ಕಾರ್ ಗೃಹ!

ಕಾರ್ ತಂಗುದಾಣ
ಕಾರ್ ತಂಗುದಾಣ
Updated on

ಹೊಸ ಮನೆಯ ನಿರ್ಮಾಣದ ಕನಸು ನೆರವೇರುತ್ತಿದ್ದಂತೆ ಹೊಸ ಕಾರು ಬಂದು ಮನೆಯಂಗಳದಲ್ಲಿ ನಿಲ್ಲುತ್ತವೆ. ಆಗ ಕಾರು ನಿಲ್ಲಿಸಲು ಯಾವುದು ಜಾಗ ಎಂಬ ಜಿಜ್ಞಾಸೆ ಹುಟ್ಟುತ್ತದೆ. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಮನೆಯ ಪೋರ್ಟಿಕೋದ ಬಳಿಯ ಬಲಭಾಗದಲ್ಲಿ ಅದರ ವಾಸಸ್ಥಾನವೆಂದು ನಿರ್ಧಾರವಾಗುತ್ತದೆ. ಆದರೆ ವಿದೇಶಗಳಲ್ಲಿ ಹಾಗಲ್ಲ. ಅಲ್ಲಿರುವವರು ತನ್ನ ಕಾರನ್ನು ಮನೆಯ ಒಬ್ಬ ಆಪ್ತ ಸದಸ್ಯನ ಸ್ಥಾನ ನೀಡಿ ಪ್ರೀತಿಸುತ್ತಾರೆ. ಅದು ಎಲ್ಲೋ ನಿಂತು, ಮಳೆಗೆ, ಬಿಸಿಲಿಗೆ ಮೈಯೊಡ್ಡಿ ಯಾಕೆ ಕಷ್ಟ ಅನುಭವಿಸಬೇಕು? ಎನ್ನುವ ಕಳಕಳಿಯಿಂದ ಮನೆಯ ಹಜಾರವನ್ನು ಕಾರು ನೇರವಾಗಿ ಪ್ರವೇಶಿಸುವಂತೆ ಇಳಿಜಾರನ್ನು ನಿರ್ಮಿಸುತ್ತಾರೆ. ಅದರಲ್ಲಿಯೇ ಕಾರು ಬಂದು ನಿಲ್ಲಲು ಒಂದು ಪಾರ್ಶ್ವಭಾಗದಲ್ಲಿ ವ್ಯವಸ್ಥೆ ಮಾಡುತ್ತಾರೆ.

ಭಾರತದ ಮಹಾನಗರಳಲ್ಲಿ ನಿರ್ಮಾಣವಾಗುವ ಐಷಾರಾಮಿ ಒಂಟಿ ಮನೆಗಳಲ್ಲಿ ಈಗ ಕಾರುಗಳು ಮನೆಯೊಳಗೆಯೇ ನಿಲ್ಲುತ್ತವೆ. ಕಾರು ಕಳ್ಳರಿಂದ ಸುರಕ್ಷಿತವಾಗಿಡಲು ಇದು ಸಹಾಯಕವಾಗಿರುವುದರೊಂದಿಗೆ ಆಧುನಿಕ ಬದಲಾವಣೆಗಳು ತಲುಪಿರುವ ಸ್ಥಿತಿಗತಿಗೆ ಒಂದು ಮಾದರಿಯೂ ಆಗುತ್ತದೆ.

ಇದು ಒಂದು ಮುಖವಾದರೆ ವ್ಯಾಪಾರಿ ಜಗತ್ತಿನ ಇನ್ನೊಂದು ಮುಖದಲ್ಲಿ ಕಾರು ನಿಲ್ಲಲು ಮನೆಯ ಯಾವ ಭಾಗವನ್ನೂ ಬಳಸದ ಹೊಸ ಹೊಸ ವಿಧಾನಗಳು ಬಳಕೆಗೆ ಬರಲಾರಂಭಿಸಿವೆ. ಮನೆಯ ಅಂಗಳದ ಯಾವುದೇ ಭಾಗದಲ್ಲಿ ಬೇಕಾದಾಗ ಕಾರು ತಂಗುದಾಣ ನಿರ್ಮಿಸಲು ಅನುಕೂಲವಾದ ದಿಢೀರ್ ವ್ಯವಸ್ಥೆಯ ಉಪಕರಣಗಳು ಮಾರಾಟಕ್ಕೆ ಬಂದಿವೆ. ಕನಿಷ್ಠ ಹತ್ತು ಸಾವಿರದಿಂದ ಆರಂಭಿಸಿ ದೊಡ್ಡ ಬಜೆಟ್‌ಗೆ ಹೊಂದುವ ರೀತಿಯ ತಂಗುದಾಣಗಳೂ ಕೈಗೆಟಕುತ್ತಿವೆ. ಕಬ್ಬಿಣ, ಸ್ಟೀಲ್, ಅಲ್ಯುಮಿನಿಯಂ, ಫೈಬರ್ ಸಾಮಾಗ್ರಿಗಳ ಜೊತೆಗೆ ಪೂರ್ಣವಾಗಿ ಮರದ ಹಲಗೆಗಳಿಂದ ನಿರ್ಮಿತವಾದ ಸಿದ್ಧ ತಂಗುದಾಣಗಳೂ ಮಾರುಕಟ್ಟೆಗಿಳಿದಿವೆ.

ಸುಧಾರಿತ ಅನುಕೂಲದ ಪರಿಣಾಮವಾಗಿ ಬಂದಿರುವ ಹೊಸ ಕಾರು ತಂಗುದಾಣಗಳು ಕೆಲವು ತಾಸುಗಳಲ್ಲಿ ಮನೆಯ ಸನಿಹ ಜೋಡಿಸಲು ಅನುಕೂಲವಾಗಿವೆ. ಒಂದು ಕಾರು ನಿಲ್ಲಲು ಬೇಕಾಗುವಷ್ಟೇ 18 ಅಡಿ ಉದ್ದ, 9 ಅಡಿ ಅಗಲವಿರುವ ಸುಂದರವಾದ ಮರದ ಗೂಡುಗಳನ್ನು ಕಡಿಮೆ ಸ್ಥಳಾವಕಾಶವಿರುವವಿರಗೂ ತಂದಿಟ್ಟುಕೊಳ್ಳಲು ಸೂಕ್ತವಾಗಿವೆ.

ಬೇರೆ ಊರಿಗೆ ವರ್ಗಾವಣೆಯಾಗಿ ಹೋಗುವಾಗ ಕಾರು ತಂಗುದಾಣವನ್ನು ಕಳಚಿ ಅಲ್ಲಿಗೆ ಒಯ್ಯಬಹುದು. ಒಂದು ಮಾದರಿ ಬೇಡವೆನಿಸಿದಾಗ ವಾಸ್ತುವಿಗೆ ಭಂಗ ತರಬೇಕಾಗಿಲ್ಲ. ಬದಲಾವಣೆಗೆ ಇದರಲ್ಲಿ ಮುಕ್ತ ಸೌಲಭ್ಯವಿದೆ. ಬೇಸಿಗೆಯಲ್ಲಿ ಜೋರು ಬಿಸಿಲಿರುವಾಗ ತೋಟದ ಮರಗಳ ತಂಪು ನೆರಳಿನಲ್ಲಿ ಕಾರನ್ನು ನಿಲ್ಲಿಸಬೇಕೆನಿಸಿದರೆ ಚಲಿಸುವ ತಳ್ಳುಗಾಡಿಯಂತೆ ಈ ತಂಗುದಾಣಗಳು ನಮ್ಮೊಂದಿಗೆ ಬರಬಲ್ಲವು.

ದಿಢೀರ್ ತಂಗುದಾಣಗಳ ತಳಭಾಗವನ್ನು ಕಾಂಕ್ರೀಟಿನಿಂದ ನಿರ್ಮಿಸಬಹುದು. ಕಾರನ್ನು ತೊಳೆಯಲು ನೀರಿನ ಅನುಕೂಲ, ಆಗಿಂದಾಗ ದುರಸ್ತಿಗೆ ಬೇಕಾಗುವ ಸಲಕರಣೆಗಳನ್ನಿಡಲು ಜಾಗ ಎಲ್ಲವೂ ಅಳವಡಿಸಲು ಅವಕಾಶವಿದೆ. ಹೊಸತನಕ್ಕಾಗಿ ಹಂಬಲಿಸುವ ಮನೋವೃತ್ತಿಯವರು ಇದನ್ನು ತಮ್ಮ ಹಾಗೆ ಹೊಸತು ಬೇಕು ಎಂದು ಬಯಸುವವರಿಗಾಗಿ ತಯಾರಿಸಿದ್ದಾರೆ. ಸದ್ಯದ ಮಾರುಕಟ್ಟೆಯಲ್ಲಿ ಅನು ಜನಪ್ರಿಯವೂ ಆಗುತ್ತಿವೆ.

-ಪ.ರಾಮಕೃಷ್ಣ ಶಾಸ್ತ್ರಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com