ಗರ್ಭಿಣಿಯರು ಎರಡು ಪಟ್ಟು ತಿನ್ನಬೇಕು ಎನ್ನುವುದು ತಪ್ಪು ತಿಳುವಳಿಕೆ

ಗರ್ಭಿಣಿಯರ ಆಹಾರದ ಬಗ್ಗೆ ಹೆಚ್ಚಿನ ಜನರು ಪ್ರಾಮುಖ್ಯತೆ ಕೊಟ್ಟರೂ ಹೆಚ್ಚಿನವರಿಗೆ ಸರಿಯಾದ ವೈಜ್ಞಾನಿಕ ಮಾಹಿತಿ ಇರುವುದಿಲ್ಲ. ಗರ್ಭಾವಸ್ಥೆಯಲ್ಲಿ ಏನು ತಿನ್ನಬೇಕು? ಏನು ಬೀಡಬೇಕು? ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೆಣ್ಣಿನ ಜೀವನದಲ್ಲಿ ಮಹತ್ವದ ಮೈಲಿಗಲ್ಲು ಗರ್ಭಾವಸ್ಥೆ.  ಆರೋಗ್ಯವಂತ ಮಗುವನ್ನು ಈ ಪ್ರಪಂಚಕ್ಕೆ ತರುವ ಜವಾಬ್ದಾರಿ ಹೊಂದಿರುವ ಪ್ರತಿ ಮಹಿಳೆಯೂ  ಈ ಸಂದರ್ಭದಲ್ಲಿ ತನ್ನ ಪರಿಪೂರ್ಣ ಆರೋಗ್ಯ ಕಾಪಾಡಿಕೊಳ್ಳಬೇಕು. ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಬೇಡಿಕೆಯನ್ನು ಪೂರೈಸಲು ಮತ್ತು ದೇಹದಲ್ಲಾಗುತ್ತಿರುವ ಬದಲಾವಣೆಗಳಿಗನುಗುಣವಾಗಿ  ಮತ್ತು ಆಹಾರಾಂಶಗಳ ಪೂರೈಕೆ ಅತ್ಯಗತ್ಯ.

ಗರ್ಭಿಣಿಯರ ಆಹಾರದ ಬಗ್ಗೆ ಹೆಚ್ಚಿನ ಜನರು ಪ್ರಾಮುಖ್ಯತೆ ಕೊಟ್ಟರೂ ಹೆಚ್ಚಿನವರಿಗೆ ಸರಿಯಾದ ವೈಜ್ಞಾನಿಕ ಮಾಹಿತಿ ಇರುವುದಿಲ್ಲ. ಗರ್ಭಾವಸ್ಥೆಯಲ್ಲಿ  ಏನು ತಿನ್ನಬೇಕು? ಏನು ಬೀಡಬೇಕು? ಎನ್ನುವ ಪ್ರಶ್ನೆ ಗರ್ಭಿಣಿಯರನ್ನು ಬಹಳಷ್ಟು ಕಾಡುತ್ತದೆ.

ಮೊದಲ ಮೂರು ತಿಂಗಳಲ್ಲಿ ಹೆಚ್ಚಿನವರಿಗಾಗುವ ವಾಂತಿ, ಸುಸ್ತು ಇತ್ಯಾದಿ ತೊಂದರೆಗಳಿಂದ (ಮಾರ್ನಿಂಗ್ ಸಿಕ್‌ನೆಸ್)ಬಳಲುತ್ತಾರೆ. ಅಂಥವರಿಗೆ ಆಹಾರ ಸೇವನೆಯೇ ಕಷ್ಟವಾಗುತ್ತದೆ. ಅವರು ಆಗಾಗ್ಗೆ ಡ್ರೈ ಫ್ರೂಟ್ಸ್ ಮತ್ತು ಹೆಚ್ಚು ಹೆಚ್ಚು ದ್ರವಾಹಾರವನ್ನು ಸೇವಿಸಬೇಕು. ಏನನ್ನೇ ತಿಂದರೂ ಹಿತಮಿತವಾಗಿ ಸೇವಿಸಬೇಕು. ಗರ್ಭಾವಸ್ಥೆಯ 9 ತಿಂಗಳಲ್ಲಿ ಮಹಿಳೆ ಕೇವಲ 11 ರಿಂದ 13 ಕೆ.ಜಿ ಒಳಗೆ ತೂಕವನ್ನು ಗಳಿಸಬೇಕು.   

ಗರ್ಭದಲ್ಲಿ ಮಗುವನ್ನು ಹೊತ್ತವಳು ಎರಡುಪಟ್ಟು ತಿನ್ನಬೇಕು ಎನ್ನುವುದು ತಪ್ಪು ಹೇಳಿಕೆ. ಗರ್ಭಿಣಿಯರಿಗೆ ಮಾಮೂಲಿಗಿಂತ ಕೇವಲ 300ಕಿ.ಕ್ಯಾಲೋರಿ ಮಾತ್ರ ಹೆಚ್ಚು ಬೇಕಾಗುತ್ತದೆ. ಅದರ ಬದಲು 2 ಪಟ್ಟು ತಿಂದರೆ ಗರ್ಭಾವಸ್ಥೆಯಲ್ಲೂ, ಹೆರಿಗೆಯಲ್ಲೂ ಅಪಾಯವಾಗುತ್ತದೆ. ಗರ್ಭಿಣಿಯರು  ಸಮತೋಲಿತವಾದ  ಆಹಾರವನ್ನು  ಸೇವಿಸಬೇಕು. ಅದರಲ್ಲಿ ಎಲ್ಲ ಪೌಷ್ಟಿಕಾಂಶಗಳೂ ಸಿಗುತ್ತವೆ. ಆಹಾರದಲ್ಲಿ ಬೇಳೆಕಾಳುಗಳು, ಬೀನ್ಸ್, ಮೊಳಕೆ ಬರಿಸಿದ ಧಾನ್ಯಗಳು, ಹಸಿರುಸೊಪ್ಪು, ತರಕಾರಿಗಳಲ್ಲಿ ಕಬ್ಬಿಣಾಂಶ ಮತ್ತು ಹಲವು  ಜೀವಸತ್ವಗಳಿರುವ ಕಾರಣ ಅವುಗಳನ್ನೊಳಗೊಂಡ ಆಹಾರವನ್ನು ಸೇವಿಸಬೇಕು.

ಅಂಜೂರ, ಒಣದ್ರಾಕ್ಷಿ, ಬಿಟ್‌ರೂಟ್ ಇವುಗಳಲೆಲ್ಲಾ ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಇರುತ್ತದೆ. ಮತ್ತು ಇದರ ಸೇವನೆಯಿಂದ ರಕ್ತಹೀನತೆ ಕಡಿಮೆಯಾಗುತ್ತದೆ. ಮಾಂಸಾಹಾರಿಗಳಾದರೆ ಕೊಬ್ಬಿಲ್ಲದ ಮಾಂಸ, ಮೀನು ಒಳ್ಳೆಯದು. ಪಪ್ಪಾಯಿ ಉಷ್ಣ, ಸೀಬೆಹಣ್ಣು  ಶೀತ ಎಂದೆಲ್ಲಾ ತಪ್ಪು ಸಂದೇಶಗಳನ್ನು ಕಿವಿಗೆ ಹಾಕಿಕೊಳ್ಳದೇ ಆಯಾ ಋತುವಿಲ್ಲಿ ಸಿಗುವ ಎಲ್ಲ ಹಣ್ಣುಗಳನ್ನು ಹಿತಮಿತವಾಗಿ ತಿನ್ನಬೇಕು.

ಸಕ್ಕರೆ, ಉಪ್ಪು,  ಹಾಲು, ಪಾಲಿಶ್ ಮಾಡಿದ ಅಕ್ಕಿ, ಮೈದಾ ಹಿಟ್ಟನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಬಳಸಬೇಕು. ದಿನಕ್ಕೆ ಕನಿಷ್ಠ 3-4 ಲೀಟರ್ ಇರಲಿ. ಕಾಫಿ, ಟೀ ಸೇವನೆ ಸಾಧ್ಯವಾದಷ್ಟು ಕಡಿಮೆ ಮಾಡಿ. ಮದ್ಯಪಾನ ಧೂಮಪಾನದಿಂದ ದೂರವಿಡಿ.

ಪ್ರತಿಯೊಬ್ಬ ಗರ್ಭಿಣಿಯೂ ಉತ್ತಮ ಪೌಷ್ಟಿಕಾಂಶವುಳ್ಳ ಕ್ಯಾಲ್ಸಿಯಂ ಕಬ್ಬಿಣಾಂಶ ಪ್ರೋಟೀನ್ ಕೊಬ್ಬು ಎಲ್ಲ ಸಮತೋಲಿತ ಆಹಾರವನ್ನು ಸೇವಿಸಿ ನಿಮ್ಮನ್ನು ಹಾಗೂ ಒಡಲಲ್ಲಿರುವ ಮಗುವನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯ.  ಉತ್ತಮ ದೈಹಿಕ ಚಟುವಟಿಕೆಯನ್ನು ನಿಯಮಿತವಾಗಿ ಮಾಡಿ. ಗರ್ಭಾವಸ್ಥೆಯಲ್ಲಿ ನಿಮ್ಮನ್ನು ಹಾಗೂ ಪರಾವಲಂಬಿಯಾದ ನಿಮ್ಮ ಗರ್ಭಸ್ಥ ಶಿಶುವನ್ನು ಪೊಷಿಸಿ. ಉತ್ತಮ ತಾಯ್ತನಕ್ಕೆ ಮುನ್ನುಡಿ ಬರೆಯಿರಿ.

- ಶಿಲ್ಪ.ಡಿ.ಚಕ್ಕೆರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com