ಆ್ಯಸಿಡ್ ದಾಳಿಗೆ ತುತ್ತಾದ ಮಹಿಳೆಯಿಂದ ಸೌಂದರ್ಯ ಸಲಹೆ

ಆ್ಯಸಿಡ್‌ನಲ್ಲಿ ಸುಟ್ಟು ಹೋದದ್ದು ಆಕೆಯ ಮುಖ ಮಾತ್ರವಲ್ಲ ಆಕೆಯ ಕನಸುಗಳೂ ಆಗಿದ್ದವು. ಆಕೆಯ ಒಂದು ಕಣ್ಣು ಸಂಪೂರ್ಣವಾಗಿ ಬೆಂದು ಹೋಯಿತು. ಇನ್ನೊಂದು ಕಣ್ಣಲ್ಲಿ...
ರೇಷ್ಮಾ ( ಕೃಪೆ : ಯೂಟ್ಯೂಬ್ )
ರೇಷ್ಮಾ ( ಕೃಪೆ : ಯೂಟ್ಯೂಬ್ )

ಆ್ಯಸಿಡ್ ದಾಳಿಗೆ ತುತ್ತಾಗಿ ಮುಖ ವಿಕೃತಗೊಂಡ ಅಲಹಾಬಾದ್ ನಿವಾಸಿ ರೇಷ್ಮಾಳ ಬ್ಯೂಟಿ ಟಿಪ್ಸ್ ವೀಡಿಯೋ ಸಾಮಾಜಿಕ ತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.

ಸಾಮಾನ್ಯ ಹುಡುಗಿಯರಂತೆ ರೇಷ್ಮಾಳಿಗೆ ಸೌಂದರ್ಯ ರಕ್ಷಣೆ, ವೀಡಿಯೋ ಮೇಕಿಂಗ್ ಎಲ್ಲವೂ  ಇಷ್ಟ ವಿಷಯಗಳೇ. ಹಾಗೆ ಮಾಡಿದ ವೀಡಿಯೋ ಇದು. ಇಂಡಿಯನ್ ಅವೇರ್‌ನೆಸ್ ಆರ್ಗನೈಸೇಷನ್ಸ್‌ನ  ಪ್ರಚಾರ ಕಾರ್ಯಕ್ರಮದ ಭಾಗವಾಗಿ ಮೇಕ್ ಲವ್ ನಾಟ್ ಸ್ಕಾರ್ಸ್  ಈ ವೀಡಿಯೋ ಬಿಡುಗಡೆ ಮಾಡಿದೆ.

ಕೆಂದುಟಿಯನ್ನು ಪಡೆಯಲು ಏನು ಮಾಡಬೇಕು ಎಂಬ ಪ್ರಶ್ನೆಯೊಂದಿಗೆ ರೇಷ್ಮಾಳ ವೀಡಿಯೋ ಆರಂಭವಾಗುತ್ತದೆ. ಮೊದಲು ಟೂತ್ ಬ್ರಷ್ ಬಳಸಿ ತುಟಿಗಳನ್ನು ಸ್ವಚ್ಛಮಾಡಿ.ಹೀಗೆ ಮಾಡಿದರೆ ತುಟಿಯಲ್ಲಿರುವ ಮೃತ ಕೋಶ (ಡೆಡ್‌ಸೆಲ್ )ಗಳು ಸ್ವಚ್ಛವಾಗುತ್ತವೆ. ಆಮೇಲೆ  ಲಿಪ್ ಬಾಮ್ ಹಚ್ಚಿ. ಆಮೇಲೆ ಲಿಪ್  ಲೈನರ್ ಬಳಸಿ ಔಟ್‌ಲೈನ್ ಬರೆದ ನಂತರ ಲಿಪ್ ಸ್ಟಿಕ್ ಹಚ್ಚಿ. ಈಗ ಕೆಂದುಟಿಯಾಯಿತಲ್ಲವೇ? ಎಂದು ಹೇಳಿ ಇದೇ ಅಲ್ಲವೇ ಕೊನೆಯ ಮತ್ತು  ಪ್ರಧಾನ ಟಿಪ್ಸ್ ಎಂದು ಹೇಳುತ್ತಾರೆ. ಇಲ್ಲಿಗೆ ಮುಗಿದಿಲ್ಲ, ಇದೇ ಈ ವಿಡಿಯೋದ ಪ್ರಮುಖ  ಅಂಶವಾಗಿದೆ.

ಲಿಪ್‌ಸ್ಟಿಕ್...ಅದು ನಿಮಗೆ ಮಾರುಕಟ್ಟೆಯಲ್ಲಿ ಆ್ಯಸಿಡ್ ಖರೀದಿಸುವಂತೆ ಸುಲಭವಾಗಿ ಸಿಗುತ್ತದೆ! ಆದ್ದರಿಂದಲೇ ಪ್ರತೀ ದಿನ ಒಬ್ಬ ಮಹಿಳೆಯ ಮೇಲೆ ಎಂಬಂತೆ ಆ್ಯಸಿಡ್ ದಾಳಿ ನಡೆಯುತ್ತಿದೆ ಎಂದು ಹೇಳುವ ರೇಷ್ಮಾ..ಆ್ಯಸಿಡ್ ದಾಳಿಯ ವಿರುದ್ಧ ದನಿಯೆತ್ತುತ್ತಾಳೆ.


ರೇಷ್ಮಾಳ ಬದುಕನ್ನು ಸುಟ್ಟ ಆ ದಿನ: 2014ರ ಮೇ ತಿಂಗಳಲ್ಲಿ ರೇಷ್ಮಾ ಜೀವನದಲ್ಲಿ ಆ ಘಟನೆ ನಡೆದಿತ್ತು. ಎಂದಿನಂತೆ ಆಕೆ ಶಾಲೆಗೆ ಹೋಗುತ್ತಿದ್ದಳು. ದಾರಿಯಲ್ಲಿ ಆಕೆಯ ಸಹೋದರಿಯ ಗಂಡ ಮತ್ತು ಆತನ ಗೆಳೆಯರು ಆಕೆಯ ಮುಖದ ಮೇಲೆ ಆ್ಯಸಿಡ್ ಎರಚಿದ್ದರು. ಆ್ಯಸಿಡ್‌ನಲ್ಲಿ ಸುಟ್ಟು ಹೋದದ್ದು ಆಕೆಯ ಮುಖ ಮಾತ್ರವಲ್ಲ ಆಕೆಯ ಕನಸುಗಳೂ ಆಗಿದ್ದವು. ಆಕೆಯ ಒಂದು ಕಣ್ಣು ಸಂಪೂರ್ಣವಾಗಿ ಬೆಂದು ಹೋಯಿತು. ಇನ್ನೊಂದು ಕಣ್ಣಲ್ಲಿ ದೃಷ್ಟಿ ದೋಷ!. ಈಕೆ ಇನ್ನೂ ಹೆಚ್ಚಿನ ಶಸ್ತ್ರಚಿಕಿತ್ಸೆಗೆ ಒಳಪಡಬೇಕಾಗಿದೆ.



(ರೇಷ್ಮಾ ದಾಳಿಗೆ ಒಳಗಾಗುವ ಮುನ್ನ ಮತ್ತು ನಂತರ)

ಮೇಕಪ್ ವಸ್ತುಗಳು ಎಷ್ಟು ಸುಲಭವಾಗಿ ಮಾರುಕಟ್ಟೆಯಲ್ಲಿ ಲಭಿಸುತ್ತಿದೆಯೋ ಅದೇ ರೀತಿ ಆ್ಯಸಿಡ್ ಕೂಡಾ ನಮ್ಮ ದೇಶದಲ್ಲಿ ಸುಲಭವಾಗಿ ಸಿಕ್ಕಿ ಬಿಡುತ್ತದೆ. ಹೀಗಿದ್ದಾಗಲೇ ಹೆಚ್ಚು ಮಹಿಳೆಯರು ಆ್ಯಸಿಡ್ ದಾಳಿಗೆ ಗುರಿಯಾಗುತ್ತಿದ್ದಾರೆ. ಇದನ್ನು ನಿಯಂತ್ರಿಸಲು ನಮ್ಮ ಸರ್ಕಾರ ಸಿದ್ಧವಾಗಬೇಕಲ್ಲವೇ?

ಆ್ಯಸಿಡ್ ಮಾರಾಟಕ್ಕೆ ಕಡಿವಾಣ ಹಾಕಿ ಎಂದು ಭಾರತ ಸರ್ಕಾರವನ್ನು ಒತ್ತಾಯಿಸಲು ಆ ಮನವಿಗೆ ಸಹಿ ಹಾಕಿ ಎಂದು ವೀಡಿಯೋ ಮೂಲಕ ಕರೆ ನೀಡಲಾಗಿದೆ.

 2 ನಿಮಿಷದ ಈ ವಿಡಿಯೋವನ್ನು ಈಗಾಗಲೇ 559,499 ಜನರು ವೀಕ್ಷಿಸಿದ್ದಾರೆ.
 
ಆ್ಯಸಿಡ್ ದಾಳಿಯ ವಿರುದ್ಧ ಎಲ್ಲರೂ ಹೋರಾಡೋಣ. ಈ ಆ್ಯಸಿಡ್ ದಾಳಿಗೆ ತುತ್ತಾದ ಮಹಿಳೆಯರ ಪರವಾಗಿ ದನಿಯೆತ್ತೋಣ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com