ಸೂಪರ್ ಫಾಸ್ಟ್ ಕುರುಕಲು ತಿಂಡಿ

ನಾವೆಲ್ಲರೂ ಸೂಪರ್ ವುಮೆನ್‌ಗಳೇ. ನಮಗೆ ಎಲ್ಲ ಕೆಲಸಗಳೂ ಸೂಪರ್ ಫಾಸ್ಟ್ ಆಗಬೇಕು, ಅಡುಗೆ ಕೂಡಾ...
ಕುರುಕಲು ತಿಂಡಿ
ಕುರುಕಲು ತಿಂಡಿ

ನಾವೆಲ್ಲರೂ ಸೂಪರ್ ವುಮೆನ್‌ಗಳೇ. ನಮಗೆ ಎಲ್ಲ ಕೆಲಸಗಳೂ ಸೂಪರ್ ಫಾಸ್ಟ್ ಆಗಬೇಕು, ಅಡುಗೆ ಕೂಡಾ... ಜೋಳದಿಂದ ಮಾಡಿದ ಯಾವುದೇ ಅಡುಗೆಗಳು ದೇಹಕ್ಕೆ ಉತ್ತಮ. ಆದ್ದರಿಂದ ನಾನಿಲ್ಲಿ ಕಾರ್ನ್ ಬಳಸಿ 10 ನಿಮಿಷದಲ್ಲಿ ಮಾಡಬಹುದಾದ ಕುರುಕಲು ತಿಂಡಿಗಳನ್ನು ಪರಿಚಯಿಸುತ್ತಿದ್ದೇನೆ.

ಕಾರ್ನ್ ಕಬಾಬ್

ಬೇಕಾದ ಸಾಮಾಗ್ರಿ
2 ಕಪ್ ಸ್ವೀಟ್ ಕಾರ್ನ್
3-4 -ಹಸಿ ಮೆಣಸು
2-3 ಟೇಬಲ್ ಸ್ಪೂನ್ ದೊಣ್ಣೆ ಮೆಣಸು (ಸಣ್ಣಕ್ಕೆ ಹೆಚ್ಚಿದ್ದು)
ಅಕ್ಕಿ ಹಿಟ್ಟು  2 ಟೇಬಲ್ ಸ್ಪೂನ್
ಎಣ್ಣೆ
ಉಪ್ಪು


ಮಾಡುವ ವಿಧಾನ:   ಸ್ವೀಟ್ ಕಾರ್ನ್‌ನ್ನು ತರಿ ತರಿಯಾಗಿ ರುಬ್ಬಿಕೊಳ್ಳಿ. ಸ್ವೀಟ್ ಕಾರ್ನ್‌ನಲ್ಲಿ ನೀರಿನಂಶ ಇರುವುದರಿಂದ ನೀರು ಹಾಕದೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಒಂದು ತಟ್ಟೆಗೆ ಹಾಕಿಟ್ಟುಕೊಳ್ಳಿ. ಹೆಚ್ಚಿದ ಮೆಣಸಿನಕಾಯಿ, ದೊಣ್ಣೆ ಮೆಣಸಿನಕಾಯಿ ಅಕ್ಕಿ ಹಿಟ್ಟನ್ನು ಮಿಕ್ಸ್ ಮಾಡಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಅಕ್ಕಿ ಹಿಟ್ಟು ಈ ಮಿಶ್ರಣಕ್ಕೆ ಒಳ್ಳೆಯ ಹದವನ್ನು ನೀಡುತ್ತದೆ. ಈ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಅಂಬೊಡೆಯ ಗಾತ್ರದಲ್ಲಿ ಎಣ್ಣೆಯಲ್ಲಿ ಕರಿಯಿರಿ. ನಂತರ ಟೊಮ್ಯಾಟೋ ಸಾಸ್ ಅಥವಾ ಪುದೀನಾ ಚಟ್ನಿ ಜತೆ ಸವಿಯಿರಿ.
--------

ಕಾರ್ನ್ ರೈಸ್ ಬಾಲ್ಸ್



40 ಕಾರ್ನ್ ರೈಸ್ ಬಾಲ್ಸ್ ಮಾಡಬೇಕಾದರೆ ಬೇಕಾಗುವ ಸಾಮಾಗ್ರಿಗಳು
 
ಬೆಣ್ಣೆ- ಮುಕ್ಕಾಲು ಕಪ್
ಮೈದಾ - ಅರ್ಧ ಕಪ್
ಹಾಲು- ಮೂರು ಕಾಲು ಕಪ್

ಬೇಯಿಸಿದ ಅನ್ನ -ಒಂದೂವರೆ ಕಪ್
ಬೇಯಿಸಿ ತರಿಯಾಗಿ ರುಬ್ಬಿದ ಕಾರ್ನ್ -ಒಂದೂವರೆ ಕಪ್
ಕೊತ್ತಂಬರಿ ಸೊಪ್ಪು (ಹೆಚ್ಚಿದ್ದು) -ಅರ್ಧ ಕಪ್
ಹಸಿ ಮೆಣಸಿನಕಾಯಿ - 4-5
ಬ್ರೆಡ್ ಪುಡಿ  (ಕೋಟಿಂಗ್‌ಗಾಗಿ)
ಎಣ್ಣೆ (ಕರಿಯಲು ಬೇಕಾದಷ್ಟು)

ಮಾಡುವ ವಿಧಾನ: ಕಾದ ಪ್ಯಾನ್‌ನಲ್ಲಿ  ಬೆಣ್ಣೆ ಹಾಕಿ ಅದು ಕರಗುವ ಮುನ್ನ ಮೈದಾ ಹಿಟ್ಟನ್ನು ಹಾಕಿ. ಹಸಿವಾಸನೆ ಹೋಗುವವರೆಗೆ  ಕೈಯಾಡಿಸಿ. ನಂತರ ಇದಕ್ಕೆ ಹಾಲನ್ನು ಹಾಕಿ ಚೆನ್ನಾಗಿ ಕೈಯಾಡಿಸಿ. ಹಾಗೆ ಮಾಡ್ತಾ ಇರುವಾಗ ಮಿಶ್ರಣ ಗಟ್ಟಿಯಾಗುತ್ತದೆ. ಈ ಮಿಶ್ರಣವನ್ನು ಕೆಳಗಿಳಿಸಿ ಸ್ವಲ್ಪ ಹೊತ್ತು ಆರಲು ಬಿಡಿ,  ಆರಿದ ನಂತರ ಬೇಯಿಸಿದ ಅನ್ನ ಹಾಗೂ ತರಿತರಿಯಾಗಿ ರುಬ್ಬಿದ ಕಾರ್ನ್ಸ್ ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಎಲ್ಲ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ. ನಂತರ ಎಲ್ಲವನ್ನು ಉಂಡೆಯಾಗಿ ಮಾಡಿಟ್ಟುಕೊಳ್ಳಿ.  ಇನ್ನೊಂದು ತಟ್ಟೆಯಲ್ಲಿ 3-4 ಟೇಬಲ್ ಸ್ಪೂನ್ ಮೈದಾ ಹಿಟ್ಟನ್ನು  ನೀರಲ್ಲಿ ದೋಸೆ ಹಿಟ್ಟಿನ ಹದಕ್ಕೆ ಮಿಕ್ಸ್ ಮಾಡಿ. ಒಂದೊಂದೇ ಉಂಡೆಯನ್ನು ಈ ಮಿಶ್ರಣದಲ್ಲಿ ಅದ್ದಿ ಬ್ರೆಡ್ ಪೌಡರ್ ಮೇಲೆ ಹೊರಳಿಸಿ ಕಂದು ಬಣ್ಣ ಬರುವ ವರೆಗೆ ಎಣ್ಣೆಯಲ್ಲಿ ಕರಿಯಿರಿ. ರುಚಿಯಾದ ಕಾರ್ನ್ ರೈಸ್ ಬಾಲ್ಸ್‌ನ್ನು ಪುದಿನಾ ಚಟ್ನಿ ಅಥವಾ ಸಾಸ್ ನೊಂದಿಗೆ ತಿನ್ನಲು ಸಿದ್ಧ.

--------
ಕ್ರಂಚಿ ಕಾರ್ನ್ ಪಕೋಡಾ



ಬೇಕಾಗುವ ಸಾಮಾಗ್ರಿಗಳು

ಫ್ರೆಶ್ ಸ್ವೀಟ್ ಕಾರ್ನ್ -  1 ಕಪ್
ಹಸಿ ಮೆಣಸಿನ ಕಾಯಿ -2 - 4
ಜೀರಿಗೆ-  1 ಟೀ ಸ್ಪೂನ್
ಹೆಚ್ಚಿದ ಹಸಿ ಶುಂಠಿ -  1 ಟೇಬಲ್ ಸ್ಪೂನ್
ಕಾರ್ನ್ ಹಿಟ್ಟು -1 ಟೇಬಲ್ ಸ್ಪೂನ್
ಈರುಳ್ಳಿ  -2 ಮಧ್ಯಮ ಗಾತ್ರದ್ದು (ಹೆಚ್ಚಿದ್ದು)
ಅಕ್ಕಿ ಹಿಟ್ಟು-  1 ಟೇಬಲ್ ಸ್ಪೂನ್
ಅರಶಿನ  -ಅರ್ಧ ಟೀ ಸ್ಪೂನ್
ಬೇಕಿಂಗ್ ಸೋಡಾ -1-2 ಚಿಟಿಕಿ
ಕೊತ್ತಂಬರಿ ಸೊಪ್ಪು  -ಅರ್ಧ ಕಪ್
ಓಮ ಕಾಳು  -ಅರ್ಧ ಟೀ ಸ್ಪೂನ್
ಎಣ್ಣೆ

ವಿಧಾನ: ಸ್ವೀಟ್ ಕಾರ್ನ್, ಹಸಿ ಮೆಣಸಿನ ಕಾಯಿ, ಜೀರಿಗೆ, ಅರಶಿನ, ಹಸಿ ಶುಂಠಿ ಈ ಎಲ್ಲವನ್ನೂ ಸ್ವಲ್ಪ ತರಿ ತರಿಯಾಗಿ  ರುಬ್ಬಿಕೊಂಡು ಒಂದು ಪಾತ್ರೆಯಲ್ಲಿ ಇರಿಸಿಕೊಳ್ಳಿ. ನಂತರ ರುಬ್ಬಿದ ಮಿಶ್ರಣಕ್ಕೆ  ಕಾರ್ನ್ ಹಿಟ್ಟು  , ಅಕ್ಕಿ ಹಿಟ್ಟು, ಬೇಕಿಂಗ್ ಸೋಡಾ , ಕೊತ್ತಂಬರಿ ಸೊಪ್ಪು, ಓಮದ ಕಾಳು ಮಿಶ್ರಣಕ್ಕೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.  ಈ ಮಿಶ್ರಣವನ್ನು ಚಿಕ್ಕ ಚಿಕ್ಕದಾಗಿ ಪಕೋಡಾ ಗಾತ್ರದಲ್ಲಿ ಕಾದ ಎಣ್ಣೆಯಲ್ಲಿ  ಕಂದು ಬಣ್ಣ ಬರುವವರೆಗೆ ಕರಿಯಿರಿ. ನಂತರ ಸಾಸ್ ಅಥವಾ ಗ್ರೀನ್ ಚಟ್ನಿ ಜತೆ ಸರ್ವ್ ಮಾಡಿ.

-ಪ್ರೀತಿ ವಸಿಷ್ಠ, ಬೆಂಗಳೂರು.
raopreeti3@gmail.com


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com