ರಾಸಾಯನಿಕ ಸೌಂದರ್ಯ ವಸ್ತುಗಳಿಂದ ದೂರವಿರಿ..!

ಮೇಕಪ್ ಮಾಡಿಕೊಳ್ಳುವುದು ಒಂದು ಸೌಂದರ್ಯ ಪ್ರಕ್ರಿಯೆ. ನಗರೀಕರಣ ವಿಸ್ತಾರಗೊಂಡಂತೆಲ್ಲ ಜನರ ಜೀವನ ಶೈಲಿಯಲ್ಲಿಯೂ ಬದಲಾವಣೆಗಳಾಗುತ್ತಿವೆ...
ಮಹಿಳೆಯರೇ ರಾಸಾಯನಿಕ ಸೌಂದರ್ಯ ವಸ್ತುಗಳಿಂದ ದೂರವಿರಿ
ಮಹಿಳೆಯರೇ ರಾಸಾಯನಿಕ ಸೌಂದರ್ಯ ವಸ್ತುಗಳಿಂದ ದೂರವಿರಿ

ಮೇಕಪ್ ಮಾಡಿಕೊಳ್ಳುವುದು ಒಂದು ಸೌಂದರ್ಯ ಪ್ರಕ್ರಿಯೆ. ನಗರೀಕರಣ ವಿಸ್ತಾರಗೊಂಡಂತೆಲ್ಲ ಜನರ ಜೀವನ ಶೈಲಿಯಲ್ಲಿಯೂ ಬದಲಾವಣೆಗಳಾಗುತ್ತಿವೆ.ಲೈಫ್ ಸ್ಟೈಲ್ಗೆ ಸಂಬಂಧಿಸಿದ ವಸ್ತುಗಳು, ನವ ವಿನ್ಯಾಸದ ಉಡುಗೆ ತೊಡುಗೆಗಳು, ಸೌಂದರ್ಯ ವರ್ಧಕಗಳು ಮಾರುಕಟ್ಟೆಯಲ್ಲಿ ತಮ್ಮದೇ ಪಾಲು ಹೊಂದಿವೆ. ಅದರಲ್ಲೂ ಸೌಂದರ್ಯ ವರ್ಧಕಗಳ ಮಾರುಕಟ್ಟೆ ದಿನದಿಂದ ದಿನಕ್ಕೆ ವೃದ್ಧಿಸುತ್ತಲೇ ಸಾಗಿದೆ. ಸೌಂದರ್ಯ ವರ್ಧಕಗಳ ಕುರಿತ ಭಾರಿ ಜಾಹೀರಾತುಗಳು ಅದರ ಮಾರುಕಟ್ಟೆ ಅಗಾಧತೆಗೆ ಸಾಕ್ಷಿಯಾಗಿದೆ.ಆದರೆ ಜಾಹೀರಾತುಗಳನ್ನು ನೋಡಿ ಕಾಸ್ಮೆಟಿಕ್ ಕೊಳ್ಳುವುದು ಸೂಕ್ತವೇ?

ಸೌಂದರ್ಯವರ್ಧಕಗಳಲ್ಲಿ 8 ಸಾವಿರ ನೈಸರ್ಗಿಕ, ಕೃತಕ ಮತ್ತು ರಾಸಾಯನಿಕ ವಸ್ತುಗಳನ್ನು ಬಳಸಲಾಗುತ್ತಿದೆ. ಅವುಗಳ ಉಪಯೋಗದಿಂದ ಆಗುವ ಪರಿಣಾಮಗಳು ಅದರ ಬಳಕೆಯ ನಂತರವೇ ತಿಳಿಯುವುದು.ಜಾಹೀರಾತುಗಳಲ್ಲಿ ಬಿಂಬಿಸಿದಷ್ಟು ಅವು ಪರಿಣಾಮಕಾರಿಯಲ್ಲ. ಸೌಂದರ್ಯವರ್ಧಕಗಳಿಂದ ಅಷ್ಟಾಗಿ ಪ್ರಯೋಜನ ಇಲ್ಲವಾದರೂ, ಅದರ ಖರೀದಿ ಮಾತ್ರ ಅವ್ಯಾಹತ. ಕಾಸ್ಮೆಟಿಕ್ಗಳ ರಾಸಾಯನಿಕಗಳು ನೈಜ ಸೌಂದರ್ಯವನ್ನೇ ಹಾನಿ ಮಾಡುವಷ್ಟು ಪರಿಣಾಮಕಾರಿಯೂ ಆಗಿರುತ್ತದೆ.

ಹೆಣ್ಣುಮಕ್ಕಳು ಮೇಕಪ್ ಮಾಡುವುದುಇತರರು ತಮ್ಮನ್ನು ನೋಡಲೆಂದು, ಮೆಚ್ಚಿಸಲು ಎಂಬ ನಾನಾ ರೀತಿಯ ಆಲೋಚನೆಗಳನ್ನು ಮಾಡುತ್ತಿರುತ್ತಾರೆ ಎಂದು ಸಾಕಷ್ಟು ಮಂದಿ ತಪ್ಪು ಕಲ್ಪನೆಗಳನ್ನಿಟ್ಟುಕೊಂಡಿರುತ್ತಾರೆ. ಅದು ಕೆಲವರಲ್ಲಿ ನಿಜವಾಗಿರಬಹುದು. ಆದರೆ, ಸಾಕಷ್ಟು ಹೆಣ್ಣು ಮಕ್ಕಳು ಮೇಕಪ್ ಮಾಡುವುದು ಇನ್ನೊಬ್ಬರನ್ನು ಮೆಚ್ಚಿಸಲೆಂದು ಮಾತ್ರವೇ ಅಲ್ಲ, ಇತರರಂತೆ ನಾನು ಚೆನ್ನಾಗಿ ಕಾಣಬೇಕು. ಕೆಲವರಿಗೆ ಅವರದೇ  ಆದ ಸಮಸ್ಯೆ, ದೌರ್ಬಲ್ಯಗಳಿರುತ್ತವೆ.ಕೆಲವರಿಗೆ ಮೇಕಪ್ ಮಾಡದಿದ್ದರೆ ಹೊರಾಂಗಣದಲ್ಲಿರುವ ಧೂಳು ತ್ವಚೆಗೆ ಹೋಗಿ ಸಾಕಷ್ಟು ಚರ್ಮದ ಸಮಸ್ಯೆಗಳನ್ನು ಉಂಟು ಮಾಡುತ್ತವೆ ಎಂಬ ಭಯದಲ್ಲಿಹಾಗೂ ಮತ್ತೆ ಕೆಲವರಿಗೆ ಮೇಕಪ್ ಮತ್ತು ಡ್ರೆಸ್ಸಿಂಗ್ ಸ್ಟೈಲ್ ಚೆನ್ನಾಗಿದ್ದರೆ ಹೊರ ಪ್ರಪಂಚದಲ್ಲಿ ಕೆಲಸ ಮಾಡಲು ಸಂವಹನ ಮಾಡಲು ಸೆಲ್ಫ್ ಕಾನ್ಫಿಡೆನ್ಸ್ ಬರುತ್ತದೆ ಎಂದು ಮೇಕಪ್ ಮಾಡಿಕೊಳ್ಳುತ್ತಾರೆ.

ಆದರೆ ಎಷ್ಟೋ ಹೆಣ್ಣುಮಕ್ಕಳಿಗೆ ತಿಳಿಯದೇ ಇರುವ ವಿಷಯವೆಂದರೆ ಮೇಕಪ್ ಗಿಂತಲೂ ಮೇಕಪ್ ಇಲ್ಲದೆಯೇ ನೈಸರ್ಗಿಕವಾಗಿಯೇ ಬಹಳ ಸುಂದರವಾಗಿ ಕಾಣುತ್ತಿರುತ್ತಾರೆ ಎನ್ನುವುದು.

ನೀವು ಗಮನಿಸಬಹುದು ಮನೆಯಲ್ಲಿದ್ದಾಗ ಮೇಕಪ್ ಮಾಡುವವರ ಸಂಖ್ಯೆ ತೀರಾ ಕಡಿಮೆ. ವೇಳೆ ಸಾಕಷ್ಟು ಬಾರಿ ನಮ್ಮ ಮನಸ್ಸಿಗೆ ಬಂದಿರುತ್ತದೆ,ನಾನು ಮನೆಯಲ್ಲಿದ್ದಾಗಲೇ ತುಂಬಾ ಚೆನ್ನಾಗಿರುತ್ತೇನೆ. ಮೇಕಪ್ ಮಾಡಿ ರೂಡಿಯಾಗಿಬಿಟ್ಟಿದೆ, ಮೇಕಪ್ ಮಾಡದಿದ್ದರೆ ನಾನು ಚೆನ್ನಾಗಿರುವುದಿಲ್ಲವೇನೊ, ಬೇರೆಯವರು ನನ್ನನ್ನು ನೋಡಿದಾಗ ನಾನೆಲ್ಲಿ ಕೆಟ್ಟದಾಗಿ ಕಾಣಿಸಿಬಿಡುತ್ತೇನೆ. ಎಲ್ಲಿ ಕೆಟ್ಟದಾಗಿ ಆಲೋಚನೆ (ಸ್ನಾನ ಮಾಡಿಲ್ಲ, ಮುಖ ತೊಳೆದಿಲ್ಲ) ಮಾಡಿಬಿಡುತ್ತಾರೋ, ಎಂಬ ಆಲೋಚನೆಗಳು ಮನಸ್ಸಿನಲ್ಲಿ ಎಲ್ಲೋ ಒಂದು ಕಡೆ ಗುನುಗುಡುತ್ತಿರುತ್ತವೆ.

ಹೆಣ್ಣು ಮಕ್ಕಳ ಇಂತಹ ಸಮಸ್ಯೆಗಳನ್ನು ಅರಿತಿರುವ ಕಂಪನಿಗಳು ಸೌಂದರ್ಯವರ್ಧಕಗಳೆಂದು ಕ್ರೀಮ್,ಲೋಶನ್,ಪೌಡರ್,ಪರ್ಫ್ಯೂಮ್,ಲಿಪ್ ಸ್ಟಿಕ್,  ನೇಲ್ ಪಾಲಿಶ್, ಪರ್ಮನೆಂಟ್ ವೇವ್ಸ್, ಬಣ್ಣದ ಕಾಂಟ್ಯಾಕ್ಟ್,ಕೂದಲು ಬಣ್ಣಗಳು, ಕೂದಲು ಸ್ಪ್ರೇ, ಜೆಲ್,ಡಿಯೋಡ್ರಂಟ್ ಗಳೆಂಬ ನಾನಾ ವಿಧದ ಮೇಕಪ್ ಗಳನ್ನು ಮಾರುಕಟ್ಟೆಗೆ ತರುತ್ತಿರುತ್ತವೆ. ಎಷ್ಟೋ ಮಹಿಳೆಯರು ಇಂತಹ ಮೇಕಪ್ ಗಳಲ್ಲಿ ಅದೆಷ್ಟು ರಾಸಾಯನಿಕ ವಸ್ತುಗಳಿರುತ್ತವೆ ಎಂಬುದನ್ನು ಪರಿಶೀಲಿಸುವುದೇ ಇಲ್ಲ. ಒಂದು ಬಾರಿ ಉಪಯೋಗಿಸಿ ಅದರಿಂದ ಉತ್ತಮ ಫಲಿತಾಂಶ ಬಂದರೆ ಸಾಕು ಅದನ್ನೇ ಜೀವನಪರ್ಯಾಂತ ಉಪಯೋಗಿಸಲು ನಿರ್ಧರಿಸಿ ಬಿಡುತ್ತಾರೆ. ಅಲ್ಲದೆ, ಇತರರಿಗೂ ಸಲಹೆ ನೀಡಲು ಮುಂದಾಗುತ್ತಾರೆ.ಇಂತಹ ಮೇಕಪ್ ವಸ್ತುಗಳಲ್ಲಿ ರಸಾಯನಿಕ ವಸ್ತುಗಳ ಬಗ್ಗೆ ಪರೀಕ್ಷೆ ಮಾಡುವವರ ಸಂಖ್ಯೆಯಂತೂ ಬೆರಳೆಣಿಕೆಯಷ್ಟು.

ಮೇಕಪ್ ವಸ್ತು ತಯಾರಿಕೆಯಲ್ಲಿ ಬಳಕೆ ಮಾಡುವ ಸುಮಾರು 15 ಸೌಂದರ್ಯ ವರ್ಧಕ ರಸಾಯನಿಕ ವಸ್ತುಗಳು ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು, ದೇಹದ ಹಾರ್ಮೋನುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.ಹಾರ್ಮೋನುಗಳ ಮೇಲೆ ಬೀರುವ ಪರಿಣಾಮದಿಂದ ಹೆಣ್ಣು ಮಕ್ಕಳು ಗರ್ಭ ಧರಿಸುವ ಅವಧಿ ವ್ಯತ್ಯಾಸವಾಗುವುದಲ್ಲದೆ, 30 ವಯಸ್ಸಿನ ಬಳಿಕ ಮಕ್ಕಳಾಗುವ ಸಂಭವವೇ ಇಲ್ಲವಾಗಬಹುದು.ದಿನನಿತ್ಯ ಅತಿ ಹೆಚ್ಚು ಮೇಕಪ್ ಮಾಡುವ ಹೆಣ್ಣು ಮಕ್ಕಳು ಬಹುಬೇಗ ವೃದ್ಧಾಪ್ಯದ ಮುದುಕಿಯರಂತೆ ಕಾಣವಂತಾಗುತ್ತಾರೆ.ಅಲ್ಲದೆ,ದಿನನಿತ್ಯ ಬಳಸುವ ನೈಲ್ ಪಾಲಿಷ್, ಲಿಪ್ಸ್ಟಿಕ್, ಫೇಸ್ ಕ್ರೀಮ್ ನಿಂದ 40-45 ಆಸುಪಾಸಿನಲ್ಲಿ ನಿಲ್ಲುವ ಋತುಚಕ್ರ ಐದಾರು ವರ್ಷ ಮೊದಲೇ ನಿಲ್ಲುವ ಸಾಧ್ಯತೆ ಇದೆ ಎಂಬ ವಿಜ್ಞಾನಿಗಳ ಸಮೀಕ್ಷೆಯನ್ನು ಇಲ್ಲಿ ನಾವು ಸ್ಮರಿಸಬಹುದು.

- ಮಂಜುಳ.ವಿ.ಎನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com