ಬಹುಪಯೋಗಿ ಅಂಟುವಾಳಕಾಯಿ

ಬಹಳ ಹಿಂದೆ ನಮ್ಮ ಹಿರಿಯರು ಸ್ವಚ್ಛತೆಗಾಗಿ ಸೋಪುಗಳ ಬದಲು ಅಂಟುವಾಳ ಕಾಯಿಯನ್ನೇ ಅವಲಂಬಿಸಿದ್ದರು.....
ಅಂಟುವಾಳ ಕಾಯಿ
ಅಂಟುವಾಳ ಕಾಯಿ
Updated on

ಬಹಳ ಹಿಂದೆ ನಮ್ಮ ಹಿರಿಯರು  ಸ್ವಚ್ಛತೆಗಾಗಿ  ಸೋಪುಗಳ ಬದಲು ಅಂಟುವಾಳ ಕಾಯಿಯನ್ನೇ ಅವಲಂಬಿಸಿದ್ದರು. ಇಂದಿಗೂ ಚಿನ್ನಾಭರಣಗಳನ್ನು ಸ್ವಚ್ಛಗೊಳಿಸಲು ಅಂಟುವಾಳ ಕಾಯಿಯನ್ನೇ ನೆಚ್ಚಿಕೊಂಡಿದ್ದವರಿದ್ದಾರೆ. ಏಕೆಂದರೆ ಇದೊಂದು ನೈಸರ್ಗಿಕ ಮಾರ್ಜಕವಾಗಿದ್ದು ಯಾವುದೇ ಅಡ್ಡ ಪರಿಣಾಮಗಳಿಲ್ಲದಿರುವುದು, ಯಾವುದೇ ಹಾನಿಕಾರಕ ರಾಸಾಯನಿಕವಿಲ್ಲದಿರುವುದು, ಚರ್ಮಕ್ಕೆ ಸುರಕ್ಷಿತವಾಗಿರುವುದು ಮೊದಲಾದವು ಹೆಚ್ಚಿನ ಜನಪ್ರಿಯತೆಗೆ ಕಾರಣವಾಗಿತ್ತು.

ಆದರೆ ಇದನ್ನು ಸಂಗ್ರಹಿಸುವುದು ಮತ್ತು ಉಪಯೋಗಿಸುವ ಮುನ್ನ ಕೊಂಚ ಜಜ್ಜಿ ರಸ ತೆಗೆಯುವುದು ಮೊದಲಾದ ಶ್ರಮದ ಕೆಲಸಗಳಿರುವುದರಿಂದ ಇಂದಿನ ಧಾವಂತದ ಯುಗದಲ್ಲಿ ಅಂಟುವಾಳ ಯಾರಿಗೂ ಬೇಡವಾಗಿದೆ. ಆದರೆ ಇಂದಿಗೂ ಹಸಿಯಾಗಿ ಸಿಗದಿದ್ದರೂ ಒಣಫಲಗಳ ರೂಪದಲ್ಲಿ ಅಂಟುವಾಳ ಕಾಯಿ ಗ್ರಂಥಿಗೆ ಅಂಗಡಿಗಳಲ್ಲಿ ದೊರಕುತ್ತದೆ.

ನೀರನ್ನು ಸಿಂಪಡಿಸಬಲ್ಲ ವ್ಯವಸ್ಥೆಯಿರುವ ಬಾಟಲಿಯೊಂದರಲ್ಲಿ ಕಾಲು ಲೀಟರ್ ನೀರು, ತಲಾ ಹದಿನೈದು ಮಿಲಿಲೀಟರ್ ನಷ್ಟು ಅಂಟುವಾಳ ರಸ ಸೇರಿಸಿ ಮಿಶ್ರಣ ಮಾಡಿ. ಈ ನೀರನ್ನು ಗಾಜಿನ ಮೇಲೆ ಸಿಂಪಡಿಸಿ ಒಣಗಿರುವ ಸ್ವಚ್ಛವಾದ ಬಟ್ಟೆಯಿಂದ ಒರೆಸಿ. ಗಾಜುಗಳು ಸ್ಪಟಿಕದಂತೆ ಹೊಳೆಯುತ್ತವೆ.

ಅಂಟುವಾಳ ಕಾಯಿಯನ್ನು ನೀರಿನಲ್ಲಿ ನೆನೆಸಿ ಆ ನೀರಿನಲ್ಲಿ ವಿಗ್ರಹಗಳನ್ನು ಮುಳುಗಿಸಿಡಿ. ಸುಮಾರು ಅರ್ಧ ಗಂಟೆ ಅಥವಾ ಒಂದು ಗಂಟೆಯ ಬಳಿಕ ವಿಗ್ರಹವನ್ನು ಹೊರತೆಗೆದು ಇದೇ ನೀರಿನಲ್ಲಿ ಅದ್ದಿದ ಹತ್ತಿಯ ಒರಟು ಬಟ್ಟೆಯಿಂದ ಕೊಂಚ ಒತ್ತಡ ನೀಡಿ ಒರೆಸಿ. ತುಕ್ಕು ಸುಲಭವಾಗಿ ನಿವಾರಣೆಯಾಗಿ ವಿಗ್ರಹಗಳು ತಮ್ಮ ಮೂಲಬಣ್ಣದಲ್ಲಿ ಹೊಳೆಯುತ್ತವೆ.

ಚಿನ್ನಾಭರಣಗಳನ್ನು ಅಂಟುವಾಳ ಕಾಯಿಯ ಪುಡಿ ಬೆರೆಸಿದ ನೀರಿನಲ್ಲಿ ನೆನೆಸಿ  ಸುಮಾರು ಐದು ನಿಮಿಷಗಳ ಬಳಿಕ ಹಳೆಯ ಮೃದುವಾದ ಹಲ್ಲುಜ್ಜುವ ಬ್ರಶ್ ತೆಗೆದುಕೊಂಡು ನಯವಾಗಿ ಉಜ್ಜಿ ಕೊಳೆಯನ್ನು ತೆಗೆಯಿಸಿ. ಬಳಿಕ ಸ್ವಚ್ಛವಾದ ನೀರಿನಿಂದ ತೊಳೆದು ಒಣ ಬಟ್ಟೆಯಿಂದ ಒರೆಸಿ. ನಿಮ್ಮ ಚಿನ್ನಾಭರಣಗಳು ಹೊಸತರಂತೆ ಹೊಳೆಯುತ್ತವೆ.

ಮನೆಯ ಅಂದ ಹೆಚ್ಚಿಸುವ ರತ್ನಗಂಬಳಿಯ ಸ್ವಚ್ಛತೆಯೇ ದೊಡ್ಡ ಸಮಸ್ಯೆ. ಏಕೆಂದರೆ ನೀರು ಕುಡಿದ ಬಳಿಕ ಈ ಕಂಬಳಿ ಹೆಣಭಾರವಾಗುತ್ತದೆ. ಇದನ್ನು ಹೊರಲು ಹತ್ತಾರು ಜನರ ಸಹಾಯ ಬೇಕಾಗುತ್ತದೆ. ಬದಲಿಗೆ ಅಂಟುವಾಳ ರಸ ಬೆರೆತ ನೀರನ್ನು ರತ್ನಗಂಬಳಿಯ ಎಲ್ಲೆಡೆ ನವಿರಾಗಿ ಸಿಂಪಡಿಸಿ ಕೊಂಚ ಹೊತ್ತಿನ ಬಳಿಕ ಬ್ರಶ್ ಮೂಲಕ ಅಥವಾ ವ್ಯಾಕ್ಯೂಮ್ ಕ್ಲೀನರ್ ಮೂಲಕ ಸ್ವಚ್ಛಗೊಳಿಸಿ. ಇದರಿಂದ ಕಂಬಳಿಯನ್ನು ಅದರ ಸ್ಥಾನದಿಂದ ತೆಗೆಯದೆಯೇ ಸ್ವಚ್ಛಗೊಳಿಸಬಹುದು. ಇದು ಒಣಗಲೂ ಅತಿ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಹೆಚ್ಚೂ ಕಡಿಮೆ ಸ್ವಚ್ಛಗೊಳಿಸಿದ ಮರುಕ್ಷಣವೇ ಇದನ್ನು ಬಳಸಲು ಪ್ರಾರಂಭಿಸಬಹುದು.

ಇನ್ನು ಚರ್ಮ ಹಾಗೂ ಕೂದಲಿಗೆ ಅಂಟುವಾಳ ಕಾಯಿ ಹೇಳಿ ಮಾಡಿಸಿದಂತಾಗಿದೆ. ರಾಸಾಯಿನಕ ವಸ್ತುಗಳನ್ನು ಬಳಸಿದ ಸೋಪು ಅಥವಾ ಶಾಂಪು ಬದಲು ಅಂಟುವಾಳ ಕಾಯಿ ಪುಡಿ ಬಳಸಿದರೆ ಉತ್ತಮ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com