಕ ಈ ಗಿಡ ಪರಿಸರದಲ್ಲಿ ಹರಡಿರುವ ಹಾನಿಕಾರಕ ರಾಸಾಯನಿಕಗನ್ನು ಹೀರಿ ಶುದ್ಧೀಕೃತಗೊಳಿಸುತ್ತದೆ, ಇದನ್ನು ಅದೃಷ್ಟದ ಗಿಡ ಎಂದೂ ನಂಬಲಾಗುತ್ತದೆ. 5 ಅಡಿ ಎತ್ತರದವರೆಗೆ ಬೆಳೆಯುವ ಇದನ್ನು ತೂಗು ಹಾಕುವ ಬಕೆಟ್‍ಗಳಲ್ಲೂ ಬೆಳೆಯುತ್ತಾರೆ.

ಮರ ಮತ್ತು ಬೆಳಕು
ಬಿದಿರು, ಸಾವಯವ ಹತ್ತಿ, ಲೈನೆನ್ ಅಥವಾ ಉಣ್ಣೆಯ ವಸ್ತುಗಳನ್ನೇ ಪೀಠೋಪಕರಣಗಳಲ್ಲಿ ಬಳಸಿ. ಹಾನಿಕಾರಕ ರಾಸಾಯನಿಕಗಳನ್ನು ಪೀಠೋಪಕರಣಗಳಿಗೆ ಬಳಿಯಬೇಡಿ. ಸಾಮಾನ್ಯ ಬಲ್ಬಿನ ಬದಲು ಸಿಎಫ್ಎಲ್ ಬಲ್ಬುಗಳನ್ನು ಬಳಸಿ. ಇದು ಶೇ. 80ರಷ್ಟು ಕಡಿಮೆ ವಿದ್ಯುತ್ ಬಳಸಿಕೊಳ್ಳುತ್ತದೆ ಮತ್ತು 10 ಪಟ್ಟು ಹೆಚ್ಚು ಅವಧಿ ಬಾಳಿಕೆ ಬರುತ್ತದೆ.

ಇಂದು ಪ್ರಮುಖ ನಗರಗಳಲ್ಲಿ ಹೊರಗಿನ ಗಾಳಿಗಿಂತ ಮನೆಯೊಳಗಿನ ಗಾಳಿಯೇ ಹೆಚ್ಚು ಮಾಲಿನ್ಯಕಾರಕವಾಗಿದೆ ಎಂಬುದನ್ನು ಹಲವರು ಸಂಶೋಧನೆಗಳು ದೃಢಪಡಿಸಿದ್ದು, ನಿಮ್ಮನೆಯ ಗಾಳಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆಗೆ ಅಲಂಕಾರ ಹೆಚ್ಚಿಸಲು ಗಿಡಗಳನ್ನು ಬೆಳೆಸುವುದು ಸೂಕ್ತ ಪರಿಹಾರ.

-ಎಂ.ಡಿ. ಉಮೇಶ್ ಮಳವಳ್ಳಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com