ವಿಶ್ವ ಮಹಿಳಾ ದಿನ ವಿಶೇಷ: ಬಾಡಿಗೆ ತಾಯಂದಿರ ಹಕ್ಕು ಮತ್ತು ಸಮಸ್ಯೆಗಳು    

ಇತ್ತೀಚೆಗಷ್ಟೇ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬಾಡಿಗೆ ತಾಯಿತನದ ಮೂಲಕ ತನ್ನ ಎರಡನೇ ಮಗುವಿಗೆ ಜನ್ಮ ನೀಡಿದ ವಿಷಯ ದೊಡ್ಡ ಸುದ್ದಿಯಾಗಿತ್ತಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಲವರು ಟೀಕೆ ಕೂಡಾ ಮಾಡಿದ್ದುಂಟು. ಶಿಲ್ಪಾ ಶೆಟ್ಟಿ ಮಾತ್ರವಲ್ಲದೇ ಹಲವಾರು ಬಾಲಿವುಡ್ ನಟ-ನಟಿಯರು, ಸೆಲಿಬ್ರಿಟಿಗಳು ಬಾಡಿಗೆ ತಾಯಿತನದ ಮೂಲಕ ಮಕ್ಕಳನ್ನು ಪಡೆದ ಉದಾಹರಣೆಗಳುಂಟು. ತಾಯಿತನ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇತ್ತೀಚೆಗಷ್ಟೇ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬಾಡಿಗೆ ತಾಯಿತನದ ಮೂಲಕ ತನ್ನ ಎರಡನೇ ಮಗುವಿಗೆ ಜನ್ಮ ನೀಡಿದ ವಿಷಯ ದೊಡ್ಡ ಸುದ್ದಿಯಾಗಿತ್ತಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಲವರು ಟೀಕೆ ಕೂಡಾ ಮಾಡಿದ್ದುಂಟು. ಶಿಲ್ಪಾ ಶೆಟ್ಟಿ ಮಾತ್ರವಲ್ಲದೇ ಹಲವಾರು ಬಾಲಿವುಡ್ ನಟ-ನಟಿಯರು, ಸೆಲಿಬ್ರಿಟಿಗಳು ಬಾಡಿಗೆ ತಾಯಿತನದ ಮೂಲಕ ಮಕ್ಕಳನ್ನು ಪಡೆದ ಉದಾಹರಣೆಗಳುಂಟು. ತಾಯಿತನವೆನ್ನುವುದು ಜೀವನದ ಪ್ರಮುಖ ಹಂತಗಳಲ್ಲೊಂದು. ಅದರಲ್ಲೂ ಭಾರತದಂತಹ ದೇಶದಲ್ಲಿ ಈ ಹಂತವನ್ನು ದಾಟದೇ ಮುಂದೆ ಹೋದರೆ ಜೀವನವೇ ಪರಿಪೂರ್ಣವಲ್ಲ ಎಂದುಕೊಳ್ಳುವವರೇ ಹೆಚ್ಚಿನವರಿದ್ದಾರೆ. ಮಗುವಿಗೆ ಜನ್ಮನೀಡುವ ಪ್ರಕ್ರಿಯೆ ಅತ್ಯಂತ ಯಾತನೆದಾಯಕ ಹಾಗೂ ಭಯಾನಕವಾಗಿದ್ದರೂ ಅದನ್ನು ಅದು ಸ್ವಾಭಾವಿಕ ಮತ್ತು ಸಂತೋಷದಾಯಕ ಕ್ಷಣವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವೊಮ್ಮೆ ದೈಹಿಕ ಸಮಸ್ಯೆಗಳ ಕಾರಣಗಳಿಂದಾಗಿ ತಾಯಿಯಾಗುವ ಬಯಕೆಯಿದ್ದರೂ ಮಗುವಿಗೆ ಜನ್ಮನೀಡಲಾರದ ಕಾರಣದಿಂದಾಗಿ ಕೆಲವರು ಬಾಡಿಗೆತಾಯಿತನದ ಮೊರೆ ಹೋಗುತ್ತಾರೆ. ಇನ್ನು ಕೆಲವು ಮಹಿಳೆಯರು ಸ್ತ್ರೀವಾದದ ಕಾರಣಗಳಿಂದಾಗಿಯೋ ಅಥವಾ ತಾಯಿಯಾದ ಅವಧಿಯಿಂದ ಹಿಡಿದು ಮಗುವಿಗೆ ಜನ್ಮ ನೀಡಬೇಕಾದಾಗಿನ ಸಮಯದವರೆಗೆ ನೋವು ಹಾಗೂ ಯಾತನೆಗಳನ್ನು ಅನುಭವಿಸಲು ಇಚ್ಚಿಸದ ಕಾರಣಕ್ಕಾಗಿ ಬಾಡಿಗೆ ತಾಯಿತನದ ಆಯ್ಕೆಯನ್ನಾಯ್ದುಕೊಳ್ಳುವ ಮಹಿಳೆಯರೂ ಇದ್ದಾರೆ. ಒಟ್ಟಿನಲ್ಲಿ ಭಾರತದಲ್ಲಿ ಬಾಡಿಗೆ ತಾಯಿತನದ ಪರಿಕಲ್ಪನೆ ತೀರಾ ಇತ್ತೀಚಿನದ್ದಾಗಿದ್ದರೂ ಅದನ್ನು ಅಳವಡಿಸಿಕೊಳ್ಳುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. 


ಬಾಡಿಗೆ ತಾಯಿತನದ ಮೂಲ ಆಶಯ ಸ್ವಾಭಾವಿಕವಾಗಿ ಮಗುವಿಗೆ ಜನ್ಮ ನೀಡಲಾರದ ಮಹಿಳೆಯರಿಗೆ ತಾಯಿಯಾಗುವ ಅವಕಾಶವನ್ನು ಕಲ್ಪಿಸಿಕೊಡುವುದಲ್ಲದೇ ಒಂದು ಮಗುವಿಗಾಗಿ ಹಾತೊರೆಯುವಂತಹ ಕುಟುಂಬಗಳಿಗೆ ಭರವಸೆ ಹಾಗೂ ನೆಮ್ಮದಿಯನ್ನು ಕರುಣಿಸುತ್ತದೆ. ಆದರೆ ಯಾರದ್ದೋ ಮಗುವನ್ನು ತನ್ನ ಗರ್ಭದಲ್ಲಿ ಹೊರುವ ತಾಯಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಪರಿಸ್ಥಿತಿಯೇನು? ಬಾಡಿಗೆ ತಾಯಿತನ ಆಕೆಯ ಮೇಲೆ ಯಾವ ರೀತಿಯ ಒತ್ತಡ ಹಾಗೂ ಪರಿಣಾಮವನ್ನು ಬೀರುತ್ತದೆ? ಆಕೆ ತಾನು ಮಗುವಿಗೆ ಜನ್ಮ ನೀಡಲು ಒಪ್ಪಿಗೆಯನ್ನು ಕೊಟ್ಟಿದ್ದರೂ ಸಹ ಒಂಭತ್ತು ತಿಂಗಳು ಗರ್ಭದಲ್ಲಿ ಹೊತ್ತಾಗ ಆ ಮಗುವಿನೊಂದಿಗೆ ಆಕೆಗುಂಟಾಗುವ ಭಾವನಾತ್ಮಕ ಸಂಬಂಧಗಳ ಕತೆಯೇನು? ಆ ಮಗುವಿಗೆ ತನಗೆ ಜನ್ಮ ನೀಡಿದಾಕೆ ಬೇರೊಬ್ಬಳು ಎಂಬ ವಿಚಾರ ತಿಳಿದಾಗ ಅದರ ಮನಸ್ಸಿನಲ್ಲಾಗುವ ತಲ್ಲಣಗಳೇನು? ಒಂದುವೇಳೆ ಜನ್ಮನೀಡಿದ ಮಗು ಅಂಗವಿಕಲವೋ ಇಲ್ಲವೇ ಬುದ್ಧಿಮಾಂದ್ಯವಾಗಿದ್ದು ಜೈವಿಕ ತಂದೆತಾಯಿಗಳು ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಮುಂದಾಗದಿದ್ದರೆ? ವಾಣಿಜ್ಯ ಸರೋಗೆಸಿ ಪರಿಕಲ್ಪನೆ ಬಾಡಿಗೆ ತಾಯಿಯ ಶೋಷಣೆಗೆ ಕಾರಣವಾಗುತ್ತದೆಯೇ? ಹೀಗೆ ಹಲವಾರು ಪ್ರಶ್ನೆಗಳುದ್ಭವಿಸುತ್ತವೆ. 


೨೦೦೨ನೇ ಇಸವಿಯಲ್ಲಿ ಬಾಡಿಗೆ ತಾಯಿತನವನ್ನು ಕಾನೂನಾತ್ಮಕ ಎಂದು ಘೋಷಿಸಲಾಯಿತು. ೨೦೧೫ರಲ್ಲಿ ವಿದೇಶಿಗರು ಭಾರತದಲ್ಲಿ ಬಾಡಿಗೆ ತಾಯಿತನದ ಮೂಲಕ ಮಗುವನ್ನು ಪಡೆಯದಂತೆ ನಿರ್ಬಂಧ ಹೇರಲಾಯಿತು. ೨೦೧೯ರಲ್ಲಿ ಕೇಂದ್ರ ಸರ್ಕಾರ ಸರೋಗೆಸಿ ನಿಯಂತ್ರಣ ಮಸೂದೆಯಡಿಯಲ್ಲಿ ವಾಣಿಜ್ಯ ಸರೋಗೆಸಿಯನ್ನು ನಿಷೇಧಿಸಬೇಕೆಂದು ಮಂಡಿಸಿದ್ದರೂ ಸರೋಗೆಸಿ ನಿಯಂತ್ರಣ ಮಸೂದೆ ೨೦೨೦ರ ಅನ್ವಯ ಯಾರೇ ವೈದ್ಯಕೀಯ ಸಮಸ್ಯೆಗಳಿರುವವರು ಮಾತ್ರವಲ್ಲದೇ ವಿಚ್ಚೇದನ ಪಡೆದ ಹಾಗೂ ಒಂಟಿ ಮಹಿಳೆಯರೂ ಕೂಡಾ  ಬಾಡಿಗೆ ತಾಯಿತನದ ಬಳಕೆ ಮಾಡಿಕೊಳ್ಳಬಹುದಾಗಿದೆ. ಬಾಡಿಗೆ ತಾಯಿತನದ ಪ್ರಕ್ರಿಯೆಯಿಂದ ಸಕಾರಾತ್ಮಕ ಪರಿಣಾಮಗಳು ಎಷ್ಟಿವೆಯೋ ಹಾಗೆಯೇ ನಕಾರಾತ್ಮಕ ಪರಿಣಾಮಗಳೂ ಇವೆ.  ಮುಂದುವರೆದ ಶ್ರೀಮಂತ ರಾಷ್ಟ್ರಗಳ ಪ್ರಜೆಗಳು ಏಷ್ಯಾ ಖಂಡದಲ್ಲಿರುವ ಬಡರಾಷ್ಟ್ರಗಳಿಗೆ ಭೇಟಿನೀಡಿ ಕಡಿಮೆ ಖರ್ಚಿನಲ್ಲಿ ಬಾಡಿಗೆ ತಾಯಿತನದ ಪ್ರಕ್ರಿಯೆಯ ಮೂಲಕ ಮಗುವನ್ನು ಪಡೆಯುವುದು ಒಂದು ರೀತಿಯ ನವ ವಸಾಹತುಶಾಹೀಕರಣಕ್ಕೆ ದಾರಿ ಮಾಡಿ ಕೊಡುತ್ತದೆ ಮಾತ್ರವಲ್ಲ, ದೇಶದಲ್ಲಿ ಬಡತನವಿರುವುದರಿಂದ ಹಣಕ್ಕಾಗಿ ದೇಹವನ್ನೂ ಆರೋಗ್ಯವನ್ನೂ ಒತ್ತೆಯಿಟ್ಟು  ಬಾಡಿಗೆ ತಾಯಿಯಾಗಲು ಸುಲಭವಾಗಿ ಒಪ್ಪಿಬಿಡುವವರ ಸಂಖ್ಯೆ ಬೇಕಾದಷ್ಟಿರುವುದರಿಂದ ಈ ಪ್ರಕ್ರಿಯೆ ಒಂದು ರೀತಿಯ ಗುಲಾಮಗಿರಿಗೆ ಎಡೆ ಮಾಡಿಕೊಡುತ್ತದೆ. ಭಾರತದಂತಹ ಹಿಂದುಳಿದ ದೇಶದಲ್ಲಿ ಸರೋಗೆಸಿಯ ಮೂಲಕ ತಾಯಿಯಾಗುವುದನ್ನು ಸಮಾಜ ಇನ್ನೂ ಒಪ್ಪಲಾರದ ಪರಿಸ್ಥಿತಿಯಿದೆ. ಹಾಗಿರುವಾಗ ಆ ಬಾಡಿಗೆ ತಾಯಿಯ ಘನತೆಯಿಂದ ಬದುಕಲು ಸಾಧ್ಯವೇ? ಜೈವಿಕ ತಂದೆ-ತಾಯಿಗಳು ಬಾಡಿಗೆ ತಾಯಿಯನ್ನು ಉಪಯೋಗಿಸಿ ಎಸೆವ ವಸ್ತುವಿನಂತೆ ಬಳಸಿಕೊಂಡರೆ ಆಕೆಯ ಮೇಲಾಗುವ ಪರಿಣಾಮಗಳೇನು? ಈ ಎಲ್ಲಾ ದುಷ್ಪರಿಣಾಮಗಳು ಒಂದೆಡೆಯಾದರೆ ಮತ್ತೊಂದೆಡೆ ಹಲವು ರೀತಿಯ ದೈಹಿಕ ಸಮಸ್ಯೆಗಳನ್ನೂ ಆಕೆ ಎದುರಿಸಬೇಕು.  


ಬಾಡಿಗೆ ತಾಯಿತನಕ್ಕೆ ಬೇಕಾದ IVF (vitro fertilization) ಪ್ರಕ್ರಿಯೆಯನ್ನು ನಡೆಸುವಾಗ ಸಾಮಾನ್ಯವಾಗಿ ವೈದ್ಯರು ಗರ್ಭದಲ್ಲಿ ಭ್ರೂಣದ ಬೆಳವಣಿಗೆಯಾಗಲೇಬೇಕೆಂಬ ಕಾರಣಕ್ಕಾಗಿ ಹಲವು ಅಂಡಾಣುಗಳನ್ನು ಅಳವಡಿಸುತ್ತಾರೆ. ಇದು ಹಲವಾರು ಪ್ರಕರಣದಲ್ಲಿ ಒಂದಕ್ಕಿಂತ ಹೆಚ್ಚು ಮಗುವಿನ ಜನ್ಮಕ್ಕೆ ಕಾರಣವಾಗುತ್ತದೆ. ಅವಳಿ ಅಥವಾ ತ್ರಿವಳಿ ಮಕ್ಕಳಿಗೆ ಜನ್ಮ ನೀಡುವುದರಿಂದ ತಾಯಿಯ ಹಾಗೂ ಮಕ್ಕಳ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳು ಬೀರುತ್ತವೆ. ತಾಯಿಯ ಕಿಡ್ನಿ, ಲಿವರ್ ಹಾಗೂ ಥೈರಾಯ್ಡ್ ಗ್ರಂಥಿಗಳ ಮೇಲೆ ಅತಿಯಾದ ಒತ್ತಡ ಉಂಟಾಗುತ್ತದೆ. ರಕ್ತದೊತ್ತಡ, ಮದುಮೇಹ, ಪ್ರಸವಾನಂತರದ ರಕ್ತಸ್ರಾವದಂತಹ ಸಮಸ್ಯೆಗಳೆದುರಾಗುತ್ತವೆ. ಅಲ್ಲದೇ ಬಾಡಿಗೆ ತಾಯಿತನದಿಂದ ಮಗು ಜನ್ಮಪಡೆಯುವಾಗ ಒಂಭತ್ತು ತಿಂಗಳಿಗಿಂತ ಮುಂಚೆಯೇ ಮಗುವಿನ ಜನ್ಮವಾಗುವ ಸಾಧ್ಯತೆ ಶೇಕಡಾ ೮೦ ರಷ್ಟಿರುತ್ತದೆ. ಅದರಲ್ಲೂ ಬಾಡಿಗೆ ತಾಯಿತನಕ್ಕೆ ಮುಂದಾಗುವ ಮಹಿಳೆಯರು ಹೆಚ್ಚಿನ ಪಕ್ಷ ಅಶಿಕ್ಷಿತರು ಹಾಗೂ ಅನಕ್ಷರಸ್ಥರಾಗಿರುವುದರಿಂದ ಬಹುತೇಕ ಸಾರಿ ವೈದ್ಯರು ಅವರೊಂದಿಗೆ ಸರಿಯಾದ ಸಂವಹನ ನಡೆಸದೇ ತಮಗೆ ತೋಚಿದಷ್ಟು ಅಂಡಾಣುಗಳನ್ನು ಗರ್ಭದಲ್ಲಿರಿಸುತ್ತಾರೆ. ಇದು ಮೇಲೆ ತಿಳಿಸಿದ ದುಷ್ಪರಿಣಾಮಗಳಿಗೆಡೆ ಮಾಡಿಕೊಡುವುದರಿಂದ ಸಿಜರೇನ್ ಮೂಲಕವೇ ಮಗುವನ್ನು ಹೊರತರಬೇಕಾಗುತ್ತದೆ.  

೨೦೧೫ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿದೇಶಿಗರಿಗೆ ನಿರ್ಬಂಧ ಹೇರಿದ್ದಷ್ಟೇ ಅಲ್ಲದೇ ಭಾರತೀಯ ವಿವಾಹಿತ ಬಂಜೆಯರಿಗೆ ಮಾತ್ರ ಇದು ಅನ್ವಯ ಎಂದು ನಿಯಮ ರೂಪಿಸಿತು. ೨೦೧೯ರ ಸರೋಗೆಸಿ ತಿದ್ದುಪಡಿ ಮಸೂದೆ ವಾಣಿಜ್ಯ ಸರೋಗೆಸಿಯನ್ನು ಅಪರಾಧವೆಂದು ಪರಿಗಣಿಸಿತ್ತು. ಅಲ್ಲದೇ ಬಾಡಿಗೆ ತಾಯಿಯಾಗುವವರು ಪರಹಿತ ಚಿಂತನೆಯಿಂದ ಒಪ್ಪಿಗೆ ನೀಡಬೇಕೆಂದೂ ಹತ್ತಿರದ ಸಂಬಂಧಿಗಳು ಮಾತ್ರ ಬಾಡಿಗೆ ತಾಯಿಯಾಗಬೇಕೆಂದೂ ಕಾನೂನನ್ನು ರೂಪಿಸಿತ್ತು. ಮದುವೆಯಾಗಿ ಐದು ವರ್ಷಗಳ ಕಾಲವಾದರೂ ಮಕ್ಕಳಾಗದಂತಹ ಭಾರತೀಯ ದಂಪತಿಗಳು ಮಾತ್ರ ಈ ಪ್ರಕ್ರಿಯೆಗೆ ಮುಂದಾಗತಕ್ಕದ್ದೆಂದು ಈ ಮಸೂದೆ ಹೇಳುತ್ತದೆ. ಸರೋಗೆಸಿಯ ಹೆಸರಲ್ಲಿ ಆಗುವ ದುರ್ಬಳಕೆಯನ್ನು ತಡೆಗಟ್ಟುವುದೇ ಈ ಮಸೂದೆಯ ಮುಖ್ಯ ಉದ್ದೇಶವೆಂದು ಕಳೆದವರ್ಷ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಹೇಳಿಕೆ ನೀಡಿದ್ದರು. ಆದರೆ ಕಳೆದ ತಿಂಗಳಷ್ಟೇ ಮತ್ತೆ ತಿದ್ದುಪಡಿ ಮಾಡಿದ ಸರೋಗೆಸಿ ಮಸೂದೆಯನ್ನು (೨೦೨೦) ಮಂಡಿಸಲಾಗಿದೆ. ಇದರಲ್ಲಿ ಸುಮಾರು ಹದಿನೈದು ರೀತಿಯ ತಿದ್ದುಪಡಿಯನ್ನು ಮಾಡಲಾಗಿದ್ದು ರಾಷ್ಟ್ರೀಯ ಹಾಗೂ ರಾಜ್ಯ ಸರೋಗೆಸಿ ಮಂಡಳಿಯನ್ನು ರೂಪಿಸಲಾಗಿದೆ. ಬಾಡಿಗೆ ತಾಯಿಯ ಭದ್ರತೆಗಾಗಿ ವಿಮೆಯನ್ನೂ ಕಡ್ಡಾಯವಾಗಿ ಮಾಡಬೇಕೆಂದು ಈ ಮಸೂದೆ ಹೇಳುತ್ತದೆ. 


ಮಕ್ಕಳನ್ನು ಪಡೆಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಸ್ವಾಭಾವಿಕವಾಗಿ ಮಕ್ಕಳನ್ನು ಪಡೆಯಲು ಸಾಧ್ಯವಾಗದವರಿಗೆ ಬಾಡಿಗೆ ತಾಯಿತನವೆನ್ನುವುದು ನಿಜಕ್ಕೂ ಉಪಯೋಗಕರ ಪ್ರಕ್ರಿಯೆ. ಆದರೆ ಅದರ ಸರಿಯಾದ ಬಳಕೆಯಾಗಬೇಕಾದ ಅವಷ್ಯಕತೆಯಿದೆ. ಜೊತೆಗೆ ಬಾಡಿಗೆ ತಾಯಂದಿರನ್ನು ವಸ್ತುವಿನ ರೀತಿಯಲ್ಲಿ ನೋಡದೇ ಅವರನ್ನು ಘನತೆಯಿಂದ ನೋಡಬೇಕಾಗುತ್ತದೆ. ಬಾಡಿಗೆ ತಾಯಿಯಾಗುವವರು ತಮ್ಮ ದೇಹವನ್ನು ಹಣಕ್ಕಾಗಿ ಮಾರದೇ ಕೇವಲ ತಮ್ಮ ಇಚ್ಚೆಯಿದ್ದಲ್ಲಿ ಮಾತ್ರ ಇಂತಹ ಕೆಲಸಕ್ಕೆ ಮುಂದಾಗಬೇಕಾಗುತ್ತದೆ. 
     
-ಮುದ್ದು ತೀರ್ಥಹಳ್ಳಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com