ಜನದನಿ

೧೬ ಡಿಸೆಂಬರ್ ೨೦೧೨ರಂದು ದೆಹಲಿಯಲ್ಲಿ ನಿರ್ಭಯ ಪ್ರಕರಣವಾದಾಗ ಇನ್ನು ತಡೆದುಕೊಳ್ಳಲಾಗದು ಎಂದು ನಾನು ಮೊದಲ...
ಜನದನಿ
ಜನದನಿ
Updated on

೧೬ ಡಿಸೆಂಬರ್ ೨೦೧೨ರಂದು ದೆಹಲಿಯಲ್ಲಿ ನಿರ್ಭಯ ಪ್ರಕರಣವಾದಾಗ ಇನ್ನು ತಡೆದುಕೊಳ್ಳಲಾಗದು ಎಂದು ನಾನು ಮೊದಲ ಬಾರಿ ಸಾರ್ವಜನಿಕವಾಗಿ ಅತ್ಯಾಚಾರದ ವಿರುದ್ಧ ದನಿ ಎತ್ತಿದೆ. ಆಗ ಶುರುವಾದ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ವಿರುದ್ಧದ ಹೋರಾಟ ಸ್ಪಷ್ಟತೆಯ ರೂಪ ಪಡೆದಿದ್ದು ಫೇಸ್ಬುಕ್ ಸ್ನೇಹಿತರ ಬೆಂಬಲದಿಂದ  ‘ಜನದನಿ’ಯಾಗಿ! ಎಂಟು ಜನರಿಂದ ಪ್ರಾರಂಭಗೊಂಡ ಜನದನಿ ಈ ಏಳು ತಿಂಗಳಲ್ಲಿ ೫೬ ಜನ ಸದಸ್ಯರನ್ನು ಹೊಂದಿದೆ. ಯಾರೂ ಜನದನಿಯ ಸದಸ್ಯರಾಗಬಹುದು. ಕಡ್ಡಾಯವಾಗಿ ಸಕ್ರಿಯರಾಗಿರಬೇಕೆಂಬುದೊಂದೇ ಇಲ್ಲಿಯ ನಿಯಮ. ಸುಮ್ಮನೆ ಬೀದಿಗಿಳಿದು ಘೋಷಣೆ ಕೂಗುವುದರಿಂದ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದಂಥ ಪಿಡುಗುಗಳು ನಾಶವಾಗುವುದಿಲ್ಲ. ಮನೆಮನೆಯಿಂದ ಪ್ರತಿಯೊಬ್ಬರೂ ಈ ಪಿಡುಗಿನ ವಿರುದ್ಧ ಹೋರಾಡಬೇಕಿದೆ. ಅದಕ್ಕಾಗಿ ಮೊದಲು ಮನೆಯೊಳಗಿನ ವ್ಯವಸ್ಥೆ ಬದಲಾಗಬೇಕು! ಆಗ ಮಾತ್ರ ಸಮಾಜದ ವ್ಯವಸ್ಥೆಯೂ ಸರಿ ಹೋಗಲು ಸಾಧ್ಯ. ಈ ನಿಟ್ಟಿನಲ್ಲಿ ಜನದನಿ ಕೆಲಸ ಮಾಡುತ್ತಿದೆ.

ಜನದನಿ ತಂಡ ಜಾಗೃತಿ ಆಂದೋಲನವನ್ನು ಶುರು ಮಾಡುವ ಮೊದಲ ಹೆಜ್ಜೆಯಾಗಿ ಆಗಷ್ಟ್ ೦೨, ೨೦೧೪ರಂದು ಬೆಂಗಳೂರಿನ ಸಂಸ ಬಯಲುರಂಗಮಂದಿರದಲ್ಲಿ, ಒಂದು ಕಾರ್ಯಕ್ರಮವನ್ನೇರ್ಪಡಿಸಿ, ಸಮಾಜಪರ ಕಾಳಜಿಯುಳ್ಳ ಪೋಲಿಸ್ ಅಧಿಕಾರಿ, ವಕೀಲರು, ವೈದ್ಯರು ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಗಣ್ಯರಿಂದ ಆಯಾ ವಿಭಾಗದ ಜವಾಬ್ದಾರಿಗಳು ಮತ್ತು ಅನುಕೂಲಗಳ ಬಗ್ಗೆ ಮಾಹಿತಿ ಪಡೆಯುವುದರೊಂದಿಗೆ ಚರ್ಚೆಯನ್ನೂ ನಡೆಸಲಾಯಿತು. ಜೊತೆಗೆ, ಸರಕಾರಕ್ಕೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಗಳನ್ನು ತಡೆಗಟ್ಟುವಂಥ ಕಾನೂನು ಕ್ರಮಗಳ ಇಪ್ಪತ್ತು ಅಂಶಗಳುಳ್ಳ ಬೇಡಿಕೆ ಪತ್ರವೊಂದಕ್ಕೆ ಅಂದು ಸಭೆಗೆ ಸೇರಿದ್ದ ಜನರ ಸಹಿ ಸಂಗ್ರಹಿಸಿ ಸನ್ಮಾನ್ಯ ಪ್ರದಾನಮಂತ್ರಿಗಳಿಗೂ, ಮುಖ್ಯಮಂತ್ರಿಗಳಿಗೂ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಿಗೂ ಕಳುಹಿಸಿ ಕೊಡಲಾಯಿತು. ನಂತರದಲ್ಲಿ ಈ ಮೂರೂ ಕಚೇರಿಗಳೂ ನಮ್ಮ ಮನವಿಗೆ ಸ್ಪಂದಿಸಿ ಭರವಸೆ ನೀಡಿವೆ.

ಕೇವಲ ನಮಗೆ ಗೊತ್ತಿದ್ದ ಮಾಹಿತಿಯನ್ನಾಧಾರಿಸಿ ನಾವು ಮುಂದುವರೆಯುವುದು ಅಷ್ಟು ಸರಿಯಲ್ಲವೆನಿಸಿತು ನನಗೆ. ಶಿಬಿರವೊಂದನ್ನು ಏರ್ಪಡಿಸುವ ಕುರಿತು ಜನದನಿ ಸದಸ್ಯರೊಡನೆ ಮಾತನಾಡಿದೆ. ಅವರೆಲ್ಲರ ಸಮ್ಮತಿಯೊಂದಿಗೆ ಪೂರ್ವ ತಯಾರಿಯಾಗಿ ಜನದನಿಯ ಸದಸ್ಯರಿಗಾಗಿ ಒಂದು ದಿನದ ತರಬೇತಿ ಶಿಬಿರವನ್ನು ಏರ್ಪಡಿಸಿ, ಅಲ್ಲಿ ಮತ್ತೆ ಕಾನೂನು, ಪೋಲಿಸ್, ವೈದ್ಯಕೀಯ ಹಾಗೂ ಮಾನಸಿಕ ತಜ್ಞರಿಂದ ಸೂಕ್ತವಾದ ಮಾಹಿತಿಗಳನ್ನು ಪಡೆದುಕೊಂಡು ನಂತರ ನಾವೆಲ್ಲ ಕಾರ್ಯಪ್ರವೃತ್ತರಾದೆವು.

ಹದಿಮೂರು ವರ್ಷಕ್ಕೂ ಮೇಲ್ಪಟ್ಟ ವಯಸ್ಸಿನ ಯುವ ಜನರ ಜೊತೆಗೆ, ಅವರು ತೆಗೆದುಕೊಳ್ಳಬೇಕಾದ ಎಚ್ಚರಿಕೆ ಮತ್ತು ಜವಾಬ್ದಾರಿಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಚರ್ಚಿಸುವ, ಅವರನ್ನು ಆರೋಗ್ಯಕರ ಸಮಾಜದ ಭಾಗವಾಗುವಂತೆ ಪ್ರೇರೇಪಿಸುವ ಜನದನಿ ತಂಡ, ವಯಸ್ಕರೊಂದಿಗೆ ಮಕ್ಕಳನ್ನು ಬೆಳೆಸುವ ಕುರಿತು, ರಕ್ಷಣೆ ಕುರಿತು ಜಾಗೃತಿ ಮೂಡಿಸಿ, ಮನೆಯೊಳಗಿನ ವ್ಯವಸ್ಥೆಯನ್ನು ಆರೋಗ್ಯಕರವಾಗಿ ರೂಪಿಸಿಕೊಳ್ಳುವುದು ಹೇಗೆ ಅನ್ನುವುದರ ಕುರಿತು ಜನದನಿ ತಿಳಿಸಿಕೊಡುತ್ತದೆ. ಬೇಬಿ ಸಿಟ್ಟಿಂಗ್ಸ್, ನರ್ಸರಿ ಶಾಲೆಗಳಿಂದ ಮೊದಲುಗೊಂಡು, ಪ್ರಾಥಮಿಕ, ಮಾಧ್ಯಮಿಕ, ಹೈಸ್ಕೂಲುಗಳಲ್ಲದೇ, ಕಾಲೇಜು, ಸಂಘ ಸಂಸ್ಥೆಗಳು, ಅನಾಥಾಶ್ರಮಗಳು, ಆಫೀಸುಗಳು, ಅಪಾರ್ಟ್ಮೆಂಟ್ಸ್ ಇತ್ಯಾದಿಯೆಡೆಯಲ್ಲೆಲ್ಲ, ನಾವುಗಳು ಹೋಗಿ, ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಗಳನ್ನು ತಡೆಯುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ.

ಈಗ ಇದೇ ನಿಟ್ಟಿನಲ್ಲಿ ವ್ಯಂಗ್ಯಚಿತ್ರ, ಕಿರುಚಿತ್ರ, ಭಿತ್ತಿಪತ್ರಗಳಂಥ ಇನ್ನೂ ಹಲವಾರು ಕಾರ್ಯಗಳನ್ನು ಹಮ್ಮಿಕೊಂಡಿದ್ದೇವೆ. ಅವಿನ್ನೂ ತಯಾರಿಯ ಹಂತದಲ್ಲಿವೆ. ಎಲ್ಲ ಸದಸ್ಯರೂ ಸ್ವಯಂಪ್ರೇರಣೆಯಿಂದ, ತುಂಬು ಉತ್ಸಾಹದಿಂದ ಈ ಎಲ್ಲ ಕೆಲಸಗಳ ಜವಾಬ್ದಾರಿಗಳನ್ನು ಹೊತ್ತು ಕಾರ್ಯಪ್ರವೃತ್ತರಾಗಿದ್ದಾರೆ. ಇಷ್ಟರಲ್ಲೇ ಅವೆಲ್ಲವೂ ಜನರನ್ನು ತಲುಪಲಿವೆ. ಬೆಂಗಳೂರಿನಲ್ಲಿ ಶುರುವಾದ ಜನದನಿ ಸಧ್ಯಕ್ಕೆ ಕರ್ನಾಟಕದಾದ್ಯಂತ ತನ್ನ ಕಾರ್ಯಚಟುವಟಿಕೆಯನ್ನು ವಿಸ್ತರಿಸಲಿದೆ. ಈಗಾಗಲೇ ಐದಾರು ಊರುಗಳಿಂದ ಆಂದೋಲನದ ಭಾಗವಾಗಲಿಚ್ಛಿಸಿ ತಮ್ಮ ಊರುಗಳಲ್ಲೂ ಜಾಗೃತಿ ಕಾರ್ಯಕ್ರಮ ನಡೆಸಿಕೊಡಲು ಕೋರಿ ಜನದನಿಗೆ ಆಹ್ವಾನ ಬಂದಿದೆ. ಊರೂರಿಗೂ ತಲುಪಬೇಕಿದೆ ಜನದನಿಯ ಆಶಯ, ಜನ ಜಾಗೃತರಾಗಬೇಕಿದೆ.
ಎಲ್ಲ ಭಿನ್ನಾಭಿಪ್ರಾಯಗಳನ್ನು ಒತ್ತಟ್ಟಿಗಿಟ್ಟು ಅವರಿವರೆನ್ನದೆ, ಸಮಾಜದ ಎಲ್ಲ ಸ್ಥರದ, ವರ್ಗದ ಜನರೆಲ್ಲ ಸೇರಿ ಈ ಪಿಡುಗನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇ ಆದರೆ ನಮ್ಮ ಮುಂದಿನ ಪೀಳಿಗೆಗಳು ಆರೋಗ್ಯಕರ ಸಮಾಜದಲ್ಲಿ ನೆಮ್ಮದಿಯಿಂದ ಬಾಳುವುದರಲ್ಲಿ ಸಂಶಯವಿಲ್ಲ. ಬನ್ನಿ ಆರೋಗ್ಯಕರ ಸಮಾಜವನ್ನು ನಿರ್ಮಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ, ಜೊತೆಗೂಡಿ ಸ್ವಸ್ಥ ಸಮಾಜವನ್ನು ಕಟ್ಟೋಣ.

-ಜಯಲಕ್ಷ್ಮೀ ಪಾಟೀಲ್
ಜನದನಿ ಸಂಸ್ಥಾಪಕಿ

    

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com