ಟೆನಿಸ್ ಕೋರ್ಟ್‌ನ ಕಪ್ಪುಮುತ್ತುಗಳು

ಕ್ರೀಡಾರಂಗದ ಇತಿಹಾಸದಲ್ಲಿ ಇಷ್ಟೊಂದು ಪ್ರತಿಭಾಶಾಲಿಯೂ,ಛಲಗಾರ್ತಿಯೂ ಆಗಿರುವ ಮಹಿಳೆ ಬೇರೊಬ್ಬಳಿಲ್ಲ. 33ನೇ ...
ಸರೀನಾ ವಿಲಿಯಮ್ಸ್
ಸರೀನಾ ವಿಲಿಯಮ್ಸ್

ಕ್ರೀಡಾರಂಗದ ಇತಿಹಾಸದಲ್ಲಿ ಇಷ್ಟೊಂದು ಪ್ರತಿಭಾಶಾಲಿಯೂ,ಛಲಗಾರ್ತಿಯೂ ಆಗಿರುವ ಮಹಿಳೆ ಬೇರೊಬ್ಬಳಿಲ್ಲ. 33ನೇ ವಯಸ್ಸಿನಲ್ಲಿಯೂ 18ರ ಹರೆಯದ ಹುಡುಗಿಯಂತೆ ಆಟವಾಡುವ  ಸರೀನಾ ವಿಲಿಯಂಸ್‌ನ್ನು ಕ್ರೀಡಾಲೋಕ ಅಸೂಯೆಯಿಂದ ನೋಡುತ್ತಿದೆ.  ತನ್ನ 9 ವರ್ಷದ ಕ್ರೀಡಾ ಜೀವನದಲ್ಲಿ  19ನೇ ಗ್ರ್ಯಾಂಡ್ ಸ್ಲಾಮ್ ಕಿರೀಟ ತನ್ನದಾಗಿಸಿಕೊಂಡ ಈಕೆಯ ಸಾಮರ್ಥ್ಯದ ಬಗ್ಗೆ ವಿವರಿಸಬೇಕಾದ ಅಗತ್ಯವೇನಿಲ್ಲ. ಒಮ್ಮೆ ನಿನಗೆ ಮತ್ತೊಮ್ಮೆ ನನಗೆ ಎಂಬಂತೆ ಗ್ರ್ಯಾಂಡ್ ಸ್ಲಾಮ್ ಕಿರೀಟವನ್ನು ಸರೀನಾ ಮತ್ತು ಸಹೋದರಿ ವೀನಸ್ ವಿಲಿಯಂಸ್ ಮುಡಿಗೇರಿಸುವುದನ್ನು ಕ್ರೀಡಾ ಲೋಕ ಕಣ್ಣರಳಿಸಿ ನೋಡಿದೆ. ಸರೀನಾ ವಿಲಿಯಂಸ್- 1999ರಲ್ಲಿ ಯುಎಸ್ ಓಪನ್ ಟೆನಿಸ್ ಚಾಂಪಿಯನ್ ಶಿಪ್‌ನಲ್ಲಿ ಮಾರ್ಟಿನ್ ಹಿಂಗಿಸ್‌ನ್ನು ಸೋಲಿಸಿ ಮೊದಲ ಗ್ರ್ಯಾಂಡ್ ಸ್ಲಾಮ್ ಗೆದ್ದಾಗ ಈಕೆಯ ವಯಸ್ಸು 17. ಆವಾಗ ಮಾರ್ಟಿನಾಳನ್ನು ಸೋಲಿಸಿದ ಈ ಹುಡುಗಿ ಮುಂದೊಂದು ದಿನ ಟೆನಿಸ್ ಲೋಕದ ರಾಣಿಯಾಗುತ್ತಾಳೆ ಎಂದು ಕ್ರೀಡಾಲೋಕ ಭವಿಷ್ಯ ನುಡಿದಿತ್ತು.  1999ರಲ್ಲಿ ನ್ಯೂಯಾರ್ಕ್ ಕೋರ್ಟ್‌ನಲ್ಲಿ  ಕಂಡ ಅದೇ ರೀತಿಯ ಹುಮ್ಮಸ್ಸು ಮತ್ತು ಗಾಂಭೀರ್ಯ ವಾರಗಳ ಹಿಂದೆ ಮೆಲ್ಬರ್ನ್‌ನಲ್ಲಿ ಕಾಣಲು ಸಿಕ್ಕಿತ್ತು. ಗ್ರ್ಯಾಂಡ್ ಸ್ಲಾಮ್ ಫೈನಲ್ ಪಂದ್ಯ ಗೆದ್ದ  ಸರೀನಾ ಪುಟ್ಟ ಹುಡುಗಿಯಂತೆ ಜಿಗಿದು ವಿಜಯೋತ್ಸಾಹ ಆಚರಿಸಿದಾಗ ಜಗತ್ತು ಚಪ್ಪಾಳೆ ತಟ್ಟುತ್ತಾ ಎದ್ದು ನಿಂತಿತ್ತು. 'ಸರೀನಾ ಯುಗ' ಇನ್ನೂ ಮುಗಿದಿಲ್ಲ ಎಂಬುದಕ್ಕೆ ಈ ಗೆಲವು ಸಾಕ್ಷಿಯಾಗಿತ್ತು.

 
ಅಪ್ಪನ ಕನಸು
ನಾನಿವರನ್ನು ವಿಶ್ವ ಚಾಂಪಿಯನ್‌ಗಳನ್ನಾಗಿ ಮಾಡುತ್ತೇನೆ. ಗ್ರ್ಯಾಂಡ್‌ಸ್ಲಾಮ್ ಕಿರೀಟಕ್ಕಾಗಿ ಇವರು ಫೈನಲ್ ನಲ್ಲಿ ಪರಿಸ್ಪರ ಸ್ಪರ್ಧಿಸುವುದನ್ನು ಜಗತ್ತು ನೋಡಬೇಕು. 20 ವರ್ಷಗಳ ಹಿಂದ ತನ್ನಿಬ್ಬರು ಮಕ್ಕಳನ್ನು ಟೆನಿಸ್ ಪಟುಗಳನ್ನಾಗಿ ಮಾಡಲು ರಿಚರ್ಡ್ ವಿಲಿಯಂಸ್ ಹೊರಟಾಗ ಹಲವಾರು ಮಂದಿ ಇದು ಹುಚ್ಚುತನ ಎಂದು ಗೇಲಿ ಮಾಡಿದ್ದರು. ಆದರೆ ತನ್ನ ಅಪ್ಪನ ಕನಸುಗಳನ್ನು ಸಾಕಾರ ಮಾಡಲು ಸರೀನಾ ಮತ್ತು ವೀನಸ್ ಜತೆ ಜತೆಯಾಗಿ ಕಣಕ್ಕಿಳಿದರು. ಗ್ರ್ಯಾಂಡ್ ಸ್ಲಾಮ್ ಫೈನಲ್ ಪಂದ್ಯಗಳಲ್ಲಿ ಪರಸ್ಪರ ಹೋರಾಡಿದರು. ರಿಚರ್ಡ್ ಕನಸು ಸಾಕಾರವಾಯಿತು. ಅದರೆಡೆಯಲ್ಲಿ ಫಾರ್ಮ್ ಕಳೆದುಕೊಂಡಾಗ ಜನರು ಪರಿಹಾಸ್ಯ ಮಾಡಿದರು. ಆದರೆ ಇದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಮತ್ತೆ ಹೋರಾಟ ಮುಂದುವರಿಸಿದ ಸಹೋದರಿಯರು ಪ್ರಶಸ್ತಿಗಳನ್ನು ಗೆದ್ದು ತಾವಿನ್ನೂ ಫಾರ್ಮ್ ಕಳೆದುಕೊಂಡಿಲ್ಲ ಎಂದು ಸಾಬೀತು ಪಡಿಸಿದರು. ಅಚ್ಚರಿಯ ವಿಷಯ ಏನು ಗೊತ್ತಾ? ಮಕ್ಕಳನ್ನು ಟೆನಿಸ್ ಕಲಿಯಲು ಬಿಟ್ಟಾಗ ಈ ಅಪ್ಪನಿಗೆ ಟೆನಿಸ್ ಬಗ್ಗೆ ಏನೇನೂ ಗೊತ್ತಿರಲಿಲ್ಲ. ಪಂದ್ಯದಲ್ಲಿ ಗೆದ್ದರೆ ಹಣ ಸಿಗುತ್ತೆ ಎಂಬುದು ಮಾತ್ರ ರಿಚರ್ಡ್‌ಗೆ ಗೊತ್ತಿತ್ತು. ಮಕ್ಕಳು ಅಪ್ಪನ ಕನಸು ನನಸು ಮಾಡಿದರು. ಈಗ ವಿಶ್ವ ಚಾಂಪಿಯನ್‌ಗಳ ಅಪ್ಪ ಎಂಬ ಹೆಮ್ಮೆ ರಿಚರ್ಡ್‌ನದ್ದು.

ಟೆನಿಸ್ ಕೋರ್ಟಿನ ರಾಣಿಯರು

ಟೆನಿಸ್ ಕೋರ್ಟ್‌ನಲ್ಲಿ ಬಿಳಿಯರು ಅಧಿಪತ್ಯ ಸ್ಥಾಪಿಸಿದ್ದ ಕಾಲದಲ್ಲಿ ಹೊಸ ಕ್ರಾಂತಿ ಎಂಬಂತೆ ಸರೀನಾ ಮತ್ತು ವೀನಸ್ ಪ್ರವೇಶ ಮಾಡಿದರು. ತಮ್ಮ ವಿಶಿಷ್ಟ ಆಟದ ಶೈಲಿಯಿಂದ ಮಾತ್ರವಲ್ಲ ಉಡುಗೆ ತೊಡುಗೆಗಳಿಂದಲೂ ಇವರು ಜನರನ್ನು ಆಕರ್ಷಿಸಿದರು. ಟೆನಿಸ್ ಲೋಕಕ್ಕೆ ಮಿಂಚಿನಂತೆ ಬಂದು ತನ್ನದೇ ಛಾಪು ಮೂಡಿಸಿದ ಖ್ಯಾತಿ ಈ ಸಹೋದರಿಯರದ್ದು. ಇನ್ನು ಮುಂದಿನ ವರ್ಷಗಳು ಸರೀನಾ ವೀನಸ್ ಪರ್ವವಾಗಿರುತ್ತೆ ಎಂದು 2002ರಲ್ಲಿ ಮಾರ್ಟಿನಾ ನವರತಲೋವಾ ಹೇಳಿದಾಗ  ಯಾರೂ ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ. ಫೈನಲ್ ಪಂದ್ಯಗಳಲ್ಲಿ ಇಬ್ಬರು ಸಹೋದರಿಯರು ಸೆಣಸಾಡುವುದನ್ನು ನೋಡಿಯೇ ನವರತಲೋವಾ ಈ ಹೇಳಿಕೆಯನ್ನು ನೀಡಿದ್ದರು.  ಆದರೆ ವೀನಸ್ ಗಿಂತ ತಂಗಿಯೇ ಹೆಚ್ಚು  ಪ್ರತಿಭಾಶಾಲಿ ಎಂಬುದನ್ನು ಸರೀನಾ ಸಾಧಿಸಿ ತೋರಿಸಿದಳು. ಅಕ್ಕನಿಗೆ ಸಾಧ್ಯವಾಗದೇ ಇದ್ದುದನ್ನು ತಂಗಿ ಮಾಡಿ ತೋರಿಸಿದಳು. ಗ್ರ್ಯಾಂಡ್ ಸ್ಲಾಮ್ ಕಿರೀಟಗಳು, ಪ್ರಶಸ್ತಿಗಳನ್ನು ಬಾಚಿಕೊಂಡ ಈ ಸಹೋದರಿಯರು ಸರೀನಾ - ವೀನಸ್ ಯುಗಕ್ಕೆ ನಾಂದಿ ಹಾಡಿದರು. ಏತನ್ಮಧ್ಯೆ, ಫಾರ್ಮ್ ಕಳೆದುಕೊಂಡಾಗ ವಿಲಿಯಮ್ಸ್ ಸಹೋದರಿಯರ ಯುಗ ಮುಗಿಯಿತು ಎಂದು ಹೇಳಿದವರು ಬಹಳ . ಆದರೆ ಇದನ್ನೆಲ್ಲಾ ಹುಸಿ ಮಾಡಿಕೊಂಡು ಈ ಸಹೋದರಿಯರು ಮತ್ತೆ ಎದ್ದು ನಿಂತರು.

ಧನಿಕರಾದ ಬಿಳಿಯರಿಗೆ ಮಾತ್ರ ಸೀಮಿತವಾಗಿದ್ದ ಟೆನಿಸ್ ಲೋಕದಲ್ಲಿ ಈ ಕಪ್ಪು ಹುಡುಗಿಯರು ಕಿರೀಟ ಮುಡಿಗೇರಿಸಿಕೊಂಡಾಗ ಬಿಳಿಯರಲ್ಲಿ ಅಸೂಯೆ ಹುಟ್ಟಿ ಕೊಂಡಿತ್ತು. ಆದರೆ ಮಾಧ್ಯಮಗಳು ಈ ಸಹೋದರಿಯರ ಬೆನ್ನಿಗೆ ನಿಂತವು. ಟೆನಿಸ್ ಕೋರ್ಟ್‌ನಲ್ಲಿ ಕಾಣುವ ಸ್ತ್ರೀ ಸೌಂದರ್ಯಕ್ಕೆ ಹೊಸ ಸೇರ್ಪಡೆಯಾಗಿದ್ದರು ಇವರು. ಟೆನಿಸ್ ಕೋರ್ಟ್‌ನಲ್ಲಿ ಇವರ ಉಡುಗೆಯಿಂದಲೇ ಅಲ್ಲೊಂದು ಹೊಸ ಫ್ಯಾಷನ್ ಹುಟ್ಟಿಕೊಂಡಿತು. ಗಂಡಸರಂತೆ ಗಟ್ಟಿಯಾದ ಬಾಹುಗಳು, ಹೊಳೆಯುವ ಕಡುಕಪ್ಪು ಬಣ್ಣ, ಅವರು ಧರಿಸುವ ಗಾಢ ಬಣ್ಣದ ವಸ್ತ್ರಗಳು ಎಲ್ಲವೂ ಸ್ಪೆಷಲ್ ಎಂದೆನಿಸತೊಡಗಿತು. ಟೆನಿಸ್ ಲೋಕವನ್ನು ಜಯಿಸುವ ಜತೆಯಲ್ಲಿಯೇ ಮ್ಯಾಗಜಿನ್‌ಗಳ ಕವರ್ ಫೋಟೋಗಳಲ್ಲಿ ಇವರು ರಾರಾಜಿಸ ತೊಡಗಿದರು. ಫ್ಯಾಷನ್ ಶೋಗಳಲ್ಲಿ ರ್ಯಾಂಪ್ ವಾಕ್ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು.  ಕಪ್ಪು ಎಂದು ಮೂಗುಮುರಿಯುತ್ತಿದ್ದ ಅಮೆರಿಕನರ ಮಧ್ಯೆ ಈ ಆಫ್ರೋ ಅಮೆರಿಕನ್ ಸುಂದರಿಯರು ಕಪ್ಪು ಜನರ ಪ್ರತಿನಿಧಿಯಾಗಿಯೂ ಅಮೆರಿಕನ್ನರ ಅಭಿಮಾನದ ಸಂಕೇತವಾಗಿಯೂ ನಿಂತರು.


ಟೆನಿಸ್ ಕೋರ್ಟ್‌ನಲ್ಲಿ ಮೊದಲು ಮಿಂಚಿದ್ದು ವೀನಸ್ ವಿಲಿಯಂಸ್. ಆಕೆಯೊಂದಿಗೆ ಸರೀನಾ ಹೋರಾಡಿ ಸೋತಾಗ ಅಕ್ಕನೇ ಸರೀನಾಗೆ ಟೆನಿಸ್ ಟ್ರಿಕ್ ಗಳನ್ನು ಹೇಳಿಕೊಟ್ಟಳು. ಆಮೇಲೆ ಟೆನಿಸ್ ಪಂದ್ಯಗಳೆಂದರೆ ರಿಚರ್ಡ್‌ನ ಮಕ್ಕಳ ನಡುವಿನ ಪೈಪೋಟಿ ಎಂಬಂತಾಯಿತು. ಸರೀನಾ ಅಕ್ಕನನ್ನೇ ಸೋಲಿಸಿ ಮುಂದೆ ಬಂದಳು.  ಡಬಲ್ಸ್ ಮತ್ತು ಸಿಂಗಲ್ಸ್‌ನಲ್ಲಿಯೂ ಇವರಿಬ್ಬರೇ ಸ್ಪರ್ಧಿಗಳಾದರು, ಪ್ರತಿಸ್ಪರ್ಧಿಗಳಾದರು. ಯಾರು ಗೆದ್ದರೂ, ಯಾರು ಸೋತರೂ ಕಿರೀಟ ಮಾತ್ರ ರಿಚರ್ಡ್ ಮನೆಗೇ ಎಂಬಂತಿತ್ತು ಆ ಪಂದ್ಯಗಳು. ತನ್ನ ಮಕ್ಕಳಲ್ಲಿ ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ ಎಂಬುದನ್ನು ರಿಚರ್ಡ್ ಅವರು ಕೋರ್ಟ್‌ನ ಹೊರಗೆ ತೀರ್ಮಾನಿಸುತ್ತಾರೆ ಎಂಬ ವಿವಾದವೂ ಹಬ್ಬಿತ್ತು. ಆದರೆ ಇದ್ಯಾವುದನ್ನೂ ಲೆಕ್ಕಿಸದೆ ಇಬ್ಬರೂ ಸಹೋದರಿಯರು ಜತೆ ಜತೆಯಾಗಿಯೇ ಸ್ಪರ್ಧಿಸಿದರು. ಗೆದ್ದರು. ಆತ್ಮವಿಶ್ವಾಸ ಮತ್ತು ಕಠಿಣ ಪ್ರಯತ್ನದಿಂದ ಎಲ್ಲವನ್ನೂ ಸಾಧಿಸಬಹುದು ಎಂದು ತೋರಿಸಿದ ಈ ಸಹೋದರಿಯರು ಟೆನಿಸ್ ಲೋಕದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಅವರ ಗೆಲವಿನ ಪ್ರಯಾಣ ಇನ್ನೂ ಮುಂದುವರಿದಿದೆ.

-ರಶ್ಮಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com